ದಿನದ ಸುದ್ದಿ
ಸ್ವಾತಂತ್ರ್ಯವೀರರನ್ನು ಪಠ್ಯದಿಂದ ಕೈಬಿಟ್ಟ ಸರ್ಕಾರ
ಸುದ್ದಿದಿನ ದಾವಣಗೆರೆ : ಏಸು ಕ್ರಿಸ್ತ, ಪ್ರವಾದಿ ಪೈಗಂಬರ್, ಟಿಪ್ಪುಸುಲ್ತಾನ್, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕದೇವಿ ಮೊದಲಾದವರಿಗೆ ಸಂಬಂಧಿಸಿದ ಪಠ್ಯವನ್ನು ಹತ್ತನೇ ತರಗತಿಯ ಪಠ್ಯಕ್ರಮದಿಂದ ಕೈಬಿಟ್ಟಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ. ಅಧಿಕೃತ ಸರ್ಕಾರ ದುರ್ಬಲಗೊಳ್ಳುತ್ತಿದೆ, ಅನಧಿಕೃತ ಸಂಘಿ ಸರ್ಕಾರ ಬಲಗೊಳ್ಳುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಶಾಲಾಪಠ್ಯದಿಂದ ಮೇಲಿನ ವ್ಯಕ್ತಿಗಳ ಪಠ್ಯವನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಈ ಕುರಿತು ವರದಿಗಳು ಮುದ್ರಣ ಮಾಧ್ಯಮದಲ್ಲಿ ಪ್ರಕಟವಾಗಿವೆ. ಇ ಪತ್ರಿಕೆಗಳ ತುಣುಗಳನ್ನು ಸಾಮಾಜಿಕ ಜಾಲತಾಣ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿರುವ ಸಿದ್ದರಾಮಯ್ಯ, 10ನೇ ತರಗತಿ ಪಠ್ಯದಿಂದ ಕೆಲವು ಮಹಾಪುರುಷರಿಗೆ ಸಂಬಂಧಿಸಿದ ಪಾಠವನ್ನು ಕೈಬಿಟ್ಟದ್ದರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಕರ್ನಾಟಕ ಪಠ್ಯಪುಸ್ತಕ ಸಮಿತಿ ಸರ್ಕಾರಕ್ಕಿಂತಲೂ ಉನ್ನತ ಸಂಸ್ಥೆಯೇ? ಅದನ್ನು ತಕ್ಷಣ ವಾಪಸು ಪಡೆಯಿರಿ, ಇಲ್ಲದೆ ಇದ್ದರೆ ನಿಮ್ಮ ಪಾತ್ರ ಒಪ್ಪಿಕೊಳ್ಳಿ ಎಂದು ಅವರು ಸವಾಲೆಸೆದಿದ್ದಾರೆ.
ಕೊರೊನಾ ನಿಯಂತ್ರಿಸಲಾಗದ ರಾಜ್ಯಸರ್ಕಾರ, ಪರಿಸ್ಥಿತಿಯ ದುರ್ಬಳಕೆ ಮಾಡಿಕೊಂಡು ಪಠ್ಯಪುಸ್ತಕಗಳನ್ನು ಕೇಸರೀಕರಣಗೊಳಿಸಿ ಗುಪ್ತ ಅಜೆಂಡಾ ಅನುಷ್ಠಾನಗೊಳಿಸಲು ಹೊರಟಿದೆ. ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಈ ಹುನ್ನಾರವನ್ನು ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ, ಹೋರಾಟ ಅನಿವಾರ್ಯವಾಗಬಹುದು ಎಂದು ಸರ್ಕಾರ ಮತ್ತು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243