ದಿನದ ಸುದ್ದಿ
ಮಂಗಳೂರು ವಿವಿ | ಕೇರಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆ
ಸುದ್ದಿದಿನ, ಮಂಗಳೂರು : ಕೇರಳದಲ್ಲಿ ಕೋವಿಡ್ ಪ್ರಮಾಣ ಏರುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆ.1ರಿಂದ 7ರ ತನಕ ಒಂದು ವಾರದ ಮಟ್ಟಿಗೆ ಕಾಸರಗೋಡಿಗೆ ಸಂಚರಿಸುವ ಖಾಸಗಿ ಹಾಗೂ ಸರಕಾರಿ ಬಸ್‍ಗಳ ಸಂಚಾರ ಸ್ಥಗಿತವಾಗಲಿದ್ದು, ಈ ಸಮಯದಲ್ಲಿ ಮಂಗಳೂರು ವಿವಿಯ ಪರೀಕ್ಷೆಗಳು ಸಾಗಬೇಕಿರುವುದರಿಂದ ಅಲ್ಲಿನ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆ ಮಾಡುವ ಕುರಿತು ಮಂಗಳೂರು ವಿವಿ ಚಿಂತನೆ ನಡೆಸಿದೆ.
ಮಂಗಳೂರು ವಿವಿಯಲ್ಲಿ ಆ.2ರಿಂದ ಆ.14ರ ವರೆಗೆ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಬಾಕಿ ಉಳಿದಿರುವ ಪರೀಕ್ಷೆಗಳು ಸಾಗಲಿದ್ದು, ಆ.16ರ ಬಳಿಕ ಭೌತಿಕ ತರಗತಿಗಳನ್ನು ಮಾಡುವ ಕುರಿತು ಯೋಜನೆ ರೂಪಿಸಲಾಗಿತ್ತು. ಆದರೆ ಕೇರಳದಿಂದ ಮುಖ್ಯವಾಗಿ ಕಾಸರಗೋಡು, ಮಂಜೇಶ್ವರ ಸೇರಿದಂತೆ ಹಲವು ಭಾಗಗಳಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮಂಗಳೂರಿನ ನಾನಾ ಕೇಂದ್ರಗಳಿಗೆ ಬರಬೇಕಾಗಿದ್ದು, ಈ ಬಸ್ ಸಂಚಾರ ಸ್ಥಗಿತದಿಂದ ಕೇರಳದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಅವಕಾಶ ಎಲ್ಲದರೂ ತಪ್ಪಿದರೆ ಅವರಿಗೆ ಮರು ಪರೀಕ್ಷೆ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ವಿವಿಯ ಮೂಲಗಳು ಮಾಹಿತಿ ನೀಡಿದೆ.
ಈ ಕುರಿತು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಮಾಹಿತಿ ನೀಡಿ, ಈ ಮೊದಲೇ ಬಸ್ ಸಂಚಾರದ ಕುರಿತು ಮಾಹಿತಿ ಸಿಕ್ಕಿದ್ದರೆ ಕೇರಳದ ವಿವಿಯಲ್ಲಿಯೇ ಕೇರಳದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಅವಕಾಶದ ಕುರಿತು ಹೇಳಬಹುದಿತ್ತು. ಆದರೆ ಈಗ ಪರೀಕ್ಷೆಗೆ ಒಂದೇ ದಿನ ಬಾಕಿ ಉಳಿದಿದೆ. ಈ ಕಾರಣದಿಂದ ಅಲ್ಲಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಅವಕಾಶ ತಪ್ಪಿದರೆ ಅವರಿಗೆ ಮತ್ತೊಂದು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್. ಧರ್ಮ ಅವರು ಮಾಹಿತಿ ನೀಡಿ, ಕೇರಳದ ವಿದ್ಯಾರ್ಥಿಗಳು ದಕದ ಕಾಲೇಜಿನಲ್ಲಿ ಕಲಿಯುತ್ತಿದ್ದರೆ ಅವರಿಗೆ ಹಾಸ್ಟೆಲ್‍ನಲ್ಲಿ ವ್ಯವಸ್ಥೆ ಮಾಡುವಂತೆ ಈಗಾಗಲೇ ಕಾಲೇಜಿನ ಪ್ರಿನ್ಸಿಪಾಲರಿಗೆ ತಿಳಿಸಲಾಗಿತ್ತು. ಎಲ್ಲದರೂ ಅವರು ಪರೀಕ್ಷೆ ಬರೆಯುವ ಅವಕಾಶ ತಪ್ಪಿದರೆ ಆ.16ರೊಳಗೆ ಅವರಿಗೆ ಮತ್ತೊಂದು ಅವಕಾಶವನ್ನು ನೀಡಲಾಗುತ್ತದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಆರ್‍ಟಿಪಿಸಿಆರ್ ಪರೀಕ್ಷೆಯನ್ನು ಮಾಡಿಕೊಂಡೆ ಹಾಜರಾಗಬೇಕು ಎಂದು ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243