ಬಹಿರಂಗ

ಟಿಪ್ಪು ದೇಶ ಭಕ್ತನಲ್ಲವೆ..?

Published

on

  • ವಿ.ಎಸ್. ಬಾಬು

ಭಾರತದ ಮನುವಾದಿಗಳು ಶತ ಶತಮಾನಗಳಿಂದ ಮಾಡುತ್ತಿರುವ ಯಡವಟ್ಟುಗಳಿಂದ ಸಾವಿರಾರು ಬಹುಜನ ಪರಾಕ್ರಮಿಗಳು, ಇತಿಹಾಸಕಾರರು, ದೊರೆಗಳು ಮುಂತಾದವರು ಕಾಲಗರ್ಭದಲ್ಲಿ ನಾಮಾವಶೇಷವಾಗಿ ಹೋಗಿದ್ದಾರೆ. ಅವರಿಗೆ ನ್ಯಾಯಸಮ್ಮತವಾಗಿ ಸಿಗಬೇಕಾದ ಮನ್ನಣೆ, ಗೌರವಗಳು ಸಿಗದಂತಾಗಿವೆ. ಅಂಥವುಗಳಲ್ಲಿ ಮಹಾನ್ ಪರಾಕ್ರಮಿ, ದೇಶಪ್ರೇಮಿ, ಮೈಸೂರು ಹುಲಿ ಟಿಪ್ಪುಸುಲ್ತಾನ್ ಒಬ್ಬರು.

ಭಾರತದ ಅಂಟು ಜಾಡ್ಯಗಳಾದ ವಿ.ಹೆಚ್.ಪಿ., ಭಜರಂಗದಳ ಮುಂತಾದವು ಟಿಪ್ಪೂ ಒಬ್ಬ ಮಾತಾಂಧ, ದುಷ್ಟ ಕ್ರೂರಿ ಎಂದೆಲ್ಲಾ ಹೇಳಿ ಉದ್ದೇಶಪೂರ್ವಕವಾಗಿ ಸುಳ್ಳ ಸುದ್ದಿಗಳನ್ನು ಹುಟ್ಟಿಸಿ ಈತನಿಗೆ ಇತಿಹಾಸದಲ್ಲಿ ನೀಡಬೇಕಾದ ಸ್ಥಾನಮಾನ ನೀಡದೆ ಅಗೌರವದಿಂದ ಕಂಡಿವೆ. ಟಿಪ್ಪೂ ಕೇವಲ ಒಬ್ಬ ಅವೈದಿಕ ಎಂಬ ಏಕೈಕ ಕಾರಣಕ್ಕಾಗಿ ಅವನನ್ನು ವಿರೋಧಿಸಲಾಗಿದೆ. ಬಹುಜನರಾದ ನಾವು ಟಿಪ್ಪೂವನ್ನು ಗೌರವಿಸಿ, ಬಹುಜನ ಮಕ್ಕಳಿಗೆ ಆತನ ಇತಿಹಾಸವನ್ನು ತಿಳಿಸಬೇಕಾಗದೆ. ಏಕೆಂದರೆ ಸಾಮಾಜಿಕ ಪರಿವರ್ತನೆಯ ಚಳುವಳಿಯಲ್ಲಿ ಟಿಪ್ಪುವಿನದು ಸಿಂಹಪಾಲಿದೆ.

ಮೊದಲನೆಯದಾಗಿ ಮಲಬಾರಿನಲ್ಲಿ ದಲಿತರು ಮತ್ತು ಹಿಂದುಳಿದ ಮಹಿಳೆಯರು ಅಂದು ಮೇಲು ಹೊದಿಕೆಯನ್ನು ಹಾಕುವಂತಿರಲಿಲ್ಲ ಪುರೋಹಿತಶಾಹಿ ವ್ಯವಸ್ಥೆ ಅದನ್ನು ಕಡ್ಡಾಯ ಮಾಡಿತ್ತು. ಅವರನ್ನು ಕೀಳಾಗಿ ಕಾಣುತ್ತಿದ್ದ ಸಂದರ್ಭದಲ್ಲಿ ಟಿಪ್ಪು ಒಂದು ರಾಜಾಜ್ಞೆ ಹೊರಡಿಸಿ. ಪುರೋಹಿತಶಾಹಿ ಮಠಕ್ಕೆ ಎಚ್ಚರಿಸಿ ಅನಿಷ್ಟ ಪದ್ಧತಿಯನ್ನು ನಿಲ್ಲಿಸದಿದ್ದರೆ ಉಗ್ರಶಿಕ್ಷೆಗೆ ಗುರಿಯಾಗಬೇಕಾಗುತ್ತದೆಂದು ಹೇಳಿ ಮಠಾಧಿಪತಿಗಳಿಗೆ ಛೀಮಾರಿ ಹಾಕಿದ್ದ! ಯಾರೊಬ್ಬರೂ ಬೆತ್ತಲೆ, ಅರೆಬೆತ್ತಲೆ ಇರಬಾರದೆಂದು ಎಲ್ಲರೂ ವಸ್ತ್ರಗಳನ್ನು ಕಡ್ಡಾಯವಾಗಿ ಹಾಕಬೇಕೆಂದೂ ಕಟ್ಟಪ್ಪಣೆ ಹೊರಡಿಸಿ, ನಾಗರಿಕ ಸಮಾಜದ ಲಕ್ಷಣಗಳನ್ನು ವಿವರಿಸಿದ್ದ! ಆದ್ದರಿಂದ ಮಲಬಾರಿನ ಮನುವಾದಿಗಳು ಟಿಪ್ಪುವಿನ ಮೇಲೆ ದ್ವೇಷ ಸಾಧಿಸುತ್ತಿದ್ದರು.

ಮತ್ತೊಂದು ಅನಿಷ್ಟ ಪದ್ಧತಿಯಾದ ಮದ್ಯಪಾನವನ್ನು ತನ್ನ ರಾಜ್ಯದಲ್ಲಿ ಬಹಿಷ್ಕರಿಸಿಲ್ಲದೆ ತನ್ನ ಆಪ್ತ ಕಾರ್ಯದರ್ಶಿಗೆ ಕಾಗದ ಬರೆದು ನಾನು ಜನರಿಗೆ ಮದ್ಯವನ್ನು ಕುಡಿಸಿ ಬೊಕ್ಕಸವನ್ನು ತುಂಬಿಕೊಂಡು ರಾಜನಾಗಿರುವುದಕ್ಕಿಂತ ವಿಷ ಕುಡಿದು ಸಾಯುವುದು ಲೇಸು. ಇಡೀ ಸಮಾಜ ನನಗೆ ಪ್ರಜ್ಞಾವಂತ ಸಮಾಜವಾಗಬೇಕು. ಹಾಗೇನಾದರೂ ನಾನು ಜನರಿಗೆ ಹೆಂಡ ಕುಡಿಸಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದೇ ಅವಶ್ಯವಾದರೆ ಅಂತಹ ಕುರ್ಚಿ ನನಗೆ ಬೇಕಿಲ್ಲ. ಅಂತಹ ದೊರೆ ಪಟ್ಟ ನನಗೆ ಬೇಡ” ಎಂದು ಹೇಳಿ ರಾಜ್ಯಾದ್ಯಂತ ಇರುವ ಈಚಲು ಮರಗಳನ್ನು ಕಡಿಸಲು ಆಜ್ಞೆ ಮಾಡಿದ್ದ! ಅಬಕಾರಿಯಿಂದಲೇ ಸರ್ಕಾರ ನಡೆಸಲು ಸಾಧ್ಯ ಎಂದು ಹೇಳುವ ಇಂದಿನ ಹೊಣೆಗೇಡಿ ಸರ್ಕಾರಗಳಿಗೆ ಟಿಪ್ಪುವಿನ ಮಾತು ಕಿವಿಗೆ ಕಾದ ಸೀಸ ಹಾಕಿದಂತಾಗುತ್ತದೆ.!

ಮಕ್ಕಳ ಮಾರಾಟ ನಿಷೇಧ ಜೀತ ಪದ್ಧತಿ ನಿರ್ಮೂಲನೆ, ಜೂಜು ಮತ್ತು ತಂಬಾಕು ಸೇವನೆಯ ವಿರುದ್ದ ದೊಡ್ಡ ಸಮರ ಸಾರಿದ್ದ ಟಿಪ್ಪು, ತನ್ನ 17 ವರ್ಷಗಳ ಆಡಳಿತದಲ್ಲಿ ಜನರು ರಾಜಕೀಯವಾಗಿ, ಸಾಮಾಜಿಕವಾಗಿ ಆರ್ಥಿಕವಾಗಿ ಸ್ವಾತಂತ್ರ್ಯ ಹೊಂದುವುದರ ಜೊತೆಗೆ ಅಜ್ಞಾನ, ಮೂಢನಂಬಿಕೆಗಳಿಂದಲೂ ಮುಕ್ತಿ ಹೊಂದಬೇಕೆಂದು ಬಯಸಿದ್ದ.

ಟಿಪ್ಪು ಕಂದಾಯ ಹಾಗೂ ಇನಾಂ ಪದ್ಧತಿಯಲ್ಲಿ ತಂದ ಕೆಲವು ಅಮೂಲಾಗ್ರ ಬದಲಾವಣೆಗಳಿಂದಾಗಿ ಹಿಂದೂ ಧರ್ಮದ ಮೇಲ್ವರ್ಗದ ಕೋಪಕ್ಕೆ ತುತ್ತಾಗಿ ಇವನೊಬ್ಬ ದುಷ್ಟರಾಜನಂತೆ ಚಿತ್ರಿಸಲ್ಪಟ್ಟ! ಕಂದಾಯವನ್ನು ಮಧ್ಯಸ್ಥಿಕೆಗಾರರಾದ ಸಾಹುಕಾರದಿಂದ ಕೊಡಿಸಿ ಅದಕ್ಕಾಗಿ ಅವರಿಗೆ ಕಮಿಷನ್ ಕೊಡಲಾಗುತ್ತಿತ್ತು. ಇದು ಗ್ರಾಮಸ್ಥರನ್ನು ಶೋಷಣೆ ಮಾಡಲು ವಿಪುಲ ಅವಕಾಶ ಮಾಡಿಕೊಟ್ಟಿತ್ತು. ಇದನ್ನು ತಪ್ಪಿಸಿ ಬದಲಿಗೆ ಕಂದಾಯದ ಅಧಿಕಾರಿಗಳನ್ನು ನೇಮಕ ಮಾಡಿದನು. ಇದರ ಜೊತೆಗೆ ಅಧಿಕೃತವಲ್ಲದ ಇನಾಂ ಜಮೀನುಗಳನ್ನು ಹಿಂದಕ್ಕೆ ಪಡೆದು, ಅಧಿಕಾರಿಗಳಿಗೆ ಸಂಬಳವಾಗಿ ಜಹಗೀರುಗಳನ್ನು ಕೊಡುವುದನ್ನು ತಪ್ಪಿಸಿ ನಗದು ಹಣ ನೀಡಬೇಕೆಂದು ನೀಡಬೇಕೆಂದು ಆಜ್ಞೆ ಹೊರಡಿಸಿದನು.

ಇದರಿಂದ ಕಂದಾಯ ವಸೂಲಿ ಮಾಡುತ್ತಿದ್ದ ಸಾಹಾಕಾರರು, ವೇದಾಂತ ಶಿಖಾಮಣಿ, ವೇದಬ್ರಹ್ಮ, ಆ ಬ್ರಹ್ಮ, ಈ ಬ್ರಹ್ಮ ಎಂಬ ಬಿರುದು ಬಾವಲಿಗಳನ್ನು ರಾಜರಿಂದ ಪಡೆದಿದ್ದವರು ಮತ್ತು ಅದಕ್ಕಾಗಿ ಅಗ್ರಹಾರಗಳು, ಜಹಗೀರುಗಳನ್ನು ಪಡೆದು ತಿಂದು ತೇಗಿ ತ್ರಿಮತಗಳಲ್ಲಿ ಶ್ರೇಷ್ಟ ಮತ ಯಾವುದು? ಎಂಬ ಒಣ ಚರ್ಚೆಗಳಲ್ಲಿ ಕಾಲಹರಣ ಮಾಡುತ್ತಾ ರಾಜ್ಯದ ಆದಾಯವನ್ನು ನುಂಗಿ ನೀರು ಕುಡಿದಿದ್ದವರು ತಮ್ಮ ಆದಾಯ ಮೂಲಗಳನ್ನು ಕಳೆದುಕೊಂಡರು ಮತ್ತು ಅಂತಹ ಜನರನ್ನು ಹದ್ದುಬಸ್ತಿನಲ್ಲಿಟ್ಟ ಟಿಪ್ಪು ಅವರ ಸೊಕ್ಕು ಮುರಿದಿದ್ದ. ಮುಂದೆ ಇವರ ಸಂತತಿಯವರೇ ಟಿಪ್ಪುವಿನ ಬಗ್ಗೆ ಅಪಪ್ರಚಾರಕ್ಕೆ ಇಳಿದಿದ್ದು.

ಇದೇ ಸಂದರ್ಭದಲ್ಲಿ ಕೊಡಗಿನಲ್ಲಿ ವಾಸವಾಗಿದ್ದ ಎರವರು, ಹೊಲೆಯರು ಮತ್ತು ಮಲಬಾರಿನ ಅಂತ್ಯಜರು ನಂಬೂದಿರಿ ಬ್ರಾಹ್ಮಣರ ಮತ್ತು ಇತರ ಹಿಂದೂಗಳ ಕೀಳು ದೃಷ್ಟಿಗೆ ತುತ್ತಾಗಿ ಧಾರ್ಮಿಕವಾಗಿ ಸಾಮಾಜಿಕವಾಗಿ ತೀವ್ರ ಶೋಷಣೆಗಳಿಗೆ ಒಳಪಟ್ಟಿದ್ದರು. ಇದರಿಂದ ರೋಸಿಹೋಗಿದ್ದ ಆ ಜನತೆ ಟಿಪ್ಪುವಿನ ಆಡಳಿತ ವೈಖರಿ ಕಂಡು ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದರು. ಇದನ್ನು ಸಹಿಸದ ಹಿಂದೂಗಳು ಟಿಪ್ಪುವಿನ ವ್ಯಕ್ತಿತ್ವಕ್ಕೆ ಮಸಿ ಬಳಿದು ಅವನನ್ನು ಮತಾಂಧ ಎಂದರು.

ಈತನ ಆಡಳಿತದಲ್ಲಿ ತಂದ ನಿತ್ಯ ಜೀವನದಲ್ಲಿ ನಾಣ್ಯಗಳ ಚಲಾವಣೆ, ಕ್ಯಾಲೆಂಡರ್, ತೂಕ ಮತ್ತು ಅಳತೆ, ಹಣಕಾಸು ಬ್ಯಾಂಕಿಂಗ್ ಮುಂತಾದ ಬದಲಾವಣೆಗಳಿಂದ ಆಡಳಿತದಲ್ಲಿ ಹೊಸ ಗಾಳಿ ಬೀಸುವಂತೆ ಮಾಡಿತು. ಮುಂದೆ ನಾಲ್ವಡಿಯವರಿಂದ ಸಾಕಾರಗೊಂಡ ಕಾವೇರಿಗೆ ಅಡ್ಡಲಾಗಿ ಕಟ್ಟಬೇಕೆಂಬ ಅಣೆಕಟ್ಟಿನ ರೂಪುರೇಷೆಯ ಕಲ್ಪನೆ, ಸಹಕಾರಿ ಬ್ಯಾಂಕಿನ ಆರಂಭ, ಮೈಸೂರು ನೌಕಾಪಡೆಯ ಸ್ಥಾಪನೆ ದರ್-ಲಾಲ್-ಉಮೂರ್ ಎಂದು ಕರೆಯಲ್ಪಡುವ ತಾಂತ್ರಿಕ ವಿಶ್ವವಿದ್ಯಾಲಯ ಹೀಗೆ ಆಡಳಿತಾತ್ಮಕವಾದ ಪ್ರಯೋಗಗಳಿಂದ ಕೂಡಿದ್ದ ಇವನ ರಾಜ್ಯಭಾರ “ಸರ್ಕಾರ್ …… ಬಾದ್” ಎಂದು ಹೆಸರು ಪಡೆಯಿತು.

ಶ್ರೀರಂಗ ಪಟ್ಟಣದ ಪಶ್ಚಿಮಕ್ಕೆ ಕಾವೇರಿ ನದಿಗೆ ಅಡ್ಡಲಾಗಿ 70 ಅಡಿ ಎತ್ತರದ ಅಣೆಕಟ್ಟನ್ನು ನಿರ್ಮಿಸಿದ್ದಲ್ಲಿ ಮೈಸೂರಿನ ತಲಕಾಡಿನ ಬಳಿ ಮುಡುಕುತೊರೆ ಎಂಬಲ್ಲಿ ಕಾವೇರಿ ನದಿಗೆ ಅಣೆಕಟ್ಟುಯೊಂದನ್ನು ಕಟ್ಟಿ ಆ ಪ್ರದೇಶವನ್ನೆಲ್ಲಾ ನೀರಾವರಿಗೆ ಅಳವಡಿಸಿದ ಕೀರ್ತಿ ಟಿಪ್ಪುವಿನದು.

ಈ ಆಧುನಿಕ ಕಾಲದ ಮಾರುಕಟ್ಟೆ ನಿಯಂತ್ರಣ ವ್ಯವಸ್ಥೆಯನ್ನು ಆ ಮಧ್ಯಕಾಲದಲ್ಲೇ ಜಾರಿಗೆ ತಂದು ಟಿಪ್ಪು ಬಹಳಷ್ಟು ವಸ್ತುಗಳನ್ನು ಅಂದರೆ ಬಂಗಾರದ ಅದಿರು, ಗಂಧದ ಮರ, ಲೋಹ ಆನೆ, ತೆಂಗಿನಕಾಯಿ, ಕರಿಮೆಣಸು ಹಾಗೂ ಬೆಲೆಬಾಳುವ ಮರ ಇವುಗಳನ್ನು ರಾಷ್ಟ್ರೀಕರಿಸಿದ್ದನು. ತಪ್ಪು ಮಾಡಿದ ವ್ಯಕ್ತಿಗೆ ಶಿಕ್ಷೆ ವಿಧಿಸುವ ಬದಲು ತನ್ನ ಗ್ರಾಮದ ಬಳಿ ಮಾವಿನ ಗಿಡಗಳನ್ನು ಮತ್ತು ಹಲಸಿನ ಗಿಡಗಳನ್ನು ನೆಡತಕ್ಕದ್ದು ಮತ್ತು ಆ ಗಿಡಗಳು ಮೂರು ದೇರಾಗಳ ಎತ್ತರ ಬೆಳೆಯುವವರೆಗೂ ಅಪರಾಧಿ ಆ ಗಿಡಗಳಿಗೆ ನೀರುಣಿಸ ತಕ್ಕದ್ದು ಮತ್ತು ಸಂರಕ್ಷಿಸತಕ್ಕದ್ದು ಎಂಬ ದಂಡನೆ ವಿಧಿಸುವ ಮೂಲಕ ತನ್ನ ರಾಜ್ಯದಲ್ಲೆಲ್ಲ ಹಸಿರು ಪರಿಸರಿಸುವಂತೆ ಮಾಡಿದ!

ಮೈಸೂರು ರಾಜ್ಯಕ್ಕೆ ಮೊಟ್ಟ ಮೊದಲ ಬಾರಿಗೆ ರೇಷ್ಮೆಯನ್ನು ಪರಿಚಯಿಸಿದ ಕೀರ್ತಿ ಟಿಪ್ಪುವಿನದಾಗಿದೆ. ರೇಷ್ಮೆ ಬೆಳೆಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಟಿಪ್ಪು ತನ್ನ ರಾಜ್ಯದಲ್ಲಿ ಉತೃಷ್ಟ ರೇಷ್ಮೆ ತಯಾರಿಕೆಗೆ ಹೆಸರಾಗಿದ್ದ. ಹಾಗೆಯೇ ಇವನ ನಿರಂತರ ಕಾಳಜಿಯಿಂದ ಅಂದು ಮೈಸೂರು ಪ್ರಾಂತ್ಯದಲ್ಲಿ 318 ರೇಷ್ಮೆ ಉತ್ಪಾದನಾ ಕುಟುಂಬಗಳಿದ್ದವು.

ತುಂಬಾ ಅಪರೂಪದ ಸಸ್ಯ ತಳಿಗಳನ್ನು ಸಂರಕ್ಷಿಸಲೆಂದೇ ಲಾಲ್‌ಬಾಗ್ ತೋಟವನ್ನು ಕೇವಲ ಮನೋಲ್ಲಾಸಕ್ಕಾಗಿ ಎಂದು ಭಾವಿಸದೆ ಪ್ರಪಂಚದ ಅತಿ ದೊಡ್ಡ ಪ್ರಯೋಗ ಶಾಲೆಯನ್ನಾಗಿ ಪರಿವರ್ತಿಸಿದ್ದ!

ಕನ್ನಡ, ಪರ್ಷಿಯನ್, ಫ್ರೆಂಚ್, ತೆಲುಗು, ತಮಿಳು ಭಾಷೆಯ ಮೇಲೆ ಅಗಾಧವಾದ ಜ್ಞಾನ ಹೊಂದಿದ್ದ ಟಿಪ್ಪು, ಬೃಹತ್ ಗಾತ್ರದ ಗ್ರಂಥಭಂಡಾರವನ್ನು ಹೊಂದಿದ್ದ. ‘ಟಿಪ್ಪುವಿನ ಕನಸುಗಳು’ ಎಂಬ 38 ಲೇಖನಗಳು, ಫಾತುರ್ ಮುಜಾಹಿದ್ದೀನ್ (ಸೈನಿಕನ ವಿಜಯ), ಭೂಕಂದಾಯ ಕಾಯಿದೆ, ವಾಣಿಜ್ಯ ಕಾಯಿದೆಗಳ ಬಗ್ಗೆ ಪುಸ್ತಕಗಳನ್ನು ಬರೆದು ಪ್ರೌಢ ಲೇಖಕನೆನಿಸಿಕೊಂಡಿದ್ದ ಟಿಪ್ಪು ತನ್ನ ಅರಮನೆಯ ಮುಂದೆ ಸ್ವಾತಂತ್ರ್ಯದ ಸಂಕೇತವಾಗಿ ಸಂಪಿಗೆ ಮರವೊಂದನ್ನು ನೆಟ್ಟು ತನ್ನನ್ನು ತಾನು ಕೇವಲ ನಾಗರಿಕ ಟಿಪ್ಪು ಎಂದು ಕರೆದುಕೊಂಡ!

ಅದಿಯಿಲ್ಲದ ಅತ್ಯವಿಲ್ಲದ ಸನಾತನಿಗಳಿಗೆ ರೀಲು ಬಿಡುವುದೇ ಚರಿತ್ರೆಯಾಗಿರುವಾಗ ಬಹುಜನರು ಏನನ್ನು ತಾನೆ ಕಲಿಯಲು ಸಾಧ್ಯ? ಈಗಲಾದರೂ ನಾವು ಅಧ್ಯಯನವನ್ನು ಗಂಭೀರವಾಗಿ ಪರಿಗಣಿಸಿ ಈ ವೈದಿಕರು ಬಿಟ್ಟಿರುವ ರೀಲುಗಳ ಬಣ್ಣವನ್ನು ಬಯಲು ಮಾಡಬೇಕಿದೆ!.

ಪ್ರಪಂಚದ ಇತಿಹಾಸ ಪುಟಗಳನ್ನು ಅವಲೋಕಿಸಿದಾಗ ತನ್ನ ಸ್ವಾಭಿಮಾನದ ಉಳಿವಿಗಾಗಿ ತನ್ನ ಕರುಳ ಬಳ್ಳಿಗಳನ್ನೇ ಒತ್ತೆಯಿಟ್ಟು ದಾಖಲೆ ಮತ್ತೆಲ್ಲೂ ಇಲ್ಲ. ತನ್ನ ಆತ್ಮಗೌರವದ ಮುಂದೆ ಎಂತಹ ಕಠಿಣ ಸಂದರ್ಭಗಳನ್ನು ಎದುರಿಸುವ ತಾಕತ್ತು ಹೊಂದಿದ್ದ ಟಿಪ್ಪುವನ್ನು ಈ ದೇಶದ ವೈದಿಕರು ಬೇಕೆಂತಲೆ ಇತಿಹಾಸದ ಪುಟಗಳಲ್ಲಿ ಕಡೆಗಣಿಸಿದ್ದಾರೆ. ಮೈಸೂರಿನ ಇತಿಹಾಸವನ್ನು ಭಿನ್ನವಾಗಿ ಬರೆದ ಟಿಪ್ಪುವಿಗೆ ಬಹುಜನರಾದ ನಾವು ನಮ್ಮ ಬಹುಜನ ಇತಿಹಾಸದಲ್ಲಿ ಅಗ್ರಸ್ಥಾನ ಕೊಡಬೇಕು.

ಯಾಕೆಂದರೆ ಈ ಸನಾತನಿಗಳು ಯಾರನ್ನೂ ವೈಭವೀಕರಿಸಿ ಹೊಗಳಿ ಮೇಲಕ್ಕೆ ಕೂರಿಸಿದ್ದಾರೆ ಅವರೆಲ್ಲರ ಮೇಲೆ ನಮಗೆ ಗುಮಾನಿಯಿದೆ! ಬಾಬಾ ಸಾಹೇಬರು ಒಂದು ಕಡೆ “If a Hindu Says ‘yes’ we should say ‘No’ When they asy ‘No’ we should say yes” ಎಂದು ಹೇಳಿದ್ದಾರೆ. ಈ ಮಾತು ಇಷ್ಟೊಂದು ವಿಶಾಲ ವ್ಯಾಪ್ತಿಯಲ್ಲಿ ಅರ್ಥೈಸುತ್ತದೆ ಎಂಬ ಕಲ್ಪನೆಯೇ ನಮಗಿರಲಿಲ್ಲ! ಇರಲಿ, ಕಾಲ ಇನ್ನೂ ಮಿಂಚಿಲ್ಲ !

ಇತಿಹಾಸಕಾರರಾದ ಕಿರ್ಕ್, ಪ್ಯಾಟ್ರಿಕ್, ವಿಲ್ಸ್ ಮುಂತಾದವರು ಟಿಪ್ಪುವನ್ನು ತಪ್ಪಾಗಿ ಅರ್ಥೈಸಿದ್ದಾರೆ. ಇವರೆಲ್ಲಾ ಅಂಗ್ಲ ವೈದಿಕರು, ಇದಕ್ಕೆ ಇಲ್ಲಿನ ವೈದಿಕರು, ಮಸಾಲೆ ಸೇರಿಸಿ ಟಿಪ್ಪುವನ್ನು ಖಳನಾಯಕನನ್ನಾಗಿ ಚಿತ್ರಿಸಿದ್ದಾರೆ. ಟಿಪ್ಪುವಿನಿಂದ ಮೈಸೂರು ಯುದ್ಧಗಳಲ್ಲಿ ಸೋತು ಸೆರೆಸಿಕ್ಕ ಬೈಲಿ. ಬ್ರೆಟ್‌ವೈಟ್ ಮುಂತಾದವರು ಇಲ್ಲಿನ ವಿದ್ವಾಂಸರಿಗೆ ತಪ್ಪು ಸುದ್ದಿಗಳನ್ನು ಫೀಡ್ ಮಾಡಿ ಸತ್ಯವನ್ನು ಮುಚ್ಚಿ ಹಾಕಿದ್ದಾರೆ. ಆದ್ದರಿಂದಲೇ ಬಾಬಾಸಾಹೇಬರು “ನಮ್ಮ ಇತಿಹಾಸವನ್ನು ನಾವೇ ಬರೆಯಬೇಕು” ಎಂದು ಹೇಳಿದ್ದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version