ದಿನದ ಸುದ್ದಿ
ಇಂದು ವಿಶ್ವ ಪರಿಸರ ದಿನ | ದೆಹಲಿಯಲ್ಲಿ ಆಯೋಜಿಸಿರುವ ಮಣ್ಣಿನ ಫಲವತ್ತತೆ ರಕ್ಷಣೆ ಕುರಿತ ಆಂದೋಲನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ
ಸುದ್ದಿದಿನ ಡೆಸ್ಕ್ : ವಿಶ್ವ ಪರಿಸರ ದಿನದ ಅಂಗವಾಗಿ ದೆಹಲಿಯ ವಿಜ್ಞಾನ ಭವನದಲ್ಲಿ ಇಂದು ಏರ್ಪಡಿಸಿರುವ ಮಣ್ಣಿನ ಫಲವತ್ತತೆ ರಕ್ಷಣೆ ಕುರಿತ ಆಂದೋಲನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಸಭಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಮಣ್ಣಿನ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ’ಮಣ್ಣು ಉಳಿಸಿ ಚಳವಳಿ ಎಂಬುದನ್ನು ಜಾಗತಿಕ ಆಂದೋಲನವನ್ನಾಗಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಆಂದೋಲನವನ್ನು ಸದ್ಗುರು ಜಗ್ಗಿ ವಾಸುದೇವ್ ಇದೇ ವರ್ಷದ ಮಾರ್ಚ್‌ನಲ್ಲಿ ಆರಂಭಿಸಿದ್ದರು.
ಅಲ್ಲದೇ 27 ದೇಶಗಳಿಗೆ 100 ದಿನಗಳ ಕಾಲ ಮೋಟಾರ್ ಬೈಸಿಕಲ್‌ನಲ್ಲಿ ಸಂಚರಿಸಿದ್ದರು. ದೇಶದಲ್ಲಿ ಮಣ್ಣಿನ ಫಲವತ್ತತೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಜಗತ್ತಿನಾದ್ಯಂತ ವ್ಯಕ್ತವಾಗುತ್ತಿರುವ ಕಳಕಳಿ ಮತ್ತು ಬದ್ಧತೆಯನ್ನು ಪ್ರತಿಬಿಂಬಿಸುವ ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಪಾಲ್ಗೊಳ್ಳುತ್ತಿರುವುದಕ್ಕೆ ವಿಶೇಷ ಮಹತ್ವ ಬಂದಿದೆ.
ಪರಿಸರ ಸಂರಕ್ಷಣೆಗೆ ಪೂರಕವಾದ ಜೀವನಶೈಲಿ ಕುರಿತ ಜಾಗತಿಕ ಉಪಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಸಂಜೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್‌ನ ಸಹ ಅಧ್ಯಕ್ಷ ಬಿಲ್‌ಗೇಟ್ಸ್, ಕ್ಲೈಮೆಟ್ ಎಕಾನಾಮಿಸ್ಟ್, ಲಾರ್ಡ್ ನಿಕೋಲಾಸ ಸ್ಟರ್ನ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರದಾನ ಭಾಷಣ ಮಾಡಲಿದ್ದಾರೆ. ಪರಿಸರ ಸಂರಕ್ಷಣೆಗೆ ಪೂರಕವಾದ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕೆಂಬ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಗತ್ತಿನಾದ್ಯಂತ ಇರುವ ಶಿಕ್ಷಣ ತಜ್ಞರು, ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243