ದಿನದ ಸುದ್ದಿ

ಬೆಳಗಿನ ಪ್ರಮುಖ ಸುದ್ದಿಗಳು ; ಮಿಸ್ ಮಾಡ್ದೆ ಓದಿ

Published

on

ಬೆಳಗಿನ ಪ್ರಮುಖ ಸುದ್ದಿಗಳು ; ಮಿಸ್ ಮಾಡ್ದೆ ಓದಿ

  • ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸಿದ್ಧತೆ ದೃಷ್ಟಿಯಿಂದ ಇಂದು ಮತ್ತು ನಾಳೆ, ಹೊಸಪೇಟೆಯಲ್ಲಿ ಬಿಜೆಪಿಯ ರಾಜ್ಯ ಕಾರ್ಯಕಾರಿಣಿಯ ಮಹತ್ವದ ಸಭೆ ನಡೆಯಲಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಭಾಗವಹಿಸಲಿರುವ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿ ಹಲವು ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಪಕ್ಷ ಸಂಘಟನೆ ಮತ್ತು ಮುಂಬರುವ ಚುನಾವಣೆ ಕಾರ್ಯತಂತ್ರಗಳ ಕುರಿತು ಸಮಗ್ರವಾಗಿ ಚರ್ಚೆ ನಡೆಸುವ ಸಾಧ್ಯತೆ ಇದೆ.
  • ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ ಸೀಟುಗಳು ಮೀಸಲು ಪ್ರಮಾಣ ಶೇಕಡಾ 50ಕ್ಕೆ ಹೆಚ್ಚಿಸಿದ್ದರಿಂದ ಹೆಚ್ಚುವರಿಯಾಗಿ 186ಮಕ್ಕಳಿಗೆ ಸೀಟು ಲಭಿಸಿದೆ. ಕೇಂದ್ರ ಪುರಸ್ಕೃತ ಜಲಾನಯನ ಪುನರುಜ್ಜೀವನ ಯೋಜನೆಗೆ ರಾಜ್ಯ ಆಯ್ಕೆಯಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹಿರೇಕೆರೂರಿನಲ್ಲಿ ಹೇಳಿದ್ದಾರೆ.
  • ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವ ಇಂದು ನಡೆಯಲಿದೆ. ರಥೋತ್ಸವ ಹಿನ್ನೆಲೆಯಲ್ಲಿ ಬೆಟ್ಟದ ತಪ್ಪಲಿನಿಂದ ಮೇಲ್ಭಾಗಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ನಿಷೇಧಿಸಿದ್ದು, ಸಾರ್ವಜನಿಕರಿಗೆ ಉಚಿತವಾಗಿ ಕೆ.ಎಸ್.ಆರ್.ಟಿ.ಸಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ.
  • ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಆಯುಷ್ಮಾನ್ ಭಾರತ್ ಕಾರ್ಯಕ್ರಮ ಪ್ರಾರಂಭಿಸಿದ ನಾಲ್ಕನೇ ವರ್ಷದ ಅಂಗವಾಗಿ ಇದೇ ತಿಂಗಳ 18ರಿಂದ 22ರವರೆಗೆ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಆರೋಗ್ಯ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
  • 5 ಆಯುಷ್ಮಾನ್ ಭಾರತ್ ಆರೋಗ್ಯ ಹಾಗೂ ಕ್ಷೇಮ ಯೋಜನೆಯ 4ನೇ ವರ್ಷಾಚರಣೆಯ ಅಂಗವಾಗಿ ಸರ್ಕಾರ ಇಂದು ದೇಶದ ಒಂದು ಲಕ್ಷ ಕೇಂದ್ರಗಳಲ್ಲಿ ಇ-ಸಂಜೀವಿನಿ ಟೆಲಿ ಸಮಾಲೋಚನೆ ಸೌಲಭ್ಯಗಳಿಗೆ ಚಾಲನೆ ನೀಡಲಿದೆ. ಇದರಿಂದಾಗಿ ಈಗ ಸಾಮಾನ್ಯ ಜನರೂ ಕೂಡ ದೇಶದ ದೊಡ್ಡ ವೈದ್ಯರುಗಳಿಂದ ಸಲಹೆ-ಸೂಚನೆಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವೀಯ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
  • ಭಾರತ 2023 ರ ಬೀದಿಬದಿ ಮಕ್ಕಳ ವಿಶ್ವಕಪ್ ಕ್ರಿಕೆಟ್‌ನ ಆತಿಥ್ಯವನ್ನು ವಹಿಸಲಿದೆ. ಇದನ್ನು ಸ್ಟ್ರೀಟ್ ಚೈಲ್ಡ್ ಯುನೈಟೆಡ್ ಮತ್ತು ಸೇವ್ ದಿ ಚಿಲ್ಡ್ರನ್ ಇಂಡಿಯಾ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದೆ. ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ 16 ರಾಷ್ಟ್ರಗಳ 22 ತಂಡಗಳು ಭಾಗವಹಿಸಲಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version