ಕ್ರೀಡೆ

ಬ್ಯಾಂಕಾಕ್‌ನಲ್ಲಿ ಇಂದಿನಿಂದ ಉಬೆರ್ ಕಪ್- ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿ; ಸಿಂಧು, ಲಕ್ಷ್ಯಸೇನ್ ಪ್ರಶಸ್ತಿ ಭರವಸೆ

Published

on

ಸುದ್ದಿದಿನ ಡೆಸ್ಕ್ : ಬ್ಯಾಂಕಾಕ್‌ನಲ್ಲಿ ಇಂದಿನಿಂದ ಆರಂಭವಾಗಲಿರುವ ಉಬೆರ್ ಕಪ್ ಮತ್ತು ಥಾಮಸ್ ಕಪ್ ಫೈನಲ್ಸ್‌ನಲ್ಲಿ ಎರಡು ಒಲಿಂಪಿಕ್ಸ್ ಪದಕಗಳ ವಿಜೇತೆ ಪಿ.ವಿ. ಸಿಂಧೂ, ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ ಆಟಗಾರ ಲಕ್ಷ್ಯ ಸೇನ್ ಹಾಗೂ ಕಿಡಂಬಿ ಶ್ರೀಕಾಂತ್ ಅವರು ಭಾರತದ ನೇತೃತ್ವ ವಹಿಸಲಿದ್ದಾರೆ.

ಥಾಮಸ್ ಕಪ್‌ನಲ್ಲಿ ಭಾರತದ ಪುರುಷರ ತಂಡ ಇದುವರೆಗೆ ಪದಕ ಗೆದ್ದುಕೊಂಡಿಲ್ಲ. ಆದರೆ, ಉಬೆರ್ ಕಪ್‌ನಲ್ಲಿ ಭಾರತದ ಮಹಿಳೆಯರು 2014 ಮತ್ತು 2016ರ ಆವೃತ್ತಿಗಳಲ್ಲಿ ಕಂಚಿನ ಪದಕ ಗೆದ್ದಿದ್ದರು. ಹಿಂದಿನ ಆವೃತ್ತಿಯಲ್ಲಿ ಪುರುಷರು ಹಾಗೂ ಮಹಿಳೆಯರ ತಂಡಗಳು ಕ್ವಾರ್ಟರ್‌ಫೈನಲ್ಸ್ ಹಂತದಲ್ಲೇ ನಿರ್ಗಮಿಸಿದ್ದವು.

ಭಾರತ ಪುರುಷರ ತಂಡದಲ್ಲಿ ಈ ಬಾರಿ ಸಿಂಗಲ್ಸ್‌ನಲ್ಲಿ ವಿಶ್ವದ 9ನೇ ರ‍್ಯಾಂಕ್‌ನ ಲಕ್ಷ್ಯ ಸೇನ್, 11ನೇ ರ‍್ಯಾಂಕ್‌ನ ಕೆ. ಶ್ರೀಕಾಂತ್ ಹಾಗೂ 23ನೇ ರ‍್ಯಾಂಕ್‌ನ ಎಚ್.ಎಸ್ ಪ್ರಣಯ್ ಕಣದಲ್ಲಿದ್ದಾರೆ. ಡಬಲ್ಸ್‌ನಲ್ಲಿ ಸಾತ್ವಿಕ್ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಎಂ.ಆರ್ ಅರ್ಜುನ್ ಮತ್ತು ಧ್ರುವ ಕಪಿಲಾ, ಕೃಷ್ಣ ಪ್ರಸಾದ್ ಮತ್ತು ವಿಷ್ಣುವರ್ಧನ್ ಜೋಡಿಗಳು ಆಡಲಿವೆ. ಸಿ ಗುಂಪಿನಲ್ಲಿರುವ ಭಾರತ, ಜರ್ಮನಿ, ಚೈನೀಸ್ ತೈಪೆ ಹಾಗೂ ಕೆನಡಾ ತಂಡಗಳ ವಿರುದ್ಧ ಸೆಣಸಬೇಕಿದೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ ಸಿಂಧೂ ಪ್ರಮುಖ ಆಕರ್ಷಣೆಯಾಗಿದ್ದು, ಆಕರ್ಷಿ ಕಶ್ಯಪ್, ಉನ್ನತಿ ಹೂಡ ಭಾರತ ಪ್ರತಿನಿಧಿಸುತ್ತಿರುವ ಯುವ ಪ್ರತಿಭೆಗಳು. ಡಬಲ್ಸ್‌ನಲ್ಲಿ ತ್ರೀಸಾ ಜೊಲ್ಲಿ ಹಾಗೂ ಗಾಯತ್ರಿ ಗೋಪಿಚಂದ್ ಪ್ರಶಸ್ತಿ ಭರವಸೆ ಮೂಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version