ಬಹಿರಂಗ

ಟಿಪ್ಪು’ಯುದ್ಧ ಮಾರ್ಗ’..!

Published

on

ಟಿಪ್ಪೂವಿನ ಮೈಸೂರು ಸೈನ್ಯ ಸಾವಿರಾರು ಜನರನ್ನು ಕೊಂದಿತ್ತು. ಯಾರೆಲ್ಲಾ ಬ್ರಿಟಿಷರ ಪರವಾಗಿ ನಿಂತು ಮೈಸೂರು ಸೈನ್ಯಕ್ಕೆ ವಿರುದ್ಧವಾಗಿ ಕಿರುಕುಳ ನೀಡುತ್ತಿದ್ದರೋ ಅವರ ಮೇಲೆ ಟಿಪ್ಪೂ ಸಮರ ಸಾರಿದ್ದು ನಿಜ. ಆದರೆ ಈ ಘಟನೆಗಳನ್ನೇ ಇಟ್ಕೊಂಡು ಆರೆಸ್ಸೆಸ್ಸಿನವರು ಇದು ‘ಜಿಹಾದಿ’ ಮನಸ್ಥಿತಿಯಲ್ಲಿ ಟಿಪ್ಪೂ ನಡೆಸಿದ ಹಿಂದೂ ಮತ್ತು ಕ್ರೈಸ್ತರ ಮಾರಣ ಹೋಮ ಎಂದು ಧರ್ಮದ ಕಲರ್ ನೀಡಲು ಹೆಣಗುತ್ತಿದ್ದಾರೆ..

ಸಧ್ಯ ಇದನ್ನು ಪಕ್ಕಕ್ಕಿಡೋಣ. ಟಿಪ್ಪೂ ಇದ್ದ ಕಾಲಘಟ್ಟದಲ್ಲಿಯೇ ಅತ್ತ ಮರಾಠಾ ಬ್ರಾಹ್ಮಣ ಪೇಶ್ವೆಗಳೂ ತಮ್ಮ ವಿರೋಧಿಗಳ ವಿರುದ್ಧ ಯುದ್ಧ ಮಾಡುತ್ತಿದ್ದರಲ್ಲವೇ? ಈ ಯುದ್ಧಗಳಲ್ಲಿ ಅವರು ಎಂತಹ ಮಾರ್ಗ ಬಳಸುತ್ತಿದ್ದರು ಎಂಬುದನ್ನು ಒಂದು ಉದಾಹರಣೆ ಮೂಲಕ ನೋಡೋಣ.

ಪೇಶ್ವೆಗಳು ಯುದ್ಧ ನಡೆಸುವಾಗ ತಮ್ಮ ಮುಖ್ಯ ಸೈನ್ಯ ಯುದ್ಧ ನಡೆಸುವ ಮೊದಲು ಶತ್ರು ಕೋಟೆಯೊಳಕ್ಕೆ ಮೊದಲು ‘ಪಿಂಡಾರಿ’ ಪಡೆಗಳನ್ನು ಬಿಡುತ್ತಿದ್ದರು. ಈ ಪಿಂಡಾರಿಗಳ ಪಡೆಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಇರುತ್ತಿದ್ದರು. ಮುಖ್ಯವಾಗಿ ಮೊಗಲರ ವಿರುದ್ಧ ದಾಳಿಯಲ್ಲಿ ಈ ಪಿಂಡಾರಿ ಪಡೆಗಳನ್ನು ಪೇಶ್ವೆಗಳು ಕುಮ್ಮಕ್ಕಿನಿಂದ ಬೆಳೆಸಿದ್ದರು. ಹಾಗಾದರೆ ಪಿಂಡಾರಿಗಳು ಯಾರಾಗಿದ್ದರು?
ಈ ಬಗ್ಗೆ 1832ರಲ್ಲಿ ದಾಖಲಿಸುವ ಬ್ರಿಟಿಷ್ ಅಧಿಕಾರಿ ಜಾನ್ ಮಾಲ್ಕಂ ನೀಡುವ ವಿವರ ಹೀಗಿದೆ. “ಮರಾಠಾ ಪೇಶ್ವೆ ಮೊದಲನೇ ಬಾಜೀರಾವ್ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಗಾಜೀವುದ್ದೀನ್ ಎಂಬ ಪಿಂಡಾರಿ ವ್ಯಕ್ತಿ ಸತ್ತಾಗ ಅವನ ಇಬ್ಬರು ಮಕ್ಕಳಾದ ಗುರ್ದೀಖಾನ್ ಮತ್ತು ಶಾಬಾಝ್ ಖಾನ್ ರಲ್ಲಿ ಮೊದಲನೆಯವನು 16 ವರ್ಷದವನಾಗಿದ್ದು ಎರಡನೆಯವನು ಚಿಕ್ಕವನಾಗಿರುತ್ತಾನೆ. ಇವರಲ್ಲಿ ಗುರ್ದೀಖಾನ್ ನನ್ನು ಸೇನಾ ದಂಡನಾಯಕನನ್ನಾಗಿ ಮಾಡಲಾಗುತ್ತದೆ. ಈತ ಮೊಗಲರ ವಿರುದ್ಧ ನಡೆಸಿದ ಕೆಲ ದಾಳಿಗಳನ್ನು ನೋಡಿ ಆತನಿಗೆ ಪೇಶ್ವೆಗಳ ಸೇವೆಯಲ್ಲಿದ್ದ ಹೋಳ್ಕರ್ ಮನೆತನದ ಮಲ್ಹಾರ್ ರಾವ್ ಹೋಳ್ಕರ್ ಎಂಬ ಮರಾಠಾ ರಾಜನು ಝೆರ್ರೆ ಎಂದು ಕರೆಯುವ ಚಿನ್ನದ ಧ್ವಜವನ್ನು ಬಹುಮಾನವಾಗಿ ನೀಡಿದ್ದ. ಇದರಿಂದ ಉತ್ತೇಜಿತನಾದ ಗುರ್ದೀಖಾನ್ ತನ್ನ ಪಡೆಗಳ ಬಲವನ್ನು ಅಪಾರವಾಗಿ ಹೆಚ್ವಿಸಿಕೊಳ್ಳುತ್ತಾನೆ”.
ನಂತರ ಅನೇಕ ಬುಡಕಟ್ಟು ಜನರನ್ನು ಈ ಪಿಂಡಾರಿ ಪಡೆಗಳಿಗೆಸೇರಿಸಿಕೊಳ್ಳುತ್ತಾರೆ. ಮಧ್ಯಭಾರತದ ದನಗಾಹಿ ಬುಡಕಟ್ಟು ಜನರನ್ನು ಅಪಹರಿಸಿ ಪಿಂಡಾರಿ ಪಡೆಗಳಿಗೆ ಸೇರಿಸಿ ತರಬೇತಿ ನೀಡಲಾಗುತ್ತದೆ.
ಪೇಶ್ವೆಗಳ ಯುದ್ಧಗಳಲ್ಲಿ ಭಾಗವಹಿಸುವ ಮುಸ್ಲಿಮರ ನೇತೃತ್ವದ ಈ ಪಿಂಡಾರಿ ಪಡೆಗಳು ನಡೆಸುತ್ತಿದ್ದ ದಾಳಿ ರಭಸ ಮತ್ತು ಲೂಟಿಗಳು ಮೈ ನಡುಗಿಸುತ್ತಿದ್ದವು. ಕೋಟೆಯೊಳಕ್ಕೆ ನುಗ್ಗಿದ್ದೇ ಮನೆಮನೆಗಳನ್ನು ಲೂಟಿ ಮಾಡಿ ಬೆಂಕಿ ಹಚ್ಚುತ್ತಿದ್ದರು. ಅಪಾರ ನಷ್ಟ ಮಾಡುತ್ತಿದ್ದ ರು.

ಈ ಪಿಂಡಾರಿಗಳ ಲೂಟಿಯನ್ನು ಮತ್ತಷ್ಟು ರಭಸಗೊಳಿಸಲು ಪೇಶ್ವೆಗಳು ಒಂದು ಕುತಂತ್ರ ಮಾಡುತ್ತಿದ್ದರು. ಯುದ್ಧ ಇಲ್ಲದ ಸಮಯದಲ್ಲಿ ಪಿಂಡಾರಿ ಸೈನಿಕರಿಗೆ ದಿನಕ್ಕೆ ನಾಕಾಣೆ ಕೊಡುತ್ತಿದ್ದರೆ ಯುದ್ಧ ಇಲ್ಲದ ಸಂದರ್ಭದಲ್ಲಿ ವೇತನ ನಿಲ್ಲಿಸುತ್ತಿದ್ದರು. ಶತ್ರುವಿನ ಸಾಮ್ರಾಜ್ಯದಲ್ಲಿ ಹೆಚ್ಚು ಲೂಟಿ ಮಾಡಲಿ ಎಂಬುದು ಇದರ ಉದ್ದೇಶವಾಗಿತ್ತು. ಆ ಲೂಟಿಯೇ ಪಿಂಡಾರಿಗಳ ಸಂಪಾದನೆಯಾಗುತ್ತಿತ್ತು. ಆದರೆ ಮರಾಠಾ ದಂಡನಾಯಕರು ಅನೇಕ ವೇಳೆ ಪಿಂಡಾರಿಗಳ ಈ ಸಂಪಾದನೆಯನ್ನೂ ತಾವೇ ತೆಗೆದುಕೊಳ್ಳುತ್ತಿದ್ದರು. ಆಗ ಪಿಂಡಾರಿಗಳು ದುಪ್ಪಟ್ಟು ಲೂಟಿ ಮಾಡಿ ತಮ್ಮ ಉದ್ಯೋಗದಾತ ಪೇಶ್ವೆ ದಂಡನಾಯಕರನ್ನು ಸಂತೃಪ್ರಿಗೊಳಿಸಿ ಮಿಕ್ಕಿದ್ದನ್ನು ತಾವಿಟ್ಡುಕೊಳ್ಳುತ್ತಿದ್ದರು. ಆದರೆ ಯುದ್ಧ ಗೆದ್ದಾಗ ಪಿಂಡಾರಿ ಮುಖಂಡರಿಗೆ ಬಹುಮಾನವನ್ನು ಮರಾಠರು ನೀಡುತ್ತಿದ್ದರು.
1795ರ ಖಾರ್ದಾ ಯುದ್ಧದಲ್ಲಿ ಹೈದರಾಬಾದ್ ನಿಜಾಮನ ವಿರುದ್ಧ ನಡೆಸಿದ ಲೂಟಿಗಾಗಿ ಪಿಂಡಾರಿಗಳ ಮುಖಂಡ ಕರೀಖಾನ್ ಗೆ ಎರಡನೇ ಮಾಧವರಾವ್ ಭಾರೀ ಬಹುಮಾನ ನೀಡಿದ್ದಲ್ಲದೇ ಕೆಲವು ಜಿಲ್ಲೆಗಳನ್ನೂ ನೀಡಿದ್ದ. ಕೊನೆಯ ಆಂಗ್ಲೋ ಮರಾಠಾ ಯುದ್ಧವನ್ನು ಪಿಂಡಾರಿ ಯುದ್ಧ ಎಂದೇ ಕರೆಯಲಾಗುತ್ತದೆ. ಈ ಹೊತ್ತಿಗೆ 40,000 ಪಿಂಡಾರಿಗಳಿದ್ದರು ಎಂದು ಅಂದಾಜಿಸಲಾಗಿದೆ. ಈ ಯುದ್ಧದಲ್ಲಿ ಬ್ರಿಟಿಷರ ಮುಖ್ಯ ಗುರಿಯೇ ಪಿಂಡಾರಿಗಳಾಗಿದ್ದರಲ್ಲದೇ ನಾಲ್ಕೂ ಕಡೆಯಿಂದ ಸುತ್ತುವರಿದು ಪಿಂಡಾರಿ ಪಡೆಗಳನ್ನು ಹತ್ತಿಕ್ಕಿತ್ತಾರೆ.

ಪಿಂಡಾರಿಗಳ ಪ್ರಸಿದ್ಧ ನಾಯಕ ಮಹಮದ್ ಮೂಸ್ತಾಕೀನ್ ಸಿಂಗ್ ಜಂಗ್ ಅಲಿಯಾಸ್ ಚಿಟ್ಟೂ,… ಈ ಯುದ್ಧದಲ್ಲಿ ತಲೆ ತಪ್ಪಿಸಿಕೊಂಡು ಓಡುತ್ತಾನೆ. ಇದಕ್ಕೂ ಮೊದಲು ಮೇಲೆ ಹೇಳಿದ ಮತ್ತೊಬ್ಬ ಪಿಂಡಾರಿ ಮುಖಂಡ ಕರೀಂ ಖಾನ್ ಗೆ ಪೇಶ್ವಾ ಸಿಂಧಿಯಾಗಳು ತಮ್ಮ ಕುಟುಂಬದ ಹುಡುಗಿ ಕೊಟ್ಟು ಮದುವೆ ಮಾಡಿಕೊಟ್ಟು ಸಿಂಧಿಯಾ- ಪಿಂಡಾರಿ ಸಂಬಂಧವನ್ನು ಗಟ್ಟಿ ಮಾಡಿಕೊಂಡಿರುತ್ತಾರೆ. ಈ ಸಂಗತಿ ಜಾನ್ ಮಾಲ್ಕಂನ ಪಿಂಡಾರಿ, ಎ ಮೆಮೋಯರ್ ಆಫ್ ಸೆಂಟ್ರಲ್ ಇಂಡಿಯಾ ಕೃತಿಯಲ್ಲಿ ದಾಖಲಾಗಿದೆ. (ಪು.432)

ಮೇಲಿನ ವಿವರಗಳನ್ನು ನೋಡಿದಾಗ ಒಂದು ವಿಷಯ ಸ್ಪಷ್ಟ ವಾಗುತ್ತದೆ. ಅದು ಮರಾಠಾ ಪೇಶ್ವೆಗಳಿರಲಿ, ಹೈದರ್ ಟಿಪ್ಪೂ ಇರಲಿ, ಆ ಕಾಲದಲ್ಲಿ ಮತಧರ್ಮ ಎಂಬುದು ಮುಖ್ಯವಾಗಿರಲಿಲ್ಲ. ಶತ್ರುಗಳ ಸಂಹಾರವೇ ಮುಖ್ಯವಾಗಿತ್ತು. ಶತ್ರುಗಳ ಬಳಿ ಇದ್ದುದೆಲ್ಲವನ್ನು ಕೊಳ್ಳೆ ಹೊಡೆಯಬೇಕೆಂಬ ನೀತಿಯಿಂದಲೇ ಅಲ್ಲವೇ ಅದೇ ಮರಾಠಾ ಪೇಶ್ವೆಗಳು ಶೃಂಗೇರಿ ಶಾರದಾ ದೇವಾಲಯವನ್ನು ಧ್ವಂಸಗೈದದ್ದು?
ಪೇಶ್ವೆಗಳಿಗೆ ಹೋಲಿಸಿದರೆ ಟಿಪ್ಪೂ ತನ್ನ ಸೈನ್ಯವನ್ನು ಶಿಸ್ತುಬದ್ಧವಾಗಿ ಕಟ್ಟಿದ್ದ. ಯಾವ ಕಾರಣಕ್ಕೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸಕೂಡದು ಎಂಬ ನೀತಿ ಮಾಡಿದ್ದ. ಸೈನಿಕರಿಗೆ ಜಮೀನು ಹಂಚಿದ ಏಕೈಕ ರಾಜನಾಗಿ ಟಿಪ್ಪೂ ಕಂಗೊಳಿಸುತ್ತಾನೆ.

ಆದರೆ, ಟಿಪ್ಪೂ ಅಥವಾ ಪೇಶ್ವೆಗಳ ಕಾಲದಲ್ಲಿ ಇರದಿದ್ದ ಧರ್ಮ ರಾಜಕಾರಣ ಇಂದು ಬಂದಿದೆ. ಹೀಗಾಗಿ ಇವತ್ತಿನ ಧರ್ಮದ ದೃಷ್ಟಿಯಲ್ಲೇ ಆ ಕಾಲವನ್ನೂ ನೋಡಲು ಹೋಗುವಾಗ ಟಿಪ್ಪೂವಿನ ಒಳ್ಳೆಯ ಅಂಶಗಳೂ ಕಾಣುವುದಿಲ್ಲ. ಹಾಗೆಯೇ ಪೇಶ್ವೆಗಳು ನಡೆಸಿದ ದಾಳಿಗಳು “ಜಿಹಾದಿ” ದಾಳಿಗಳಾಗಿ ಕಾಣುವುದಿಲ್ಲ. ಆದರೆ ಟಿಪ್ಪೂ ನಡೆಸಿದ ದಾಳಿಗಳು ಹಾಗೆ ಕಾಣತೊಡಗುತ್ತವೆ… ನಾವು ನಮಗೆ ಗೊತ್ತಿಲ್ಲದೇ ಇಬ್ಬಂದಿತನದಲ್ಲಿ ಸಿಲುಕುತ್ತೇವೆ…
ಹೀಗಾಗಿ ಚರಿತ್ರೆಯಲ್ಲಿ ನಡೆದ ಸಂಗತಿಗಳನ್ನು ನೋಡುವಾಗ ಮೊದಲು ಈ ಹಿಂದೂ- ಮುಸ್ಲಿಂ ಬೈನರಿ ದೃಷ್ಟಿಯಿಂದ ಹೊರಬರುವುದು ಮಾತ್ರ ನಮ್ಮನ್ನು ಮನುಷ್ಯತ್ವದಲ್ಲಿ ಉಳಿಸಬಹುದು.

– ಹರ್ಷಕುಮಾರ್ ಕುಗ್ವೆ

Trending

Exit mobile version