ದಿನದ ಸುದ್ದಿ
ತ್ರಿಭಾಷಾ ಶಿಕ್ಷಣ ನೀತಿ : ಹಿಂದಿ ಹೇರಿಕೆಗೆ ಭಾರೀ ವಿರೋಧ ವ್ಯಕ್ತ
ಸುದ್ದಿದಿನ,ನವದೆಹಲಿ : ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ) ವರದಿಯಲ್ಲಿ ತ್ರಿಭಾಷಾ ಶಿಕ್ಷಣ ವ್ಯವಸ್ಥೆಯ ಜಾರಿಗೆ ಶಿಫಾರಸು ಮಾಡಿರುವ ಹಿನ್ನೆಲೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ವರದಿಯಲ್ಲಿ “ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಇಂಗ್ಲಿಷ್, ಹಿಂದಿ ಜೊತೆಗೆ ಯಾವುದಾದ್ರೂ ಆಧುನಿಕ ಭಾರತೀಯ ಭಾಷೆ ಬೋಧಿಸಬೇಕು.
ಹಾಗೇ ಹಿಂದಿ ಭಾಷೆ ಮಾತನಾಡದ ರಾಜ್ಯಗಳಲ್ಲಿ ಸ್ಥಳೀಯ ಭಾಷೆ ಮತ್ತು ಇಂಗ್ಲೀಷ್ ಜೊತೆಗೆ ಹಿಂದಿಯನ್ನು ಮೂರನೇ ಭಾಷೆಯಾಗಿ ಬೋಧಿಸಬೇಕು” ಎಂದು ಪ್ರಸ್ತಾವಿಸಲಾಗಿದೆ. ಈ ಕರಡು ಪ್ರತಿಯನ್ನು ಮೊನ್ನೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಕರಡು ಈಗ ವಿರೋಧಕ್ಕೆ ಗುರಿಯಾಗಿದೆ. ಟ್ವಿಟರ್ನಲ್ಲಿ ಕನ್ನಡಿಗರು ಸೇರಿದಂತೆ ಹಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇನ್ನು ಇದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ತ್ರಿಭಾಷಾ ಶಿಕ್ಷಣ ವ್ಯವಸ್ಥೆಯ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ, ಇದು ಪ್ರಸ್ತಾವನೆಯಷ್ಟೇ, ನಿಯಮವಲ್ಲ ಎಂದು ಹೇಳಿದೆ. ಇಲ್ಲಿ ಹಿಂದಿ ಹೇರಿಕೆ ಮಾಡಲಾಗುತ್ತಿಲ್ಲ. ಎಲ್ಲಾ ಭಾಷೆಗಳಿಗೂ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243