ಬಹಿರಂಗ
ಭಾರತ ಸರ್ವಾಧಿಕಾರಿ ಆಡಳಿತದತ್ತ ಜಾರಿಕೆ : ಸ್ವಿಡನ್ ಸ್ವಾಯತ ಸಂಸ್ಥೆಯೊಂದರ ಸರ್ವೇಕ್ಷಣಾ ವರದಿ
- ಡಾ. ಜೆ ಎಸ್ ಪಾಟೀಲ
ಅಂತರಾಷ್ಟ್ರೀಯ ಸಂಸ್ಥೆಯೊಂದರ ಸರ್ವೇಕ್ಷಣಾ ವರದಿಯ ಪ್ರಕಾರ ಭಾರತವು ಪ್ರಜಾಪ್ರಭುತ್ವದಿಂದ ಸರ್ವಾಧಿಕಾರಿ ಆಡಳಿತಕ್ಕೆ ಜಾರುತ್ತಿರುವ ಜಗತ್ತಿನ ಹತ್ತು ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಭಾರತವು ಈಗ ಪಾಕಿಸ್ತಾನದಂತೆ ಸರ್ವಾಧಿಕಾರಿಯಾಗಿದೆ ಮತ್ತು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯು ಬಾಂಗ್ಲಾದೇಶಕ್ಕಿಂತ ಕೆಟ್ಟದಾಗಿದೆ ಎನ್ನುತ್ತದೆ ಸ್ವೀಡನ್ ಸಂಸ್ಥೆಯ ಒಂದು ಪ್ರಜಾಪ್ರಭುತ್ವ ವರದಿ.
ಫ್ರೀಡಂ ಹೌಸ್ ವರದಿಯು ಭಾರತವು ಈಗ ‘ಭಾಗಶಃ ಮುಕ್ತ ಸ್ವಾತಂತ್ರ ದೇಶವಾಗಿದೆ’ ಎಂದು ಹೇಳಿದ ನಂತರ, ವಿ-ಡೆಮ್ ಸಂಸ್ಥೆಯ ಪ್ರಜಾಪ್ರಭುತ್ವ ವರದಿಯು ಭಾರತವು ‘ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಚುನಾವಣಾ ಸರ್ವಾಧಿಕಾರಿ ಆಡಳಿತ ವ್ಯವಸ್ಥೆಗೆ ಇಳಿಸಿದೆ ಎಂದಿದೆ*
ದಿ ಪ್ರಿಂಟ್ ಜಾಲತಾಣ ಮಾಧ್ಯಮದಲ್ಲಿ ಶುಭಂಗಿ ಮಿಶ್ರಾ ಎನ್ನುವ ಅಂಕಣಕಾರರು ಇದೇ 11 ಮಾರ್ಚ್ ರಂದು ಈ ಕುರಿತು ಒಂದು ರೋಚಕ ಮತ್ತು ಅಷ್ಟೇ ಭಯಾನಕ ವರದಿಯನ್ನು ಮಾಡಿದ್ದಾರೆ. ಸ್ವೀಡನ್‌ನ ವಿ-ಡೆಮ್ ಇನ್‌ಸ್ಟಿಟ್ಯೂಟ್‌ನ ಐದನೇ ವಾರ್ಷಿಕ ಪ್ರಜಾಪ್ರಭುತ್ವ ವರದಿಯು ಭಾರತದಲ್ಲಿ ‘ಸರ್ವಾಧಿಕಾರಿ ಆಡಳಿತೀಕರಣ ವೈರಲ್ ಆಗುತ್ತದೆ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಪ್ರಸ್ತುತ ಆಡಳಿತವು ಭಾರತವನ್ನು “ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ” ವ್ಯವಸ್ಥೆಯಿಂದ “ಚುನಾವಣಾ ಸರ್ವಾಧಿಕಾರ” ವ್ಯವಸ್ಥೆಗೆ ಇಳಿಸಿದೆ ಎಂದಿದೆಯಲ್ಲದೆ ಈಗ ಭಾರತದಲ್ಲಿ ಮಾಧ್ಯಮಗಳು ಗೊಂದಲದಲ್ಲಿದ್ದು ಸರಕಾರ ಅತಿಯಾಗಿ ಮಾನಹಾನಿ ಮತ್ತು ದೇಶದ್ರೋಹ ಕಾನೂನುಗಳ ದುರ್ಬಳಕೆ ಮಾಡುತ್ತಿರುವ ಕುರಿತು ವಿಸ್ತ್ರತವಾಗಿ ಟಿಪ್ಪಣಿ ಮಾಡಿದೆ.
ವಿ-ಡೆಮ್ (ವೈವಿಧ್ಯತೆಯ ಪ್ರಜಾಪ್ರಭುತ್ವ) 1789 ರಿಂದ 2020 ರವರೆಗೆ 202 ದೇಶಗಳಿಗೆ ಸುಮಾರು 30 ಮಿಲಿಯನ್ ಡಾಟಾ ಪಾಯಿಂಟ್‌ಗಳನ್ನು ಹೊಂದಿರುವ ಪ್ರಜಾಪ್ರಭುತ್ವದ ಅತಿದೊಡ್ಡ ಡೇಟಾಸೆಟ್ ಅನ್ನು ಉತ್ಪಾದಿಸುತ್ತದೆ ಎಂದು ಹೇಳಿಕೊಂಡಿದೆ. ಅಮೆರಿಕೆಯ ವಾಚ್‌ಡಾಗ್ ಫ್ರೀಡಂ ಹೌಸ್ ತನ್ನ ‘ವಿಶ್ವದ ಸ್ವಾತಂತ್ರ್ಯ’ ಎಂಬ ಸವಿವರ ವರದಿಯಲ್ಲಿ ಭಾರತದ ಸ್ಥಿತಿಯು “ಭಾಗಶಃ ಜನತಂತ್ರ ಮುಕ್ತ” ಕ್ಕೆ ಇಳಿದಿದೆ ಎಂದು ಪ್ರಕಟಿಸಿದ ಒಂದು ವಾರದೊಳಗೆ ವಿ-ಡೆಮ್ ಇನ್ಸ್ಟಿಟ್ಯೂಟ್ ನ ಈ ಅಘಾತಕಾರಿ ವರದಿ ಹೊರಬಿದ್ದಿದೆ.
ಇದನ್ನೂ ಓದಿ | ಶಿಷ್ಯವೇತನ | ಆನ್‍ಲೈನ್ ಅರ್ಜಿ ಅವಧಿ ವಿಸ್ತರಣೆ
ಭಾರತದ ಸ್ಕೋರ್ 2013 ರಲ್ಲಿ ಸಾರ್ವಕಾಲಿಕ ಗರಿಷ್ಠ 0.57 (0-1 ರ ಸ್ಕೇಲಿನಲ್ಲಿ) ಆಗಿರುತ್ತಿದ್ದು, 2020 ರ ಅಂತ್ಯದ ವೇಳೆಗೆ ಅದು 0.34 ಕ್ಕೆ ಕುಸಿದಿದೆ. ಅಂದರೆ ಏಳು ವರ್ಷಗಳಲ್ಲಿ 23 ಶೇಕಡ ಪಾಯಿಂಟ್‌ಗಳ ನಷ್ಟ ಅನುಭವಿಸಿದೆ. 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಮತ್ತು ಆ ಪಕ್ಷದ ಹಿಂದೂ ರಾಷ್ಟ್ರೀಯವಾದಿ ಗುಪ್ತ ಕಾರ್ಯಸೂಚಿಯ ಪರಿಣಾಮದಿಂದ ಭಾರತದಲ್ಲಿ ಜನತಂತ್ರ ವ್ಯವಸ್ಥೆಯು ಹೆಚ್ಚಿನ ಮಟ್ಟದಲ್ಲಿ ಕುಸಿತ ಕಂಡಿದೆ ಎಂದು ಈ ವರದಿ ಹೇಳುತ್ತದೆ.
ಭಾರತವು ಈ ದಿಶೆಯಲ್ಲಿ ಈಗ ಪಾಕಿಸ್ತಾನದಂತೆ ಧಾರ್ಮಿಕ ಉನ್ಮಾದವನ್ನು ಹುಟ್ಟಿಸುತ್ತ, ನಕಲಿ ದೇಶಭಕ್ತಿಯನ್ನು ಪ್ರತಿಪಾದಿಸಿ ಸರ್ವಾಧಿಕಾರಿಯಾಗಿ ಬದಲಾಗಿದೆ ಮತ್ತು ಭಾರತದ ಜನತಂತ್ರ ವ್ಯವಸ್ಥೆಯು ಅದರ ನೆರೆಯ ಮತ್ತೆರಡು ರಾಷ್ಟ್ರಗಳಾದ ಬಾಂಗ್ಲಾದೇಶ ಮತ್ತು ನೇಪಾಳಕ್ಕಿಂತ ಕೆಟ್ಟದಾಗಿದೆ. ಸಾಮಾನ್ಯವಾಗಿ, ಕಳೆದ ಏಳು ವರ್ಷಗಳ ಮೋದಿ ನೇತೃತ್ವದ ಸರ್ಕಾರವು ತನ್ನನ್ನು ಪ್ರಶ್ನಿಸುವ ಮತ್ತು ಸರಕಾರದ ಹುಳುಕುಗಳನ್ನು ಎತ್ತಿ ತೋರಿಸುವ ಜನರ ವಿರುದ್ಧ ದೇಶದ್ರೋಹ, ಮಾನಹಾನಿ ಮತ್ತು ಭಯೋತ್ಪಾದನಾ ನಿಗ್ರಹದ ಕಾನೂನುಗಳನ್ನು ಬಳಸುವ ಮೂಲಕ ಜನತಂತ್ರ ಹಾಗು ಅಭಿವ್ಯಕ್ತಿ ಸ್ವಾತಂತ್ರದ ಧ್ವನಿಯನ್ನು ಅಡಗಿಸಲು ಪ್ರಯತ್ನಿಸಿದೆ.
ಬಹುತೇಕ ಸ್ವತಂತ್ರ ಮತ್ತು ನಿರ್ಬಿಡೆಯ ಮಾಧ್ಯಮಗಳ ವರದಿಗಳನ್ನು ಸೆನ್ಸಾರ್ ಮಾಡಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಬಿಜೆಪಿ ಅಧಿಕಾರ ವಹಿಸಿಕೊಂಡ ನಂತರ 7,000 ಕ್ಕೂ ಹೆಚ್ಚು ಜನರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗಿದೆ ಮತ್ತು ಹೆಚ್ಚಿನ ಆರೋಪಿಗಳು ಆಡಳಿತ ಪಕ್ಷದ ಕಟು ವಿಮರ್ಶಕರು ಎಂದು ವರದಿ ಹೇಳುತ್ತದೆ.
ಮೋದಿ ಸರಕಾರವು ಗರಿಷ್ಠ ಮಟ್ಟದಲ್ಲಿ ಮಾನಹಾನಿ ಕಾನೂನಿನ ದುರ್ಬಳಕೆಯನ್ನು ಸರಕಾರದ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಮುಂತಾದ ಸಂಗತಿಗಳ ಕುರಿತು ನೈಜ ವರದಿ ಮಾಡುವ ಪತ್ರಕರ್ತರನ್ನು ದಮನಿಸಲು ಬಳಸಿದೆ. ಅದಲ್ಲದೆ, ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯ (ಯುಎಪಿಎ) ದುರ್ಬಳಕೆಯ ಮೂಲಕ ಮೋದಿ ಸರಕಾರ ನಾಗರಿಕ ಸಮಾಜದ ಮೇಲೆ ಅನೇಕ ಬಗೆಯ ನಿರ್ಬಂಧಗಳನ್ನು ಹೇರಿದೆ. ಸರಕಾರದ ಈ ದಮನಕಾರಿ ನಡೆಯು ದೇಶದ ಸಂವಿಧಾನದ ಬದ್ಧತೆ ಮತ್ತು ಜಾತ್ಯತೀತತೆಗೆ ವಿರುದ್ಧವಾಗಿದೆ ಎಂದು ಆ ವರದಿ ಹೇಳುತ್ತದೆ.
ಆಗಸ್ಟ್ 2019 ರಲ್ಲಿ ತಿದ್ದುಪಡಿ ಮಾಡಲಾದ ಕಾನೂನನ್ನು ರಾಜಕೀಯ ವಿರೋಧಿಗಳಿಗೆ ಹಣಿಯಲು, ಬೆದರಿಸಲು ಮತ್ತು ಬಂಧಿಸಲು ಬಳಸಲಾಗುತ್ತಿದೆ. ಜೊತೆಗೆ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟಿಸುವ ಜನರನ್ನು ದಮನಿಸಲು ಬಳಸಲಾಗಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿನ ಭಿನ್ನಾಭಿಪ್ರಾಯಗಳ ಧ್ವನಿಯಡಗಿಸಲು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯ(ಯುಎಪಿಎ)ನ್ನು ದುರ್ಬಳಕೆ ಮಾಡಲಾಗುತ್ತಿದೆ.
ದೇಶದ ವಿಶ್ವವಿದ್ಯಾನಿಲಯಗಳಲ್ಲಿನ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ನಾಗರಿಕರು ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯ(ಸಿಎಎ) ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿದ್ದಾಗ ಸಾಮಾಜಿಕ ಕಾರ್ಯಕರ್ತರು ಮತ್ತು ವಿಶ್ವವಿದ್ಯಾಲಯಗಳಲ್ಲಿನ ವಿದ್ಯಾರ್ಥಿಗಳನ್ನು ಇದೇ ಕಾಯ್ದೆಯಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ.
ಸರಕಾರ ಮತ್ತು ಸರಕಾರವನ್ನು ನಿಯಂತ್ರಿಸುತ್ತಿರುವ ಹಿಂದುತ್ವ ಸಿದ್ಧಾಂತದ ಸಂಘಟನೆ ಮತ್ತು ಅವುಗಳ ಅಪಾಯಕಾರಿ ಕಾರ್ಯಸೂಚಿಗಳೊಡನೆ ಹೊಂದಾಣಿಕೆ ಮಾಡಿಕೊಳ್ಳದ ವ್ಯಕ್ತಿ, ಸಂಸ್ಥೆಗಳು ಹಾಗು ದೇಶದ ಸಂವೇದನಾಶೀಲ ನಾಗರಿಕ ಸಮಾಜವು ಮೋದಿ ಸರಕಾರದ ಈ ದಮನಕಾರಿ ನೀತಿಯಿಂದ ಹೆಚ್ಚು ಗೊಂದಲಕ್ಕೊಳಗಾಗಿದೆ ಎಂದು ವರದಿ ಹೇಳುತ್ತದೆ.
ಸಿವಿಲ್ ಸೊಸೈಟಿ ಸಂಸ್ಥೆಗಳ (ಸಿಎಸ್ಒ) ಪ್ರವೇಶ, ನಿರ್ಗಮನ ಮತ್ತು ಕಾರ್ಯನಿರ್ವಹಣೆಯನ್ನು ನಿರ್ಬಂಧಿಸಲು ಬಿಜೆಪಿ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಯನ್ನು ಹೆಚ್ಚು ದುರ್ಬಳಕೆ ಮಾಡಿಕೊಂಡಿದೆ ಎಂದು ಈ ವರದಿ ಹೇಳಿದೆ.
ಸಂಘಟನೆಯ ಐದನೇ ವಾರ್ಷಿಕ ವರದಿಯು ಕಳೆದ ಒಂದು ದಶಕದಲ್ಲಿ ನಡೆದ ಜಾಗತಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳ ಸ್ಥಿತಿಯು ಆತಂಕಕ್ಕೀಡು ಮಾಡಿದೆ ಎಂದಿದೆ. ಜಾಗತಿಕ ಮಟ್ಟದಲ್ಲಿ ಉದಾರವಾದಿ ಪ್ರಜಾಪ್ರಭುತ್ವ ರಾಷ್ಟ್ರಗಳ ಸಂಖ್ಯೆ ಕಳೆದ ಒಂದು ದಶಕದಲ್ಲಿ 41 ರಿಂದ 32 ಕ್ಕೆ ಕುಸಿದಿದೆ ಎಂದು ವರದಿ ಬಹಿರಂಗಗೊಳಿಸಿದೆ.
ಕಳೆದ ಒಂದು ದಶಕದ ಅವಧಿಯಲ್ಲಿ ಜಾಗತಿಕ ಜನತಂತ್ರದ ಕುಸಿತವು ತುಂಬಾ ಕಡಿದಾಗಿದೆ ಮತ್ತು 2020 ರಲ್ಲೂ ಅದು ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ಈ ಜನತಂತ್ರದ ಕುಸಿತವು ವಿಶೇಷವಾಗಿ ಏಷ್ಯಾ-ಪೆಸಿಫಿಕ್ ಪ್ರದೇಶ, ಮಧ್ಯ ಏಷ್ಯಾ, ಪೂರ್ವ ಯುರೋಪ್ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ಹೆಚ್ಚು ಗಮನ ಸೆಳೆದಿದೆ. 2020 ರಲ್ಲಿ ಸರಾಸರಿ ಜಾಗತಿಕ ನಾಗರಿಕರು ಅನುಭವಿಸಿದ ಪ್ರಜಾಪ್ರಭುತ್ವ ವ್ಯವಸ್ಥೆಯ ಮಟ್ಟವು 1990ರ ಸುಮಾರಿಗೆ ಕೊನೆಯದಾಗಿ ಕಂಡುಬಂದ ಮಟ್ಟಕ್ಕೆ ಕುಸಿದಿದೆ ಎಂದು ವರದಿ ಹೇಳುತ್ತದೆ.
ಈ ವರದಿಯು ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ವಾಸಿಸುವ 25 ರಾಷ್ಟ್ರಗಳು ಆವರಿಸಿರುವ ವೇಗವರ್ಧಿತ ಸರ್ವಾಧೀಕರಣದ ಅಲೆಯನ್ನು ಸೂಚಿಸುತ್ತದೆ. ಅಂದರೆ 2.6 ಬಿಲಿಯನ್ ಜನರುˌ ಹಲವು ಜಿ 20 ರಾಷ್ಟ್ರಗಳಾದ ಬ್ರೆಜಿಲ್, ಭಾರತ, ಟರ್ಕಿ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಈ ದಿಕ್ಚ್ಯುತಿಯ ಭಾಗವಾಗಿದೆ ಎಂದು ವರದಿ ಹೇಳುತ್ತದೆ. ಜಾಗತಿಕ ಜನಸಂಖ್ಯೆಯ ಕೇವಲ 4 ಪ್ರತಿಶತದಷ್ಟು ಆತಿಥ್ಯ ವಹಿಸುವ ಪ್ರಜಾಪ್ರಭುತ್ವ ರಾಷ್ಟ್ರಗಳ ಸಂಖ್ಯೆ ಅರ್ಧದಷ್ಟು ಅಂದರೆ 16 ಕ್ಕೆ ಕುಸಿದಿದೆ ಎಂಬುದನ್ನು ಈ ವರದಿಯು ಗಮನಿಸಿದೆ.
ಈ ವರದಿಯಲ್ಲಿ ಇನ್ನೂ ಅನೇಕ ಸಂಗತಿಗಳ ಮೇಲೆ ಬೆಳಕು ಚೆಲ್ಲಲಾಗಿಲ್ಲ. ಕಳೆದ ಏಳು ವರ್ಷಗಳಲ್ಲಿ ಸ್ವಾಯತ ಮತ್ತು ತನಿಖಾ ಸಂಸ್ಥೆಗಳ ಗರಿಷ್ಠ ದುರುಪಯೋಗ ಮೋದಿ ಸರಕಾರ ಮಾಡಿದ್ದನ್ನು ನಾವು ಗಮನಿಸಬಹುದಾಗಿದೆ. ಯೋಜನಾ ಆಯೋಗ ಎನ್ನುವುದು ಈಗ ಅಕ್ಷರಶಃ ಮುಳುಗಿಹೋಗಿದೆ. ಚುನಾವಣಾ ಆಯೋಗವಂತೂ ಸರಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಇನ್ನು ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಯಾವ ಸ್ವಾತಂತ್ರವನ್ನೂ ಹೊಂದಿಲ್ಲ.
ಆರ್ಬಿಐನಲ್ಲಿ ಹಿಂದಿನ ಸರಕಾರ ಇಡಲಾಗಿದ್ದ ಚಿನ್ನ ಮತ್ತು ಆಪತ್ಕಾಲಿನ ಫಂಡು ಸರಕಾರ ಯಾವ ಅಳುಕು ಇಲ್ಲದೆ ಎತ್ತಿಕೊಂಡು ನುಂಗಿ ನೀರು ಕುಡಿದಿದೆ. ಸರಕಾರದ ಕಾರ್ಯಕ್ಷಮತೆ ಮತ್ತು ಆರ್ಥಿಕ ಸ್ಥಿತಿಗತಿಯ ಸರ್ವೇಕ್ಷಣಾ ವರದಿ ಮಾಡುತ್ತಿದ್ದ ಮಹಾಲೇಖಾಪಾಲಕರ ವರದಿ ಈಗ ಸ್ಥಗಿತಗೊಂಡಿದೆ.
ಮೊದಲೆಲ್ಲ ವಾರ್ಷಿಕ 40-50 ಸಿಎಜಿ ರಿಪೋರ್ಟ್ ಸಲ್ಲಿಕೆಯಾಗುತ್ತಿತ್ತು. ಈಗ ಅವುಗಳ ಸಂಖ್ಯೆ 10-15 ಕ್ಕೆ ಕುಸಿದಿದೆ. ಇನ್ನು ನ್ಯಾಯಾಂಗವಂತೂ ಸಂಪೂರ್ಣ ಅಪಾರದರ್ಶಕ ಸ್ಥಿತಿ ತಲುಪಿದೆ. ಸಾಕ್ಷ್ಯಗಳ ಬದಲಿಗೆ ನಂಬಿಕೆ ಆಧಾರದ ಮೇಲೆ ನ್ಯಾಯ ತೀರ್ಪುಗಳು ಹೊರಬೀಳುತ್ತಿವೆ.
ಮೋದಿ ಆಡಳಿತದ ಜನ ವಿರೋಧಿ ನೀತಿಗಳನ್ನು ಮುಚ್ಚಿಟ್ಟು ಮೋದಿ ಭಜನೆಯಲ್ಲಿ ಮಾಧ್ಯಮಗಳು ತೊಡಗಿಕೊಂಡಿವೆ. ಬಹುತೇಕ ಎಲ್ಲ ಬಗೆಯ ಮಾಧ್ಯಮಗಳ ಒಡೆತನ ಕಾರ್ಪೋರೇಟ್ ಕಳ್ಳೋದ್ಯಮಿಗಳ ಕೈಯಲ್ಲಿದ್ದರೆ, ಅವುಗಳ ಸಂಪಾದಕ ಸ್ಥಾನಮಾನವು ಅರ್ಬನ್ ನಾಜಿಗಳು ವಶಪಡಿಸಿಕೊಂಡು ಕುಳಿತಿದ್ದಾರೆ.
ಒಟ್ಟಾರೆ ಮೋದಿ ನೇತ್ರತ್ವದ ಹಿಂದುತ್ವ ಪ್ರತಿಪಾದಿಸುವ ಯಥಾಸ್ಥಿತಿವಾದಿˌ ಸಂಪ್ರದಾಯವಾದಿˌ ಮೂಲಭೂತವಾದಿ ಸಂಘ ಪರಿವಾರ ನಿಯಂತ್ರಿತ ಬಿಜೆಪಿ ಸರಕಾರದ ಆಡಳಿತ ಕಾಲವು ಮೆಲ್ಲನೆ ದೇಶದ ಸಂವಿಧಾನದ ಆಶಯಗಳನ್ನು ಗಾಳಿಗೆ ತೂಳಿ ಜನತಂತ್ರವನ್ನು ಮುಗಿಸಿಬಿಡುವ ಕಾರ್ಯ ಮಾಡುತ್ತಿರುವುದು ಗಮನಿಸಬಹುದಾಗಿದೆ. ಇದು ದೇಶ ಸರ್ವಾಧಿಕಾರಿ ಆಡಳಿತದತ್ತ ಜಾರುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇದನ್ನು ಅಂತರಾಷ್ಟ್ರೀಯ ಸಮುದಾಯ ಬಹಳ ಗಂಭೀರವಾಗಿ ಮತ್ತು ಆತಂಕದಿಂದ ಗಮನಿಸುತ್ತಿರುದುವು ನಾವು ನೋಡಬಹುದಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243