ದಿನದ ಸುದ್ದಿ
ರಾಜ್ಯದ 11 ಜಿಲ್ಲೆಗಳಿಗೆ 70 ಸಂಚಾರಿ ಪಶು ಚಿಕಿತ್ಸಾ ವಾಹನ ಹಸ್ತಾಂತರ
ಸುದ್ದಿದಿನ, ಬೆಂಗಳೂರು : ವಿಧಾನಸೌಧದ ಮುಖ್ಯ ದ್ವಾರದ ಮುಂಭಾಗದಲ್ಲಿಂದು ಸಂಚಾರಿ ಪಶು ಚಿಕಿತ್ಸಾ ಘಟಕದ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕಾ ಸಚಿವ ಪರ್ಷೋತ್ತಮ್ ರೂಪಾಲ, ರಾಜ್ಯ ಪಶುಸಂಗೋಪನೆ ಸಚಿವ ಪ್ರಭು ಚೌವ್ಹಾಣ್ ಸಚಿವರಿಂದ ಸೋಮಣ್ಣ, ಆರ್. ಅಶೋಕ್ ಮುಂತಾದವರು ಉಪಸ್ಥಿತರಿದ್ದರು.
ನಂತರ ಮುಖ್ಯಮಂತ್ರಿ ಬೊಮ್ಮಾಯಿ ರಾಜ್ಯದಲ್ಲಿ ಜಾನುವಾರು ಹತ್ಯೆ ನಿಷೇಧ ಕಾನೂನು ಜಾರಿ ಮಾಡಿದ್ದು, ಅದನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಹೇಳಿದರು. ವಯಸ್ಸಾದ ಹಸುಗಳ ಸಂರಕ್ಷಣೆಗಾಗಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಗೋ ರಕ್ಷಣೆ ಮಾಡಲು ಅಗತ್ಯ ಕ್ರಮವನ್ನು ಸರ್ಕಾರ ಜರುಗಿಸಲಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರ 2021-22ನೇ ಸಾಲಿನಲ್ಲಿ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿ ಅಗತ್ಯ ತುರ್ತು ಸೇವೆ ಒದಗಿಸುವ ಸಲುವಾಗಿ ರಾಜ್ಯಕ್ಕೆ 275ಪಶು ಚಿಕಿತ್ಸಾ ವಾಹನಗಳನ್ನು ಒದಗಿಸಿತ್ತು. ಆ ಪೈಕಿ 11ಜಿಲ್ಲೆಗಳಿಗೆ 70 ವಾಹನಗಳನ್ನು ಇಂದು ಬಿಡುಗಡೆ ಮಾಡಲಾಯಿತು.
ಈ ಯೋಜನೆ ಅನ್ವಯ ರಾಜ್ಯದ ಎಲ್ಲ ಭಾಗಗಳಲ್ಲಿ ಪಶುಪಾಲನೆ ಮಾಡುವ ಉದ್ದೇಶದಿಂದ ರೈತ ಸಮುದಾಯಕ್ಕೆ ನೆರವಾಗಲು ಸಂಚಾರಿ ಪಶು ಚಿಕಿತ್ಸಾ ಘಟಕಕ್ಕೆ ವಿಧ್ಯುಕ್ತವಾಗಿ ಚಾಲನೆ ದೊರೆಯಿತು. ರಾಜ್ಯದ ಎಲ್ಲ ಗ್ರಾಮೀಣ ಭಾಗಗಳ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಪಶು ಚಿಕಿತ್ಸಾ ಘಟಕ ಸಹಕಾರಿಯಾಗಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243