ದಿನದ ಸುದ್ದಿ
ಆಧಾರ್ ಸವಾಲ್: ಟ್ರಾಯ್ ಅಧ್ಯಕ್ಷರ ಖಾತೆಗೆ ಕನ್ನ ಹಾಕಿದ ಹ್ಯಾಕರ್
ಸುದ್ದಿದಿನ ಡೆಸ್ಕ್: ಆಧಾರ್ ಕಾರ್ಡ್ ನಂಬರ್ ಕೊಟ್ಟು ತಾಕತ್ತಿದ್ದರೆ ನನ್ನ ಮಾಹಿತಿಗಳನ್ನು ಕದಿಯಿರಿ ಎಂದು ಸವಾಲು ಹಾಕಿದ ಭಾರತೀಯ ದೂರ ಸಂಪರ್ಕ ನಿಯಂತ್ರಣ ಮಂಡಳಿ (ಟ್ರಾಯ್) ಮುಖ್ಯಸ್ಥರ ಸೊಕ್ಕು ಮುರಿದಿರುವ ಹ್ಯಾಕರ್‍ಗಳು, ಅವರ ಖಾತೆಗೆ ಒಂದು ರೂ. ಜಮೆಮಾಡಿದ್ದಾರೆ.
ಆಧಾರ್ ಕಾರ್ಡ್ ಮಾಹಿತಿಗಳು ಸುರಕ್ಷಿತ. ಅದನ್ನು ಎಂದಿಗೂ ಕದಿಯಲು ಸಾಧ್ಯವಿಲ್ಲಎಂದು ಟ್ವಿಟರ್‍ನಲ್ಲಿ ಹೇಳಿದ್ದ ಆರ್‍ಎಸ್ ಶರ್ಮಾ ಅವರು ತಮ್ಮ ಆಧಾರ್ ಸಂಖ್ಯೆಯನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದರು. ತಾಕತ್ತಿದ್ದರೆ ಆಧಾರ್ ಮಾಹಿತಿಗಳನ್ನು ಬಹಿರಂಗಪಡಿಸಿ ಎಂದು ಸವಾಲುಹಾಕಿದರು.
ಇದಾದ ಕೆಲವೇ ಗಂಟೆಗಳಲ್ಲಿ ಬ್ರಿಟನ್ ಮೂಲದ ಹ್ಯಾಕರ್‍ವೊಬ್ಬ ಶರ್ಮಾ ಅವರ ಮೊಬೈಲ್ ಸಂಖ್ಯೆಗಳು, ಅವರು ಬಳಸುತ್ತಿರುವ ಮೊಬೈಲ್, ಅವರ ಬ್ಯಾಂಕ್ ಖಾತೆಗಳು ಮೊದಲಾದ ಮಾಹಿತಿಗಳನ್ನು ಟ್ವಿಟರ್‍ನಲ್ಲೇ ಲೀಕ್ ಮಾಡಿದ್ದಾನೆ.
ಆಧಾರ್ ಕಾರ್ಡ್ ಕೆಟ್ಟದ್ದು ಎಂದು ನಾನು ಹೇಳುವುದಿಲ್ಲ ಆದರೆ, ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳುವುದು ಸುರಕ್ಷಿತವಲ್ಲ ಎಂದು ಹ್ಯಾಕರ್ ಪ್ರತಿಕ್ರಿಯೆ ನೀಡಿದ್ದ. ಈ ಎಲ್ಲ ಮಾಹಿತಿಗಳು ವೆಬ್‍ಸೈಟ್‍ನಲ್ಲಿ ಲಭ್ಯವಿವೆ ಎಂದು ಶರ್ಮಾ ಅವರು ಸಮರ್ಥನೆ ಮಾಡಿಕೊಂಡಿದ್ದರು.
ಇದರ ಬೆನ್ನಿಗೇ ಬೆಂಗಳೂರಿನ ಹ್ಯಾಕರ್‍ಗಳು ಶರ್ಮಾ ಅವರ ಖಾತೆಗೆ ಒಂದು ರೂ. ಜಮೆ ಮಾಡಿ ಆ ಸ್ಕ್ರೀನ್ ಶಾಟ್‍ಅನ್ನು ಹಂಚಿಕೊಂಡಿದ್ದಾರೆ.
ಶರ್ಮಾ ಅವರ ಆಧಾರ್ ಕಾರ್ಡ್ ಮಾಹಿತಿ ಹ್ಯಾಕ್ ಆಗಿರುವ ಬೆನ್ನಿಗೇ ಟ್ವಿಟರ್‍ನಲ್ಲಿ ಆಧಾರ್ ಪರವಾದ ಮತ್ತು ವಿರೋಧಿಗಳ ನಡುವೆ ಪರ ವಿರೋಧದ ಚರ್ಚೆ ಆರಂಭವಾಗಿದೆ.
ಆಧರ್ ಕಾರ್ಡ್ ಮಾಡಿಸಲು ದೇಶದ ಜನರು ಈಗಾಗಲೇ ನೀಡಿರುವ ಮಾಹಿತಿಗಳು ಸರಕಾರದ ಬಳಿ ಭದ್ರವಾಗಿದೆ ಎಂದು ನೀವು ಅಂದುಕೊಂಡಿದ್ದರೆ ಅದು ಶುದ್ಧ ಸುಳ್ಳು. ಆಧಾರ್ ಮಾಹಿತಿಗಳು ಹ್ಯಾಕರ್‍ಗಳ ಕೈಗೆ ಸುಲಭವಾಗಿ ಸಿಕ್ಕಿವೆ. ಅವರು ಯಾವಾಗ ಬೇಕಾದರೂ ನಮ್ಮ ಖಾತೆಗೆ ಕೈ ಹಾಕಬಹದು, ನಮ್ಮ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ಹಾಗೂ ಮಿಕ್ಕ ವಿವರಗಳನ್ನೆಲ್ಲ ಕದಿಯಬಹುದು ಎಂದು ಟ್ವಿಟ್ಟಿಗರು ವಾದಿಸಿದ್ದಾರೆ.
trai chairman account hacked