ದಿನದ ಸುದ್ದಿ

ನಂಜನಗೂಡಲ್ಲೊಂದು ‘ಟ್ರೈನ್ ಶಾಲೆ’..!

Published

on

ಹಾರೋಪುರದ ಟ್ರೈನ್ ಶಾಲೆ

ಸುದ್ದಿದಿನ ವಿಶೇಷ :   ಒಂದೆಡೆ ಸರ್ಕಾರಿ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ‌.ಇನ್ನೊಂದೆಡೆ ತುಂಬಿ ತುಳುಕುವ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದುಪ್ಪಟ್ಟು ಫೀಸ್ ಕಟ್ಟಿ ಸೇರಿಸುತ್ತಿರುವ ಪೋಷಕರು. ಇಂಥ ವಿಪರ್ಯಾಸಗಳ ನಡುವೆ ಸರ್ಕಾರ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುತ್ತೇವೆ ಎನ್ನುವ ಸೋಗಲಾಡಿ ಹೇಳಿಕೆಗಳಿಂದ ಬೇಸತ್ತ ಪ್ರಜ್ಞಾವಂತ ಶಿಕ್ಷರರು ತಮ್ಮ ಶಾಲೆಗಳನ್ನು ಉಳಿಸಿಕೊಳ್ಳಲು ಸರ್ಕಾರದಿಂದ ಯಾವ ಸಹಾಯ ಪಡೆಯದೆ ಅಕ್ಷರಶಃ ಕನ್ನಡ ಪ್ರೇಮವನ್ನು ಮೆರೆಯುತ್ತಿರುವ ಅಪರೂಪದ ಸಂಗತಿಗಳು ಹಾಗೊಂದು ಹೀಗೊಂದು ಕಾಣಿಸಿಕೊಳ್ಳುತ್ತಿವೆ. ಅದರಲ್ಲಿ ನಂಜನಗೂಡು ತಾಲೂಕಿನ ಕನ್ನಡ ಶಾಲೆಯನ್ನು ಉಳಿಸಿ ಕೊಳ್ಳಲು ಶಿಕ್ಷಕರು ಒಂದೊಳ್ಳೇ ಉಪಾಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುದ್ದಿದಿನ ಅವರನ್ನು ಸಂಪರ್ಕಿಸಿ ಅವರ ಕಾಳಜಿಗೆ ಬೆಂಬಲಿಸಿ ಈ ವರದಿ ಮಾಡಿದೆ.

ಹಾರೋಪುರ ಶಾಲೆ

ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ, ನಂಜನಗೂಡು ತಾಲೂಕಿನ ಹಾರೋಪುರ ಎಂಬ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೆಲ್ಲಾ ಸೇರಿ ತಮ್ಮ ಶಾಲೆಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳ ಬೇಕು ಎಂಬ ಹಟದಿಂದ ಇಡೀ ಶಾಲೆಗೆ ಟ್ರೈನಿನಾಕಾರಾದ ಚಿತ್ತಾರದ ರಂಗು ಮೂಡಿಸಿ ‘ಟ್ರೈನ್ ಶಾಲೆ’ಯಾಗಿ ಪರಿವರ್ತಿಸಿ‌ ಬಿಟ್ಟಿದೆ. ಒಂದರಿಂದ
ಏಳನೇ ತರಗತಿಯವರೆ ಕೇವಲ 55 ಮಕ್ಕಳು ಇರುವ ಈ ಶಾಲೆಗೆ ಇನ್ನೂ ಹೆಚ್ಚು ಮಕ್ಕಳು ಸೇರಲಿ, ಕನ್ನಡದ ಈ ಶಾಲೆಯು ಉಳಿಯಲಿ‌ ಎಂಬ ಮಹದಾಸೆಯೊಂದಿಗೆ ಇಲ್ಲಿರು ನಾಲ್ಕು ಶಿಕ್ಷಕರು ಈ ಉಪಾಯ ಮಾಡಿದ್ದಾರೆ.

ಮೈಸೂರಿನ ನಾಗೇಶ್ ಎಂಬ ಕಲಾವಿದ ಈ ಟ್ರೈನ್ ನ ಚಿತ್ತಾರ ಬಿಡಿಸಿದ್ದು, ಗ್ರಾಮದ ಜನತೆ ಇವರ ಈ ಕೆಲಸಕ್ಕೆ ಭೇಷ್ ಎಂದಿದ್ದಾರೆ.ಶಾಲೆಯನ್ನು ನೋಡಲು ಈಗಾಗಲೇ ಬೇರೆ ಊರುಗಳಿಂದ ಜನರು ಬಂದು ನೋಡಿ ಪ್ರಸಂಶೆ ವ್ಯಕ್ತ ಪಡಿಸಿದ್ದಾರೆ. ಮಕ್ಕಳಂತೂ ಮೊದಲಿಗಿಂತಲೂ ಉತ್ಸುಕರಾಗಿ ಅಭ್ಯಾಸದಲ್ಲಿ ತೊಡಗಿದ್ದು ಮುಂದಿನ ದಿನಗಳಲ್ಲಿ ನಮ್ಮ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಪೋಷಕರು ಸೇರಿಸುವುದಾಗಿ ಹೇಳಿದ್ದಾರೆ. ಕೇವಲ ಹದಿನೈದು ದಿನದ‌ ಹಿಂದೆಯಷ್ಟೇ ನಾವು ಈ ಶಾಲೆಗೆ ಟ್ರೈನಿನಾಕಾರ ಕೊಡಿಸಿದ್ದು, ಮಕ್ಕಳು ಈಗಾಗಲೇ ಖಾಸಗಿ ಶಾಲೆಗೆ ಸೇರಿದ್ದಾರೆ. ಕಾರಣ ಮುಂದಿನ ಶೈಕ್ಷಣಿಕ ವರ್ಷದಿಂದ ನಮ್ಮ ಶಾಲೆಯ ಮಕ್ಕಳ‌ ಸಂಖ್ಯೆ ಹೆಚ್ಚಲಿದೆ ಎಂಬ ವಿಶ್ವಾಸವನ್ನ ಶಾಲೆಯ ಮುಖ್ಯೋಪಾಧ್ಯಾಯ ಬಸವ ನಾಯಕ ವ್ಯಕ್ತ ಪಡಿಸಿದ್ದಾರೆ.

ಶಾಲೆಯ ಟ್ರೈನಿನ ಇಂಜಿನ್ ಆಕಾರ

“ಈ ಕೆಲಸಕ್ಕೆ ಸರ್ಕಾರದಿಂದ ಯಾವ ಸಹಾಯವನ್ನೂ ನಾವು ಪಡೆದಿಲ್ಲ, ಆದರೆ ಯಾವುದಾರೂ NGOಗಳು ಶಾಲೆಯ ಅಭಿವೃದ್ಧಿಗೆ ಬಂದರೆ ಶಾಲೆ ಉಳಿಯುತ್ತದೆ, ಬೆಳೆಯುತ್ತದೆ”

|ಬಸವ ನಾಯಕ, ಮುಖ್ಯೋಪಾಧ್ಯಾಯ, ಹಾರೋಪುರ

“ಸರ್ಕಾರದ ಯಾವುದೇ ಸಹಾಯ ಪಡೆಯದೆ ತಮ್ಮ ಸ್ವಂತ ಖರ್ಚಿನಲ್ಲಿ ಮಕ್ಕಳನ್ನು ಕಲಿಕೆಗೆ ಪ್ರೇರೇಪಿಸಿರುವ ಶಿಕ್ಷಕರ ಈ ಕೆಲಸ ಖುಷಿತಂದಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿ ಕೊಳ್ಳಬೇಕಾದಲ್ಲಿ ಈ ತರಹದ ಅನಿವಾರ್ಯ. ಮುಂದಿನ ಮುಖ್ಯಶಿಕ್ಷಕರ ಸಭೆಯಲ್ಲಿ ಹಾರೋಪುರ ಶಾಲೆಯ ಮುಖ್ಯೋಪಾಧ್ಯಾಯರ ಈ ಕೆಲಸಕ್ಕೆ ಅಭಿನಂದಿಸಲಾಗುವುದು.”

| ನಾರಾಯಣ, ಬಿಇಓ, ನಂಜನಗೂಡು

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version