ದಿನದ ಸುದ್ದಿ
ಕಾವೇರಿಯಲ್ಲಿ ವಾಜಪೇಯಿ ಅಸ್ತಿ ವಿಸರ್ಜನೆ
ಸುದ್ದಿದಿನ ಡೆಸ್ಕ್ |ಭಾರತದ ಮಾಜಿ ಪ್ರಧಾನಿ, ಅಜಾತಶತ್ರು ‘ಭಾರತರತ್ನ’ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ ಬಳಿಯ ಕಾವೇರಿ ನದಿಯಲ್ಲಿ ಗುರುವಾರ ವಿಸರ್ಜನೆ ಮಾಡಲಾಯಿತು.
ರಾಜ್ಯದ ಅಷ್ಟ ನದಿಗಳಲ್ಲಿ ವಿಸರ್ಜನೆ ಸಲುವಾಗಿ ವಾಜಪೇಯಿ ಅವರ ಅಸ್ಥಿ ಕಲಶವನ್ನು ಬುಧವಾರವೇ ಬೆಂಗಳೂರಿಗೆ ತರಲಾಗಿತ್ತು. ಅದರಂತೆ ಅಷ್ಟ ನದಿಗಳ ಪೈಕಿ ಕಾವೇರಿ ನದಿಯಲ್ಲಿ ಅಸ್ತಿ ವಿಸರ್ಜನೆ ಸಲುವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ತಂಡವನ್ನು ರಚಿಸಲಾಗಿತ್ತು. ಅದರಂತೆ ಗುರುವಾರ ಮಧ್ಯಾಹ್ನ 2ಕ್ಕೆ ಪ್ರಸಿದ್ಧ ಜ್ಯೋತಿಷಿ, ವೇದಬ್ರಹ್ಮ ಡಾ.ಶ್ರೀಭಾನುಪ್ರಕಾಶಶರ್ಮ ಮಾರ್ಗದರ್ಶನದಲ್ಲಿ ವಾಜಪೇಯಿ ಅವರ ಅಸ್ತಿಯನ್ನು ಕಾವೇರಿನದಿಯಲ್ಲಿ ವಿಸರ್ಜಿಸಲಾಯಿತು.
ಇದಕ್ಕೂ ಮೊದಲು ದಡದಲ್ಲಿ ಕಾವೇರಿ ನದಿ ದಡದಲ್ಲಿ ಡಾ.ಶ್ರೀಭಾನುಪ್ರಕಾಶಶರ್ಮ ನೇತೃತ್ವದ 20 ಜನರ ಋತ್ವಿಕರ ತಂಡವು ಅಸ್ತಿವಿಸರ್ಜನೆಯ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿತು. ಅಸ್ತಿನಾರಾಯಣ ಪೂಜೆ, ಪಂಚಗವ್ಯ, ಪಂಚಾಮೃತ ಅಭಿಷೇಕ, ಧೂಪ-ದೀಪ, ನೈವೇದ್ಯ, ಮಹಾಮಂಗಳಾರತಿ ನೆರವೇರಿಸಿ ಫಲಸಮರ್ಪಣೆ ಮಾಡಲಾಯಿತು. ಕೇಂದ್ರ ಸಚಿವ ಅನಂತಕುಮಾರ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಸ್ತಿ ವಿರ್ಜನೆ ಸಂಬಂಧ ಧಾರ್ಮಿಕ ವಿಧಿವಿಧಾನಗಳ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಬಳಿಕ ಅಸ್ತಿ ಕಳಶದಲ್ಲಿದ್ದ ವಾಜಪಾಯಿ ಅವರ ಅಸ್ತಿಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾವೇರಿ ನದಿಗಿಳಿದು ವಿಸರ್ಜನೆ ಮಾಡಿದರು. ನೂರಾರು ಮಂದಿ ಈ ಸಂದರ್ಭದಲ್ಲಿ ಕಾವೇರಿ ನದಿ ದಡದಲ್ಲಿ ನೆರೆದು, ಅಗಲಿದ ನೆಚ್ಚಿನ ನಾಯಕರಿಗೆ ಶ್ರದ್ಧಾಂಜಲಿ ಅರ್ಪಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿದರು. ಅಸ್ತಿ ವಿಸರ್ಜನೆ ಸ್ಥಳದಲ್ಲಿ ವಾಜಪೇಯಿ ಅವರ ಭಾವಚಿತ್ರವಿದ್ದ ಪ್ಲೆಕ್ಸ್‌ಗೆ ಪೂಜೆಯನ್ನೂ ನೆರವೇರಿಸಲಾಯಿತು.
ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಸಂಸದರಾದ ಪ್ರತಾಪ್‌ಸಿಂಹ, ಶೋಭಾ ಕರಂದ್ಲಾಜೆ, ಮಾಜಿ ಸಚಿವ ಬಿ.ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಶಾಸಕ ಎಲ್.ನಾಗೇಂದ್ರ, ಮಾಜಿ ಸದಸ್ಯರಾದ ಗೋ.ಮಧುಸೂಧನ್, ಅಶ್ವತ್ಥನಾರಾಯಣಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ನಾಗಣ್ಣಗೌಡ, ತಾಲೂಕು ಅಧ್ಯಕ್ಷ ಟಿ.ಶ್ರೀಧರ್, ಶ್ರೀರಂಗಪಟ್ಟಣ ಪುರಸಭೆ ಸದಸ್ಯ ಉಮಾಶಂಕರ್, ಬಿಜೆಪಿ ಮುಖಂಡರಾದ ಕೆ.ಎಸ್.ನಂಜುಂಡೇಗೌಡ, ಎಚ್.ಬಿ.ಮಹೇಶ್, ಡಾ.ಪಾರ್ಥಸಾರಥಿ, ಕೆ.ಬಲರಾಂ, ಕೆ.ಶಿವರಾಂ, ಪೀಹಳ್ಳಿ ರಮೇಶ್, ವಿದ್ಯಾ ಉಮೇಶ್, ಪ್ರಕಾಶ್ ಸೇರಿದಂತೆ ಹಲವು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986815401