ದಿನದ ಸುದ್ದಿ
ಟಿಪ್ಪು ಜಯಂತಿ ರದ್ದು | ಬಿಜೆಪಿ ನಾಯಕರು ಇತಿಹಾಸದ ಅರಿವಿಲ್ಲದ ಮೂಢರು : ಸಿದ್ದರಾಮಯ್ಯ ಕಿಡಿ
ಸುದ್ದಿದಿನ, ಬೆಂಗಳೂರು : ಟಿಪ್ಪು ಜಯಂತಿ ಆಚರಣೆ ರದ್ದು ಮಾಡಿರುವುದು ಅಪರಾಧ. ಟಿಪ್ಪು ಸುಲ್ತಾನ್ ಬ್ರಿಟೀಷರ ವಿರುದ್ಧ ಹೋರಾಡುತ್ತಲೇ ವೀರಮರಣ ಹೊಂದಿದ ಹುತಾತ್ಮ. ಕೋಮುವಾದವನ್ನೇ ತಲೆಯಲ್ಲಿ ತುಂಬಿಕೊಂಡಿರುವ ಬಿಜೆಪಿ ನಾಯಕರು ಇತಿಹಾಸದ ಅರಿವಿಲ್ಲದ ಮೂಢರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಟಿಪ್ಪು ಸುಲ್ತಾನ್ ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ. ನಾಡಿಗಾಗಿ ಮಕ್ಕಳನ್ನೇ ಒತ್ತೆ ಇಟ್ಟ ಅಪ್ರತಿಮ ದೇಶಭಕ್ತ. ಸ್ವಾತಂತ್ರ್ಯ ಹೋರಾಟದಲ್ಲಿಯೇ ಭಾಗವಹಿಸದ ಸಂಘ ಪರಿವಾರಕ್ಕೆ ಇದೆಲ್ಲ ಅರ್ಥವಾಗುವ ವಿಷಯ ಅಲ್ಲ. ಟಿಪ್ಪು ಸುಲ್ತಾನ್ ಒಂದು ಧರ್ಮಕ್ಕೆ ಸೇರಿದವರಲ್ಲ. ನಮ್ಮ ರಾಜ್ಯಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಸೇರಿರುವ ಆಸ್ತಿ. ಈ ಕಾರಣಕ್ಕಾಗಿಯೇ ಟಿಪ್ಪು ಜಯಂತಿ ಆಚರಣೆಯ ನಿರ್ಧಾರ ಕೈಗೊಂಡಿದ್ದೆ. ಜಾತಿ-ಧರ್ಮದ ಹೆಸರಲ್ಲಿ ಸಮಾಜವನ್ನು ಒಡೆಯಲು ಹೊರಟಿರುವ ಬಿಜೆಪಿಯ ನಡೆ ಅನಿರೀಕ್ಷಿತವೇನಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಂದೆ ಬಿ.ಎಸ್.ಯಡಿಯೂರಪ್ಪನವರು ಕೈಯಲ್ಲಿ ಕತ್ತಿ ಹಿಡಿದು ಟಿಪ್ಪು ವೇಷ ಹಾಕಿ ಕುಣಿದಾಡುತ್ತಾ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿದ್ದರು. ಈಗ ಸಂಘ ಪರಿವಾರವನ್ನು ಖುಷಿಪಡಿಸಲು ಟಿಪ್ಪು ಜಯಂತಿ ರದ್ದು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್| 9980346243