ನೆಲದನಿ
ಖಾಲಿ ಹೊಟ್ಟೆಯಲ್ಲೇ ಮಲಗಿದ ಕಾನ್ಷಿರಾಮ್ ಜೀ
- ರಘೋತ್ತಮ ಹೊ.ಬ
ಒಂದು ದಿನ ಕಾನ್ಷಿರಾಮ್ ಮತ್ತು ಅವರ ಸ್ನೇಹಿತ ಮನೋಹರ್ ಅಟೆ ರಾತ್ರಿ10ಕ್ಕೆ ಪುಣೆಯನ್ನು ತಲುಪಿದರು. ಏಕೆಂದರೆ ಪ್ರತಿ ದಿನ ಪುಣೆಯಿಂದ ಮುಂಬಯಿಗೆ ಹೋಗುತ್ತಿದ್ದ ಕಾನ್ಷಿರಾಮ್ ರವರು ತಮ್ಮ ಕಚೇರಿಯಿಂದ ಪುಣೆ ರೈಲು ನಿಲ್ದಾಣದವರೆಗೆ 15 ಕಿ.ಮೀ ದೂರ ಸೈಕಲ್ ಹೊಡೆದು ಅದನ್ನು ರೈಲು ನಿಲ್ದಾಣದಲ್ಲಿ ನಿಲ್ಲಿಸಿ ಮುಂಬೈಗೆ ಭೇಟಿ ಕೊಟ್ಟು ಮುಂಬೈನಲ್ಲಿ ಚಳುವಳಿಯ ಕಾರ್ಯಕರ್ತರನ್ನು ಭೇಟಿ ಮಾಡಿ ನಂತರ ಅದೇ ರೈಲಿನಲ್ಲಿ ಪುಣೆಗೆ ವಾಪಸ್ ಬರುತ್ತಿದ್ದರು. ಹೀಗೆ ನಿತ್ಯ ರೈಲಿನಲ್ಲಿ ಓಡಾಡುತ್ತಿದ್ದ ಕಾನ್ಷಿರಾಮ್ ರ ಬಳಿ ರೈಲು ಪಾಸ್ ಇತ್ತು.
ಅಂದಹಾಗೆ ಆ ದಿನ ಕಾನ್ಷಿರಾಮ್ ಜೀ ಮತ್ತು ಮನೋಹರ್ ಅಟೆ ರೈಲು ಇಳಿದಾಗ ಮೊದಲೇ ಹೇಳಿದಂತೆ ರಾತ್ರಿ ಹತ್ತಾಗಿತ್ತು. ಇಬ್ಬರೂ ಕೂಡ ಸೈಕಲ್ ಹತ್ತಿದವರೆ 15ರಿಂದ 20 ಕಿ.ಮೀ ದೂರ ಇದ್ದ ಬಾಮ್ ಸೆಫ್ ಕಚೇರಿಯನ್ನು ತಲುಪಲು ಪ್ರಾರಂಭಿಸಿದರು. ಮಧ್ಯೆ ಮಧ್ಯೆ ಸೈಕಲ್ ಇಳಿದು ನಡೆದುಕೊಂಡು ಮಾತನಾಡುತ್ತ ಹೋಗುತ್ತಿರಲು ಎಂದಿನಂತೆ ಅವರೆದುರು ಪುಣೆಯ ಸ್ಟೇಷನ್ ಬಳಿಯ ವಂದನಾ ಹೊಟೆಲ್ ಎದುರಾಯಿತು.
ವಂದನಾ ಹೊಟೆಲ್ ಆ ಕಾಲದಲ್ಲಿ ಕಡಿಮೆ ಬೆಲೆಯ ಊಟಕ್ಕಾಗಿ ಫೇಮಸ್ ಆಗಿತ್ತು. ಆದ್ದರಿಂದ ಹೊಟೆಲ್ ಸಿಗುತ್ತಲೇ ಮನೋಹರ ಅಟೆಯವರು ತಮ್ಮ ಜೇಬಿನಲ್ಲಿ ಹಣ ಇಲ್ಲದ್ದರಿಂದ ಕಾನ್ಷಿರಾಮ್ ರವರ ಬಳಿ ಹಣ ಇರಬಹುದು ಅವರೇ ಇಂದು ಊಟ ಕೊಡಿಸುತ್ತಾರೆ ಎಂದುಕೊಂಡರು. ಆದರೆ ಹೊಟೆಲ್ ಮುಂದೆ ಪಾಸ್ ಆಗುತ್ತಿದ್ದರೂ ಕಾನ್ಷಿರಾಮ್ ರವರು ಹೊಟೆಲ್ ಬಳಿ ನಿಲ್ಲಲಿಲ್ಲ.
ಆಗ ಅಟೆಯವರು ಕಾನ್ಷಿರಾಮ್ ರವರು ಮಟನ್ ಪ್ರಿಯರು, ಆದ್ದರಿಂದ ಸಮೀಪದಲ್ಲೇ ಇರುವ ನಾನ್ ವೆಜ್ ಹೊಟೆಲ್ ನ್ಯೂಯಾರ್ಕ್ ಹೊಟೆಲ್ ಗೆ ಕರೆದುಕೊಂಡು ಹೋಗಬಹುದು ಅದಕ್ಕೆ ಅವರು ವಂದನಾ ಹೊಟೆಲ್ ಬಳಿ ಏನು ಮಾತಾಡಲಿಲ್ಲ ಎಂದುಕೊಂಡರು. ಏಕೆಂದರೆ ಕಾನ್ಷಿರಾಮ್ ರ ಬಳಿ ದುಡ್ಡು ಜಾಸ್ತಿ ಇದ್ದಾಗ ಆಗಾಗ ಅವರು ಅಟೆಯವರನ್ನು ಮಟನ್ ಊಟಕ್ಕೆ ನ್ಯೂಯಾರ್ಕ್ ಹೊಟೆಲ್ ಗೆ ಕರೆದುಕೊಂಡು ಹೋಗುತ್ತಿದ್ದರು.
ಆದ್ದರಿಂದ ಇಂದೂ ಕೂಡ ಹಾಗೆ ಮಾಡಬಹುದು ಎಂದು ಅಟೆಯವರು ಅಂದುಕೊಂಡರು. ಆದರೆ… ನ್ಯೂಯಾರ್ಕ್ ಹೊಟೆಲ್ ಬಂತು, ಕಾನ್ಷಿರಾಮ್ ರವರು ಅಲ್ಲಿಯೂ ಕೂಡ ನಿಲ್ಲಲಿಲ್ಲ! ಆಗ ಅಟೆಯವರಿಗೆ ಅರ್ಥ ಆಗಿತ್ತು “ಓಹ್, ಕಾನ್ಷಿರಾಮ್ ರ ಬಳಿ ದುಡ್ಡಿಲ್ಲ” ಎಂದು. ಹಾಗೆ ಕಾನ್ಷಿರಾಮ್ ರವರಿಗೂ ಅಟೆ ಬಳಿ ಹಣ ಇಲ್ಲ ಎಂಬುದು ಅರ್ಥ ಆಗಿತ್ತು. ಇಬ್ಬರೂ ಪರಸ್ಪರ ಏನೂ ಮಾತಾಡದೇ ಮೌನವಾಗಿ ಬಾಮ್ಸೆಫ್ ಕಚೇರಿ ಕೂಡ ತಲುಪಿದ್ದರು. ಅಂದಹಾಗೆ ಅಂದು ಅವರಿಗೆ ನೀರೇ ಆಹಾರವಾಗಿತ್ತು… ಖಾಲಿ ಹೊಟ್ಟೆಯಲ್ಲೇ ಆ ರಾತ್ರಿ ಕಳೆದರು…!
ಹಾಗೆ ಬೆಳಿಗ್ಗೆಯಾಗುತ್ತಲೇ ಅಟೆಯವರಿಗೆ ಅಂದು ರಜೆ ಇದ್ದುದ್ದರಿಂದ ಅವರು ಇನ್ನೂ ಮಲಗೇ ಇದ್ದರು. ಆದರೆ ಮುಂಬೈಗೆ ಹೋಗಿ ಕಾರ್ಯಕರ್ತರನ್ನು ಭೇಟಿ ಮಾಡಬೇಕಿದ್ದುದ್ದರಿಂದ ಕಾನ್ಷಿರಾಮ್ ರವರು ಬೇಗ ಎದ್ದು ರೆಡಿಯಾಗಿ ತಮ್ಮ ಒಂದು ಸಣ್ಣ ಬ್ಯಾಗ್ ಸಿಕ್ಕಿಸಿಕೊಂಡು ಅಟೆಯವರಿಗೆ “ಅಟೆ ನಾನು ಹೋಗ್ತಾ ಇದೀನಿ” ಅಂದರು. ಆಗ ಅಟೆಯವರು “ಆಯ್ರು, ಬಾಗಿಲು ಎಳೆದುಕೊಂಡು ಹೋಗಿ, ನಾನು ಏಳೋದು ಲೇಟ್ ಆಗುತ್ತದೆ” ಎಂದರು.
ಅದಕ್ಕೆ ಕಾನ್ಷಿರಾಮ್ ರವರು ಸರಿ ಎಂದು ಬಾಗಿಲು ಮುಚ್ಚಿ ಹೊರಟರು. ಅಂದಹಾಗೆ ಹಾಗೆ ಹೇಳಿ ಐದು ನಿಮಿಷವಾಗಿರಬಹುದಷ್ಟೆ , ಕಾನ್ಷಿರಾಮ್ ರವರು ಮತ್ತೆ ಅಟೆಯವರ ಬಳಿ ಬಂದರು. ಬಂದವರೇ “ಅರೆ ಭಾಯ್ ಅಟೆ, ನಿನ್ನ ಹತ್ತಿರ ಸ್ವಲ್ಪ ದುಡ್ಡಿದೆಯಾ” ಎಂದರು. ಅದಕ್ಕೆ ಅಟೆಯವರು “ಇಲ್ಲವಲ್ಲ” ಎಂದರು. ಅದಕ್ಕೆ ಕಾನ್ಷಿರಾಮ್ ರವರು “ಇರಬಹುದು ನೋಡು, ನಿನ್ನ ಅಕ್ಕಪಕ್ಕ ಅಲ್ಲೇಲ್ಲಾದರೂ ಇಟ್ಟಿರುತ್ತೀಯ” ಎನ್ನಲು ಕಚೇರಿಯಲ್ಲಿ ಹಣ ಒಂಚೂರು ಇಲ್ಲ ಎಂಬುದನ್ನು ತಿಳಿದಿದ್ದ ಅಟೆಯವರು ಕಾನ್ಷಿರಾಮ್ ರವರ ತೃಪ್ತಿಗಾಗಿ ಡ್ರಾಯರ್ ಅನ್ನೆಲ್ಲ ಹುಡುಕಿ “ಇಲ್ಲ, ಒಂದು ಪೈಸೆನೂ ಇಲ್ಲ” ಎಂದರು.
ಅದಕ್ಕೆ ಕಾನ್ಷಿರಾಮ್ ರವರು “ಐದು ಪೈಸೆಯಾದ್ರೂ ಇದ್ದರೆ ನೋಡಪ್ಪ” ಅಂದರು. ಆಗ ಅಟೆಯವರು “ಇಲ್ಲ ಸಾಹೆಬ್ರೆ, ಐದು ಪೈಸೆನೂ ಇಲ್ಲ, ಅದಿರಲಿ, ನಿಮಗ್ಯಾಕೆ ಈಗ ಐದು ಪೈಸೆ” ಎಂದು ಕೇಳಿದರು. ಆಗ ಕಾನ್ಷಿರಾಮ್ ರವರು “ಅರೆ ಯಾರ್, ನನ್ನ ಸೈಕಲ್ ಟೈರ್ ನಲ್ಲಿ ಗಾಳಿ ಇಲ್ಲ. ಟೈರ್ ಗಳಿಗೆ ಗಾಳಿ ತುಂಬಿಸಲು ಕಡೆ ಪಕ್ಷ ಐದು ಪೈಸೆಯಾದರೂ ಬೇಕು” ಎಂದರು.
ಅದಕ್ಕೆ ಅಟೆಯವರು “ಅದಕ್ಕ್ಯಾಕೆ, ನನ್ನ ಸೈಕಲ್ ತಗೊಂಡ್ಹೋಗಿ” ಎನ್ನಲು ಕಾನ್ಷಿರಾಮ್ ರವರು “ನಿನ್ನ ಸೈಕಲ್ ನಲ್ಲೂ ಕೂಡ ಗಾಳಿ ಇಲ್ಲ, ನಾನು ಅದನ್ನು ಕೂಡ ಚೆಕ್ ಮಾಡಿದೆ. ಇರಲಿ ತಲೆ ಕೆಡಿಸಿಕೊಳ್ಳಬೇಡ, ನಾನು ನಡೆದುಕೊಂಡೇ ಹೋಗುತ್ತೇನೆ” ಎನ್ನುತ್ತ ಟ್ರೇನ್ ಹಿಡಿಯಲು 15 ಕಿ.ಮೀ ದೂರದಲ್ಲಿದ್ದ ಸ್ಟೇಷನ್ ನತ್ತ ಓಡಲು ಪ್ರಾರಂಭಿಸಿದರು…!(ಆಧಾರ: KANSHIRAM; Leader of Dalits by Badri Narayan, Pp.37)
ಯಾಕೆ ಈ ಘಟನೆಗಳನ್ನು ಇಲ್ಲಿ ಹೇಳಬೇಕಾಗಿದೆಯೆಂದರೆ ಇಂದು ನಾವು ಯಥೇಚ್ಛ ಉಂಡು ಮಲಗುತ್ತೇವೆ. ಸಹಸ್ರಾರು ರೂ. ದುಂದುವೆಚ್ಚ ಮಾಡುತ್ತೇವೆ. ಆದರೆ ನಮ್ಮೆಲ್ಲರನ್ನು ಎಚ್ಚರಿಸಿದ ಕಾನ್ಷಿರಾಮ್ ಜೀಯವರಿಗೆ ಅಂದು ಉಣ್ಣಲು ತುತ್ತು ಅನ್ನವಿರಲಿಲ್ಲ ಖಾಲಿ ಹೊಟ್ಟೆಯಲ್ಲೇ ಅದೆಷ್ಟು ರಾತ್ರಿ ಕಳೆದಿದ್ದಾರೆಂದರೆ… ಹಾಗೆಯೇ ನಮಗೆ ಇಂದು ಓಡಾಡಲು ಆಡಿ ಕಾರೇ ಬೇಕು. ರಾಯಲ್ ಎನ್ ಫೀಲ್ಡ್ ಗಳೇ ಬೇಕು.
ಆದರೆ ಸಾಹೇಬ್ ಕಾನ್ಷಿರಾಮ್ ರವರು ಅಂದು ಬರೀ ಸೈಕಲ್ ತುಳಿದೇ ಇಡೀ ಭರತ ಖಂಡ ಸುತ್ತಿದರು! ಸೈಕಲ್ ಗಾಗಿ ಗಾಳಿ ತುಂಬಿಸಲು ಐದು ಪೈಸೆಯೂ ಇಲ್ಲದೆ ಕಾರ್ಯಕರ್ತರನ್ನು ಭೇಟಿಯಾಗಲು ನಡೆಯುತ್ತಲೇ ಮುನ್ನುಗ್ಗಿದರು. ಇದನ್ನು ಬರೀ ತ್ಯಾಗ ಅಂದರೆ ತಪ್ಪಾಗುತ್ತದೆ. ಅರ್ಪಣೆ, ಬದ್ಧತೆ, ಶೋಷಿತರ ಏಳಿಗೆಗಾಗಿ ಒಂದು ಬೃಹತ್ ಚಳುವಳಿ ಕಟ್ಟಲು ಸರ್ವವನ್ನು ತ್ಯಜಿಸಿ ನಿಂತ ಮಹಾನ್ ಚೇತನ ದಾದಾಸಾಹೇಬ್ ಕಾನ್ಷಿರಾಮ್ ಜೀ. ಅವರ ಹೆಸರು ಹೇಳಲು ಕೂಡ ನಮಗೆ ಯೋಗ್ಯತೆ ಅರ್ಹತೆ ಬೇಕು ಅಂತಹ ಪವಿತ್ರ ವ್ಯಕ್ತಿತ್ವ ದಾದಾಸಾಹೇಬರದು.
ಇಂದು (ಮಾರ್ಚ್ 15) ಅವರ ಜನ್ಮದಿನ. ಕಾನ್ಷಿರಾಮ್ ಜೀ ನಮ್ಮೆಲ್ಲರಲ್ಲಿ ನೆಲೆಸಲಿ, ಬಾಬಾಸಾಹೇಬರ ಚಳುವಳಿಯನ್ನು ಒಂದು ಪ್ರಾಯೋಗಿಕ ರೂಪಕ್ಕೆ ಅಂತಹ ದಿವ್ಯ ಶಕ್ತಿ ನಮ್ಮೆಲ್ಲರಲ್ಲಿ ಆವಿರ್ಭವಿಸಲಿ ಎಂದು ಪ್ರೀತಿಯಿಂದ ಕೇಳಿಕೊಳ್ಳೋಣ. ಅವರ ಜನ್ಮದಿನವನ್ನು ಸಡಗರದಿಂದ ಆಚರಿಸೋಣ. “ಮತ್ತೊಮ್ಮೆ ಹುಟ್ಟಿ ಬನ್ನಿ ಕಾನ್ಷಿರಾಮ್ ಜೀ, ನಿಮಗೆ ನಿಮ್ಮ ಪ್ರೀತಿಯ ಮಟನ್ ಊಟವನ್ನು ಪ್ರೀತಿಯಿಂದ ನಾವು ಹಾಕಿಸುತ್ತೇವೆ” ಎಂದು ಆಹ್ವಾನಿಸೋಣ. ಅವರ ಹೋರಾಟದ ಋಣವ ತೀರಿಸೋಣ. ಜೈಭೀಮ್ ಜೈಭಾರತ್.
ಸುದ್ದಿದಿನ.ಕಾಂ|ವಾಟ್ಸಾಪ್|9980346243