ದಿನದ ಸುದ್ದಿ
ಟಿಪ್ಪು ಜಯಂತಿ ಸರಳ ಆಚರಣೆ; ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿ
ಸುದ್ದಿದಿನ,ಚಿತ್ರದುರ್ಗ : ಜಿಲ್ಲಾ ಆಡಳಿತದಿಂದ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ನವಂಬರ್ 10 ರಂದು ಮೆರವಣಿಗೆ ಇಲ್ಲದೆ ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.
ಅವರು (ನ.07) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರದ ಆದೇಶದಂತೆ ಮೆರವಣಿಗೆ ಇಲ್ಲದೆ ವೇದಿಕೆ ಕಾರ್ಯಕ್ರಮವನ್ನು ಮಾತ್ರ ಮಾಡಲಾಗುತ್ತಿದೆ. ಚಿತ್ರದುರ್ಗದಲ್ಲಿ ತ.ರಾ.ಸು.ರಂಗಮಂದಿರದಲ್ಲಿ ನ.10 ರ ಬೆಳಗ್ಗೆ 11 ಗಂಟೆಗೆ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ ಎಂದರು.
ಕೆಲವು ಸಂಘಟನೆಗಳು ಟಿಪ್ಪು ಜಯಂತಿಯನ್ನು ಆಚರಣೆ ಮಾಡಬಾರದು ಎಂದು ಬೇಡಿಕೆಯನ್ನು ಸಲ್ಲಿಸಿದ್ದು ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ನವಂಬರ್ 9 ರ ಬೆಳಗ್ಗೆ 6 ಗಂಟೆಯಿಂದ ನ.10 ರ ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದ್ದು ಈ ಅವಧಿಯಲ್ಲಿ ಮದ್ಯದ ಅಂಗಡಿಗಳನ್ನು ಮುಚ್ಚಲು ಹಾಗೂ ಮಾರಾಟವನ್ನು ಸಹ ನಿಷೇಧಿಸಲಾಗಿದೆ ಎಂದರು.
ಕೆಲವು ಮದ್ಯದ ಅಂಗಡಿಯವರು ನಿಷೇಧಾಜ್ಞೆ ಇದ್ದಾಗಲೂ ಮಾರಾಟ ಮಾಡಿದಲ್ಲಿ ಪೊಲೀಸ್ ಮತ್ತು ಅಬಕಾರಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ. ಆದರೆ ನಿಷೇಧಾಜ್ಞೆಯು ಮದುವೆ ಹಾಗೂ ಖಾಸಗಿ ಕಾರ್ಯಕ್ರಮಗಳಿಗೆ ಇದು ಅನ್ವಯವಾಗುವುದಿಲ್ಲ.
ಜಿಲ್ಲಾ ರಕ್ಷಣಾಧಿಕಾರಿ ಡಾ; ಕೆ.ಅರುಣ್ ಮಾತನಾಡಿ ಟಿಪ್ಪು ಜಯಂತಿ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕೆ.ಎಸ್.ಆರ್.ಪಿ. ಸೇರಿದಂತೆ ಸಿಅರ್‍ಪಿಎಪ್ ತುಕಡಿಗಳು ಆಗಮಿಸಲಿದ್ದು ಅಗತ್ಯವಿರುವ ಕಡೆ ಚೆಕ್‍ಪೋಸ್ಟ್‍ಗಳ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಇಲ್ಲಿಯವರೆಗೆ ಯಾರನ್ನು ಬಂಧಿಸಿರುವುದಿಲ್ಲ ಎಂದರು.