ದಿನದ ಸುದ್ದಿ

ಕೇರಳದಲ್ಲಿ‌ ದಲಿತರಿಂದ ಊಟ ನಿರಾಕರಿಸಿದ ‘ಸುದ್ದಿ ಸತ್ಯ’ : ಇದು ‘ಸುದ್ದಿದಿನ’ ರಿಯಾಲಿಟಿ ಚೆಕ್..!

Published

on

ಸುದ್ದಿದಿನ ಡೆಸ್ಕ್ | ದಲಿತರ ಧ್ವನಿ ಅಡಗಿಸಲಾಗುತ್ತಿದೆ, ಮಾಧ್ಯಮಗಳು ದಲಿತರಿಗೆ ಅನ್ಯಾಯವಾದ ಸುದ್ದಿಗಳನ್ನು ಪ್ರಕಟಿಸುತ್ತಿಲ್ಲ ಎಂಬ ಒಂದು ಆರೋಪವಿದೆ. ಇದನ್ನು ದಿಟ್ಟವಾಗಿ ಎದುರಿಸಿದ ಸುದ್ದಿದಿನಕ್ಕೆ ತುಳಿತಕ್ಕೊಳಗಾದವರ ನೋವನ್ನು ಪ್ರಪಂಚಕ್ಕೆ ಮುಟ್ಟಿಸುವುದು ಹೇಗೆಂಬ ಆತಂಕ ಎದುರಾಗಿದೆ.

ಭಾನುವಾರ ಬೆಳ್ಳಂಬೆಳಗ್ಗೆ ಇಂಡಿಯಾ ಟುಡೆ ವೆಬ್ ಪೋರ್ಟಲ್ ಕೇರಳದ ಅಲಪ್ಪುಳ ಜಿಲ್ಲೆಯ ನಿರಾಶ್ರಿತರ ಕೇಂದ್ರದಲ್ಲಿ ದಲಿತರು ಮಾಡಿದ ಅಡುಗೆಯನ್ನು ಮೇಲ್ಜಾತಿಯವರು ತಿನ್ನುತ್ತಿಲ್ಲ. ಸವರ್ಣೀಯರು ಪ್ರತ್ಯೇಕ ಕ್ಯಾಂಪ್ ಮಾಡಿಕೊಂಡು ಪರಿಹಾರವಾಗಿ ಬಂದ ಅರ್ಧಕ್ಕೂ ಹೆಚ್ಚು ದಿನಸಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯನ್ನು ಭಾವಾನುವಾದ ಮಾಡಿ ಕನ್ನಡಿಗರಿಗೆ ತಲುಪಿಸಲಾಗಿತ್ತು.

ಈ ಸುದ್ದಿ ಬರೆದ ಕೆಲವೇ ನಿಮಿಷಗಳಲ್ಲಿ ಫೇಸ್‌ಬುಕ್ ಪೇಜ್‌ನಲ್ಲಿ ಶೇರ್ ಮಾಡಿದ್ದೆವು. ಹಾಗೆಯೇ ನಮ್ಮ ಪೋರ್ಟಲ್‌ನ ಸಿಬ್ಬಂದಿಯೂ ಅದನ್ನು ತಮ್ಮ ಖಾತೆಗಳ ಮೂಲಕ ಶೇರ್ ಮಾಡಿದ್ದರು. ಬರಹ ಹೆಸರಿನ ಖಾತೆಯಿಂದ ಗಂಟೆಗಳಲ್ಲಿ ಸಾವಿರಾರು ಮಂದಿ ತಲುಪಿದ ಪೋಸ್ಟ್ ವೈರಲ್ ಆಗಿತ್ತು. ಸದ್ಯ ಧಮನಿತರ ಧ್ವನಿ ಎಲ್ಲರಿಗೂ ತಲುಪಿತಲ್ಲ ಎಂದು ನಿರಾತಂಕವಾದೆವು. ಆದರೆ, ನಮ್ಮ ನಿರೀಕ್ಷೆ ಕೆಲವೇ ನಿಮಿಷಗಳಲ್ಲಿ ಸುಳ್ಳಾಯಿತು.
ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ದಲಿತ ವಿರೋಧಿಗಳು ಈ ಸುದ್ದಿಯನ್ನು ಫೇಕ್ ಎಂದು ಕಮೆಂಟ್ ಮಾಡಿದರು. ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟು ರಿಪೋರ್ಟ್ ಮಾಡಿದರು. ಪರಿಣಾಮವಾಗಿ ಈ ಖಾತೆಯು ಬ್ಲಾಕ್ ಆಯಿತು. ಅಷ್ಟಕ್ಕೂ ನಾವು ಬರೆದ ಸುದ್ದಿ ಸುಳ್ಳಾಗಿರಲಿಲ್ಲ. ಇಂಡಿಯಾ ಟುಡೆ ಪೋರ್ಟಲ್‌ನಲ್ಲಿ ಬಂದ ಇದೇ ಸುದ್ದಿಯು ಟೈಮ್ಸ್ ಆಫ್ ಇಂಡಿಯಾ ಕೂಡ ಅಪ್‌ಲೋಡ್ ಮಾಡಿತ್ತು.

ಈ ಎರಡೂ ಪೋರ್ಟಲ್‌ನಲ್ಲಿ ಬಂದ ಸುದ್ದಿಯನ್ನು ಆಧಾರವಾಗಿಟ್ಟುಕೊಂಡು ಸುದ್ದಿ ಬರೆದಿದ್ದರೂ ನಾವೇ ಎಡವಿದೆವಾ ಎಂಬ ಅನುಮಾನದಿಂದ ಸುದ್ದಿಯನ್ನು ಖಚಿತಪಡಿಸಿಕೊಳ್ಳಲು ನಿರ್ಧರಿಸಿದೆವು. ಇದಕ್ಕಾಗಿ ಕೇರಳದ ಅಲಪ್ಪುಳ ಜಿಲ್ಲೆಯ ಜಿಲ್ಲಾಧಿಕಾರಿ ಸುಹಾಸ್ ಅವರನ್ನು ಸುದ್ದಿದಿನ ತಂಡ ಸಂಪರ್ಕಿಸಿತು. ಈ ವಿಷಯವನ್ನು ಅವರು ಖಚಿತಪಡಿಸಿದರೂ, ಹೆಚ್ಚು ಹೈಲೈಟ್ ಮಾಡದಂತೆ ಸುಹಾಸ್ ಸಲಹೆ ನೀಡಿದರೆ. ನಾವು ಅದನ್ನು ಗೌರವಿಸುತ್ತೇವೆ. ಆದರೆ, ಪ್ರವಾಹದಂಥ ಭೀಕರ ಪರಿಸ್ಥಿತಿಯಲ್ಲೂ ದಲಿತರನ್ನು ತುಳಿಯುವ ಮನೋಭಾವನೆಗೆ ನಮ್ಮ ವಿರೋಧವಿದೆ. ಖಾತೆ ಬ್ಲಾಕ್ ಆದರೆ, ಅದನ್ನು ಮತ್ತೆ ಪಡೆಯಬಹುದು. ನಮ್ಮನ್ನು ಫೇಸ್‌ಬುಕ್‌ನಿಂದ ಹೊರಗೆ ತಳ್ಳಿ ಸತ್ಯವನ್ನು ಬಚ್ಚಿಡುವ ಯತ್ನಕ್ಕೆ ನಾವು ಹೆದರುವುದಿಲ್ಲ. ಸಮಾಜದ ಮೂರನೇ ವರ್ಗದವರಿಗೂ ಧನಿಯಾಗುವುದು ಪತ್ರಿಕೋದ್ಯಮದ ಮೂಲ ಉದ್ದೇಶ. ಅದಕ್ಕೆ ಸುದ್ದಿದಿನ ಸದಾ ಬೆಂಬಲಿಸುತ್ತದೆ.

-ಸುದ್ದಿದಿನ

Leave a Reply

Your email address will not be published. Required fields are marked *

Trending

Exit mobile version