ದಿನದ ಸುದ್ದಿ
ಈ ದಿನದ ಪ್ರಮುಖ ಸುದ್ದಿಗಳು
ಈ ದಿನದ ಸುದ್ದಿ ಮುಖ್ಯಾಂಶಗಳು
- ಬೇಸಿಗೆ ಶಿಬಿರಗಳು ನಮ್ಮ ದೇಸಿಯ ಸಂಸ್ಕೃತಿ ಹಾಗೂ ಕ್ರೀಡೆಗಳನ್ನು ಪರಿಚಯಿಸುವುದರ ಜತೆಗೆ ಮಕ್ಕಳಲ್ಲಿರಬಹುದಾದ ಪ್ರತಿಭಾ ಸಾಮರ್ಥ್ಯದ ನೈಪುಣ್ಯತೆಗೆ ಕನ್ನಡಿಯಾಗಬೇಕು ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದರು. ಮೈಸೂರಿನಲ್ಲಿ ‘ಬೇಸಿಗೆ ಬಂಡಿ’ಹೆಸರಿನ ಬೇಸಿಗೆ ಶಿಬಿರಕ್ಕೆ ಇಂದು ಮಕ್ಕಳ ಜಾನಪದ ಮೆರವಣಿಗೆ ಉದ್ಘಾಟಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
- ಚಿಕ್ಕಮಗಳೂರಿನ ಆಶಾ ಕಿರಣ ದೃಷ್ಟಿ ಚೇತನ ಮಕ್ಕಳ ಶಾಲೆಯ ವಿಧ್ಯಾರ್ಥಿನಿ ರಾಧ ಅವರು ಈ ಬಾರಿಯ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಇತ್ತೀಚೆಗೆ ಅವರು ಭುವನೇಶ್ವರದಲ್ಲಿ ನಡೆದ 20 ನೇ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನ ದೃಷ್ಟಿ ಚೇತನ ಮಹಿಳಾ ವಿಭಾಗದಲ್ಲಿ ಸಾವಿರದ 500 ಮೀ ಓಟದಲ್ಲಿ ಪ್ರಥಮ, 400 ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು.
- ಸಹಕಾರ ನೀತಿ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮಾವೇಶ ನಾಳೆಯಿಂದ ದೆಹಲಿಯಲ್ಲಿ ಆರಂಭವಾಗಲಿದೆ. ಸಮಾವೇಶವನ್ನು ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಉದ್ಘಾಟಿಸಲಿದ್ದಾರೆ. ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳು ಹಾಗೂ ಸುಮಾರು ಪ್ರಮುಖ 40 ಸಹಕಾರಿ ಸಂಸ್ಥೆಗಳ ಮುಖ್ಯಸ್ಥರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
- ಕೇರಳದಲ್ಲಿ ಅಲ್ಲಲ್ಲಿ ಚದುರಿದಂತೆ ಭಾರೀ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಪಟ್ಟಣಂತಿಟ್ಟ, ಅಳಪುಳಾ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ ಮತ್ತು ತ್ರಿಸ್ಸೂರು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಯೆಲ್ಲೊ ಅಲರ್ಟ್ ಘೋಷಿಸಿದೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರಿಗೆ ಸೂಚಿಸಲಾಗಿದೆ.
- ಗುಜರಾತ್ ನ ಬಹರೂಚ್ ಜಿಲ್ಲೆಯ ದಹೇಚ್ ಕೈಗಾರಿಕಾ ಪ್ರದೇಶದಲ್ಲಿನ ರಾಸಾಯನಿಕ ಕಾರ್ಖಾನೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಸ್ಫೋಟದಲ್ಲಿ ಆರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ರಿಯಾಕ್ಟರ್ ಒಂದರಲ್ಲಿ ಸ್ಫೋಟ ಸಂಭವಿಸಿ ಕಾರ್ಖಾನೆಯಲ್ಲಿ ಬೆಂಕಿ ಹಬ್ಬಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಇತರ ಯಾರೊಬ್ಬರೂ ಗಾಯಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
- ಪಾಕಿಸ್ಥಾನ ನೂತನ ಪ್ರಧಾನಿಯಾಗಿ ಪಿಎಂಎಲ್-ಎನ್ ಪಕ್ಷದ ಅಧ್ಯಕ್ಷ ಶೆಹ್‌ಬಾಜ್ ಷರೀಫ್ ಆಯ್ಕೆಯಾಗಿದ್ದಾರೆ.
- ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಇಂದು ದಿನದ ವಹಿವಾಟಿನ ಅಂತ್ಯಕ್ಕೆ ೪೮೩ ಅಂಕ ಇಳಿಕೆ ಕಂಡು58 ಸಾವಿರದ 95 ಕ್ಕೆ ಕುಸಿದಿದೆ. ರಾಷ್ಟ್ರೀಯ ಷೇರು ಪೇಟೆ ಸೂಚ್ಯಂಕ 109 ಅಂಕ ಇಳಿಕೆ ಕಂಡು 17ಸಾವಿರದ 675 ಕ್ಕೆ ಕುಸಿದಿದೆ.
- ರಜೆಗಳ ಪ್ರಯುಕ್ತ ಬೆಂಗಳೂರಿನಿಂದ ಇದೇ13 ರಂದು ರಾಜ್ಯದ ಹಾಗೂ ನೆರೆ ರಾಜ್ಯಗಳ ವಿವಿಧ ಸ್ಥಳಗಳಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, 300 ವಿಶೇಷ ಬಸ್ ಗಳ ಸೇವೆಯನ್ನು ಆರಂಭಿಸಲಿದೆ. ಅಂತೆಯೇ 17 ರಂದು ರಾಜ್ಯದ ಮತ್ತು ಇತರ ರಾಜ್ಯಗಳಿಂದ ಬೆಂಗಳೂರಿಗೆ ವಿಶೇಷ ಬಸ್ ಗಳ ಸೇವೆ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.
- ಮಹಾ ಸಮಾಜ ಸುಧಾರಕರಾದ ಮಹಾತ್ಮ ಜ್ಯೋತಿಬಾ ಫುಲೆ ಅವರ ಸ್ಪೂರ್ತಿಯೊಂದಿಗೆ ನರೇಂದ್ರಮೋದಿ ನೇತೃತ್ವದ ಸರ್ಕಾರ ಮಹಿಳೆಯರು ಮತ್ತು ಸಮಾಜದ ದುರ್ಬಲ ವರ್ಗದವರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಹೇಳಿದೆ. ದೆಹಲಿಯಲ್ಲಿಂದು ಪಕ್ಷದ ವಕ್ತಾರ ಸಂಬಿತ್ ಪಾತ್ರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಎಂಟು ವರ್ಷಗಳಲ್ಲಿ ಎನ್‌ಡಿಎ ಸರ್ಕಾರ ಅನೇಕ ಕಲ್ಯಾಣ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಏಕಲವ್ಯ ಶಾಲೆಗಳ ಮೂಲಕ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲಾಗುತ್ತಿದೆ ಎಂದರು.
- ಚೀನಾದ ಶಾಂಘೈನಲ್ಲಿ ಕಳೆದ 24 ಗಂಟೆಗಳಲ್ಲಿ 26 ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ. ಬೀಜಿಂಗ್ ಸೇರಿದಂತೆ ಚೀನಾದ ಇತರ ನಗರಗಳಲ್ಲಿ ಒಮಿಕ್ರಾನ್ ಮತ್ತು ಅದರ ರೂಪಾಂತರಿಗಳ ಹರಡುವಿಕೆ ತಡೆಯಲು ಲಾಕ್‌ಡೌನ್ ಜಾರಿಗೊಳಿಸಲಾಗುವುದೆಂಬ ಆತಂಕ ಹರಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243