ಕ್ರೀಡೆ
ಬೆಳಗಿನ ಪ್ರಮುಖ ಸುದ್ದಿಗಳು
ಬೆಳಗಿನ ಪ್ರಮುಖ ಸುದ್ದಿಗಳು
- ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಜೂನ್ 3 ರಂದು ನಡೆಯಲಿರುವ ಚುನಾವಣೆಗಾಗಿ ಸ್ವೀಕೃತವಾಗಿರುವ ಎಲ್ಲಾ ಏಳು ನಾಮಪತ್ರಗಳು ಕ್ರಮಬದ್ಧವಾಗಿದ್ದು, ಅಂಗೀಕೃತವಾಗಿವೆ ಎಂದು ಚುನಾವಣಾಧಿಕಾರಿಯೂ ಆದ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ತಿಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳಾದ ಲಕ್ಷ್ಮಣ ಎಸ್. ಸವದಿ, ಕೇಶವ ಪ್ರಸಾದ್, ಛಲವಾದಿ ನಾರಾಯಣಸ್ವಾಮಿ, ಹೇಮಲತಾ ನಾಯಕ್ , ಕಾಂಗ್ರೆಸ್ ಅಭ್ಯರ್ಥಿಗಳಾದ ಎಂ. ನಾಗರಾಜ್ ಯಾದವ್ ಮತ್ತು ಅಬ್ದುಲ್ ಜಬ್ಬರ್ ಹಾಗೂ ಜೆಡಿಎಸ್ ಅಭ್ಯರ್ಥಿ ಟಿ.ಎ.ಶರವಣನ್ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು.
- ದಾವೋಸ್ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಡಿ ಕರ್ನಾಟಕ ಜಗತ್ತಿನಾದ್ಯಂತ ಹೂಡಿಕೆಯನ್ನು ಆಕರ್ಷಿಸುತ್ತಿದೆ ಎಂದು ಐಟಿ-ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. ಮುಂದಿನ ತಿಂಗಳು ಬೆಂಗಳೂರಿನ ನಾಗಸಂದ್ರದಲ್ಲಿ ಐಕಿಯ ಇಂಡಿಯಾ ಮಳಿಗೆ ಸ್ಥಾಪಿಸಲಿದೆ. ಇದರಿಂದ ಉದ್ಯೋಗಾವಕಾಶ ಹಾಗೂ ಆರ್ಥಿಕ ಪ್ರಗತಿಯಾಗಲಿದೆ ಎಂದು ಅವರು ಹೇಳಿದ್ದಾರೆ.
- ಚೀನಾದ 263ಪ್ರಜೆಗಳಿಗೆ 2011ರಲ್ಲಿ ವಿಸಾ ನೀಡಿರುವಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಹಾಗೂ ಇತರರ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದೆ.
- ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಹೈದರಾಬಾದ್ ಹಾಗೂ ಚೆನ್ನೈಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಮೊದಲು ಹೈದರಾಬಾದ್‌ನಲ್ಲಿ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ – ಐಎಸ್‌ಬಿಯ 20ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ, ಸ್ನಾತಕೋತ್ತರ ಪದವಿ ಪ್ರದಾನ ಸಮಾರಂರ್ಭದಲ್ಲೂ ಭಾಗಿಯಾಗಲಿದ್ದಾರೆ. ನಂತರ ಸಂಜೆ ಚೆನ್ನೈನಲ್ಲಿ ಹಲವು ಪೂರ್ಣಗೊಂಡ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದು, ಕೆಲ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಸುಮಾರು 31ಸಾವಿರದ 500 ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಪ್ರಧಾನಿ ಉದ್ಘಾಟನೆ, ಶಿಲಾನ್ಯಾಸ ನೆರವೇರಿಸಲಿದ್ದಾರೆ.
- ಆಕ್ಸಿಸ್ ಬ್ಯಾಂಕ್ ತನ್ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದಡಿ ರಾಜ್ಯದ ಕೆಲವು ಇಂಜಿನಿಯರಿಂಗ್ ವಿಶ್ವವಿದ್ಯಾಲಯಗಳ ಉನ್ನತೀಕರಣ ಯೋಜನೆಯನ್ನು ಹಮ್ಮಿಕೊಳ್ಳಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ. ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಶೃಂಗಸಭೆಯಲ್ಲಿ ಆಕ್ಸಿಸ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ ಅಮಿತಾಬ್ ಚೌಧರಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಈ ಕುರಿತು ಚರ್ಚೆ ನಡೆಸಿದ್ದಾರೆ.
- ಕಾರವಾರದಲ್ಲಿರುವ ಐ.ಎನ್.ಎಸ್.ಕದಂಬನೌಕಾನೆಲೆಯಲ್ಲಿ ’ಕ್ಷಿಪಣಿ ವ್ಯವಸ್ಥೆಗಳಲ್ಲಿನ ಉದಯೋನ್ಮುಖ ಪರಿಕಲ್ಪನೆಗಳು, ಪ್ರವೃತ್ತಿಗಳು ಮತ್ತು ತಂತ್ರಜ್ಞಾನಗಳು’ ಕುರಿತ ವಿಚಾರ ಸಂಕಿರಣವನ್ನು ನಡೆಯಿತು. ಮುಂಬೈನ ನೇವಲ್ ಪ್ರಾಜೆಕ್ಟ್‌ನ ಡೈರೆಕ್ಟರ್ ಜನರಲ್ ವೈಸ್ ಅಡ್ಮಿರಲ್ ರಾಜಾರಾಮ್ ಸ್ವಾಮಿನಾಥನ್ ಅಧ್ಯಕ್ಷತೆ ವಹಿಸಿದ್ದರು.
- ಇಂಧನ ಪರಿವರ್ತನೆಗೆ ರಾಜ್ಯ ಮಟ್ಟದ ಪರಿಶೀಲನಾ ಸಮಿತಿಗಳನ್ನು ರಚಿಸಬೇಕೆಂದು ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳಿಗೆ ಸೂಚನೆ ನೀಡಿದ್ದಾರೆ. ಈ ಸಮಿತಿಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಕಾರ್ಯದರ್ಶಿಗಳ ಅಧ್ಯಕ್ಷತೆಯಡಿ ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243