ಕ್ರೀಡೆ
ಇಂದಿನಿಂದ ‘ಯುಎಸ್ ಓಪನ್ ಗ್ರ್ಯಾಂಡ್ ಸ್ಲಾಮ್’
ಸುದ್ದಿದಿನ, ನ್ಯೂಯಾರ್ಕ್: ಸೋಮವಾರ ದಿಂದ ಇಲ್ಲಿನ ಬಿಲ್ಲಿ ಜೀನ್ ಕಿಂಗ್ ರಾಷ್ಟ್ರೀಯ ಟೆನಿಸ್ ಸೆಂಟರ್ ನಲ್ಲಿ ಈ ವರ್ಷಾಂತ್ಯದ ಗ್ರ್ಯಾಂಡ್ ಸ್ಲಾಮ್ ಯುಎಸ್ ಓಪನ್ ಟೆನಿಸ್ ಟೂರ್ನಿ ನಡೆಯಲಿದೆ.
ಪುರುಷರ ವಿಭಾಗದಲ್ಲಿ ಸರ್ಬಿಯಾದ ನೊವಾಕ್ ಜೋಕೊವಿಚ್, ಕ್ಲೇ ಕೋರ್ಟ್ ಕಿಂಗ್ ಸ್ಪೇನ್ ನ ರಾಫೆಲ್ ನಡಾಲ್, ಸ್ವಿಜರ್ ಲೆಂಡ್ ನ ರೋಜರ್ ಫೆಡರರ್ ಮತ್ತು ಬ್ರಿಟನ್ನಿನ ಆ್ಯಂಡಿ ಮರ್ರೆ ಪ್ರಮುಖ ಆಟಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಸ್ಪೇನ್ ಗೂಳಿ ರಾಫಾ-ಜೋಕೊಗೆ ನೇರ ಫೈಟ್
ಕ್ಲೇ ಕೋರ್ಟ್ ಕಿಂಗ್ ಎನಿಸಿರುವ ರಾಫೆಲ್ ನಡಾಲ್ ಮತ್ತು ಸರ್ಬಿಯಾದ ನೊವಾಕ್ ಜೋಕೊವಿಚ್ ಗೆ ಯುಎಸ್ ಓಪನ್‌ನಲ್ಲಿ ನೇರ ಹಣಾಹಣಿ ಏರ್ಪಡುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ.
ಫ್ರೆಂಚ್ ಓಪನ್ ಗೆದ್ದಿದ್ದ ನಡಾಲ್ ಈಗ ಯುಎಸ್ ಓಪನ್‌ನಲ್ಲಿ ಅದೇ ಪ್ರದರ್ಶನದ ಉತ್ಸಾಹಲ್ಲಿದ್ದಾರೆ. ಗಾಯದಿಂದ ಚೇತರಿಸಿಕೊಂಡ ಬಳಿಕ ಪ್ರಭಾವಿ ಪ್ರದರ್ಶನ ದಿಂದ ಗಮನ ಸೆಳೆಯುತ್ತಿರುವ ಜೋಕೊ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿದ್ದಾರೆ. ಇತ್ತೀಚೆಗಷ್ಟೇ ಜೋಕೊ, ಸಿನ್ಸಿನಾಟಿ ಟೆನಿಸ್ ಟೂರ್ನಿಯ ಫೈನಲ್ ನಲ್ಲಿ ಸ್ವಿಸ್ ನ ಫೆಡರರ್ ಎದುರು ಗೆಲುವು ಸಾಧಿಸಿ ಟ್ರೋಫಿ ಜಯಿಸಿದ್ದರು. ಅಲ್ಲದೇ ವಿಂಬಲ್ಡನ್ ಕೂಡ ಜೋಕೊ ಮುಡಿಗೇರಿಸಿಕೊಂಡಿದ್ದರು. ಇದೀಗ ಯುಎಸ್ ಓಪನ್ ಜಯಿಸುವ ಮೂಲಕ ಮತ್ತೆ ಅಗ್ರ ಶ್ರೇಯಾಂಕ ಪಡೆಯುವ ಇರಾದೆ ಜೋಕೊ ಅವರದ್ದಾಗಿದೆ.
ಪ್ರಮುಖ ಟೂರ್ನಿಯ ನಿರ್ಣಾಯಕ ಸುತ್ತಿನಲ್ಲಿ ಸೋಲುತ್ತಿರುವ ಫೆಡರರ್ ಗೆ ಟೆನಿಸ್ ನಿಂದ ನಿವೃತ್ತಿ ಪಡೆಯುವಂತೆ ಅಭಿಮಾನಿಗಳು ಸಲಹೆ ನೀಡಿದ್ದಾರೆ. ಆದರೆ ಫೆಡರರ್ ಯುಎಸ್ ಓಪನ್ ಗೆಲ್ಲುವ ಮೂಲಕ ಟೀಕಾಕಾರರಿಗೆ ತಕ್ಕ ಉತ್ತರ ನೀಡಲು ಕಾಯುತ್ತಿದ್ದಾರೆ.
ಕಳೆದ ಜನವರಿಯಿಂದ ಇಲ್ಲಿಯವರೆಗೂ ಟೆನಿಸ್ ನಿಂದ ದೂರ ಉಳಿದಿರುವ ಆ್ಯಂಡಿ ಮರ್ರೆಗೆ ಇದು ಈ ವರ್ಷದ ಮೊದಲ ಗ್ರ್ಯಾಂಡ್ ಸ್ಲಾಮ್ ಆಗಿದೆ. ಹಾಗೆ ಕಳೆದ 8 ತಿಂಗಳಿಂದ ಗಾಯದ ಸಮಸ್ಯೆಯಿಂದ ದೂರ ಉಳಿದಿದ್ದ ಸ್ಟಾನಿಸ್ಲಸ್ ವಾವ್ರಿಂಕಾ ಕೂಡಾ ಈ ಬಾರಿಯ ಯುಎಸ್ ಓಪನ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನೂ ಮಹಿಳಾ ವಿಭಾಗದಲ್ಲಿ ಸೆರೆನಾ ವಿಲಿಯಮ್ಸ್, ಸಿಮೊನಾ ಹಾಲೆಪ್, ಮರಿಯಾ ಶರಪೋವಾ, ಕರೋಲಿನಾ ವೋಜ್ನಿಯಾಕಿ, ಪ್ಲಿಸ್ಕೋವಾ, ಹಾಲಿ ಚಾಂಪಿಯನ್ ಅಮೆರಿಕದ ಸ್ಲೋನೆ ಸ್ಟೆಫನ್ಸ್ ಪ್ರಶಸ್ತಿ ರೇಸ್ ನಲ್ಲಿ ದ್ದಾರೆ.
ಈ ಬಾರಿ ಎಲ್ಲರ ಕಣ್ಣು ಸೆರೆನಾ ಮೇಲೆ ನೆಟ್ಟಿದೆ. ಏಕೆಂದರೆ ಸೆರೆನಾ ತಾಯಿಯಾದ ಬಳಿಕ 2 ನೇ ಗ್ರ್ಯಾಂಡ್ ಸ್ಲಾಮ್ ನಲ್ಲಿ ಆಡುತ್ತಿದ್ದಾರೆ. ಅಲ್ಲದೇ 6 ಬಾರಿ ಯುಎಸ್ ಓಪನ್ ಗೆದ್ದಿರುವ ಸೆರೆನಾ 7 ನೇ ಟ್ರೋಫಿ ಮೇಲೆ ಕಣ್ಣಿಟ್ಟಿದ್ದಾರೆ. ಈ ಅಂಗಣದಲ್ಲಿ ಸೆರೆನಾ ಸಾಕಷ್ಟು ದಾಖಲೆಗಳನ್ನು ನಿರ್ಮಿಸಿದ್ದಾರೆ. 23 ಗ್ರ್ಯಾಂಡ್ ಸ್ಲಾಮ್ ಗೆದ್ದಿರುವ ಸೆರೆನಾ ಈ ಬಾರಿ ಯುಎಸ್ ಓಪನ್ ಚಾಂಪಿಯನ್ ಆದರೆ, ದಾಖಲೆ ಗ್ರ್ಯಾಂಡ್ ಸ್ಲಾಮ್ ಗೆದ್ದ ಆಟಗಾರ್ತಿ ಎನಿಸಲಿದ್ದಾರೆ.