ನೆಲದನಿ

ಧೀರ ಟೀಪುವಿನ ಲಾವಣಿಗಳು

Published

on

ಶ್ರೀ ಗುರುದಾಸ ನಂಜಣ್ಣ ಸುತ ನೀಲಕಂಠ ಅವರು ರಚಿಸಿರುವ ಟಿಪ್ಪುಸುಲ್ತಾನ್-ಲಾವಣಿಯ ಆಯ್ದ ಭಾಗಗಳು ಇಲ್ಲಿವೆ.

ಪುಸ್ತಕ : ಧೀರ ಟೀಪುವಿನ ಲಾವಣಿಗಳು
ಸಂಪಾದನೆ : ಲಿಂಗದೇವರು ಹಳೆಮನೆ

ಹೈದರ ಆಲಿಯು ಅರಿತವನಲ್ಲವು ಓದು ಬರಹವೆಂತೆಂಬುದನು|
ಆದರು ಖಚಿತದಿ ಕನ್ನಡ ಭಾಷೆಯೊಳು ಮಾತನಾಡುವುದನು ಅರಿತಿದ್ದನು||

ಮೋದದಿ ವೈರಿಗಳ ಮರ್ದಿಸಿ ಮೈಸೂರ ಧ್ವಜ ಮೆರೆಸಿದ್ದನು|
ಈ ಧರೆಯಿಂದಲಿ ಕಣ್ಮರೆಯಾದನು ಕನ್ನಡದ ಗಂಡುಗಲಿ ಎಂದೆನಿಸಿದವನು||

ಧಾಟಿ :ಉರ್ಡಾ
ಅಪ್ಪ ಕಟ್ಟಿದ ಮೈಸೂರ ದೇಶ ದೊಡ್ಡದಿತ್ತಲ್ಲಾ|
ಡೀಪುವಿನ ಕಾಲದೊಳು ಇನ್ನು ವಿಸ್ತರಿಸಿತಲ್ಲಾ||

ತಪ್ಪವನ್ನೇ ತಂದರು ಇಷ್ಟಾದರು ಬಿಡಲಿಲ್ಲಾ|
ಬೆಪ್ಪಾದರು ಅರಿಗಳು ಕೇಳಿ ಟೀಪು ಜಯಿಸೊಲ್ಲಾ||

ಧಾಟಿ:ಗುಲ್ಲಾರ್ಡು
ಹೈದರನ ಬಳಿಕ ಟೀಪುಸುಲ್ತಾನ|
ಬೆದರಿಸಿದ ಗದಗದ ಹಿಂದುಸ್ತಾನ||

ಪದವಿಯೊ ಮೈಸೂರಿನ ಸುಲ್ತಾನ|
ಕದನದಿ ಮಂಗ್ಳೂರ್ ಹಿಡಿದನು ಕೈವಶ ಬೆದರಿತು ಲಂಡನ್||

ಶ್ಲೋಕ :ಅರವು ಆಂದ್ರ ಶುರುವಿಗಿಡಿದನು ಪೌರುಶದಿ ಕೊಯಮತ್ತೂರನು|

ನಿರುತ ಲೂಟಿಯ ಹೊಡೆಯುತಲಿದ್ದನು ನೀಲಗಿರಿ ಮಲೆನಾಡನು
ಪೌರುಶದಿ ಮಲಬಾರನು||

ಧಾಟಿ:ಚಾಲ್
ಮೈಸೂರ ಷಾಜಾನನ ಘರ್ಜನೆ ಕೇಳಿ ಲಂಡನ್ ಪಳುಗಳು ಬೆದರೋಯ್ತು|
ಮಸಲತ್ ಮಾಡಿದ ಮೀರ್ಸಾದಿಕನಿಗೆ ದೇಶದ್ರೋಹಿ ಎಂಬ್ಹೆಸಾರಾಯ್ತು||

ಆಟಾಟೋಪದಿ ಟೀಪು ಸುಲ್ತಾನನು ಆರ್ಕಾಟ್ ಲೂಟಿಯ ಮಾಡಿದನು|
ಏಟೇಟಿನ ಮೇಲ್ ಉಲ್ಟಾ ಫಿರಂಗಿಯ ಕೋಠಿಗಳೆಷ್ಟೂ ಲೂಟಿದನು||

ನಟನೆಯ ನೈಜಾಂ ಮರಾಠಿ ಪೇಶ್ವೆಯ ಪಟಾಲಮ್ಮ ದಿಟ್ಟ ಗೆದ್ದಿದನು|
ಬ್ರಿಟಿಷ್ ಜನಾಂಗದ ಈಷ್ಟ ಇಂಡಿಯಾ ಕಂಪೆನಿ ಲಾಷ್ಟಿಗೆ ಮಾಡಿದನು||

ಕೋಟಲೆ ಹತ್ತಿದ ಬ್ರಿಟಿಷ್ ವರ್ತಕರು ಕೂಟ ಗೈದರು ಮಸಲತ್ತನ್ನು|
ಲೂಟಿಯನೊಡೆಯಲು ಶ್ರೀರಂಗಪಟ್ಣಕೆ ಜನರಲ್ ಹ್ಯಾರಿಸ್ ಬಂದಿದ್ದನು||

ಮಿಟ ಮಿಟ ಕಣ್ ಬಿಡುತ್ತಿದ ಮರಾಠಿ ಸಪೋಟಾಗಿ ಸೈನ್ಯ ತಂದಿದ್ದನು|
ಕಟಕಟ ಹಲ್ ಕಡಿಯುತ್ತ ನಿಜಾಮನು ತಟಕ್ಕನೆ ಖಳ ಹೊಕ್ಕಿದನು||

ಧಾಟಿ: ದೊಡ್ಡುರ್ಡಾ
ಮೀರ ಕಮರುರ್ದೀ ರ್ಖಾ ಸೇನಾಪತಿ ಸೋತನು ಈರೋಡ ಬಳಿಯಲಿ|
ಬಾರೋದ್ದೀನನ ಬಲವೆಲ್ಲಾ ಮಡಿದಿತು ಕೂಗಳತೆಯ ಮಳವಳ್ಳಿಯಲಿ||

ಫಿರಂಗಿ ದಳಪತಿ ಮಾನ್ಶಿಯರ ಲಾಲಿಯು ಮೂರ್ಛೆ ಬಿದ್ದನು ರಣದಲ್ಲಿ|
ಮೀರಸಾಧಕನ ದ್ರೋಹದಿ ಸತ್ತನು ಸೈಯ್ಯದ ಗಪೂರ ಗುಂಡೇಟಿನಲಿ||

ಧಾಟಿ: ಉರ್ಡಾ
ಘಡಘಡಲ್ ಗುಂಡೊಡೆದರು ಕೋಟೆಗೆ|
ಗಡಿಬಿಡಿಯು ಹತ್ತಿತ್ತು ಶ್ರೀರಂಗಪಟ್ಣದೊಳಗೆ||

ಕಡುದ್ರೋಹಿಗಳಾಟ ಮದ್ದಿನ ಮನೆ ಉರಿದೋಗೆ|
ಇಡಿಸಿದ್ದ ಫಿರಂಗಿಯು ಇಳಿದೋಯ್ತು ಮಣ್ಣೊಳಗೆ||

ಧಾಟಿ:ಗುಲ್ಲುರ್ಡಾ
ವಂಚಕರ ಮಿಂಚಿನಾಟ ಬಳ್ಳಿ|
ಸಂಚರಿಸಿ ಹೊಂಚಲಾಗಿತ್ತು||

ಶ್ಲೋಕ:
ಮೀರಸಾಧಕನಾಟ ಇಂಪಿನಾಟಕವೆ ಆಗಿದ್ದಿತು|
ದಾರಿ ತೋರಿತು ವೈರಿ ಜನರಿಗೆ ಭಾರೀ ಕಷ್ಟವೇ ತಪ್ಪಿತು||

ಧಾಟಿ: ಚಾಲ್
ಖಾಸಾ ದಂಡಿನ ಶ್ರೇಷ್ಠ ಮುಖಂಡರ ಮೋಸವು ಸುಲ್ತಾನರಿಗೆ ಅರಿವಾಯ್ತು|
ಮಸಲತ್ ಮಾಡಿದ ಮೀರಸಾಧಕನಿಗೆ ದೇಶದ್ರೋಹಿ ಎಂಬ್ಹೆಸರಾಯ್ತು||

ಹರಾಮ ಖೋರರ ಕರಾಮತ್ ಅರಿತನು ಟೀಪು ಸುಲ್ತಾನನು ನಿಮಿಷದಲಿ|
ಅರೇ ಹಮಾರೇ ನಮಖ್ಹರಾಮ ಕರೇಸೋ ತಾಯೆಂದ ಮನಸ್ಸಿನಲಿ||

ಸ್ವರಾಜ್ಯ ರಕ್ಷಣೆಗೋಸ್ಕರ ಸುಲ್ತಾನ ರಣಾಗ್ರ ಹೊರಟನು ರೋಷದಲಿ|
ಫರಂಗಿ ಸೋಲ್ಜರ ತರಂಗ ಮಧ್ಯದಿ ತುರಂಗ ಬಿಟ್ಟನು ತ್ವರಿತದಲಿ||

ಪರಂಪರೆಯಿಂಪರ ವಿರೋಧಿ ಪೋಜನು ಕುರಿಗಳಂದದಿ ಖಡ್ಗದಲಿ|
ಸರಾಸರಿಯಿಲ್ ಬರೆಯಲು ಸಿಗದು ತರಿದನೆಷ್ಟೋ ಶಿರವನಲ್ಲಿ||

ಪರಾಕ್ರಮದಿ ಬಲು ಹೋರಾಡಿ ಬಿದ್ದನು ಸಾರಂಗ ಬಾಗಿಲ ಗವಿಯ ಬಳಿ|
ಫರಂಗಿ ಪೋಜಿನ ತರಂಗ ನುಗ್ಗಿತು ಶ್ರೀರಂಗನ ಧಾಮನ ಪಟ್ಣದಲಿ||

ಧಾಟಿ:ದೊಡ್ಡುರ್ಡಾ
ಟೀಪುಸುಲ್ತಾನನ ಹದಿನೇಳು ವರುಷದ ಆಡಳಿತ ಕೊನೆಯಾಯ್ತು|
ಟೀಪು ರಾಜ್ಯದೊಳು ಶರಾಬು, ಶೇಂದಿ, ಗಾಂಜಾ ಆಫೀಮು ಇರಲಿಲ್ಲ||

ಟೀಪುವಿನ ಕಾಲದೊಳು ಜೂಜುನಾಟ ಮೇಣ್ ವ್ಯಭಿಚಾರದ ಸುಳಿವಿಲ್ಲ|
ಜ್ಞಾಪಕವಿದ್ದಿತು ಸಬ್ಬಲ್ ರಾಣಿಯ ದಿಣ್ಣೆಯ ಭಿತಿಯು ಜನಕೆಲ್ಲಾ||

ಧಾಟಿ: ಉರ್ಡಾ
ಹುಲಿ ಸೀಳಿದ ದೊರೆ ಅಳಿದೋದ ಮೇಲೆ ರಣದಲ್ಲಿ|
ಮಳೆಯಾಯಿತು ಗಳಿಗೇಲಿ ಪ್ರಳಯದಂತೆ ಭರದಲ್ಲಿ||

ಸುಲಿಗೆಯಾ ಮಾಡಿದರು ಶತ್ರುಜನರು ಪುರದಲ್ಲಿ|
ಬಳಿಕಾದ ವಿವರ ಬರೆದೇನು ಫಲವಿಲ್ಲಿ||

ಧಾಟಿ:ಗುಲ್ಲುರ್ಡಾ
ಬಂದವರಿಗೆಲ್ಲಾ ತಿಂದು ತೇಗೆ|
ಹಿಂದಿನ ರಾಜರ ಸಂತತೀಗೆ||

ಮುಂದಿನೊಳು ಮುಮ್ಮಡಿ ಕೃಷ್ಣರಾಜರೀಗೆ|
ಸಂದಿತು ರಾಜ್ಯವು ಸಾವಿರದೇಳ್ನೂರ ತೊಂಭತ್ರೊಂಭತ್ರೊಳಗೆ||

ಶ್ಲೋಕ:
ರಾಜಧಾನಿ ಮೈಸೂರ ಪಟ್ಣ ಮಾದರಿ ನವ ರೀತಿಯಲ್ಲಿ|
ಸೋಜಿಗದಿ ರಾಜಿಪುದು ಶ್ರೀ ಚಾಮುಂಡೇಶ್ವರಿ ಕೃಪೆಯಲ್ಲಿ||

ಶೇಷನ ಗಿರಿಹರಿದಾಸ ಪುಟ್ಟಣ್ಣನ ಲೇಸಿನ ಕರುಣವು ನಮಗಾಯ್ತು|
ಪೋಷಿಪ ಶ್ರೀ ಗುರು ದಾಸ ನಂಜಣ್ಣನ ಸುತ ನೀಲ್ಕಂಠನ ಪದವಾಯ್ತು||

ಶ್ರೀ ಗುರುದಾಸ ನಂಜಣ್ಣ ಸುತ ನೀಲಕಂಠ

Trending

Exit mobile version