ಲೋಕಾರೂಢಿ

ನಿರುದ್ಯೋಗ, ಬಡತನ ಮತ್ತು ಮೋದಿ ವರ್ಷಗಳು

Published

on

  • ಭಾರತದಲ್ಲಿ ಉದ್ಯೋಗಿ ಮತ್ತು ನಿರುದ್ಯೋಗಿ ಎಂಬ ಸರಳ ವಿಂಗಡಣೆ ಸಾಧ್ಯವಿಲ್ಲ. ಆದ್ದರಿಂದ ಉದ್ಯೋಗದ ಪ್ರಮಾಣವನ್ನು ತಿಳಿಯುವ ಒಂದು ವಿಧಾನವೆಂದರೆ ‘ಉದ್ಯೋಗ ವರಮಾನ’ವನ್ನು ಪರಿಶೀಲಿಸುವುದು. ಇದನ್ನು ಅಳೆಯುವ ಒಂದು ವಿಧಾನವೆಂದರೆ, ಆಹಾರ ಸೇವನೆಯಲ್ಲಿ ಕಾಳುಗಳ ತಲಾ ಲಭ್ಯತೆ. ಇದು ದುಡಿಯುವ ಜನ ವಿಭಾಗಗಳಿಗೆ ಮೋದಿ ಆಳ್ವಿಕೆಯ ವರ್ಷಗಳಲ್ಲಿ ಸತತವಾಗಿ ಇಳಿಯುತ್ತ ಬಂದಿದೆ. ಅಂದರೆ ಬಡತನವನ್ನು ಅಳೆಯುವ ಕ್ಯಾಲೊರಿ ಸೇವನೆಯ ಪ್ರಮಾಣವೂ ಇಳಿಯುತ್ತ ಬಂದಿದೆ. ಆದರೆ ಮೋದಿ ಸರಕಾರ, ನಿಜವಾಗಿಯೂ ಬಡತನ ಮತ್ತು ನಿರುದ್ಯೋಗವನ್ನು ಅನುಭವಿಸುತ್ತಿರುವ ಜನತೆಗೆ ಅವರ ಪರಿಸ್ಥಿತಿಗಳಿಗೆ ಸಂಬಂಧಪಟ್ಟ ಅಂಕಿ-ಅಂಶಗಳು ಗೊತ್ತಾಗದಂತೆ ತಡೆಹಿಡಿಯುವ ಮೂಲಕ, ಸರ್ವಾಧಿಕಾರಶಾಹಿತ್ವವನ್ನು ಮಾತ್ರವಲ್ಲ, ತಮಗೆ ಬಡತನ, ನಿರುದ್ಯೋಗ ಇಲ್ಲ ಎಂದು ಜನರು ಯೋಚಿಸುವಂತೆ ಮಾಡಬಹುದು ಎಂದು ನಂಬುವ ಮೂರ್ಖತನವನ್ನೂ ಪ್ರದರ್ಶಿಸಿದೆ.

ಶಿಮ್ಲಾದ ಕಾರ್ಮಿಕ ಬ್ಯೂರೋದಿಂದ ಹಿಡಿದು ಭಾರತೀಯ ಆರ್ಥಿಕ ವೀಕ್ಷಣಾ ಕೇಂದ್ರ(ಸಿಎಂಐಇ), ಮತ್ತು ಆಕ್ಸ್‌ಫಾಮ್ ವರೆಗೆ ಹಲವಾರು ಸಂಸ್ಥೆಗಳು ಭಾರತದಲ್ಲಿ ಈಗ ಗಂಭೀರವಾಗಿರುವ ನಿರುದ್ಯೋಗ ಪರಿಸ್ಥಿತಿಯತ್ತ ಗಮನ ಸೆಳೆದಿವೆ. ಆದರೆ ಸರ್ಕಾರ ಇದನ್ನು ನಿರಂತರವಾಗಿ ನಿರಾಕರಿಸುತ್ತಾ ಬಂದಿರುವುದೇ ಅಲ್ಲದೇ, ತಾನು ಒಪ್ಪದ ಅಧಿಕೃತವಾದ ಅಂಕಿ ಅಂಶಗಳನ್ನೇ ಮುಚ್ಚಿಹಾಕಿದೆ.

ಈಗಿನ ಸರ್ಕಾರದ ಸ್ಥಿತಿ ಕಥೆಗಳಲ್ಲಿ ಬರುವ ಪರದೆ ಹಿಂದೆ ಬಿಚ್ಚಿಟ್ಟು ಕೊಂಡಿರುವ ಕಳ್ಳನ ರೀತಿಯದಾಗಿದೆ. ಅವನ ಬೂಟುಗಳು ಪರದೆಯ ಕೆಳಗೆ ಕಾಣುತ್ತಿರುವಂತೆ ಬೇರೆ ಬೇರೆ ಕಡೆಗಳಲ್ಲಿ ಸಿಗುವ ಅಂಕಿ ಅಂಶಗಳು ಸತ್ಯವನ್ನು ಹೊರಗೆಡಹುತ್ತಿವೆ. ಈ ವಿವಿಧ ಸ್ಥಳಗಳೆಂಬುದು ಯಾವುದೋ ದೂರದ ಮೂಲಗಳಲ್ಲ, ಸರಕಾರದ ವಾರ್ಷಿಕ ಆರ್ಥಿಕ ಸರ್ವೇಯಲ್ಲಿ ಪ್ರಮುಖವಾದ ಕೋಷ್ಟಕಗಳಲ್ಲಿ ಪ್ರಕಟವಾಗಿರುವಂತವುಗಳೇ.

ನಿರುದ್ಯೋಗದ ವಿಷಯ ಬಹಳ ನಾಜೂಕಿನದ್ದು, ಅದೂ ಭಾರತದಲ್ಲಿ. ಆದ್ದರಿಂದ ಈ ಬಗ್ಗೆ ಎಚ್ಚರವಹಿಸಬೇಕು. ಇಲ್ಲಿರುವುದು ಉದ್ಯೋಗಿ ಮತ್ತು ನಿರುದ್ಯೋಗಿ ಎಂಬ ಸರಳ ವ್ಯತ್ಯಾಸವಲ್ಲ. ಇದು ವಾಸ್ತವವಾಗಿ, ಅರೆ ಉದ್ಯೋಗ, ಕೆಲವು ಗಂಟೆಗಳ ಉದ್ಯೋಗ, ತಾತ್ಕಾಲಿಕ ಉದ್ಯೋಗ, ಹಂಗಾಮಿ ಉದ್ಯೋಗ ಇವೆಲ್ಲದರ ಮಿಶ್ರಣವಾಗಿರುತ್ತದೆ. ಕೆಲವಷ್ಟೇ ಜನರಿಗೆ ಮಾತ್ರ ಅವರ ಇಷ್ಟದಂತೆ ಪೂರ್ಣ ಪ್ರಮಾಣದ ಉದ್ಯೋಗ ಲಭಿಸಿರುತ್ತದೆ.

ಆದ್ದರಿಂದ ಉದ್ಯೋಗದ ಪ್ರಮಾಣ ಏರಿದೆಯೆಂದರೆ ಎಷ್ಟರ ಮಟ್ಟಿನ ಉದ್ಯೋಗ ಎಂದು ನೋಡಬೇಕಾಗಿದೆ. ಮತ್ತು ಇದು ತಿಳಿಯುವ ಒಂದು ವಿಧಾವೆಂದರೆ ನಿಜ ವರಮಾನದ ಹೆಚ್ಚಳ ಎಷ್ಟಾಗಿದೆ ಎಂಬುದನ್ನು ಪರಿಶೀಲಿಸುವುದು.

ಆರ್ಥಿಕ ತಜ್ಞರು ಈ ಹೆಚ್ಚಳವನ್ನು ಅಳೆಯಲು ಉದ್ಯೋಗ ವರಮಾನ ಎಂಬ ಪದವನ್ನು ಬಳಸುತ್ತಾರೆ. ನಿರುದ್ಯೋಗ ಎಂದರೆ ಒಟ್ಟು ದುಡಿಯುವ ಜನಗಳಲ್ಲಿ ಒಂದು ನಿರ್ದಿಷ್ಟ ಮಿತಿಗಿಂತ ಕಡಿಮೆ ವರಮಾನ ಪಡೆಯುವವರ ಅನುಪಾತ ಎಂದು ಕಾಣಬಹುದು. ನಿರುದ್ಯೋಗ ಕಡಿಮೆಯಾದಾಗ ಸುಮಾರಾಗಿ ಹೇಳುವುದಾದರೆ, ದುಡಿಯುವ ಜನವಿಭಾಗಗಳ ತಲಾ ವರಮಾನ ಹೆಚ್ಚಾಗಬೇಕಾಗುತ್ತದೆ. ಅದರಂತೆ ನಿರುದ್ಯೋಗ ಹೆಚ್ಚಾದಾಗ ದುಡಿಯುವ ವ್ಯಕ್ತಿಗಳ ತಲಾ ವರಮಾನ ಸಹಜವಾಗಿಯೇ ಕುಸಿಯುತ್ತದೆ. ಆದ್ದರಿಂದ ನಾವು ಉದ್ಯೋಗದ ಹಂತಗಳಿಗೂ ದುಡಿಯುವ ಜನರಿಗೂ ಮತ್ತು ಅವರ ತಲಾ ವರಮಾನಕ್ಕೂ ಸಂಬಂಧವಿರುವುದನ್ನು ಅಧಾರ ಸೂತ್ರವಾಗಿ ಪರಿಗಣಿಸಬಹುದು. ಮೋದಿ ಸರ್ಕಾರದ ಅವಧಿಯಲ್ಲಿ ದುಡಿಯುವ ಜನರ ನಿಜ ತಲಾ ವರಮಾನದ ಸ್ಥಿತಿ-ಗತಿಯೇನು ಎಂಬುದು ಈಗ ನಮ್ಮ ಮುಂದಿರುವ ಪ್ರಶ್ನೆ.

ದುಡಿಯುವ ಜನತೆಯ ತಲಾ ನಿಜ ವರಮಾನವನ್ನು ಅಳೆಯಲು ಸರಳವಾದ ಮಾರ್ಗವಿದೆ. ಜನರು ಯಾವಾಗ ಸ್ಥಿತಿವಂತರಾಗುತ್ತಾರೋ ಆಗ ಅವರು ಹೆಚ್ಚು ಹೆಚ್ಚು ವಿವಿಧ ಪ್ರಕಾರದ ವಸ್ತುಗಳನ್ನು ಕೊಳ್ಳುತ್ತಾರೆ. ಜನರು ಸ್ಥಿತಿವಂತರಾಗುವಾಗ ಹೆಚ್ಚಿನ ಬೇಡಿಕೆ ಪಡೆಯುವ ಸರಕುಗಳನ್ನು ಸಕಾರಾತ್ಮಕ ಹಿಗ್ಗುವಿಕೆ ಹೊಂದಿರುವ ಸರಕುಗಳು ಎನ್ನಲಾಗುತ್ತದೆ. ಕಾಳುಗಳು ಇಂತಹ ವಸ್ತುಗಳಲ್ಲಿ ಪ್ರಮುಖವಾದ್ದು. ವರಮಾನ ಹೆಚ್ಚಾದಾಗ ಇವುಗಳ ಬಳಕೆ ಹೆಚ್ಚಾಗುತ್ತದೆ, ಇದು ನೇರವಾಗಿ ಆಗಲಿಕ್ಕಿಲ್ಲ. ನಿಜ, ಬಡವರ ಮಟ್ಟಿಗೆ ಇದು ನೇರವಾಗಿಯೇ ಹೆಚ್ಚುತ್ತದೆ. ಆದರೆ ಸ್ಥಿತಿವಂತರಲ್ಲಿ ಕೂಡ ಪರೋಕ್ಷವಾಗಿ ಕಾಳುಗಳ ಬಳಕೆ ಸಂಸ್ಕರಿಸಿದ ಆಹಾರ ಪಧಾರ್ಥಗಳು ಮತ್ತು ಪ್ರಾಣಿ ಜನ್ಯ ವಸ್ತುಗಳ ರೂಪದಲ್ಲಿ ಹೆಚ್ಚುತ್ತದೆ.

ಸರ್ಕಾರದ ವಾರ್ಷಿಕ ಆರ್ಥಿಕ ಸರ್ವೇಕ್ಷಣೆಯಲ್ಲಿ ಪ್ರತಿ ವರ್ಷ ಲಭ್ಯವಿರುವ ಕಾಳುಗಳ ವಿವರ ಸಿಗುತ್ತದೆ. ಆದರೆ ಅದರ ಬಳಕೆಯ ಒಟ್ಟು ವಿವರ ಲಭ್ಯವಿರುವುದಿಲ್ಲ. ಆದರೆ ನಾವು ಲಭ್ಯತೆ ಮತ್ತು ಬಳಕೆ ಜತೆ-ಜತೆಯಲ್ಲೇ ಸಾಗುತ್ತವೆ ಎಂದು ಭಾವಿಸಬಹುದು. ಆರ್ಥಿಕ ಸರ್ವೇಕ್ಷಣೆಯ ಜನಸಂಖ್ಯೆಯ ಅಂದಾಜು ಖಚಿತವಾಗಿರುವುದಿಲ್ಲ, ಜನಗಣತಿ ನಡೆಯದ ವರ್ಷಗಳಲ್ಲಿ ಹಿಂದಿನ ಸಾಲಿನ ಸಂಖ್ಯೆಗಳಿಗೆ ಒಂದು ಖಚಿತವಾದ ಸಂಖ್ಯೆಯನ್ನು ಸೇರಿಸಲಾಗುತ್ತದೆ. ವಾಸ್ತವವಾಗಿ ಒಂದು ನಿರ್ದಿಷ್ಟ ಸಂಖ್ಯೆಯನ್ನಲ್ಲ, ಒಂದು ನಿರ್ದಿಷ್ಟ ಪ್ರಮಾಣವನ್ನು ಹಿಂದಿನ ವರ್ಷದ ಜನಸಂಖ್ಯೆಗೆ ಸೇರಿಸಬೇಕು. ನಾವು ಇಲ್ಲಿ ಈ ರೀತಿಯ ಹೊಂದಾಣಿಕೆ ಮಾಡಿಕೊಂಡು ಒಟ್ಟು ಜನಸಂಖ್ಯೆಯ ಕಾಳುಗಳ ತಲಾ ಲಭ್ಯತೆಯನ್ನು ಆರ್ಥಿಕ ಸರ್ವೇಯ ಅಂಕಿಅಂಶಗಳನ್ನು ಆಧಾರವಿಟ್ಟುಕೊಂಡು ಲೆಕ್ಕ ಹಾಕಬಹುದು.

ಹೀಗೆ ಲೆಕ್ಕ ಹಾಕಿದಾಗ, ಮೋದಿ ಸರ್ಕಾರದ ಅವಧಿಯ ಪ್ರತಿ ವರ್ಷದಲ್ಲೂ ಕಾಳುಗಳ ತಲಾ ಲಭ್ಯತೆ ಸ್ಪಷ್ಟವಾಗಿ ದೇಶದಲ್ಲಿ 1991 ರಲ್ಲಿ ನವ-ಉದಾರವಾದಿ ಆರ್ಥಿಕ ಧೋsರಣೆಗಳನ್ನು ಆರಂಭಿಸಿದಾಗ ಇದ್ದುದಕ್ಕಿಂತ ಕಡಿಮೆಯಾಗಿದೆ. ಇದು ಮೋದಿಯವರ ಹಿಂದಿನ ಅವಧಿಗೂ ಸಲುತ್ತದೆ. ಆದರೆ ನಾವು ನೆನಪಿಸಿಕೊಳ್ಳಬೇಕಿರುವುದು ಮೋದಿಯವರು ನಿರುದ್ಯೋಗದ ಪ್ರಮಾಣದ ಇಳಿಕೆಯ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದರು ಎಂಬುದನ್ನು. ನಿರುದ್ಯೋಗ ಈ ಐದು ವರ್ಷಗಳಲ್ಲಿ 1991ರ ಮೊದಲು ಇದ್ದುದಕ್ಕೆ ಹೋಲಿಸಿದರೆ, ಇಳಿಯುವ ಬದಲು ತುಂಬಾ ಹೆಚ್ಚಿದೆ.

ಕತೆ ಇಲ್ಲಿಗೆ ಮುಗಿಯುವುದಿಲ್ಲ. ನಿರುದ್ಯೋಗದ ಪ್ರಮಾಣ ಮೋದಿ ಸರ್ಕಾರದ ಅವಧಿಯಲ್ಲಿ ಪ್ರತಿ ಹಿಂದಿನ ಅವಧಿಗಿಂತ ಹೆಚ್ಚುತ್ತ ಬಂದಿದೆ. 2014ಕ್ಕೆ ಹೋಲಿಸಿದಾಗಲೂ ಕಾಳುಗಳ ತಲಾ ಲಭ್ಯತೆ ಇಳಿಯುತ್ತಲೇ ಬಂದಿದೆ. ಪರಿಣಾಮವಾಗಿ ಉದ್ಯೋಗ ವರಮಾನ ಪ್ರತಿ ವರ್ಷವೂ ಕಡಿಮೆಯಾಗುತ್ತಲೇ ಬಂದಿದೆ.

ಈಗ ಲಭ್ಯವಿರುವ ತಾತ್ಕಾಲಿಕ ಅಂಕಿಅಂಶಗಳಂತೆ 2017 ರಲ್ಲಿ ಕಾಳುಗಳ ಲಭ್ಯತೆ ಒಟ್ಟು ಜನಸಂಖ್ಯೆಗೆ 2014 ರಲ್ಲಿ ಇದ್ದುದಕ್ಕೆ ಸರಿಸಮವಾಗಿದದ್ದರೂ ನಮ್ಮ ದೃಷ್ಟಿಯಿರುವುದು ದುಡಿಯುವ ಜನರಿಗೆ ಲಭ್ಯತೆಯ ಪ್ರಮಾಣದ ಮೇಲೆ, ಏಕೆಂದರೆ ಅದು ಉದ್ಯೋಗ ವರಮಾನದ ಮಾಪನವಾಗಿರುತ್ತದೆ. ದೇಶದಲ್ಲಿ ವರಮಾನದ ಅಸಮಾನತೆ ವೇಗವಾಗಿ ಹೆಚ್ಚುತ್ತಿರುವಾಗ ಜನಸಂಖ್ಯೆಯ ಉಳ್ಳವರ ಭಾಗದವರು ಹೆಚ್ಚು ಬೇಳೆಕಾಳುಗಳನ್ನು ನೇರವಾಗಿ ಮತ್ತು ಪರೋಕ್ಷವಾಗಿ ತಲಾ ವರಮಾನ ಹೆಚ್ಚಾಗದಂತೆ ಬಳಸುತ್ತಾರೆ. ಅಂದರೆ ಕಾಳುಗಳ ತಲಾ ಲಭ್ಯತೆ ದುಡಿಯುವ ಜನ ವಿಭಾಗಗಳಿಗೆ 2017 ರಲ್ಲಿ 2014 ಕ್ಕಿಂತ ಕಡಿಮೆಯಾಗಿದೆ ಎಂದೇ ಅರ್ಥ. ಮೋದಿ ಸರ್ಕಾರದ ಅವಧಿಯ ಪ್ರತಿ ವರ್ಷದಲ್ಲೂ ಬೇಳೆಕಾಳುಗಳ ಲಭ್ಯತೆ ದುಡಿಯುವ ಜನತೆಗೆ 2014ನೇ ಸಾಲಿನ ಮಟ್ಟಕ್ಕಿಂತ ಕಡಿಮೆಯಾಗಿರುವುದು ಕಂಡುಬರುತ್ತದೆ. ಸಂಕ್ಷಿಪ್ರವಾಗಿ ಹೇಳುವುದಾದರೆ, ವರಮಾನ ನಿರುದ್ಯೋಗವನ್ನು ನವ-ಉದಾರವಾದಿ ಧೋರಣೆಗಳ ಅವಧಿಯ ಹಿಂದಿನ ಮಟ್ಟಕ್ಕೆ ಇಳಿಸುವ ಬದಲು, ಮೋದಿಯವರ ಆಳ್ವಿಕೆಯಲ್ಲಿ ನಿಜವಾಗಿ ಕುಸಿಯುತ್ತಿರುವ ವರಮಾನ ನಿರುದ್ಯೋಗವೇ ಕಾಣಬಂದಿದೆ.

ತಲಾ ಕಾಳು ಲಭ್ಯತೆಯ ಕುಸಿತದ ಅವಧಿ ಇನ್ನೂ ಹಲವು ಪರಿಣಾಮ ಸೃಷ್ಟಿಸಿದೆ. ಬಡತನವನ್ನು ಭಾರತದಲ್ಲಿ ಪರಿಗಣಿಸುವುದು ಆಹಾರದ ಕ್ಯಾಲೋರಿ ಸೇವನೆ ಪ್ರಕಾರವಾಗಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ತಲಾ ೨೨೦೦ ಕ್ಯಾಲೋರಿ ಮತ್ತು ನಗರ ಪ್ರದೇಶಗಳಿಗೆ ತಲಾ 2100 ಕ್ಯಾಲೋರಿ ನಿಗದಿ ಪಡಿಸಿರುತ್ತಾರೆ. ಸಾಮಾನ್ಯ ಜನರಿಗೆ ಈ ಕ್ಯಾಲೋರಿಗಳು ಲಭ್ಯವಾಗುವುದು ಕಾಳುಗಳ ಮುಖಾಂತರ (ಪ್ರಾಣಿಜನ್ಯ ಪ್ರೊಟೀನ್ ಎಲ್ಲರಿಗೂ ಲಭ್ಯವಾಗದ ಕಾರಣ). ಕಾಳುಗಳ ಲಭ್ಯತೆಯ ಕುಸಿತದಿಂದ 2014 ಗೆ ಹೋಲಿಸಿದಾಗ ಉಳ್ಳವರಿಗೆ ಯಾವ ರೀತಿಯ ಕುಸಿತವೂ ಅನುಭವಕ್ಕೆ ಬಂದಿರುವುದಿಲ್ಲ ಬದಲಿಗೆ ಅವರ ಬಳಕೆ ಹೆಚ್ಚೇ ಆಗಿರುತ್ತದೆ ಎಂಬುದನ್ನು ಮತ್ತೊಮ್ಮೆ ಗಮನದಲ್ಲಿಟ್ಟುಕೊಂಡರೆ, ಬಡತನದ ಮಟ್ಟವೂ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಹೆಚ್ಚಾಗಿದೆ ಎಂದೇ ಕಂಡು ಬರುತ್ತದೆ.

ಈ ಕುಸಿತದ ತೀವ್ರತೆಯನ್ನು ತಿಳಿಯಬೇಕಾದರೆ, ಭಾರತದಲ್ಲಿ ಈ ಮೊದಲೂ ಕೂಡ ಕಾಳುಗಳ ತಲಾ ಲಭ್ಯತೆ ಚೈನಾ ದೇಶದಲ್ಲಿನ ತಲಾ ಲಭ್ಯತೆಯ ಅರ್ಧದಷ್ಟು ಮಾತ್ರ ಎಂಬುದನ್ನು ಗಮನಿಸಬೇಕು. ಎನ್‌ಎಸ್‌ಎಸ್ ಕಾಲ್ಯೋರಿ ಮತ್ತು ಪ್ರೊಟೀನ್ ಸೇವನೆಯ ಮಾಹಿತಿಯನ್ನು ನಿಯಮಿತವಾಗಿ ಪ್ರಕಟಿಸುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅದನ್ನು ನಿಲ್ಲಿಸಲಾಗಿದೆ. ಈ ರೀತಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡದಿರುವುದೇ ಒಂದು ವಿಶಿಷ್ಟ ಸರ್ವಾಧಿಕಾರಶಾಹಿಯ ಲಕ್ಷಣ.

ಇದು ಜನರನ್ನು ತಪ್ಪುಹಾದಿಗೆ ಎಳೆಯುವುದೇ ಅಲ್ಲದೆ ಪ್ರಜಾತಂತ್ರದಲ್ಲಿ ಜನತೆಯೇ ಸರ್ವೋಚ್ಚರಾಗಿದ್ದು, ಅವರಿಗೆ ಮಾಹಿತಿಯ ಹಕ್ಕು ಇದೆ ಎಂಬುದನ್ನು ಕೂಡ ನಿರಾಕರಿಸುತ್ತದೆ. ಸಂವಿಧಾನದ ಪ್ರಕಾರ ಸರಕಾರ ಇರುವುದು ಜನತೆಯ ಸೇವೆಗಾಗಿ, ಆದ್ದರಿಂದ ಅವರಿಂದ ಯಾವ ಮಾಹಿತಿಯನ್ನೂ ತಡೆದಿಡುವಂತಿಲ್ಲ. ಇದು ಸರ್ಕಾರದ ಅಸಾಧಾರಣ ಮೂರ್ಖತೆಯ ಕೃತ್ಯವೂ ಆಗಿದೆ. ಏಕೆಂದರೆ, ನಿಜವಾಗಿಯೂ ಬಡತನ ಮತ್ತು ನಿರುದ್ಯೋಗವನ್ನು ಅನುಭವಿಸುತ್ತಿರುವ ಜನತೆಗೆ ಅವರ ಪರಿಸ್ಥಿತಿಗಳಿಗೆ ಸಂಬಂಧಪಟ್ಟ ಅಂಕಿ-ಅಂಶಗಳನ್ನು ತಡೆ ಹಿಡಿಯುವ ಮೂಲಕ ತಮಗೆ ಬಡತನ, ನಿರುದ್ಯೋಗ ಇಲ್ಲ ಎಂದು ಅವರು ಯೋಚಿಸುವಂತೆ ಮಾಡಬಹುದು ಎಂದು ಈ ಸರಕಾರ ನಂಬಿದೆ!

ಪ್ರೊ. ಪ್ರಭಾತ್ಪಟ್ನಾಯಕ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version