ಕ್ರೀಡೆ
ಐಪಿಎಲ್ ಕ್ರಿಕೆಟ್ | ಮುಂಬೈ ಇಂಡಿಯನ್ಸ್ ವಿರುದ್ಧ ಜಯ ಗಳಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡದ ಪ್ಲೇಆಫ್ ಜೀವಂತ
ಸುದ್ದಿದಿನ ಡೆಸ್ಕ್ : ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಕಳೆದ ರಾತ್ರಿ ನಡೆದ ಐಪಿಎಲ್ ಟಿ20 ಕ್ರಿಕೆಟ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 3ರನ್ ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಪ್ಲೇ ಆಫ್ ಅವಕಾಶವನ್ನು ಜೀವಂತವಾಗಿರಿಸಿಕೊಂಡಿದೆ.
194 ರನ್ ಗುರಿ ಬೆನ್ನಟ್ಟಿದ ಐದು ಬಾರಿಯ ಚಾಂಪಿಯನ್ ಮುಂಬೈ ತಂಡ 7 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಲಷ್ಟೇ ಶಕ್ತಗೊಂಡಿತು. ರೋಹಿತ್ ಶರ್ಮ, ಇಶಾನ್ ಕಿಶನ್ ಮತ್ತು ಟಿಮ್ ಡೇವಿಡ್ ಕ್ರಮವಾಗಿ48,43 ಮತ್ತು46 ರನ್ ಗಳಿಸಿ ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.
ಅತ್ತ ಹೈದರಾಬಾದ್ ಪರ ಉಮ್ರಾನ್ ಮಲಿಕ್ 32ರನ್ ನೀಡಿ 3 ವಿಕೆಟ್ ಉರುಳಿಸಿದರು. ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಗೆ 193 ರನ್ ಕಲೆಹಾಕಿತು. ರಾಹುಲ್ ತ್ರಿಪಾಠಿ ತಂಡದ ಪರ ಗರಿಷ್ಠ 76 ರನ್ ಸಿಡಿಸಿದರು.
ಮುಂಬೈ ಪರ ರಮಣ್ ದೀಪ್ ಸಿಂಗ್ 20 ರನ್ ನೀಡಿ 3 ವಿಕೆಟ್ ಗಳಿಸಿದರು. ಮುಂಬೈನಲ್ಲಿ ಇಂದು ರಾತ್ರಿ 7.30ಕ್ಕೆ ಆರಂಭವಾಗಲಿರುವ ಪಂದ್ಯದಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ಮತ್ತು ಲಖನೌ ಸೂಪರ್ ಜಯಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243,