ದಿನದ ಸುದ್ದಿ

ಈ ಕ್ಷಣದ ಪ್ರಮುಖ ಸುದ್ದಿ ಮುಖ್ಯಾಂಶಗಳು

Published

on

ಈ ಕ್ಷಣದ ಪ್ರಮುಖ ಸುದ್ದಿ ಮುಖ್ಯಾಂಶಗಳು

  1. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಿದ್ದಾರೆ. ಸಂಜೆ ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಐತಿಹಾಸಿಕ ಸೋಮಪ್ಪನ ಕೆರೆಯ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಲಿದ್ದಾರೆ.
  2. ಎರಡು ದಿನಗಳ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಇಂದು ಆರಂಭಗೊಳ್ಳಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಧ್ಯಾಹ್ನ ಸಭೆಗೆ ಚಾಲನೆ ನೀಡಲಿದ್ದಾರೆ. ಕಾರ್ಯಕಾರಿಣಿ ಸಭೆ ಅಂಗವಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೊಸಪೇಟೆಯಲ್ಲಿಂದು ಬೆಳಿಗ್ಗೆ ಗೋಪೂಜೆ ನೆರವೇರಿಸಿದರು.
  3. ಕೊಪ್ಪಳ ಜಿಲ್ಲೆ ಹಿರೇಬೊಮ್ಮನಾಳ ಗ್ರಾಮದಲ್ಲಿ ನೂತನ ವಿದ್ಯುತ್ ಉಪ ಕೇಂದ್ರವನ್ನು ಇಂಧನ ಸಚಿವ ವಿ.ಸುನೀಲ್ ಕುಮಾರ್ ನಿನ್ನೆ ಉದ್ಘಾಟಿಸಿದರು. ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ “ಹೊಸ ಬೆಳಕು” ಯೋಜನೆಯಡಿ ವಿದ್ಯುತ್ ಸೌಲಭ್ಯ ನೀಡುವುದು ಸರ್ಕಾರದ ಉದ್ದೇಶ ಎಂದು ಅವರು ತಿಳಿಸಿದರು.
  4. ಆಯುಷ್ಮಾನ್ ಭಾರತ್ ಆರೋಗ್ಯ ಹಾಗೂ ಕ್ಷೇಮ ಯೋಜನೆಯ 4ನೇ ವರ್ಷಾಚರಣೆಯ ಅಂಗವಾಗಿ ದೇಶದ ಒಂದು ಲಕ್ಷ ಕೇಂದ್ರಗಳಲ್ಲಿ ಇ-ಸಂಜೀವಿನಿ ಟೆಲಿ ಸಮಾಲೋಚನೆ ಸೌಲಭ್ಯಗಳಿಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಇಂದು ಚಾಲನೆ ನೀಡಿದರು.
  5. ಹನುಮಾನ್ ಜಯಂತಿ ದಿನವಾದ ಇಂದು ಗುಜರಾತ್‌ನ ಮೊರ್ಬಿಯಲ್ಲಿ ನಿರ್ಮಿಸಲಾಗಿರುವ 108 ಅಡಿ ಎತ್ತರದ ಹನುಮಾನ್ ವಿಗ್ರಹವನ್ನು ಅನಾವರಣ ಮಾಡಲು ಉತ್ಸುಕನಾಗಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಮೊರ್ಬಿಯಲ್ಲಿನ ಬಾಪು ಕೇಶವಾನಂದ ಆಶ್ರಮ ಆವರಣದಲ್ಲಿ ಹನುಮ ಪ್ರತಿಮೆ ನಿರ್ಮಿಸಲಾಗಿದೆ.
  6. ಮುಂಬೈನ ದಾದರ್‌ನಲ್ಲಿ ನಿನ್ನೆ ರಾತ್ರಿ ದಾದರ್-ಪಾಂಡಿಚೆರಿ ರೈಲು ಹಳಿ ತಪ್ಪಿದ್ದು, ಇದರಿಂದಾಗಿ ಎರಡು ರೈಲುಗಳ ಸಂಚಾರವನ್ನು ಕೇಂದ್ರ ರೈಲ್ವೆ ರದ್ದುಗೊಳಿಸಿದೆ. ರೈಲು ಸಂಖ್ಯೆ 11042ಸಾಯಿನಗರ ಶಿರಡಿ-ದಾದರ್ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 11140ಗದಗ-ಮುಂಬೈ ಎಕ್ಸ್‌ಪ್ರೆಸ್ ರೈಲುಗಳ ಇಂದಿನ ಸಂಚಾರವನ್ನು ರದ್ದುಪಡಿಸಲಾಗಿದೆ. ಇವು ಕ್ರಮವಾಗಿ ಪುಣೆ-ಪಂಡರಾಪುರ್ ಮತ್ತು ಪುಣೆ-ಗದಗ ನಡುವೆ ಇಂದು ಸಂಚರಿಸಲಿವೆ ಎಂದು ಕೇಂದ್ರ ರೈಲ್ವೆ ತಿಳಿಸಿದೆ.
  7. ಅಯೋಧ್ಯೆಯಲ್ಲಿ ಶ್ರೀರಾಮ ದೇವಾಲಯ ಪುನರ್ ನಿರ್ಮಿಸುತ್ತಿರುವುದು ಭಾರತೀಯ ಸಾಂಸ್ಕೃತಿಕ ಪುನರುಜ್ಜೀವನದ ಸಂಕೇತವಾಗಿದೆ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ತಿಳಿಸಿದ್ದಾರೆ. ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ನಿನ್ನೆ ಪೂಜೆ ನೆರವೇರಿಸಿದ ಉಪರಾಷ್ಟ್ರಪತಿ, ಶ್ರೀರಾಮಮಂದಿರ ನಿರ್ಮಾಣದ ಮೂಲಕ ಶಾಂತಿ, ನ್ಯಾಯ ಮತ್ತು ಸಮಾನತೆ ಖಾತ್ರಿಪಡಿಸುವ ರಾಮರಾಜ್ಯ ಪರಿಕಲ್ಪನೆ ಸಾಕಾರಗೊಳ್ಳಲಿದೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version