ದಿನದ ಸುದ್ದಿ
ಪರವಾನಗಿ ಹೊಂದಿದ ಮಾರಾಟಗಾರರಿಂದ ಮಾತ್ರ ತಂಬಾಕು ಮಾರಾಟವಾಗಬೇಕು : ಎನ್ಎಲ್ಎಸ್ಐಯು ವರದಿ
ಸುದ್ದಿದಿನ,ಬೆಂಗಳೂರು: ತಂಬಾಕು ಉತ್ಪನ್ನಗಳ ಮಾರಾಟ ಮಾಡಲು ಎಲ್ಲ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳು ಪರವಾನಗಿ ಹೊಂದಿರಬೇಕು. ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮಾರಾಟದಲ್ಲಿ ತೊಡಗಿರುವ ಎಲ್ಲ ಆವರಣಗಳಲ್ಲಿ ಪರವಾನಗಿಯನ್ನು ಎದ್ದು ಕಾಣುವಂತೆ ಪ್ರದರ್ಶಿಸಬೇಕು ಹಾಗು ಪ್ರತಿ ವರ್ಷ ಪರವಾನಗಿಯನ್ನು ನವೀಕರಿಸಬೇಕು ಎಂದು ಇತ್ತೀಚೆಗೆ ಬಿಡುಗಡೆಗೊಂಡ ‘ಭಾರತದಲ್ಲಿ ತಂಬಾಕು ಮಾರಾಟಗಾರರ ಪರವಾನಗಿ ಜಾರಿ ಚೌಕಟ್ಟು’ (Framework for Implementation of Tobacco Vendor Licensing in India) ವರದಿ ಶಿಫಾರಸು ಮಾಡಿದೆ.
ತಂಬಾಕು ಉತ್ಪನ್ನಗಳ ಲಭ್ಯತೆಯನ್ನು ನಿಯಂತ್ರಿಸಿ, ವ್ಯಸನಕಾರಿ ತಂಬಾಕು ಉತ್ಪನ್ನಗಳಿಂದ ಉಂಟಾಗುವ ಆಜೀವ ಯಾತನೆಯಿಂದ ಭಾರತೀಯರನ್ನು ರಕ್ಷಿಸಲು ತಂಬಾಕು ಮಾರಾಟಗಾರರ ಪರವಾನಗಿ ನಿರ್ಣಾಯಕವಾಗಿದೆ. ವರದಿಯ ಪ್ರಕಾರ, ಸಿಗರೇಟ್, ಬೀಡಿ ಮತ್ತು ಜಗಿಯುವ ತಂಬಾಕು ಉತ್ಪನ್ನ ಮಾರಾಟಕ್ಕೆ ಮಾರಾಟಗಾರರ ಪರವಾನಗಿಯನ್ನು ಅನುಷ್ಠಾನಗೊಳಿಸಿದರೆ, ತಂಬಾಕು ನಿಯಂತ್ರಣ ಕಾನೂನು ಮತ್ತು ನೀತಿಗಳ ಪರಿಣಾಮಕಾರಿ ಜಾರಿಗೂ ಸಹಕಾರಿಯಾಗುತ್ತದೆ.
ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (ಎನ್ಎಲ್ಎಸ್ಐಯು) ದಿ ಚೇರ್ ಆನ್ ಕನ್ಸ್ಯುಮರ್ ಲಾ ಅಂಡ್ ಪ್ರಾಕ್ಟೀಸ್ ಬಿಡುಗಡೆ ಮಾಡಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಫೆಬ್ರವರಿ 25ಕ್ಕೆ ಸಲ್ಲಿಸಲಾಗಿರುವ ಈ ವರದಿ, ಭಾರತದಲ್ಲಿ ತಂಬಾಕು ಉತ್ಪನ್ನಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಯಂತ್ರಿಸಲು ಮಾರಾಟಗಾರರ ಪರವಾನಗಿ ಪರಿಕಲ್ಪನೆಯನ್ನು ವಿಶ್ಲೇಷಿಸಿದೆ.
ಇದನ್ನೂ ಓದಿ | ದಾವಣಗೆರೆ ಜಿ.ಪಂ ಸಾಮಾನ್ಯ ಸಭೆ | ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಸುವಂತೆ ಸದಸ್ಯರ ಒತ್ತಾಯ
ಅಲ್ಲದೆ, ಭಾರತದ ವಿವಿಧ ರಾಜ್ಯ ಮತ್ತು ನಗರಗಳು ಮಾರಾಟಗಾರರ ಪರವಾನಗಿ ಕುರಿತು ಅಳವಡಿಸಿಕೊಂಡಿರುವ ಪದ್ಧತಿ ಮತ್ತು ಪ್ರಕ್ರಿಯೆಯನ್ನು ಪರಿಶೀಲಿಸಿದೆ. ತಂಬಾಕು ಮಾರಾಟಗಾರರ ಪರವಾನಗಿಗಾಗಿ ಅಸ್ತಿತ್ವದಲ್ಲಿರುವ ಕಾನೂನುಗಳು, ಜಾಗತಿಕವಾಗಿ ಆಚರಣೆಯಲ್ಲಿರುವ ಅತ್ಯುತ್ತಮ ಅಭ್ಯಾಸಗಳು ಮತ್ತು ವಿಶ್ವ ಅರೋಗ್ಯ ಸಂಸ್ಥೆಯ ಫ್ರೇಮ್ ವರ್ಕ್ ಕನ್ವೆನ್ಷನ್ ಆನ್ ಟೊಬ್ಯಾಕೋ ಕಂಟ್ರೋಲ್ (WHO FCTC) ತಂಬಾಕು ನಿಯಂತ್ರಣದ ಕುರಿತಾದ ಜಾಗತಿಕ ಸಾರ್ವಜನಿಕ ಆರೋಗ್ಯ ಒಪ್ಪಂದದಡಿ ಸೂಚಿಸಲಾದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಈ ವರದಿ ಮಾದರಿ ಚೌಕಟ್ಟನ್ನು ಪ್ರಸ್ತಾಪಿಸಿದೆ.
ನಿಯಂತ್ರಕ ವಿಧಾನವಾಗಿ ಪರಿಗಣಿಸುವುದಾದರೆ, ತಂಬಾಕು ಮಾರಾಟಗಾರರ ಪರವಾನಗಿ ರಾಜ್ಯ/ಪುರಸಭೆ ಮಟ್ಟದಲ್ಲಿ ಅತ್ಯಂತ ಪರಿಣಾಮಕಾರಿ ಅಸ್ತ್ರವಾಗಬಹುದು. ಚಿಲ್ಲರೆ ವ್ಯಾಪಾರದಲ್ಲಿ ತಂಬಾಕು ಉತ್ಪನ್ನಗಳ ಲಭ್ಯತೆ ಕುಗ್ಗಿಸುವ ಗುರಿ ಹೊಂದಿರುವ ವಿವಿಧ ನೀತಿಗಳನ್ನು ಕಾರ್ಯಗತಗೊಳಿಸಿ ಜಾರಿಗೊಳಿಸಲು ಮಾರಾಟಗಾರರ ಪರವಾನಗಿ ಮಾದರಿ ಚೌಕಟ್ಟನ್ನು ಬಳಸಬಹುದಾಗಿದ್ದು, ಇದು ಸ್ಥಳೀಯ ಸರ್ಕಾರಗಳಿಗೆ ಉತ್ತಮ ನಿಯಂತ್ರಕ ಸಾಧನದ ಅಡಿಗಲ್ಲಾಗಿದೆ.
ಭಾರತದಲ್ಲಿ ತಂಬಾಕು ನಿಯಂತ್ರಣವನ್ನು ಪ್ರಾಥಮಿಕವಾಗಿ ಕೋಟ್ಪಾ (COTPA) ನಿಯಂತ್ರಿಸುತ್ತಿದ್ದರೂ, ತಂಬಾಕು ಬಳಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಇತರ ಕಾನೂನುಗಳಿವೆ. ಸ್ಥಳೀಯ ಸ್ವ-ಸರ್ಕಾರಿ ಸಂಸ್ಥೆಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ವಿವಿಧ ಕಾನೂನುಗಳ ಪರಿಣಾಮಕಾರಿ ಮತ್ತು ಸಂಘಟಿತ ಜಾರಿಗೆ ರಾಜ್ಯ ಮತ್ತು ಪುರಸಭೆ ಸರ್ಕಾರಗಳಿಗೆ ತಂಬಾಕು ಮಾರಾಟಗಾರರ ಪರವಾನಗಿ ಒಂದು ವಿಶಿಷ್ಟ ಅವಕಾಶವನ್ನು ಒದಗಿಸುತ್ತದೆ.
“ತಂಬಾಕಿನ ಹಾನಿಕಾರಕ ಪರಿಣಾಮಗಳು ಜಗತಿನಾದ್ಯಂತ ಸಾಬೀತಾಗಿದ್ದು, ಅವುಗಳನ್ನು ಒಪ್ಪಿಕೊಳ್ಳಲಾಗಿದೆ. ಈ ವರದಿಯ ಮೂಲಕ, ಅಸ್ತಿತ್ವದಲ್ಲಿರುವ ಕಾನೂನು ಮತ್ತು ಜಾಗತಿಕ ಅತ್ಯುತ್ತಮ ಅಭ್ಯಾಸಗಳ ಆಧಾರದ ಮೇಲೆ ಪರವಾನಗಿ ಪಡೆದ ಮಾರಾಟಗಾರರ ಮೂಲಕ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಮಾದರಿ ಕಾನೂನು ಚೌಕಟ್ಟನ್ನು ಎನ್‌ಎಲ್‌ಎಸ್‌ಐಯು ಶಿಫಾರಸು ಮಾಡಿದೆ.
ಈ ಮಾರಕ ಉತ್ಪನ್ನಗಳಿಂದ ಭಾರತೀಯರನ್ನು, ವಿಶೇಷವಾಗಿ ಮಕ್ಕಳು ಮತ್ತು ಯುವಕರನ್ನು ರಕ್ಷಿಸಲು ರಾಜ್ಯ ಮತ್ತು ಪುರಸಭ ಸರ್ಕಾರಗಳು ಈ ಶಿಫಾರಸುಗಳನ್ನು ಪರಿಗಣಿಸುತ್ತವೆ ಎಂದು ನಾವು ಆಶಿಸುತ್ತೇವೆ,” ಎಂದು ಪ್ರೊ. (ಡಾ.) ಅಶೋಕ್ ಆರ್. ಪಾಟೀಲ್, ಕಾನೂನು ಪ್ರಾಧ್ಯಾಪಕರು ಮತ್ತು ಚೇರ್ ಪ್ರೊಫೆಸರ್, ದಿ ಚೇರ್ ಆನ್ ಕನ್ಸ್ಯುಮರ್ ಲಾ ಅಂಡ್ ಪ್ರಾಕ್ಟೀಸ್, ಎನ್‌ಎಲ್‌ಎಸ್‌ಐಯು, ಬೆಂಗಳೂರು, ಅವರು ತಿಳಿಸಿದರು.
ಎನ್‌ಎಲ್‌ಎಸ್‌ಐಯು ವರದಿಯ ತಂಬಾಕು ಮಾರಾಟಗಾರರ ಪರವಾನಗಿಯ ಮಾದರಿ ಕಾನೂನು ಚೌಕಟ್ಟಿನ ಪ್ರಕಾರ: ಎಲ್ಲ ತಂಬಾಕು ಮಾರಾಟಗಾರರು, ಚಿಲ್ಲರೆ ಅಥವಾ ಸಗಟು ವ್ಯಾಪಾರಿಗಳು, 12 ತಿಂಗಳ ಅವಧಿಯ ಮಾನ್ಯತೆಯುಳ್ಳ ಪರವಾನಗಿ ಹೊಂದಿರಬೇಕು, ಅದು ವರ್ಗಾಯಿಸಲಾಗದ ಪರವಾನಗಿಯಾಗಿರಬೇಕು ಮತ್ತು ಅದನ್ನು ಪ್ರತಿವರ್ಷ ನವೀಕರಿಸಬೇಕು; ಪರವಾನಗಿ ಪಡೆಯಲು ಉದ್ದೇಶಿಸುವ ಎಲ್ಲ ಅರ್ಜಿದಾರರು ತಂಬಾಕು ನಿಯಂತ್ರಣ ಕಾನೂನುಗಳನ್ನು ಅನುಸರಿಸಬೇಕು; ತಂಬಾಕು ಉತ್ಪನ್ನಗಳನ್ನು ಮಾತ್ರ ಮಾರುವ ಮಾಡುವ ಮಾರಾಟಗಾರರಿಗೆ ಪರವಾನಗಿ ನೀಡಬೇಕು ಮತ್ತು ತಂಬಾಕಿನೊಂದಿಗೆ ಚಾಕೊಲೇಟ್, ಮಿಠಾಯಿ, ಬಿಸ್ಕತ್ತು, ಚಿಪ್ಸ್ ಮುಂತಾದ ತಂಬಾಕೇತರ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಬೇಕು; ತಂಬಾಕು ಉತ್ಪನ್ನಗಳ ಮಾರಾಟದ ಆವರಣದಲ್ಲಿ ತಂಬಾಕು ಪರವಾನಗಿ ಎದ್ದು ಕಾಣುವಂತೆ ಪ್ರದರ್ಶಿಸಬೇಕು; ನಿಬಂಧನೆಗಳು ಮತ್ತು ಷರತ್ತುಗಳ ಉಲ್ಲಂಘನೆಗೆ ಹಂತ ಹಂತವಾಗಿ ದಂಡ ವಿಧಿಸುವುದು, ಪರವಾನಗಿ ಅಮಾನತುಗೊಳಿಸುವುದು ಮತ್ತು ಅಂತಿಮವಾಗಿ ಪರವಾನಗಿ ರದ್ದುಗೊಳಿಸುವ ಮೂಲಕ ಕ್ರಮಕೈಗೊಳ್ಳಬೇಕು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಭಾಗವಾದ ರಾಜ್ಯ ತಂಬಾಕು ನಿಯಂತ್ರಣ ಕೋಶದ (ಎಸ್‌ಟಿಸಿಸಿ) ಉಪನಿರ್ದೇಶಕರಾದ ಡಾ. ಸೆಲ್ವರಾಜನ್, “ವರದಿಯಲ್ಲಿ ಮುಖ್ಯವಾಗಿ ಉಲ್ಲೇಖಿಸಿರುವಂತೆ, ಅಪ್ರಾಪ್ತರಿಗೆ ತಂಬಾಕು ಉತ್ಪನ್ನಗಳು ಸುಲಭವಾಗಿ ಸಿಗುವುದನ್ನು ತಡೆಯಲು ಮತ್ತು ಮಾರಾಟವನ್ನು ನಿಯಂತ್ರಿಸಲು, ಮಾರಾಟಗಾರರ ಪರವಾನಗಿ ಅತ್ಯಗತ್ಯವಾಗಿದೆ. ಸಾರ್ವಜನಿಕರಿಂದಲೂ ಇದಕ್ಕೆ ವ್ಯಾಪಕ ಬೆಂಬಲವಿದ್ದು, ನೂರಾರು ಮಕ್ಕಳು, ಪೋಷಕರು ಮತ್ತು ಶಿಕ್ಷಕರು ಬೆಂಬಲ ವ್ಯಕ್ತಪಡಿಸಿ ರಾಜ್ಯ ಸರ್ಕಾರಕ್ಕೆ ಪತ್ರಗಳನ್ನು ಬರೆದಿದ್ದಾರೆ” ಎಂದರು.
ಮೈಸೂರಿನ ತಂಬಾಕು ವಿರೋಧಿ ವೇದಿಕೆಯ ಸಂಚಾಲಕರಾದ ಶ್ರೀ ವಸಂತ್‌ಕುಮಾರ್ ಮೈಸೂರಮಠ್, “ಜೀವನವಿಡಿ ದುಃಖ ಮತ್ತು ಸಂಕಟದಿಂದ ಯುವಕರು/ಮಕ್ಕಳನ್ನು ರಕ್ಷಿಸಲು ತಂಬಾಕು ಉತ್ಪನ್ನಗಳು ಅವರಿಗೆ ಸಿಗದಂತೆ ಮಾಡುವುದು ಅನಿವಾರ್ಯವಾಗಿದೆ. ವಿಶೇಷವಾಗಿ, ಈ ಸವಾಲಿನ ಸಂದರ್ಭದಲ್ಲಿ, ಭಾರತದಲ್ಲಿ ತಂಬಾಕು ಎಂಬ ಪೀಡೆಯನ್ನು ತಡೆಯಲು ಈ ವ್ಯಸನಕಾರಿ ಉತ್ಪನ್ನಗಳ ಮಾರಾಟ, ಪ್ರಚಾರ ಮತ್ತು ಬಳಕೆಯನ್ನು ನಿಯಂತ್ರಿಸುವುದು ಅತ್ಯಂತ ನಿರ್ಣಾಯಕವಾಗಿದೆ.
ಅಧಿಕೃತವಾಗಿ ಪರವಾನಗಿ ಪಡೆದ ಅಂಗಡಿಗಳು/ಮಾರಾಟಗಾರರ ಮೂಲಕ ತಂಬಾಕು ಉತ್ಪನ್ನಗಳ ಮಾರಾಟದಿಂದ ಜನರ ಆರೋಗ್ಯ ಹದಗೆಡುವುದನ್ನುತಪ್ಪಿಸಿದಂತಾಗುತ್ತದೆ ಮತ್ತುಸರ್ಕಾರದ ಮೂಲ ಕರ್ತವ್ಯವಾದ ಸಾರ್ವಜನಿಕ ಆರೋಗ್ಯ ಸುಧಾರಣೆ, ಸ್ವಾಸ್ಥ್ಯ ಹಾಗು ಯೋಗಕ್ಷೇಮ ರಕ್ಷಣೆಯನ್ನೂ ಮಾಡಿದಂತಾಗುತ್ತದೆ,” ಎಂದು ಅಭಿಪ್ರಾಯಪಟ್ಟರು.
2017ರ ಸೆಪ್ಟೆಂಬರ್‌ನಲ್ಲಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಕ್ಕಳು ತಂಬಾಕು ಉತ್ಪನ್ನಗಳಿಗೆ ಒಡ್ಡಿಕೊಳ್ಳುವುದರಿಂದ ರಕ್ಷಿಸುವಂತೆ ಪುರಸಭೆ/ಸ್ಥಳೀಯ ಪ್ರಾಧಿಕಾರಗಳಿಗೆ ಸೂಚಿಸಿತ್ತು. ಇದಕ್ಕಾಗಿ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಿ ತಂಬಾಕು ಉತ್ಪನ್ನ ಮಾರಾಟ ಮಾಡಲು ಚಿಲ್ಲರೆ ಅಂಗಡಿಗಳಿಗೆ ಅನುಮತಿ ನೀಡುವುದರೊಂದಿಗೆ ಅಲ್ಲಿ ಮಿಠಾಯಿ, ಚಿಪ್ಸ್, ಬಿಸ್ಕತ್ತು, ತಂಪು ಪಾನೀಯ, ಇತ್ಯಾದಿ ತಂಬಾಕೇತರ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಖಚಿತಪಡಿಸಿಕೊಳ್ಳಲು ಸೂಚಿಸಿತ್ತು.
ಇದರನ್ವಯ, ಅಯೋಧ್ಯೆ, ಲಕ್ನೋ, ಜೈಪುರ, ರಾಂಚಿ, ಪಾಟ್ನಾ, ಹೌರಾ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಅಗತ್ಯ ಆದೇಶ ಹೊರಡಿಸಿ ನಶ್ಯ, ಸಿಗಾರ್, ಸಿಗರೇಟ್ ಮತ್ತು ಬೀಡಿ ಸೇರಿದಂತೆ ಎಲ್ಲ ರೀತಿಯ ತಂಬಾಕಿನ ಸಂಗ್ರಹ, ಪ್ಯಾಕಿಂಗ್, ಶುದ್ಧೀಕರಣ ಸೇರಿದಂತೆ ತಂಬಾಕಿನ ಉತ್ಪಾದನೆಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳಿಗೆ ಪರವಾನಗಿ ಕಡ್ಡಾಯಗೊಳಿಸಿವೆ.
ತಂಬಾಕು ಬಳಕೆದಾರರ ಪಟ್ಟಿಯಲ್ಲಿ ಜಾಗತಿಕವಾಗಿ ಭಾರತ ಎರಡನೇ ಸ್ಥಾನದಲ್ಲಿದೆ (268 ಮಿಲಿಯನ್ ಅಥವಾ ದೇಶದ ಶೇಕಡಾ 28.6 % ವಯಸ್ಕರು). ಇದರಲ್ಲಿ ಪ್ರತಿವರ್ಷ 12 ಲಕ್ಷ ಮಂದಿ ತಂಬಾಕು ಸಂಬಂಧಿತ ಖಾಯಿಲೆಗಳಿಂದ ಮೃತಪಡುತಿದ್ದಾರೆ. ಧೂಮಪಾನದಿಂದಾಗಿ 10 ಲಕ್ಷ ಜನ ಮರಣ ಹೊಂದುತ್ತಿದ್ದರೆ, ಎರಡು ಲಕ್ಷಕ್ಕೂ ಹೆಚ್ಚು ಮಂದಿ ಧೂಮಪಾನಕ್ಕೆ ಒಡ್ಡಿಕೊಂಡು (ಸೆಕೆಂಡ್ ಹ್ಯಾಂಡ್ ಸ್ಮೋಕಿಂಗ್) ಸಾವನ್ನಪ್ಪುತ್ತಿದ್ದಾರೆ.
ಅಲ್ಲದೆ, 35,000ಕ್ಕೂ ಹೆಚ್ಚು ಜನ ಹೊಗೆರಹಿತ ತಂಬಾಕು ಬಳಕೆಯಿಂದ ಅಸುನೀಗುತ್ತಿದ್ದಾರೆ. ತಂಬಾಕು ಬಳಕೆ ಭಾರತದಲ್ಲಿನ ಶೇಕಡಾ 27 % ಎಲ್ಲ ವಿಧದ ಕ್ಯಾನ್ಸರ್ ಗಳಿಗೆ ಕಾರಣ. ತಂಬಾಕು ಸಂಬಂದಿತ ಖಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ಪ್ರತಿವರ್ಷ 1,82,000 ಕೋಟಿ ರೂಪಾಯಿಗಳು ವ್ಯಯವಾಗುತ್ತಿದ್ದು, ಇದು ಭಾರತದ ಜಿಡಿಪಿಯ ಶೇಕಡಾ 1.8% ರಷ್ಟಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243