ದಿನದ ಸುದ್ದಿ
ಆಂಧ್ರ ಪ್ರದೇಶದತ್ತ ಅಸಾನಿ ಚಂಡಮಾರುತ : ರಾಜ್ಯದ 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ
ಸುದ್ದಿದಿನ ಡೆಸ್ಕ್ : ಅಸಾನಿ ಚಂಡಮಾರುತ ಆಂಧ್ರಪ್ರದೇಶದತ್ತ ಸಾಗುತ್ತಿದ್ದು, ರಾಜ್ಯದ ಗುಂಟೂರು, ಕೃಷ್ಣ, ಪೂರ್ವ ಮತ್ತು ಪಶ್ಚಿಮ ಗೋದಾವರಿ ಹಾಗೂ ವಿಶಾಖಪಟ್ಟಣಂ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಇಂದು ಸಂಜೆ ಯಾವುದೇ ವೇಳೆ ಚಂಡಮಾರುತ, ಕಾಕಿನಾಡ ಮತ್ತು ವಿಶಾಖಪಟ್ಟಣ ನಡುವಿನ ಕರಾವಳಿಯನ್ನು ದಾಟುವ ಸಾಧ್ಯತೆ ಇದ್ದು, ಮೀನುಗಾರರು ನಾಳೆಯವರೆಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಅಸಾನಿ ಚಂಡಮಾರುತದಿಂದ ಹಾನಿಗೊಳಗಾಗಿರುವ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ರಾಷ್ಟ್ರೀಯ ವಿಪತ್ತು ಪ್ರತಿಸ್ಪಂದನಾ ಪಡೆ-ಎನ್‌ಡಿಆರ್‌ಎಫ್‌ನ 50 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ.
50ತಂಡಗಳ ಪೈಕಿ 22 ತಂಡಗಳು ಆಯಾ ರಾಜ್ಯಗಳಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದು, 28 ತಂಡಗಳು ಯಾವುದೇ ಪರಿಸ್ಥಿತಿ ನಿಭಾಯಿಸಲು ಸನ್ನದ್ಧವಾಗಿವೆ ಎಂದು ಎನ್‌ಡಿಆರ್‌ಎಫ್ ತಿಳಿಸಿದೆ. ಅಸಾನಿ ಚಂಡಮಾರುತ ಇಂದು 24 ಗಂಟೆಗಳಲ್ಲಿ ಬಂಗಾಳಕೊಲ್ಲಿಯ ವಾಯವ್ಯ ಭಾಗದತ್ತ ಸಾಗಲಿದ್ದು, ನಂತರ ದುರ್ಬಲಗೊಳ್ಳುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಭಾರತೀಯ ನೌಕಾಪಡೆ ತುಕಡಿಗಳು ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿವೆ. ಪ್ರವಾಹದಿಂದ ಸಂರಕ್ಷಿಸಲು 19ತಂಡಗಳು ಹಾಗೂ ಈಜುಗಾರರನ್ನೊಳಗೊಂಡ 6 ತಂಡಗಳನ್ನು ನಿಯೋಜಿಸಲಾಗಿದೆ.
ನೌಕಾಪಡೆಯ 5 ನೌಕೆಗಳಲ್ಲಿ ಆಹಾರ, ಔಷಧಿ ಸೇರಿದಂತೆ ಅತ್ಯಗತ್ಯ ವಸ್ತುಗಳು ಹಾಗೂ ವೈದ್ಯಕೀಯ ತಂಡಗಳನ್ನು ಸನ್ನದ್ಧಗೊಳಿಸಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲು ಐಎನ್‌ಎಸ್ ಡೇಗಾ ಮತ್ತು ಐಎನ್‌ಎಸ್ ರಾಜಲಿ ನೌಕೆಗಳನ್ನು ನಿಯೋಜಿಸಲಾಗಿದೆ ಎಂದು ನೌಕಾಪಡೆ ಮೂಲಗಳು ತಿಳಿಸಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243