ದಿನದ ಸುದ್ದಿ
ಇಂದಿನಿಂದ ಎರಡು ದಿನಗಳ ರಾಜ್ಯ ಪ್ರವಾಸದಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್; ನಾಳೆ ರಾಷ್ಟ್ರೀಯ ಪಠ್ಯಕ್ರಮ ದಾಖಲೆ ಬಿಡುಗಡೆ
ಸುದ್ದಿದಿನ, ಬೆಂಗಳೂರು : ಕೇಂದ್ರ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಧಮೇಂದ್ರ ಪ್ರಧಾನ್ ಇಂದಿನಿಂದ ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರ ಮತ್ತು ವಿಧಾನಸೌಧದಲ್ಲಿಂದು ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದ ವಿವಿಧ ಸಭೆಗಳಲ್ಲಿ ಪಾಲ್ಗೊಂಡರು. ನಾಳೆ ಅವರು ಭಾರತೀಯ ವಿಜ್ಞಾನ ಮಂದಿರದಲ್ಲಿ ಆಯೋಜಿಸಿರುವ ಸಾರ್ವಜನಿಕ ಸಮಾರಂಭದಲ್ಲಿ ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟಿನ ಆದೇಶದ ದಾಖಲೆಗಳನ್ನು ಬಿಡುಗಡೆ ಮಾಡಲಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ 2020ರ ಶಿಫಾರಸ್ಸಿನ ಅನ್ವಯ ಶಾಲಾ ಶಿಕ್ಷಣ, ಆರಂಭಿಕ ಹಂತದಲ್ಲಿ ಮಕ್ಕಳ ಆರೈಕೆ ಮತ್ತು ಶಿಕ್ಷಣ, ಶಿಕ್ಷಕರ ಶಿಕ್ಷಣ ಮತ್ತು ಮಕ್ಕಳ ಶಿಕ್ಷಣ ವಲಯದಲ್ಲಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ರೂಪಿಸಲಾಗಿದೆ.
ಈ ಕಾರ್ಯ್ರಕಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟು ರೂಪಿಸುವ ರಾಷ್ಟ್ರೀಯ ಪರಿಶೀಲನಾ ಸಮಿತಿಯ ಅಧ್ಯಕ್ಷ ಡಾ.ಕೆ. ಕಸ್ತೂರಿ ರಂಗನ್ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ನಾಲ್ಕು ಪಠ್ಯಕ್ರಮದ ಚೌಕಟ್ಟುಗಳನ್ನು ಒದಗಿಸಲು ಎನ್.ಇ.ಪಿ ಆಧಾರದ ಮೇಲೆ 25 ವಿಷಯಗಳನ್ನು ಮೂರು ವರ್ಗಗಳಡಿ ಗುರುತಿಸಲಾಗಿದೆ. ಪಠ್ಯಕ್ರಮ ಮತ್ತು ಶಿಕ್ಷಣ ಶಾಸ್ತ್ರ, ಸಂಕಲನದ ತಂತ್ರಗಳು, ಎನ್.ಇ.ಪಿಯ ಇತರ ಪ್ರಮುಖ ಕ್ಷೇತ್ರಗಳು, ವ್ಯವಸ್ಥಿತ ಬದಲಾವಣೆಗಳು, ಸುಧಾರಣೆಗಳ ಮೇಲೆ ಇವುಗಳನ್ನು ರೂಪಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243