ದಿನದ ಸುದ್ದಿ
ಪ್ರಸಾದಕ್ಕೆಂದು ಬಂದ ದಲಿತ ಹುಡುಗನಿಗೆ ಬಕೆಟ್‍ನಿಂದ ಹಲ್ಲೆ
ಸುದ್ದಿದಿನ ಡೆಸ್ಕ್: ದೇವರ ಪ್ರಸಾದಕ್ಕೆಂದು ಪಂಕ್ತಿಯಲ್ಲಿ ಕುಳಿತ ದಲಿತ ಹುಡುಗನೊಬ್ಬನಿಗೆ ಮೇಲ್ಜಾತಿಯವರು ಬಕೆಟ್‍ನಲ್ಲಿ ಹೊಡೆದು, ಆತ ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಹರಿದಾಸನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಭೂತಪ್ಪನ ದೇವರ ಪರಾ ನಡೆಯುವಾಗ ಪ್ರಸಾದ ತಿನ್ನಲೆಂದು ಪಂಕ್ತಿಯಲ್ಲಿ ಕುಳಿತ ದಲಿತ ಹುಡುಗರನ್ನು ಊಟದ ಮಧ್ಯದಲ್ಲೇ ಎಬ್ಬಿಸಲು ಮೇಲ್ಜಾತಿಯ ತಂಡವೊಂದು ಪ್ರಯತ್ನಿಸಿತು ಆದರೆ, ಆ ಹುಡುಗರು ನಾವ್ಯಾಕೆ ಎದ್ದೇಳಬೇಕು? ನಾವೂ ಕೂಡ ಮನುಷ್ಯರೇ? ದೇವರ ಪ್ರಸಾದದಲ್ಲಿ ಯಾಕೀ ತಾರತಮ್ಯ ಎಂದು ಪ್ರಶ್ನಿಸಿದ್ದಕ್ಕೆ ಆ ಹುಡುಗರನ್ನು ಜಾತಿ ಹೆಸರಿನಿಂದ ಉಲ್ಲೇಖಿಸಿ ಬೈಯ್ಯಲಾಗಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ ಮೇಲ್ಜಾತಿಯ ಗುಂಪು ರುದ್ರ ತಿಮ್ಮಯ್ಯ ಎಂಬ ಹುಡುಗನಿಗೆ ಬಕೆಟ್‍ನಿಂದ ತಲೆಗೆ ಹೊಡೆದಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ.
ಆತನ ಸ್ನೇಹಿತರು ತಕ್ಷಣವೇ ಆಂಬುಲೆನ್ಸ್‍ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದು, ತಲೆ ಹಿಂಭಾಗಕ್ಕೆ ಪೆಟ್ಟು ಬಿದ್ದಿರುವ ಕಾರಣ ಆತನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಸಂಬಂಧ ತುರುವೇಕರೆ ಪೊಲೀಸ್ ಠಾಣೆಯಲ್ಲಿ ದೂರು ದಆಖಲಿಸಲಾಗಿದೆ. ನಂಜನಗೂಡಿನ ನಗರ್ಲೆ ಎಂ ವಿಜಯ ಕುಮಾರ್ ಎಂಬುವವರು ಈ ಕುರಿತ ಪೋಸ್ಟ್‍ವೊಂದನ್ನು ತಮ್ಮ ಫೇಸ್‍ಬುಕ್ ವಾಲ್‍ನಲ್ಲಿ ಪೋಸ್ಟ್ ಮಾಡಿದ್ದು, ಪೆಟ್ಟು ತಿಂದ ಹುಡುಗನ ಸ್ನೇಹಿತ ಬಿಕೆ ರವಿಚಂದ್ರ ಅವರು ವಿಡಿಯೊದಲ್ಲಿ ಮಾತನಾಡಿದ್ದಾರೆ.
ಭೂತಪ್ಪನ ದೇವರ ಪರದಲ್ಲಿ ಕಳೆದ ವರ್ಷವೂ ಇದೇ ರೀತಿ ಗಲಾಟೆಯಾಗಿತ್ತು. ದಲಿತ ಹುಡುಗರನ್ನು ಮೇಲ್ಜಾತಿಯವರು ಅಪಮಾನಿಸಿದ್ದರು. ದೇವರ ಮೇಲೆ ನಂಬಿಕೆ ಇಟ್ಟು ಕಳೆದ ವರ್ಷ ಅದ ಅಪಮಾನವನ್ನು ಬದಿಗಿಟ್ಟು ಪ್ರಸಾದಕ್ಕೆಂದು ಬಂದೆವು ಆದರೆ, ಅದು ಹಿಂಸಾ ರೂಪ ಪಡೆಯುತ್ತದೆ ಎಂದು ನಾವು ಎಣಿಸಿರಲಿಲ್ಲ.
ಜಾತಿ ಹೆಸರಿನಲ್ಲಿ ನಮ್ಮನ್ನು ಅವಾಚ್ಯವಾಗಿ ನಿಂದಿಸಿದರು. ಬಾಯಿಗೆ ಬಂದಂತೆ ಬೈದ ನಮ್ಮ ಮೇಲೆ ಹಲ್ಲೆ ಮಾಡಿದರು ಎಂದು ವಿಡಿಯೊದಲ್ಲಿ ರವಿಚಂದ್ರ ಅವರು ತಿಳಿಸಿದ್ದಾರೆ.