ಕ್ರೀಡೆ

ಮಧ್ಯಾಹ್ನದ ಪ್ರಮುಖ ಸುದ್ದಿಗಳು

Published

on

ಮದ್ಯಾಹ್ನದ ಪ್ರಮುಖ ಸುದ್ದಿಗಳು

  1. ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಯ ಮೌಲ್ಯಮಾಪನ ನಾಳೆಯಿಂದ 30ರ ವರೆಗೆ ಗದಗ ಜಿಲ್ಲೆಯ ಒಟ್ಟು6ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆಯಲಿದೆ. ಮೌಲ್ಯಮಾಪನ ಕೇಂದ್ರಗಳ ಸುತ್ತ ೨೦೦ ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
  2. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಕೆಕೆಆರ್‌ಡಿಬಿ ಕಾರ್ಯದರ್ಶಿ ವೆಂಕಟೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
  3. ದೇಶದ ಪ್ರಮುಖ ಭೌತಶಾಸ್ತ್ರಜ್ಞರಲ್ಲಿ ಒಬ್ಬರಾಗಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಅಜಯ್‌ಕುಮಾರ್ ಸೂದ್ ಅವರನ್ನು ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಕುರಿತ ಪ್ರಧಾನಮಂತ್ರಿ ಸಲಹಾ ಮಂಡಳಿಯ ಸದಸ್ಯರಾಗಿರುವ ಸೂದ್, ಕೆ. ವಿಜಯರಾಘವನ್ ಅವರ ಉತ್ತರಾಧಿಕಾರಿಯಾಗಿ ಮೂರು ವರ್ಷಗಳ ಅವಧಿಗೆ ನೇಮಕಗೊಂಡಿದ್ದಾರೆ.
  4. ದೇಶದ 700ಕ್ಕೂ ಹೆಚ್ಚು ಕಡೆಗಳಲ್ಲಿ ಇಂದು ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಮೇಳ ಆಯೋಜಿಸಲಾಗಿದೆ. ತರಬೇತಿ ಮಹಾ ನಿರ್ದೇಶನಾಲಯದ ಸಹಯೋಗದಲ್ಲಿ ಸ್ಕಿಲ್ ಇಂಡಿಯಾದಿಂದ ಈ ಮೇಳ ಏರ್ಪಡಿಸಲಾಗಿದೆ. ಸುಮಾರು 1ಲಕ್ಷಕ್ಕೂ ಹೆಚ್ಚು ಶಿಶಿಕ್ಷುಗಳನ್ನು ಆಯ್ಕೆ ಮಾಡಿ ಅವರ ಪ್ರತಿಭೆಗೆ ಅನುಗುಣವಾಗಿ ಉದ್ಯೋಗ ನೀಡುವ, ಅವರಿಗೆ ಮತ್ತಷ್ಟು ತರಬೇತಿ ಒದಗಿಸುವ ಉದ್ದೇಶದಿಂದ ಈ ಮೇಳ ಆಯೋಜನೆ ಮಾಡಲಾಗಿದೆ.
  5. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ದಲ್ಲಿ 500ರೂಪಾಯಿ ದಂಡ ವಿಧಿಸಲು ಡಿಡಿಎಂಎ ನಿರ್ಧರಿಸಿದೆ. ದೆಹಲಿ ಲೆಫ್ಟನೆಂಟ್ ಗವರ್‍ನರ್ ಅನಿಲ್ ಬೈಜಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
  6. ಕರ್ನಾಟಕ ರಾಜ್ಯ ಮಾಹಿತಿ ಆಯೋಗಕ್ಕೆ ನೇಮಕಗೊಂಡಿರುವ ಮೂವರು ಆಯುಕ್ತರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ರಾಜಭವನದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪ್ರತಿಜ್ಞಾವಿಧಿ ಬೋಧಿಸಿದರು. ಸಾರಿಗೆ ಇಲಾಖೆ ನಿವೃತ್ತ ಅಧಿಕಾರಿ ಮೈಸೂರಿನ ಎಚ್.ಸಿ.ಸತ್ಯನ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಎಸ್.ಬಿ. ಬೊಮ್ಮನಹಳ್ಳಿಯವರನ್ನು ಬೆಂಗಳೂರು ಕೇಂದ್ರ ಕಚೇರಿಯ ಮಾಹಿತಿ ಆಯುಕ್ತರನ್ನಾಗಿ ಹಾಗೂ ರವೀಂದ್ರ ಗುರುನಾಥ್ ಡಾಕಪ್ಪ ಅವರನ್ನು ಕಲಬುರಗಿ ವಿಭಾಗದ ಮಾಹಿತಿ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
  7. ಆಡಳಿತ ವ್ಯವಸ್ಥೆಯಲ್ಲಿ ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವುದರಿಂದ ಹಿಡಿದು ಹಲವು ಹಂತದಲ್ಲಿ ನಾಗರಿಕ ಸೇವೆ ಬಹುಮುಖ್ಯ ಪಾತ್ರ ವಹಿಸುತ್ತದೆ. ರಾಷ್ಟ್ರ ನಿರ್ಮಾಣದಲ್ಲಿ ನಾಗರಿಕ ಸೇವಾ ಸಿಬ್ಬಂದಿ ಪಾತ್ರ ಬಹುಮುಖ್ಯವಾಗಿದೆ. ಈ ಕಾರ್ಯದಲ್ಲಿ ತೊಡಗಿರುವ ಎಲ್ಲರಿಗೂ ಶುಭವಾಗಲಿ. ನಿಮ್ಮ ಕಾರ್ಯ ಎಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
  8. ದೇಶದ ಕೆಲವು ರಾಜ್ಯಗಳಲ್ಲಿ ಕೋವಿಡ್- 19ಸೋಂಕಿನ ಪ್ರಕರಣಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ2,380 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 13ಸಾವಿರದ 433ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ 56 ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ ಮೃತಪಟ್ಟವರ ಸಂಖ್ಯೆ 5 ಲಕ್ಷ 22 ಸಾವಿರದ 62ಕ್ಕೆ ಏರಿಕೆಯಾದಂತಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
  9. ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಪರಿಸ್ವಾನಿ ಪ್ರದೇಶದಲ್ಲಿ ಇಂದು ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ನಾಗರಿಕ ಗಾಯಗೊಂಡಿದ್ದರು. ಸಧ್ಯ, ಕಾರ್ಯಾಚರಣೆ ಮುಂದುವರೆದಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.
  10. ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್, ಭಾರತಕ್ಕೆ ಎರಡು ದಿನಗಳ ಭೇಟಿಗಾಗಿ ಇಂದು ಬೆಳಗ್ಗೆ ಗುಜರಾತ್‌ನ ಅಹಮದಾಬಾದ್ ಗೆ ಆಗಮಿಸಿದ್ದಾರೆ. ಗಾಂಧಿ ಆಶ್ರಮಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ಚಿತ್ರಣ ಕುರಿತು ಮಾಹಿತಿ ಕಲೆ ಹಾಕಿದರು. ಬಳಿಕ ಗುಜರಾತ್ ಜೈವಿಕ ವಿಶ್ವವಿದ್ಯಾಲಯ ಮತ್ತು ಗಾಂಧಿನಗರದಲ್ಲಿರುವ ಅಕ್ಷರಧಾಮ ದೇಗುಲಕ್ಕೆ ಭೇಟಿ ನೀಡಲಿದ್ದು, ವಡೋದರದಲ್ಲಿರುವ ಜೆಸಿಬಿ ಕಂಪನಿಗೆ ಭೇಟಿ ನೀಡಿದ ನಂತರ ಸಂಜೆ ದೆಹಲಿಗೆ ಪ್ರಯಾಣಿಸಲಿದ್ದಾರೆ. ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ವಿವಿಧ ವಲಯದ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version