ದಿನದ ಸುದ್ದಿ
ಪಾಲಿಕೆ ವತಿಯಿಂದ 60 ಆಕ್ಸಿಜನ್ ಕಾನ್ಸಂಟ್ರೇಟರ್ ಸಿಗಲಿವೆ, ಆಕ್ಸಿಜನ್ ಪರ್ಯಾಯ ವ್ಯವಸ್ಥೆಗೆ ಕೊಡುಗೈ ದಾನಿಗಳು ಮುಂದಾಗಿ : ಡಿಸಿ ಮಹಾಂತೇಶ್ ಬೀಳಗಿ ಮನವಿ
ಸುದ್ದಿದಿನ,ದಾವಣಗೆರೆ : ಕೋವಿಡ್ 2ನೇ ಅಲೆಯಲ್ಲಿ ಸೋಂಕಿತರಿಗೆ ಅತ್ಯವಶ್ಯವಾಗಿರುವ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್‍ಗೆ ಪರ್ಯಾಯವಾಗಿ ಆಕ್ಸಿಜನ್ ಒದಗಿಸುವಂತಹ ಮೆಡಿಕಲ್ ಆಕ್ಸಿಜನ್ ಜನರೇಟರ್ ಮತ್ತು ಆಕ್ಸಿಜನ್ ಕಾನ್ಸಂಟ್ರೇಟರ್‍ಗಳನ್ನು ದಾನವಾಗಿ ನೀಡುವ ಕೊಡುಗೈ ದಾನಿಗಳು ಮುಂದೆ ಬಂದರೆ ಕೋವಿಡ್ ನಿರ್ವಹಣೆಗೆ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಉಸ್ತುವಾರಿ ಸಚಿವರು, ಶಾಸಕರು, ಜನಪ್ರತಿನಿಧಿಗಳ ಮಾರ್ಗದರ್ಶನದಲ್ಲಿ ಕೋವಿಡ್ 2ನೇ ಅಲೆಯನ್ನು ಜಿಲ್ಲೆಯಲ್ಲಿ ಸಮರ್ಥವಾಗಿ ನಿರ್ವಹಿಸಲಾಗುತ್ತಿದೆ. ಪ್ರತಿ ಎರಡು ದಿನಕ್ಕೊಮ್ಮೆ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಿ ಜಿಲ್ಲೆಯ ವಸ್ತುಸ್ಥಿತಿ ಬಗ್ಗೆ ತಿಳಿಸಲಾಗುತ್ತಿದ್ದು ಅವರ ಮಾರ್ಗದರ್ಶನ ಪಡೆಯಲಾಗುತ್ತಿದೆ.
ಲಿಕ್ವಿಡ್ ಮೆಡಿಕಲ್ ಆಕ್ಸಿಜನ್‍ನ ನ್ಯಾಯಯುತ ಮತ್ತು ಮಿತಬಳಕೆ ಕುರಿತು ನಿರ್ವಹಣೆ ಮಾಡಲು ಪ್ರತಿ ವಾರ್ಡಿಗೆ ಒಂದೊಂದು ತಂಡ ರಚಿಸಿ ಆಕ್ಸಿಜನ್ ನಿರ್ವಹಿಸಲು ಪ್ರಯತ್ನಿಸಲಾಗುತ್ತಿದೆ. ಮೊದಲು 24 ತಾಸಿಗೆ ಆಕ್ಸಿಜನ್ ಸಾಕಾಗುತ್ತಿತ್ತು. ಈಗ ಸೋಂಕಿತರ ಸಂಖ್ಯೆ ಹೆಚ್ಚಳವಾಗಿ 21 ಅಥವಾ 22 ತಾಸಿಗೇ ಖಾಲಿ ಆಗುತ್ತಿದೆ. ಆದ್ದರಿಂದ ಯಾವ ಸೋಂಕಿತರಿಗೆ ಎಷ್ಟು ಆಕ್ಸಿಜನ್ ಅವಶ್ಯವಿದೆ ಎಂದು ಪರೀಕ್ಷಿಸಿ ಮಿತಬಳಕೆಗೆ ವೈದ್ಯಕೀಯ ತಂಡ ಪ್ರಯತ್ನಿಸುತ್ತಿದೆ.
ಜೊತೆಗೆ ಲಿಕ್ವಿಡ್ ಆಕ್ಸಿಜನ್‍ಗೆ ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲಾಗಿದೆ. ಇಂದು ಮಹಾನಗರಪಾಲಿಕೆ ವತಿಯಿಂದ 60 ಆಕ್ಸಿಜನ್ ಕಾನ್ಸಂಟ್ರೇಟರ್ ಖರೀದಿಗೆ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಇದು ಸಹ ಸೋಂಕಿತರಿಗೆ ಅನುಕೂಲವಾಗಲಿದೆ.
ಜಿಲ್ಲಾ ಸಹಕಾರ ಬ್ಯಾಂಕ್‍ನ ಅಧ್ಯಕ್ಷರು ಸಹ ಸುಮಾರು 10 ಸಾವಿರ ಲೀಟರ್ ಸಾಮಥ್ರ್ಯದ ಆಕ್ಸಿಜನ್ ಜನರೇಟರ್ ಪ್ಲಾಂಟ್‍ನ್ನು ಕೊಡುಗೆಯಾಗಿ ಜಿಲ್ಲಾಡಳಿತಕ್ಕೆ ನೀಡಲು ಮುಂದಾಗಿದ್ದಾರೆ. ಇದೇ ರೀತಿಯಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರವರು ಹರಿಹರ ಮತ್ತು ಜಗಳೂರು ತಾಲ್ಲೂಕುಗಳಿಗೆ ಒಂದೊಂದು ಆಕ್ಸಿಜನ್ ಜನರೇಟರ್ ಪ್ಲಾಂಟ್ ಕೊಡುಗೆಯಾಗಿ ನೀಡಲು ಒಪ್ಪಿದ್ದಾರೆ. ಜಿಲ್ಲೆಯ ಕೊಡುಗೈ ದಾನಿಗಳು ಆಕ್ಸಿಜನ್ ಪ್ಲಾಂಟ್ ಅಥವಾ ಕಾನ್ಸಂಟ್ರೇಟರ್ ಕೊಡುಗೆಯಾಗಿ ನೀಡಲು ಮುಂದೆ ಬಂದಲ್ಲಿ ಕೋವಿಡ್ ನಿರ್ವಹಣೆಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.
ಇದೇ ರೀತಿಯಲ್ಲಿ ರೂ.82 ಲಕ್ಷ ವೆಚ್ಚದಲ್ಲಿ ಕೆಆರ್‍ಐಡಿಎಲ್‍ನಿಂದ ಚನ್ನಗಿರಿಯಲ್ಲಿ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸಲು ಚನ್ನಗಿರಿ ಶಾಸಕರು ಮುಂದಾಗಿದ್ದು ಹೊನ್ನಾಳಿಯಲ್ಲೂ ಆಗುತ್ತಿದೆ ಎಂದರು. ಹಾಗೂ ಕೇಂದ್ರ ಸರ್ಕಾರದಿಂದ ಸಹ ಒಂದು ಆಕ್ಸಿಜನ್ ಪ್ಲಾಂಟ್ ಜಿಲ್ಲಾಸ್ಪತ್ರೆಗೆ ಅನುಮೋದನೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿಯಿಂದ ಕೂಡ ಸಿಆರ್‍ಎಸ್ ನಿಧಿಯಲ್ಲಿ ಆಕ್ಸಿಜನ್ ಪೂರಕ ವ್ಯವಸ್ಥೆ ಮಾಡಲಾಗುತ್ತಿದೆ. ಹೀಗೆ ದಾನಿಗಳ ನೆರವಿನಿಂದ ಕಠಿಣ ಪರಿಸ್ಥಿತಿಯನ್ನು ನಿರ್ವಹಣೆ ಮಾಡಲು ಸಹಕಾರಿಯಾಗುತ್ತದೆ ಎಂದರು.
ಹರಿಹರ ಸದರನ್ ಗ್ಯಾಸ್ ಏಜೆನ್ಸಿಯಿಂದ ಎರಡು ವಾಹನಗಳಲ್ಲಿ 10 ಕೆಎಲ್ ಮತ್ತು 8.5 ಕೆ.ಎಲ್ ಆಕ್ಸಿಜನ್ ಜಿಲ್ಲೆಗೆ ಪೂರೈಕೆಯಾಗುತ್ತಿದೆ. 8.5 ಕೆ.ಎಲ್ ನಲ್ಲಿ ಖಾಸಗಿ ಆಸ್ಪತ್ರೆಗಳು ಹಾಗೂ ಅಕ್ಕಪಕ್ಕದ ಜಿಲ್ಲೆಯ ತಾಲ್ಲೂಕುಗಳಿಗೆ ಸುಮಾರು 900 ಜಂಬೋ ಸಿಲಿಂಡರ್‍ಗೆ ತುಂಬಿ ಹಂಚಲಾಗುತ್ತಿದೆ. ಆದ ಕಾರಣ ಆಕ್ಸಿಜನ್ ಪರ್ಯಾಯ ವ್ಯವಸ್ಥೆ ಆದಲ್ಲಿ ಅನುಕೂಲವಾಗುತ್ತದೆ ಎಂದರು.
ಸಿ.ಜಿ ಆಸ್ಪತ್ರೆಯಿಂದ ಪ್ರತಿ ದಿನ ಸರಾಸರಿ 25 ರಿಂದ 30 ಜನ ಬಿಡುಗಡೆಯಾದರೆ ಅಷ್ಟೇ ಜನ ದಾಖಲಾಗುತ್ತಿದ್ದಾರೆ. ಬಿಡುಗಡೆ ಬಗ್ಗೆ ನಿರ್ವಹಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಅವಶ್ಯಕತೆ ಇರುವವರಿಗೆ ಅವಕಾಶ ಮಾಡಲಾಗುತ್ತಿದೆ. ಇಎಸ್‍ಐ ಆಸ್ಪತ್ರೆಯಲ್ಲಿ ಸ್ಟೆಪ್‍ಡೌನ್ ಕೇರ್ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಸಿ.ಜಿ ಸೇರಿದಂತೆ 12 ಆಸ್ಪತ್ರೆಗಳು ಕೊವಿಡ್ ಡೆಸಿಗ್ನೇಟೆಡ್ ಆಸ್ಪತ್ರೆಯಾಗಿ ಚಿಕಿತ್ಸೆ ನೀಡುತ್ತಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 3113 ಸಕ್ರಿಯ ಪ್ರಕರಣಗಳಿವೆ. 1313 ಹೋಂ ಐಸೋಲೇಷನ್ ಹಾಗೂ ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ | ದಾವಣಗೆರೆ | ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಇಲ್ಲ : ಜಿಲ್ಲಾಧಿಕಾರಿ
ತಾಲ್ಲೂಕುಗಳಲ್ಲಿ 153 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾವಣಗೆರೆ ಕೋವಿಡ್ ಕೇರ್ ಸೆಂಟರ್‍ನಲ್ಲಿ 36, ಹರಿಹರ 54, ಹೊನ್ನಾಳಿ ಮತ್ತು ನ್ಯಾಮತಿಯಲ್ಲಿ 122 ಮತ್ತು ಚನ್ನಗಿರಿಯಲ್ಲಿ 45 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಪಾಸಿಟಿವ್ ಇಲ್ಲದಿದ್ದರೂ ಕೋವಿಡ್ ಲೈಕ್ ಇಲ್‍ನೆಸ್‍ನಿಂದ 172 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 873 ಜನರಲ್ ಬೆಡ್‍ಗಳಿದ್ದು, 695 ಆಕ್ಸಿಜನ್, 41 ಹೆಚ್‍ಎಫ್‍ಎನ್‍ಸಿ 41, ಐಸಿಯು ವಿತ್ ವೆಂಟಿಲೇಟರ್ 64, ಐಸಿಯು ವಿತೌಟ್ ವೆಂಟಿಲೇಟರ್ 38 ಒಟ್ಟು 1711 ಬೆಡ್ ವ್ಯವಸ್ಥೆ ಇದೆ. ಇದರಲ್ಲಿ 1442 ಭರ್ತಿಯಾಗಿವೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಡಿಹೆಚ್‍ಓ ಡಾ.ನಾಗರಾಜ್ ಇತರರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243