ದಿನದ ಸುದ್ದಿ
ಟ್ರೂ ಕಾಲರ್ ಎಡವಟ್ಟು, ನಿರ್ದೇಶಕನಿಗೆ ಬಿತ್ತು ಧರ್ಮದೇಟು
ಸುದ್ದಿದಿನ ಡೆಸ್ಕ್: ಬೆಂಗಳೂರಿನ ಕಸ್ತುರ ಬಾ ರಸ್ತೆಯಲ್ಲಿರುವ ಕನ್ನಡ ಚಿತ್ರ ನಿರ್ದೇಶಕ ಎನ್ ಶಿವಕುಮಾರ್ ಅವರಿಗೆ ಬೆಳ್ಳಂಬೆಳಗ್ಗೆ ಒಂದು ಶಾಕ್ ಕಾದಿತ್ತು. ಮನೆ ಕಾಲಿಂಗ್ ಬೆಲ್ ಸದ್ದಾಗಿ ಯಾರು ನೋಡುವ ಎಂದು ಬಾಗಿಲು ತೆರೆದಾಗ ಇಬ್ಬರು ಯುವಕರು ಯರ್ರಾಬಿರ್ರಿ ಹಲ್ಲೆ ಮಾಡಿದರು. ಪರಿಣಾಮವಾಗಿ ಅವರ ಕಣ್ಣಿಗೆ ಗಾಯವಾಯಿತು. ಮುಖ ಊದಿಕೊಂಡಿತು.
ಒಂದು ಕ್ಷಣ ಇವರು ಯಾಕೆ ನನ್ನನ್ನು ಹೊಡೆಯುತ್ತಿದ್ದಾರೆ ಎಂದು ಶಿವಕುಮಾರ್ ಅವರಿಗೆ ಅರ್ಥವೇ ಆಗಲಿಲ್ಲ. ಹಲ್ಲೆ ಮಾಡಿದ ಹುಡುಗರು “ಮರ್ಯಾದೆಯಿಂದ ನಮ್ಮ ಬಾಸ್ ಹತ್ರ ತೆಗೆದುಕೊಂಡಿರುವ ಎರಡು ಲಕ್ಷ ರೂ. ವಾಪಸ್ ಕೊಡು ಎಂದು ಅವಾಚ್ಯ ಶಬ್ದಗಳಲ್ಲಿ ನಿಂದಿಸಿದರು. ಯಾವ ಹಣ, ಯಾವ ಬಾಸ್ ಎಂಬ ಸ್ಪಷ್ಟತೆ ಶಿವಕುಮಾರ್‍ಗೆ ಇರಲಿಲ್ಲ. ಯಾಕಂದ್ರೆ ಅವರು ಯಾವ ಸಾಲವನ್ನೂ ಮಾಡಿರಲಿಲ್ಲ.
ಹಲ್ಲೆ ಮುಂದುವರಿಸುತ್ತಾ ಆ ಹುಡುಗರು ಶಿವಕುಮಾರ್ ಕುತ್ತಿಗೆ ಪಟ್ಟಿ ಹಿಡಿದು ಹೊರಗೆ ಎಳೆದೊಯ್ಯುವಾಗ ಅದನ್ನು ಕಂಡ ನೆರೆಹೊರೆಯವರು ಪೊಲೀಸ್‍ಗೆ ಕರೆ ಮಾಡಿ ವಿಷಯ ಮುಟ್ಟಿಸಿದರು.
ತಾವು ಯಾರಿಂದಲೂ ಸಾಲ ಪಡೆದಿಲ್ಲ ಎಂದು ಶಿವಕುಮಾರ್ ಪರಿಪರಿಯಾಗಿ ಬೇಡಿಕೊಂಡರೂ, ಪೊಲೀಸರು ನಂಬಲಿಲ್ಲ. ಕೊನೆಗೆ ರಂಗನಾಥ್ ಎಂಬ ವ್ಯಕ್ತಿಯನ್ನು ಠಾಣೆಗೆ ಕರೆಸಲಾಯಿತು. ಆತ, ಫಿನಾನ್ಶಿಯರ್ ಹತ್ತಿರ ಎರಡು ಲಕ್ಷ ರೂ. ಸಾ ಪಡೆದಿದ್ದ ಎಂದು ಗೊತ್ತಾಯಿತು. ಶಿವಕುಮಾರ್ ಅವರು ನಿನಗೆ ಗೊತ್ತಾ ಎಂದು ಕೇಳಿದರೆ ಅವನು ಇಲ್ಲ ಎಂದ.
ಈ ಹಲ್ಲೆಗೆ ಕಾರಣವಾಗಿದ್ದು ಟ್ರೂಕಾಲರ್ ಹಾಗೂ ಫೇಸ್ ಬುಕ್ ಖಾತೆ ಎಂಬುದು ತನಿಖೆಯಿಂದ ಗೊತ್ತಾಯಿತು. ಅಸಲಿಗೆ ರಂಗನಾಥ್ ಎಂಬಾತನಿಗೆ ಶಿವಕುಮಾರ್ ಎನ್ ಎಸ್ ಎಂಬ ವ್ಯಕ್ತಿ ಜಾಮೀನಾಗಿ ಸಾಲ ಕೊಡಿಸಿದ್ದ. ಆದರೆ, ರಂಗನಾಥ್ ಹೇಳಿದ ಸಮಯಕ್ಕೆ ಹಣ ಹಿಂದುರುಗಿಸಲಿಲ್ಲ. ಸಾಲ ವಸೂಲಿಗೆ ಮುಂದಾದ ಈ ಹುಡುಗರು ಶಿವಕುಮಾರ್ ಎನ್ ಎಸ್ ಎಂದು ಟ್ರೂಕಾಲರ್ ನಲ್ಲಿ ಹುಡುಕಿದಾಗ ಸಿಕ್ಕಿದ್ದು, ನಿರ್ದೇಶಕ ಶಿವಕುಮಾರ್ ಎನ್. ಇದಾದ ನಂತರ ಫೇಸ್ ಬುಕ್‍ನಲ್ಲಿ ಹುಡುಕಿದಾಗ ಇದೇ ನಿರ್ದೇಶಕರು ಕಾಣಿಸಿಕೊಂಡರು. ನಂತರ ಪ್ರೊಫೈಲ್ ಫೋಟೊ ಡೌನ್ ಲೋಡ್ ಮಾಡಿಕೊಂಡ ಹುಡುಗರು ಕುಡಿದ ಅಮಲಿನಲ್ಲಿ ನಿರ್ದೇಶಕ ಶಿವಕುಮಾರ್ ಮೇಲೆ ಹಲ್ಲೆ ಮಾಡಿದ್ದಾರೆ.