ನೆಲದನಿ

ಇಂದು ಧೈತ್ಯ ಪ್ರತಿಭೆ ಗಿರೀಶ್ ಮಾಚಳ್ಳಿಯವರ “ಬುದ್ಧಯಾನ” ನಾಟಕ ಪ್ರದರ್ಶನ

Published

on

ರಂಗಕರ್ಮಿ ಗಿರೀಶ್ ಮಾಚಳ್ಳಿ ನಮ್ಮ ನಡುವಿನ ಅದ್ಭುತ ಧೈತ್ಯ ಪ್ರತಿಭೆ. ತಮ್ಮ ನಾಟಕಗಳಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ರವರ ಬರಹಗಳನ್ನು ಮತ್ತು ಚಿಂತನೆಗಳನ್ನು ಅವರು ನೀಡುತ್ತಾ ಬಂದಿದ್ದಾರೆ. ಚಾರ್ವಾಕ ಕಲ್ಚರಲ್ ಅಂಡ್ ಸೋಷಿಯಲ್ ಎಂಬ ಟ್ರಸ್ಟ್ ಎಂಬ ಸಂಸ್ಥೆ ಸ್ಥಾಪಿಸಿರುವ ಅವರು ಅದರ ಮೂಲಕ “ಬುದ್ಧನೆಡೆಗೆ”, “ಆರ್ಯದ್ರಾವಿಡ”, “ಎಂಪ್ಲಾಯೀಸ್”… ಹೀಗೆ ವೈವಿಧ್ಯಮಯ ರಂಗ ಪ್ರಯೋಗ ನಡೆಸಿದ್ದಾರೆ.

ಅದರಲ್ಲೂ ಆರ್ಯದ್ರಾವೀಡ ನಾಟಕ ಸತತ 10 ಗಂಟೆಗಳ ಸುದೀರ್ಘ ನಾಟಕವಾಗಿದ್ದು ಅದರ ಮೂಲಕ ಮಾಚಳ್ಳಿಯವರು ಭಾರತದ ಇತಿಹಾಸವನ್ನು ಅಂಬೇಡ್ಕರ್ ರವರು ನೋಡಿರುವ ಮಾದರಿಯಲ್ಲಿ ನೋಡಿ ಅದನ್ನು ರಂಗರೂಪಕ್ಕೆ ಇಳಿಸಿ ಯಶಸ್ಸು ಕಂಡವರು. ಹೇಗೆಂದರೆ ಆರ್ಯದ್ರಾವಿಡ ನಾಟಕ 10 ಗಂಟೆಯ ತನ್ನ ಪ್ರದರ್ಶನದಲ್ಲಿ ಒಂದೇ ಸ್ಥಳದಲ್ಲಿ ಮೂರು ಬೇರೆ ಬೇರೆ ವೇದಿಕೆಯಲ್ಲಿ ಇತಿಹಾಸದ ಮೂರು ಕಾಲಘಟ್ಟವನ್ನು ಪ್ರತಿನಿಧಿಸಿತು! ಅಂತಹ ಅದ್ಭುತ ರಂಗಪರಿಕಲ್ಪನೆ ಅವರದು.

ಈ ಹಿನ್ನೆಲೆಯಲ್ಲಿ ಇಂತಹ ವೈವಿದ್ಯತೆಯ ನಾಟಕದ ವಸ್ತು, ಅದನ್ನು ಸಿದ್ಧಗೊಳೀಸುವ, ಕತೆ, ಚಿತ್ರಕತೆ, ಪರಿಕಲ್ಪನೆ, ಪೂರಕ ರಂಗಸಜ್ಜಿಕೆ, ಅದಕ್ಕೆ ತಕ್ಕ ಹಿನ್ನೆಲೆ ಸಂಗೀತ… ಇದನ್ನೆಲ್ಲ ಗಿರೀಶ್ ಹೇಗೆ ಮಾಡುತ್ತಾರೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ. ಆದರೆ ಪ್ರತಿಭಾವಂತರಿಗೆ ಇಂತಹದ್ದು ಏನೇನು ಅಲ್ಲ. ಏಕೆಂದರೆ ಏನಾದರೂ ಸಾಧಿಸಬೇಕು ಎಂಬ ಛಲ ಮಾಚಳ್ಳಿಯವರಿಗಿದೆ.

ದುರಂತವೆಂದರೆ ಯಥಾಪ್ರಕಾರ ಜಾತಿರೋಗ ಪೀಡಿತ ಮುಖ್ಯ ವಾಹಿನಿ ಮಾಧ್ಯಮಗಳು ಇಂತಹ ಪ್ರತಿಭೆಗಳಿಗೆ ನಾ ಕಂಡಂತೆ ಬರೆದದ್ದು, ಪ್ರಚಾರ ನೀಡಿದ್ದು ತೀರಾ ಕಡಿಮೆ. ಇಲ್ಲವೇ ಇಲ್ಲ ಎನ್ನುವಷ್ಟು. ಈ ನಿಟ್ಟಿನಲ್ಲಿ ನಮಗೆ ಸೋಷಿಯಲ್ ಮೀಡಿಯಾ ಒಂದು ಮುಕ್ತ ಯುಕ್ತ ಮಾಧ್ಯಮವಾಗಿ ಕಾಣುವುದೇ ಈ ಕಾರಣಕ್ಕೆ! ಅದೇನೆ ಇರಲಿ, ಇಂದು ಮೈಸೂರಿನ ಕಲಾಮಂದಿರದಲ್ಲಿ ಸಂಜೆ 5ಕ್ಕೆ ಗಿರೀಶ್ ಮಾಚಳ್ಳಿಯವರ ರಚನೆ ಮತ್ತು ನಿರ್ದೇಶನದ “ಬುದ್ಧಯಾನ” ನಾಟಕದ ಪ್ರದರ್ಶನವಿದೆ (ಸುದೀರ್ಘ 6 ಗಂಟೆಗಳ ಪ್ರದರ್ಶನ).

ಬಾಬಾಸಾಹೇಬ್ ಅಂಬೇಡ್ಕರ್ ರವರ ಬೌದ್ಧ ಚಿಂತನೆಯ ಮಹತ್ವಾಕಾಂಕ್ಷಿ ಕೃತಿ “ಬುದ್ಧ ಅಂಡ್ ಹಿಸ್ ಧಮ್ಮ”ದ ರಂಗರೂಪವಿದು. ತ್ರಿಪಿಟಕಗಳ 78 ಸಂಪುಟಗಳನ್ನು ಓದಿ ಬರೆದಿರುವ, ಭಾರತೀಯ ಬೌದ್ಧರ ಪಾಲಿನ ಬೈಬಲ್ ಎಂದೇ ಖ್ಯಾತಿ ಪಡೆದಿರುವ ಅಂಬೇಡ್ಕರರ ಈ ಬೃಹತ್ ಕೃತಿಯನ್ನು ಮಾಚಳ್ಳಿಯವರು ಅದ್ಹೇಗೆ ರಂಗರೂಪಕ್ಕಿಳೀಸಿದ್ದಾರೆ? ಕುತೂಹಲವಿದ್ದರೆ ಬಂದು ನಾಟಕ ವೀಕ್ಷಿಸಿ. ಅಕಸ್ಮಾತ್ ಮಿಸ್ ಮಾಡಿಕೊಂಡರೂ ಕೊರಗುವುದು ಬೇಡ. ಬರುವ ಭಾನುವಾರ ಅಂದರೆ 28-4-19 ಸಂಜೆ 5ಕ್ಕೆ ಮತ್ತೊಮ್ಮೆ ಇದೇ ಕಲಾಮಂದಿರದಲ್ಲಿ ಮತ್ತೊಂದು ಪ್ರದರ್ಶನ ಕಾಣಲಿದೆ ಅಂದಾದರು ಬಂದು ವೀಕ್ಷಿಸಿ. ಆ ಮೂಲಕ ಗಿರೀಶ್ ಮಾಚಳ್ಳಿ ಎಂಬ ಅದ್ಭುತ ಪ್ರತಿಭೆಯ ಧೀಶಕ್ತಿಯನ್ನು ಕಣ್ತುಂಬಿಕೊಳ್ಳಿ.

ರಘೋತ್ತಮ ಹೊ.ಬ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version