ದಿನದ ಸುದ್ದಿ
ಯುಗಾದಿ ಅಲ್ಲ ಉಗಾದಿ
ಉಗಾದಿ ಹಬ್ಬದ ದಿನ ಮಳವಳ್ಳಿಯ ಮಾಳವ ಜನಾಂಗದ ಕುಟುಂಬಗಳು ಧಾರ್ಮಿಕ ಮೆರವಣಿಗೆಯಲ್ಲಿ ತಮ್ಮೂರ ಅಮ್ಮನ ಗುಡಿಯಿ೦ದ ಬಹಳ ವರುಷಗಳಿ೦ದ ಗೊತ್ತು ಮಾಡಲಾದ ನೀರಿನ ಹೊ೦ಡ, ಕೆರೆ, ನದಿ, ಹಳ್ಳ, ಇಲ್ಲವೇ ಬಾವಿಗಳಿಗೆ ಹೊರಡುವ ಪದ್ಧತಿ ಬೆಳೆದು ಬಂದಿದೆ. ಅಲ್ಲಿಗೆ ತಲುಪಿದ ಮೇಲೆ ನೀರಿನ ಬಳಿ ಬಿ೦ದಿಗೆಗಳನ್ನು ಇಟ್ಟು ಅವುಗಳಿಗೆ ಪೂಜೆ ಮಾಡುತ್ತಾರೆ. ಉಗಾದಿ ಹಬ್ಬದಲ್ಲಿ ಮಾಳವರ ನಾಯಕನಾದ ಕುಲವಾಡಿ, ಚಕ್ರಿ, ನೀರಘಂಟಿ ಇಲ್ಲವೇ ಸಾಮಾನ್ಯವಾಗಿ ಆತನನ್ನು ಬೇರೆಯವರು ಕರೆಯುವ೦ತೆ ಊರ ಯಜಮಾನನಾದವನು ಉಗು ಮೆರವಣಿಗೆಗೆ ಪೂಜಾ ವಿಧಿವಿಧಾನಗಳನ್ನು ಸಲ್ಲಿಸಿ ಮೆರವಣಿಗೆಗೆ ಅಣಿಯಾದ ಎಲ್ಲ ಶೃದ್ಧಾಳುಗಳಿಗೂ ಒಂದೊಂದು ಬಿಂದಿಗೆ ಪವಿತ್ರ ನೀರನ್ನು ನೀರಿನ ಹೊರತೆಯಿ೦ದ ತೆಗೆದು ಕೊಡುತ್ತಾನೆ.
ನೀರು ತುಂಬಿದ ಬಿಂದಿಗೆಗಳನ್ನು ಪೂಜಿಸಿ ನೀರು ತು೦ಬಿಕೊ೦ಡ ಮೇಲೆ ಮಾಳವರು ಹಿ೦ತಿರುಗಿ ತಮ್ಮ-ತಮ್ಮ ಮನೆಗಳಿಗೆ ಪುನಃ ಮೆರವಣಿಗೆಯಲ್ಲಿ ಬಂದು ಮನೆಯ ದೇವರ ಕೋಣೆಯಲ್ಲಿ ಬಿ೦ದಿಗೆಗಳನ್ನು ಇಡುತ್ತಾರೆ. ಈ ಬಿಂದಿಗೆದುಂಬಿದ ನೀರನ್ನು ‘ಹೊಸನೀರು’ ಎಂದು ಕರೆಯಲಾಗುತ್ತದೆ. ಆ ಬಿ೦ದಿಗೆಗೆ ಪೂಜೆಸಲ್ಲಿಸಿ ಬಿಂದಿಗೆಯ ‘ಹೊಸನೀರ’ನ್ನು ಮನೆಯಲ್ಲಿ ತು೦ಬಿಟ್ಟು ಕೊ೦ಡಿರುವ ದಿನ ಬಳಕೆಯ ಹ೦ಡೆಗಳು, ತೊಟ್ಟಿಗಳು, ಬಿ೦ದಿಗೆಗಳು ಮತ್ತು ಬಕೇಟುಗಳ ನೀರಿಗೆ ತೊಟ್ಟು ಬೆರೆಸಿ ದಿನನಿತ್ಯದ ಅಡುಗೆ, ಸ್ನಾನ, ಪೂಜೆ ಪುನಸ್ಕಾರಾದಿ ಶುಭ ಕಾರ್ಯಗಳಿಗೆ ಬಳಸುವ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ.
ನೀರು, ಸೂರ್ಯ ಹಾಗೂ ಚಂದ್ರನನ್ನು ಪೂಜಿಸುವ ಹಬ್ಬವೇ ‘ಉಗಾದಿ’. ಮಾಳವರಲ್ಲಿ ‘ಆದಿ’ ಎಂದರೆ ಸೂರ್ಯನ ಹೆಸರು. ಉಗು ಮತ್ತು ಆದಿ ಸೇರಿದಾಗ ನೀರು ಮತ್ತು ಸೂರ್ಯ ಎಂದಾಗುತ್ತದೆ. ನಾಗಾ ಜನಾಂಗದ ನಾಗಧರ್ಮದ ಕಾಲದ ದಿನಗಳಲ್ಲೇ ಸಂಪ್ರದಾಯ ಹುಟ್ಟಿ ಬೆಳೆದಿರಬಹುದು. ಉಗ್,ಉಗಿ, ಉಗ್ಗು, ಉಪ್ಪು, ಉಮಾ, ಉಕ್ಕು, ಉ೦ಣು, ಉಕ್ಕಡ, ಉಕ್ಕಡಗಾತ್ರಿ ಮತ್ತು ಇತ್ಯಾದಿ ಪದಗಳು ‘ಉ’ ಅ೦ದರೆ ನೀರಿಗೆ ಅ೦ಟಿಕೊ೦ಡ ಪದಗಳಾಗಿವೆ. ಪ್ರಸ್ತುತ ಉಗಾದಿ ತನ್ನ ಮೂಲಾರ್ಥ ಕಳೆದುಕೊಂಡು ‘ಹೊಸವರ್ಷ ಪ್ರಾರಂಭ’ ಎಂದಷ್ಟೇ ಆಚರಿಸಲಾಗುತ್ತಿದೆ. ಭಾರತೀಯ ಸಂಸ್ಕ್ರತಿಯೂ ಹಳೆಯ ನಾಗಾ ಸಂಪ್ರದಾಯವನ್ನು ಮರೆಮಾಚಿ( ನುಂಗಿಕೊಂಡು) ಸಾಧ್ಯವಾದಷ್ಟು ಇಂದಿನ ಸಂಪ್ರದಾಯಗಳಿಗೆ ಒಗ್ಗಿಕೊಂಡಿದೆ. ಇದು ‘ಉಗಾದಿ’ ಹೊರತು ‘ಯುಗಾದಿ’ ಅಲ್ಲ. ಉಗಾದಿ ಎ೦ಬ ಪದ ಮೂಲ ದ್ರಾವಿಡ ಪದವೇ ಹೊರತು ಸ೦ಸ್ಕೃತದಿ೦ದ ಉದಯಿಸಿಲ್ಲ.