ಬಹಿರಂಗ
‘Think big’ ಸಿದ್ಧಾಂತ ಅರಿಯಬೇಕಾದ ಶೋಷಿತ ಸಮುದಾಯಗಳ ಯುವಕರು
ಭಾರತದಲ್ಲಿ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ ಬಂದು ಹೆಚ್ಚು ಕಮ್ಮಿ 27 ವರ್ಷಗಳಾಗುತ್ತಿವೆ. ಆದರೆ ತಳ ಸಮುದಾಯಗಳು ಜಾಗತೀಕರಣಗೊಂಡಿಲ್ಲ. ಉದಾರೀಕರಣದ ಅನುಕೂಲಗಳನ್ನು ಪಡೆಯುತ್ತಿಲ್ಲ. ಖಾಸಗೀಕರಣದ ಸಾಗರಕ್ಕೆ ಇಳಿಯುತ್ತಿಲ್ಲ. ಬದಲಿಗೆ ಇನ್ನೂ ಮನುಸ್ಮೃತಿ ಹುಟ್ಟು ಹಾಕಿದ ಉದ್ಯೋಗ ವ್ಯವಸ್ಥೆಗೆ ಜೋತುಬಿದ್ದಿದ್ದಾರೆ.
ಯುವಕರು Think Big ಎಂಬ ಜಾಗತೀಕರಣದ ಮಂತ್ರ ಅರ್ಥ ಮಾಡಿಕೊಳ್ಳುತ್ತಿಲ್ಲ. ಬದಲಿಗೆ “ನಮ್ಮ ಕೈಯಲ್ಲಿ ಆಗುತ್ತಾ ಸಾರ್?” ಎಂಬ ಕೀಳರಿಮೆ ಮತ್ತು ಅಸಹಾಯಕತೆಯ ಚಿಂತನೆಯಲ್ಲೇ ನರಳುತ್ತಿದ್ದಾರೆ, ಮುಳುಗಿದ್ದಾರೆ. “ಅಯ್ಯೋ, ಹೇಲು ಗುಂಡಿಗಳಲ್ಲಿ ಸಾಯುವ ಬದಲು ಒಂದು ಟೀ ಅಂಗಡಿ ತೆರೆದು ಮಾರಾಟ ಮಾಡೋಣ, ಆಗದಿದ್ದರೆ ನಾವಾದರೂ ಕುಡಿದು ಸಾಯೋಣ” ಎಂದು ಚಿಂತಿಸುವುದಿಲ್ಲ. ಬದಲಿಗೆ “ಇದೆಲ್ಲಾ ಆಗೋ ಮಾತ ಸಾರ್” ಎಂದು ನಮ್ಮನ್ನೇ ಪ್ರಶ್ನಿಸುತ್ತಾರೆ.
ಇನ್ನೂ ನಮ್ಮ ಚಳುವಳಿಗಳ ಚಿಂತಕರೂ ಅಷ್ಟೇ ಓಬಿರಾಯನ ಕಾಲದ ಚಿಂತನೆ ಉರು ಒಡೆಯುತ್ತಾರೆ, ಭಾಷಣ ಮಾಡುತ್ತಾರೆಯೇ ಹೊರತು ಕಾಲದ ಬದಲಾವಣೆ ಗುರುತಿಸುವುದಿಲ್ಲ. 16 ವರ್ಷದ ಬಾಲಕ ಬಿಲಿಯನರ್ (ಕೋಟ್ಯಾದೀಶ) ಆದ ಸುದ್ದಿ ಓದಿ ಬಾಯಿ ಲೊಚಗುಟ್ಟುತ್ತಾರೆ. ಆದರೆ ಇವರು 60 ವರ್ಷ ಆದರೂ ಲಕ್ಷ ರೂಪಾಯಿ ಎಣಿಸಲು ಇನ್ನೂ ಪರದಾಡುತ್ತಾರೆ. ಸಾಲ ಮಾಡಲು ಹಿಂಜರಿಯುತ್ತಾರೆ. ಸಂಬಳವಿಲ್ಲದೆ ತಿಂಗಳುಗಟ್ಟಲೆ ಶೋಷಿತ ಸಮುದಾಯಗಳ ಯುವಕರು ಗೌರವ ಶಿಕ್ಷಕರಾಗಿ, ಹೊರಗುತ್ತಿಗೆ ನೌಕರರಾಗಿ, ಹಂಗಾಮಿ ನೌಕರರಾಗಿ ದುಡಿಯುವ ಆಧುನಿಕ ಜೀತಗಾರಿಕೆಯ ಮನಸ್ಥಿತಿಗೆ adjust ಆಗಿದ್ದಾರೆ ಎಂದರೆ ಇದಕ್ಕೆ ಏನು ಹೇಳುವುದು? ವ್ಯವಸ್ಥೆ ದೂರುವುದೇ? ಖಂಡಿತ ಇಲ್ಲ. ನಮ್ಮ ಮನಸ್ಥಿತಿ ಬದಲಾಗಬೇಕು. ಅಂದಹಾಗೆ ನಮ್ಮ ಇಂತಹ ಜೀತಗಾರಿಕೆ ಮನಸ್ಥಿತಿ ನೋಡಿಯೇ ಜಾಗತೀಕರಣ ತಂದಿರುವುದು. ಅದಕ್ಕೆ ನಾವು ಬಲಿಯಾಗಬೇಕೆ? ಬದಲಿಗೆ ಅದನ್ನು ನಮ್ಮ ಅನುಕೂಲಕ್ಕೆ ಹೇಗೆ ಬಳಸಿಕೊಳ್ಳಬೇಕು ಎಂದು ಯೋಚಿಸಬೇಕಲ್ಲವೇ?
ಆದ್ದರಿಂದ ಜಾಗತೀಕರಣದ ಯುಗದಲ್ಲಿ ಶೋಷಿತ ಸಮುದಾಯಗಳ ಜನರ ಮನಸ್ಸು ಜಾಗತೀಕರಣಗೊಳ್ಳಬೇಕು. ಇನ್ನೂ ಹಳ್ಳಿಯಲ್ಲೇ ಬದುಕಿ ಜಾತಿ ವ್ಯವಸ್ಥೆ ಉಳಿಯಲು ಇವರೇ ಕಾರಣ ಆಗಬಾರದು. Come outside and start new life. ಉದಾರೀಕರಣ, ಅದರ ಅನುಕೂಲಗಳನ್ನು ಪಡೆಯುವ ಮಟ್ಟಕ್ಕೆ ನಾವು ಬೆಳೆಯಬೇಕು. ಕಡೆಯದಾಗಿ ಖಾಸಗೀಕರಣ, ನಾವು ಖಾಸಗಿಯಾಗಿ ಬೆಳೆಯಲು ಯತ್ನಿಸಬೇಕು. Try, try, try ಎಂಬುದು ಮಂತ್ರವಾಗಬೇಕು, ತಂತ್ರವಾಗಬೇಕು. ಇಲ್ಲದಿದ್ದರೆ you will be slaves for ever. ಯೋಚಿಸಿ.
–ರಘೋತ್ತಮ ಹೊ.ಬ
ಸುದ್ದಿದಿನ.ಕಾಂ|ವಾಟ್ಸಾಪ್|9980346234