ದಿನದ ಸುದ್ದಿ
ಹತ್ತು ಮಂದಿ ಆದಿವಾಸಿ ‘ಗೊಂಡ’ ರನ್ನು ಕೊಂದಿದ್ದು ದೊಡ್ಡ ಸುದ್ದಿಯಾಗಲೇ ಇಲ್ಲ..!?
ಮೊನ್ನೆ ಉತ್ತರಪ್ರದೇಶದ, ಸಂಭದ್ರಾ ಜಿಲ್ಲೆಯ ಕುಗ್ರಾಮವೊಂದರಲ್ಲಿ ಹತ್ತು ಮಂದಿ ಆದಿವಾಸಿ ಗೊಂಡ ರನ್ನು ಕೊಂದಿದ್ದು ದೊಡ್ಡ ಸುದ್ದಿಯಾಗಲೇ ಇಲ್ಲ!? ಯಾಕೆಂದರೆ ಕೊಂದವರು ಗುಜ್ಜಾರರೆಂಬ ಜಮೀನ್ದಾರರು! ಕೊಲ್ಲಿಸಿಕೊಂಡವರು ಗೊಂಡರೆಂಬ ಆದಿವಾಸಿ ಭೂಹೀನರು!!
ತಲೆತಲಾಂತರದಿಂದ ಅಡವಿಯಲ್ಲಿದ್ದು, ಅಡವಿಯ ನಡುವೆಯೇ ಒಂದಷ್ಟು ಭೂಮಿ ಹಸನು ಮಾಡಿಕೊಂಡು ಹೊಟ್ಟೆಪಾಡು ಮಾಡಿಕೊಂಡು ಬಂದಿದ್ದ ಭೂಮಿಯ ಮೇಲೆ ಭೂಮಾಲೀಕರಾದ ಗುಜ್ಜಾರರ ಕಣ್ಣು ನೆಟ್ಟಿದ್ದು ಇಂದು ಏಳು ಮಂದಿ ಗಂಡಸರು ಮತ್ತು ಮೂರು ಮಂದಿ ಹೆಂಗಸರು ಸೇರಿದಂತೆ ಒಟ್ಟಾರೆ ಹತ್ತು ಮಂದಿ ಗೊಂಡರು ಅಸುನೀಗಲು ಕಾರಣವಾಗಿದೆ!
ಅಸಹಾಯಕರಾದ ಆದಿವಾಸಿಗಳ ಮೇಲೆ ಬಂದೂಕು ಹಿಡಿದು ಟ್ರಾಕ್ಟರುಗಳಲ್ಲಿ ಬಂದು ಸಿನಿಮೀಯ ರೀತಿಯಲ್ಲಿ ಗುಂಡು ಹಾರಿಸಿ ಕೊಂದ ಗುಜ್ಜಾರರು ರಾಜಕಾರಣದಲ್ಲೂ ಪ್ರಬಾವಿತರು! ಭೂಮಾಲೀಕರು, ಲೇವಾದೇವಿದಾರರು, ಉದ್ಯಮಿಗಳು ಯಾರೊಂದಿಗಿದ್ದಾರೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.
“ಗುಜ್ಜಾರರ ಭೂದಾಹ ಹೇಗಿರುತ್ತದೆಯೆಂದರೆ.. ಅವರು ತಮ್ಮ ಮನೆಯ ನಾಯಿ, ಬೆಕ್ಕುಗಳ ಹೆಸರಲ್ಲಿ, ಅಷ್ಟೇಕೆ ಗಿಡ, ಮರಗಳ ಹೆಸರಲ್ಲೂ ಭೂಮಿ ಹೊಂದಿದ್ದಾರೆ..” ಎನ್ನುತ್ತಾರೆ ಗೊಂಡರ ಹುಡುಗ ವಿಜಯ್ ಸಿಂಗ್ ಗೊಂಡ್..! ಮಿಕ್ಕದ್ದನ್ನು ಹೇಳಬೇಕಿಲ್ಲ.. ಈ ದೇಶದ ಅಧಿಕಾರ ರಾಜಕಾರಣ, ಪೋಲಿಸ್, ಕಾನೂನು, ಮಾಧ್ಯಮಗಳನ್ನು ಕಂಡವರಿಗೆ ಗೊಂಡರ ಸಾವು ಒಂದು ಸಹಜ ಘಟನೆಯಷ್ಟೇ..!
-ಸಿ.ಎಸ್.ದ್ವಾರಕಾನಾಥ್
ಸುದ್ದಿದಿನ.ಕಾಂ|ವಾಟ್ಸಾಪ್|9980346243