ದಿನದ ಸುದ್ದಿ
ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ : ಸಿಎಂ ಸಿದ್ದರಾಮಯ್ಯ
ಸುದ್ದಿದಿನಡೆಸ್ಕ್:ರಾಜ್ಯದ ಎಲ್ಲ ಪರಿಶ್ಟಿಷ್ಟ ವರ್ಗದ ವಸತಿ ಶಾಲೆಗಳಿಗೆ ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ವಿಧಾನಸೌಧ ಮುಂಭಾಗದಲ್ಲಿರುವ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐವರು ಮಹನೀಯರಿಗೆ ವಾಲ್ಮೀಕಿ ಪ್ರಶಸ್ತಿ ವಿತರಿಸಿ, ಅವರು ಮಾತನಾಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಅವರ ಕಲ್ಯಾಣಕ್ಕೆ ತಮ್ಮ ಸರ್ಕಾರ ಬಜೆಟ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಹಣ ನಿಗದಿಮಾಡಿತ್ತು ಎಂದರು.
ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ನಿವಾರಣೆಯಾಗದ ಹೊರತು, ಸಮಾನತೆ ಬರುವುದಿಲ್ಲ ಎಂದರು. ಕಾರ್ಯಕ್ರಮದಲ್ಲಿ ರಾಜಾನಹಳ್ಳಿ ವಾಲ್ಮೀಕಿ ಸಮುದಾಯ ಮಠದ ಜಗದ್ಗುರು ಪ್ರಸನ್ನಾನಂದಪುರಿ, ಸಚಿವರಾದ ಸತೀಶ್ ಜಾರಕಿಹೊಳ್ಳಿ, ಕೆ.ಎನ್. ರಾಜಣ್ಣ, ಸತೀಶ್ ಜಾರಕಿಹೊಳಿ, ಎಚ್.ಕೆ. ಪಾಟೀಲ್ ಮೊದಲಾದವರು ಹಾಜರಿದ್ದರು.
ವಾಲ್ಮೀಕಿ ಪ್ರಶಸ್ತಿ
ಜಾನುವಾರು ರಕ್ಷಣೆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಗ್ರಾಮೀಣ ಸೊಗಡನ್ನು ಉಳಿಸಿ, ಬೆಳೆಸುವಲ್ಲಿ ಮಹತ್ತರ ಪಾತ್ರವಹಿಸಿದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಿಲಾರಿ ಜೋಗಯ್ಯ ಬಿನ್ ಕಿಲಾರಿ ಬೋರಯ್ಯ, ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ ಅವಿರತ ಹೋರಾಟ ಮಾಡಿದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಡಾ. ಎಸ್. ರತ್ನಮ್ಮ, ಬೆಳಗಾವಿಯ ರಾಜಶೇಖರ ತಳವಾರ, ಬೆಂಗಳೂರು ಮೂಲದ ಕೆ.ಎಸ್. ಮೃತ್ಯುಂಜಯ,ವಿಜಯನಗರ ಜಿಲ್ಲೆಯ ರತ್ಮಮ್ಮ ಬಿ. ಸೋಗಿ ಅವರಿಗೆ ಪ್ರಶಸ್ತಿ ನೀಡಿ, ಗೌರವಿಸಲಾಯಿತು. ಪ್ರಶಸ್ತಿ, 20 ಗ್ರಾಂ ಬಂಗಾರದ ಪದಕ ಹಾಗೂ 5 ಲಕ್ಷ ರೂಪಾಯಿ ನಗದು ಒಳಗೊಂಡಿದೆ.
ರಾಜ್ಯದಲ್ಲಿ ವಾಲ್ಮೀಕಿ ಜಯಂತಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧೆಡೆಗಳಲ್ಲಿ ಇಂದು ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎನ್. ಅನುರಾಧ ಮಾತನಾಡಿ, ಬದುಕಿನ ಮೌಲ್ಯಗಳನ್ನು ಬಿಂಬಿಸುವ ರಾಮಾಯಣ ಕಾವ್ಯ ರಚಿಸಿದ ವಾಲ್ಮೀಕಿ ಮಹರ್ಷಿ ಸದಾ ಸ್ಮರಣೀಯರಾಗಿದ್ದಾರೆ ಎಂದರು.
ದೊಡ್ಡಬಳ್ಳಾಪುರದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು ಮಾತನಾಡಿ, ಮಹರ್ಷಿಗಳ ಸಾಧನೆ ಮತ್ತು ಸಮಾಜಕ್ಕೆ ನೀಡಿದ ಸಂದೇಶವನ್ನು ಅರಿಯಬೇಕಿದೆ ಎಂದರು.
ಹಾಸನದಲ್ಲಿಂದು ಆಯೋಜಿಸಲಾಗಿದ್ದ ಆಕರ್ಷಕ ಮೆರವಣಿಗೆಗೆ ಶಾಸಕ ಸ್ವರೂಪ ಪ್ರಕಾಶ್ ಚಾಲನೆ ನೀಡಿದರು. ಬಳಿಕ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಸಾಗಿತು.
ಕೋಲಾರದಲ್ಲಿ ಶಾಸಕ ಕೊತ್ತೂರು ಜಿ. ಮಂಜುನಾಥ್ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿ, ನಂತರ ಡೊಳ್ಳು ಹೊಡೆಯುವ ಮೂಲಕ ಬೃಹತ್ ಪಲ್ಲಕ್ಕಿಗಳ ಮೆರವಣಿಗೆಗೆ ಚಾಲನೆ ನೀಡಿದರು.
ಚಿತ್ರದುರ್ಗದಲ್ಲಿ ವಾಲ್ಮೀಕಿ ಭಾವಚಿತ್ರ ಹಾಗೂ ಪುತ್ಥಳಿ ಮೆರವಣಿಗೆ ವಿವಿಧ ಜಾನಪದ ಕಲಾತಂಡಗಳ ಸಮ್ಮುಖದಲ್ಲಿ ನಡೆಯಿತು. ಹಾವೇರಿಯಲ್ಲಿಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಕ್ಷಯ ಶ್ರೀಧರ್ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಪ್ಪು ನಮನ ಸಲ್ಲಿಸಿದರು.
ಗದಗ ಜಿಲ್ಲೆಯ ನಾಗಾವಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಸಚಿವ ಪ್ರೋಫೆಸರ್ ಸುರೇಶ್ ನಾಡಗೌಡ ಮಾತನಾಡಿ, ವಾಲ್ಮೀಕಿ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರವಾರದಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಮಾತನಾಡಿ, ರಾಮಾಯಣದಲ್ಲಿ ಪರಿಸರಕ್ಕೆ ಮಹತ್ವ ನೀಡಿದ್ದು, ಅದರಂತೆಯೇ ಉತ್ತರಕನ್ನಡ ಜಿಲ್ಲೆಯಲ್ಲಿನ ವನ್ಯ ಸಂಪತನ್ನು ಕಾಪಾಡಲು ಜನತೆ ಕಾಳಜಿ ತೋರಬೇಕು ಎಂದು ಹೇಳಿದರು.
ಬೆಳಗಾವಿಯಲ್ಲೂ ವಿವಿಧ ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಜಯಂತಿ ಆಚರಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243