ದಿನದ ಸುದ್ದಿ
ಬ್ರಿಜೇಶ್ ಕಾಳಪ್ಪ-ವೈದ್ಯನ ಟ್ವೀಟ್ ವಾರ್
ಸುದ್ದಿದಿನ ಡೆಸ್ಕ್: ಕಾಂಗ್ರೆಸ್ ನಾಯಕ ಹಾಗೂ ವಕೀಲ ಬ್ರಿಜೇಶ್ ಕಾಳಪ್ಪ ಹಾಗೂ ಏಮ್ಸ್ ವೈದ್ಯರೆಂದು ಟ್ವಿಟರ್ ಪೋಸ್ಟ್‌ನಲ್ಲಿ ಬಿಂಬಿಸಲಾಗಿರುವ ವ್ಯಕ್ತಿಯ ನಡುವಿನ ಟ್ವಿಟರ್ ವಾರ್ ಭಾನುವಾರ ವೈರಲ್ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ಏಮ್ಸ್ ವೈದ್ಯರೊಂದಿಗೆ ನಗುತ್ತಾ ಮಾತನಾಡುತ್ತಿರುವ ಫೋಟೊವೊಂದನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದ ಬ್ರಿಜೇಶ್ ಕಾಳಪ್ಪ ಅವರು ಅಟಲ್ ಬಿಹಾರಿ ವಾಜಪೇಯಿ ಅವರು ಮರಣಶಯ್ಯೆಯಲ್ಲಿರುವಾಗ ಮೋದಿ ಅವರು ಸಂತಾಪ ಸೂಚಿಸಿದ್ದು ಹೀಗೆ ಎಂದು ಕಾಲೆಳೆದಿದ್ದರು.
ಇದನ್ನು ಗಮನಿಸಿದ ಮೈಸೂರಿನ ಸ್ಕ್ಯಾನ್ ರೇ ಸಂಸ್ಥೆಯ ಐಸಿಯು ವಿಭಾಗದ ನಿರ್ದೇಶಕ ಡಾ. ಜಗದೀಶ್ ಹಿರೇಮಠ್ ಅವರು ಕಾಂಗ್ರೆಸ್ ನಾಯಕನನ್ನು ತರಾಟೆಗೆ ತೆಗೆದುಕೊಂಡಿದ್ದು, ‘ಕಾಳಪ್ಪನವರೇ ನಿಮಗೆ ನಾಚಿಕೆಯಾಗಬೇಕು. ಫೋಟೊವೊಂದನ್ನು ಟ್ವೀಟ್ ಮಾಡುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಾಮರ್ಶಿಸಬೇಕು. ನೀವು ಟ್ವೀಟ್ ಮಾಡಲಾಗಿರುವ ಫೋಟೊ ಮೋದಿ ಅವರು ಈ ಹಿಂದೆ ಭೇಟಿನೀಡಿದ್ದಾಗ ತೆಗೆಸಿದ್ದು. ನೀವ್ಯಾಕೆ ಹೀಗೆ ಮಾಡಿದಿರಿ ರಮ್ಯಾ ನಿಮಗೆ ಕಚ್ಚಿದ್ರಾ? ಎಂದು ಟೀಕಿಸಿದ್ದರು.
ವೈದ್ಯರು ನೀಡಿರುವ ಪ್ರತಿಕ್ರಿಯೆಯಿಂದ ಕುದ್ದುಹೋಗಿರುವ ಕಾಳಪ್ಪ ಅವರು ಹಿರೇಮಠ್ ಅವರ ವಿರುದ್ಧ ದೂರು ದಾಖಲಿಸುವುದಾಗಿ ಟ್ವಿಟರ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ತಾವು ಏಮ್ಸ್ ವೈದ್ಯರೆಂದು ಟ್ವಿಟ್ಟಿಗರನ್ನು ದಾರಿ ತಪ್ಪಿಸಿರುವುದಕ್ಕೆ, ಪ್ರಧಾನಿ ಕಚೇರಿಯ ಜತೆ ನಿಕಟ ಸಂಪರ್ಕ ಹೊಂದಿರುವುದಾಗಿ ಸುಳ್ಳು ಹೇಳಿರುವುದಕ್ಕೆ, ರಮ್ಯಾರಂತ ಒಬ್ಬ ರಾಜಕೀಯ ನಾಯಕಿಯನ್ನು ಅವಮಾನ ಮಾಡಿರುವುದಕ್ಕಾಗಿ ಹಿರೇಮಠ್ ಅವರ ವಿರುದ್ಧ ಮಾನ ಹಾನಿ ಪ್ರಕರಣ ದಾಖಲಿಸುವುದಾಗಿ ಕಾಳಪ್ಪ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಳಪ್ಪನವರ ಈ ಟ್ವೀಟ್‌ಗೆ ಪರ ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ವೈದ್ಯ ಜಗದೀಶ್ ಹಿರೇಮಠ್ ವಿರುದ್ಧ ಕಿಡಿ ಕಾರಿದ್ದರೆ, ಇನ್ನಷ್ಟು ಮಂದಿ ರಮ್ಯಾ ಹಾಗೂ ಬ್ರಿಜೇಶ್ ಕಾಳಪ್ಪ ಅವರ ವಿರುದ್ಧವೇ ತಿರುಗಿಬಿದ್ದಿದ್ದಾರೆ.