ದಿನದ ಸುದ್ದಿ

ಮೆದಿಕೇರನಹಳ್ಳಿಯಲ್ಲಿದೆ ರೈಲು ಶಾಲೆ ; ಸ್ವಂತ ಖರ್ಚಿನಲ್ಲಿ ವಿದ್ಯಾಸಿರಿ ಎಕ್ಸ್‌ಪ್ರೆಸ್‌ ನಿರ್ಮಿಸಿದ ಶಿಕ್ಷಕರು, ಹಳೇ ವಿದ್ಯಾರ್ಥಿಗಳು..!

Published

on

ಸುದ್ದಿದಿನ ವಿಶೇಷ: ಭಾರತದ ಸಂಸ್ಕೃತಿಯಲ್ಲಿ ಶಿಕ್ಷಣವನ್ನು ಎಂದೂ ಲಾಭ–ದಾಯಕ ಉದ್ದಿಮೆಯನ್ನಾಗಿ ಪರಿಗಣಿಸಿದ್ದ ಉದಾ–ಹರಣೆಗಳಿಲ್ಲ. ಹಲವು ಜನೋಪಕಾರಿ ಸಂಘ ಸಂಸ್ಥೆಗಳು, ಮಠಮಾನ್ಯಗಳು ಶಿಕ್ಷಣವನ್ನು ಒಂದು ಸಾಮಾಜಿಕ ಒಳಿತೆಂದು ಭಾವಿಸಿ ಶಾಲಾ ಕಾಲೇಜುಗಳನ್ನು ತೆರೆದು ಶಿಕ್ಷಣ ನೀಡಿದ ಉದಾಹರಣೆಗಳು ನಮ್ಮಲ್ಲಿ ಹೇರಳ. ನಮ್ಮ ಸಂಪ್ರದಾಯದಲ್ಲಿ ಶಿಕ್ಷಣ ಎಲ್ಲ ದಾನಗಳಿಗಿಂತ ಶ್ರೇಷ್ಠವಾದ ದಾನ.

ಆದರೆ, ಇಂದು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪರೀಕರಣ ಜನ ಸಾಮಾನ್ಯರಲ್ಲಿ ಹೆಚ್ಚಿನ ಆತಂಕವನ್ನು ಉಂಟು ಮಾಡಿದೆ. ಶಿಕ್ಷಣವನ್ನು ಒಂದು ಲಾಭದ ಉದ್ದಿಮೆಯನ್ನಾಗಿ ಮಾಡಿಕೊಂಡಿರುವ ಹಲವು ಜನರು ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣದ ಪರ–ವಾಗಿದ್ದಾರೆ. ಲಾಭದ ಲೆಕ್ಕಾಚಾರವನ್ನೇ ಪ್ರಧಾನವಾಗಿ ಪರಿಗಣಿ–ಸುವ ಅವರಿಗೆ ಶಿಕ್ಷಣ ಒಂದು ವ್ಯಾಪಾರದ ವಸ್ತು ಮತ್ತು ತಂದೆ-ತಾಯಿ ಹಾಗೂ ಮಕ್ಕಳು ಗ್ರಾಹಕರು. ಶಿಕ್ಷಕರೇ ಅವರ ಸೇಲ್ಸ್ ಮ್ಯಾನ್‌ಗಳು. ಅವರ ಮೇಲೊಬ್ಬ ಸಿಇಒ. ಇದು ಆಧುನಿಕ ಶಿಕ್ಷಣ ವ್ಯಾಪಾರ ಮಳಿಗೆಯ ಸಂರಚನೆ.

ಇಷ್ಟೆಲ್ಲಾ ಯಾಕೆ ಹೇಳ ಬೇಕಾಯ್ತು ಎಂದರೆ,ಬಹುತೇಕ ಸರ್ಕಾರಿ ಕನ್ನಡ ಶಾಲೆಗಳು ಕೊನೆ ಉಸಿರೆಳೆಯುತ್ತಿವೆ. ವಿದ್ಯಾರ್ಥಿಗಳಿಲ್ಲದೆ ಶಾಲೆಗಳು ಬಣಗುಡುತ್ತಿವೆ‌. ಒಂದು ಕಾಲದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರ ಪರಿಣಾಮ ತರಗತಿಗಳನ್ನು ಎ ಸೆಕ್ಷನ್ , ಬಿ ಸೆಕ್ಷನ್ ವಿಭಾಗಗಳಾಗಿ ಮಾಡಿ ಬೋಧಿಸಲಾಗುತ್ತಿತ್ತು. ಈಗ ಅದು ಕನಸಿನ ಮಾತು ಎಂದರೆ ತಪ್ಪಾಗಲಾರದು. ಆದರೂ ನಾವು ನಿರಾಶಾವಾದಿಗಳಾಗ ಬೇಕಿಲ್ಲ. ಏಕೆಂದರೆ ಅಂತಹದೊಂದು ಉದಾಹರಣೆಗೆ ಕಾರಣವಾಗಿದೆ ಈ ಶಾಲೆ. ಈ ಸ್ಟೋರಿ ನೋಡಿ.

ಅದು ಸುಮಾರು ಸಾವಿರ ಜನಸಂಖ್ಯೆ ಇರುವ, ಇದುವರೆಗೂ ಸಾರಿಗೆ ಸಂಪರ್ಕವಿರದ ಒಂದು ಪುಟ್ಟ ಗ್ರಾಮ. ಅಲ್ಲಿರುವ ಸರ್ಕಾರಿ ಶಾಲೆ, ಹಾಗೂ ಅಲ್ಲಿನ ಶಿಕ್ಷಕರಿಗೆ ಪ್ರಸಂಶೆಯ ಮಾತುಗಳು ಕೇಳಿ ಬರುತ್ತಿವೆ. ಅದು ಯಾವ ಊರು ಅನ್ನೋ ಕುತೂಹಲ ನಿಮ್ಮಲ್ಲೀಗ ಇಮ್ಮಡಿಸಿರ ಬಹುದು. ಅದು ದಾವಣಗೆರೆ ಜಿಲ್ಲೆಯ, ಜಗಳೂರು ತಾಲೂಕಿನ ಮೆದಿಕೇರನಹಳ್ಳಿ.

ಈ ಹಳ್ಳಿಯ ಸರ್ಕಾರಿ ಪ್ರೌಢ ಶಾಲೆಗೆ ಮುಖ್ಯೋಪಾಧ್ಯಾಯರಾದ ಅರುಣ್ ಕುಮಾರ್ ಹೆಚ್.ಎನ್. ಅವರು ವರ್ಗವಾಗಿ ಬಂದ ಕೇವಲ ಒಂದೂವರೆ ತಿಂಗಳಿನಲ್ಲಿ ಶಾಲೆಗೆ ಹೊಸರೂಪ ಕೊಟ್ಟು ಗಮನ ಸೆಳೆದಿದ್ದಾರೆ. ತನ್ನ ಸ್ವಂತ ಖರ್ಚಿನಲ್ಲಿ
ಶಾಲೆಗೆ ರೈಲಿನಾಕಾರಾದ ಚಿತ್ತಾರದ ರಂಗು ಮೂಡಿಸಿ ‘ರೈಲು ಶಾಲೆ’ಯಾಗಿ ಪರಿವರ್ತಿಸಿ‌ ಬಿಟ್ಟಿದ್ದಾರೆ. ಶಾಲೆಗೆ ‘ರೈಲು’ ಆಕಾರ ಕೊಡಿಸುವುದರ ಮೂಲಕ ಶಿಕ್ಷಕರ, ವಿದ್ಯಾರ್ಥಿಗಳ, ಗ್ರಾಮದ ಜನತೆಯ ಮನ ಗೆದ್ದಿದ್ದಾರೆ.

2006 ರಲ್ಲಿ ಆರಂಭವಾದ ಈ ಶಾಲೆ ಹಲವು ಕೊರತೆಗಳಿಂದ ಕೂಡಿತ್ತು. ಈ ಹಿಂದೆ ಬಂದ ಮುಖ್ಯೋಪಾಧ್ಯಾಯರು ಸರ್ಕಾರ ಸಹಾಯದಿಂದ ಶಾಲೆಯನ್ನು ಒಂದು ಮಟ್ಟಿಗೆ ನಡೆಸಿಕೊಂಡು ಬಂದಿದ್ದರು. ಆದರೆ ಈಗಿರುವ ಮುಖ್ಯೋಪಾಧ್ಯಾಯರು ಅವರೇ ಹೇಳುವಂತೆ ‘ನಾನು ಕಾರ್ಯನಿರ್ವಹಿಸುವ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡುವುದು ನನ್ನ ಗುರಿಯೂ ಹೌದು, ಕನಸೂ ಹೌದು’ ಎನ್ನುತ್ತಾರೆ.

ಅದರಂತೆಯೇ ಈಗಿನ ಶಾಲೆಗೆ ರೈಲು ಆಕಾರದ ಚಿತ್ತಾರ ಕೊಡಿಸುವುದರ ಮೂಲಕ, ಅದಕ್ಕೆ ವಿದ್ಯಾಸಿರಿ ಎಕ್ಸ್‌ಪ್ರೆಸ್ ಎಂದು ನಾಮಕರಣ ಮಾಡಿದ್ದಾರೆ. ಸಹ ಶಿಕ್ಷಕರೂ ಕೂಡ ಇವರ ಉತ್ಸಾಹ ಕಂಡು ಬೆರೆಗಾಗಿ ಸಾಥ್ ನೀಡುತ್ತಿದ್ದಾರೆ.

ಸಹ ಶಿಕ್ಷಕರ ಸಾಥ್

ಅಂದ ಹಾಗೆ ಶಾಲೆಯ ಸಹ ಶಿಕ್ಷಕರು ಈ ಕ್ರಿಯಾಶೀಲ ಯೋಜನೆಗೆ ಸಾಥ್ ನೀಡಿದ್ದು, ಮುಖ್ಯ ಶಿಕ್ಷಕರಿಗೆಂದೇ ಒಂದು ಪ್ರತ್ಯೇಕ ಕೊಠಡಿ ರೂಪಿಸಿ ಪ್ರೋತ್ಸಾಹ ನೀಡಿದ್ದಾರೆ. ಕರೊನಾ ಸಂಕಷ್ಟದ ಕಾಲದಲ್ಲಿ ನಾವು ಸಮಯವನ್ನು ಹಾಳು ಮಾಡದೆ ಅಭಿವೃದ್ಧಿ ಕೆಲಸಗಳ ಉಸ್ತುವಾರಿ ವಹಿಸಿಕೊಂಡು ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ಕನ್ನಡ ಶಿಕ್ಷಕ ವಿಜಯ್ ಕುಮಾರ್.

ಶಿಕ್ಷಕರ ಈ ಕಾರ್ಯ ಗಮನಿಸಿದ ಶಾಲೆಯ ಹಳೇ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ. ಶಾಲಾ ಕೊಠಡಿಗಳ ದುರಸ್ತಿಗೆ ಹಣ ಹಾಕಿ ಸ್ವತಃ ಅವರೇ ಮುಂದೆ ನಿಂತು ಕೆಲಸ ಮಾಡಿಸುತ್ತಿದ್ದಾರೆ. ಜೊತೆಗೆ ಎಸ್ ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಈ ಕಾರ್ಯಕ್ಕೆ ಸೈ ಎಂದಿದ್ದಾರೆ.

ಆಟ, ಪಾಠದಲ್ಲಿ ಮುಂದು

ಇಲ್ಲಿನ ವಿದ್ಯಾರ್ಥಿಗಳು ಆಟ, ಪಾಠದಲ್ಲಿ ಕೂಡ ಮುಂದೆ ಇದ್ದಾರೆ. ಎಸ್ ಎಸ್ ಎಲ್ ಸಿ ಯಲ್ಲಿ ಐದು ಬಾರಿ ಶೇ.100ರಷ್ಟು ಫಲಿತಾಂಶ ಸಾಧಿಸಿದ್ದಾರೆ. ಇದಕ್ಕೆ ಪೂರಕವಾಗಿ ಶಾಲೆ ವಾತಾವರಣ ಇದ್ದು, ಖಾಸಗಿ ಶಾಲೆಗಳಿಗೂ ಕೂಡ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು.

ವಿಡಿಯೋ ನೋಡಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version