ನೆಲದನಿ
ವೇದಗಳ ಹುಟ್ಟು – ಬ್ರಾಹ್ಮಣರ ಸ್ಪಷ್ಟಿಕರಣ ಅಥವಾ ಲಂಬೋಕ್ತಿ ಕಲೆಯ ಕಸರತ್ತು
- ವಿ.ಎಸ್. ಬಾಬು
ವೇದಗಳನ್ನು ತನ್ನ ಧರ್ಮದ ಅತ್ಯಂತ ಪವಿತ್ರಗ್ರಂಥಗಳೆಂದು ಪರಿಗಣಿಸದ ಹಿಂದೂ ಪ್ರಾಯಶಃ ಎಲ್ಲೂ ಇರಲಾರ. ಆದರೂ, ಯಾವ ಹಿಂದೂವನ್ನಾದರೂ ವೇದಗಳ ಮೂಲವೆಲ್ಲಿ ಎಂದು ಕೇಳಿದರೆ, ಈ ಸರಳ ಪ್ರಶ್ನೆಗೆ ಒಂದು ಸ್ಪಷ್ಟ ಹಾಗೂ ಖಚಿತವಾದ ಉತ್ತರ ಹೇಳುವವನನ್ನು ಹುಡುಕುವುದು ಕಷ್ಟವಾಗುತ್ತದೆ. ಇದೇ ಪ್ರಶ್ನೆಯನ್ನು ಒಬ್ಬ ವೈದಿಕ ಬ್ರಾಹ್ಮಣನಿಗೆ ಕೇಳಿದರೆ, ಅವನು ವೇದಗಳು ಸನಾತನವೆನ್ನುತ್ತಾನೆ. ಆದರೆ ಆ ಪ್ರಶ್ನೆಗೆ ಇದು ಉತ್ತರವಲ್ಲ. ಏಕೆಂದರೆ,“ಸನಾತನ” ಎಂಬ ಪದದ ಅರ್ಥವೇನು?
ಅಧ್ಯಯನ ಗ್ರಂಥ : [ರಿಡ್ಲ್ ಆಫ್ ದಿ ವೇದಾಸ್]
ಸನಾತನ ಎಂಬ ಪದದ ಉತ್ತಮ ವಿವರಣೆಯು ಮನುಸ್ಮೃತಿ ಅಧ್ಯಾಯ ಒಂದು, ಶ್ಲೋಕ 22 ಮತ್ತು 23ರ ಮೇಲೆ ಕಲ್ಲೂಕ ಭಟ್ಟ ಬರೆದಿರುವ ವ್ಯಾಖ್ಯಾನದಲ್ಲಿ ಸಿಕ್ಕುತ್ತದೆ. “ಸನಾತನ” ಪದಕ್ಕೆ ಕಲ್ಲೂಕ ಭಟ್ಟನ ವ್ಯಾಖ್ಯೆ ಹೀಗಿದೆ:
‘ಸನಾತನ’ಎಂಬ ಶಬ್ದಕ್ಕೆ ಮೊದಲಿನಿಂದಲೂ ನಿತ್ಯವಾಗಿರುವುದು ಎಂದರ್ಥ, ವೇದಗಳು ಅಪೌರುಷೇಯ ಎಂಬ ಸಿದ್ಧಾಂತವನ್ನು ಮನು ಅನುಮೋದಿಸುತ್ತಾನೆ. ಈಗಿರುವ ವೇದಗಳೇ ಮೊದಲಿನ ಕಲ್ಪದಲ್ಲಿ ಸರ್ವಜ್ಞನಾದ ಬ್ರಹ್ಮನ ಸ್ಮೃತಿಯಲ್ಲಿದ್ದವು. ಆಗ ಬ್ರಹ್ಮನು ಪರಮಾತ್ಮನೊಂದಿಗೆ ಐಕ್ಯನಾಗಿದ್ದನು. ಈ ವೇದಗಳನ್ನೆ ಬ್ರಹ್ಮನು ಈ ಕಲ್ಪದ ಆದಿಯಲ್ಲಿ ಅಗ್ನಿ, ವಾಯು ಮತ್ತು ಸೂರ್ಯರಿಂದ ಹೊರತೆಗೆದನು. ವೇದಗಳ ಮೇಲೆ ನಿಂತಿರುವ ಈ ನಂಬಿಕೆಯನ್ನು ನಾವು ಪ್ರಶ್ನಿಸುವಂತಿಲ್ಲ. ಏಕೆಂದರೆ, ವೇದವು “ಋಗೇದವು ಅಗ್ನಿಯಿಂದಲೂ ಯಜುರ್ವೇದವು ವಾಯುವಿನಿಂದಲೂ ಸಾಮವೇದವು ಸೂರ್ಯನಿಂದಲೂ ಬರುತ್ತವೆ’ ಎಂದು ಹೇಳುತ್ತದೆ.
ಕಲ್ಲೂಕ ಭಟ್ಟನ ವಿವರಣೆಯನ್ನು ತಿಳಿದುಕೊಳ್ಳಬೇಕಾದರೆ, ಕಲ್ಪವೆಂದರೇನೆಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ. ಕಲ್ಪವೆಂದರೆ ವೈದಿಕ ಬ್ರಾಹ್ಮಣರು ಕಾಲವನ್ನು ಅಳೆಯುವ ರೀತಿ. ಬ್ರಾಹ್ಮಣರು ಕಾಲವನ್ನು ಅಳೆಯಲು
- ವರ್ಷ
- ಯುಗ
- ಮಹಾಯುಗ
- ಮನ್ವಂತರ
- ಕಲ್ಪ
ಎಂದು ವಿಂಗಡಿಸುತ್ತಾರೆ.
ವರ್ಷವೆಂದರೇನೆಂಬುದನ್ನು ತಿಳಿದುಕೊಳ್ಳುವುದು ಸುಲಭ. ಯುಗವು ಎಷ್ಟು ಕಾಲವನ್ನು ಒಳಗೊಳ್ಳುತ್ತದೆ ಎಂಬುದರಲ್ಲಿ ಏಕಾಭಿಪ್ರಾಯವಿಲ್ಲ.
ಮಹಾಯುಗವೆಂದರೆ ನಾಲ್ಕು ಯುಗಗಳು ಕೃತಯುಗ
- ತ್ರೇತಾಯುಗ
- ದ್ವಾಪರಯುಗ
- ಕಲಿಯುಗ
ಈ ಯುಗಗಳು ಚಕ್ರಾಕಾರದಲ್ಲಿ ಒಂದನ್ನೊಂದು ಅನುಸರಿಸುತ್ತವೆ. ಮೊದಲನೆ ಯುಗ ಮುಗಿದ ಕೂಡಲ ಎರಡನೆ ಯುಗ ಬರುತ್ತದೆ, ಇತ್ಯಾದಿ. ಹೀಗೆ ನಾಲ್ಕು ಯುಗಗಳ ಚಕ್ರ ಒಂದು ಸುತ್ತು ತಿರುಗಿದಾಗ, ಒಂದು ಮಹಾಯುಗ ಮುಗಿಯುತ್ತದೆ. ಮತ್ತೊಂದು ಪ್ರಾರಂಭವಾಗುತ್ತದೆ. ಪ್ರತಿಯೊಂದು ಮಹಾಯುಗವು ಕೃತಯುಗದಿಂದ ಪ್ರಾರಂಭವಾಗಿ ಕಲಿಯುಗದೊಂದಿಗೆ ಮುಗಿಯುತ್ತದೆ.[ಅರ್ಥವೇಧ ಮ್ಯೂರ್ ಸ್ಯಾನ್ಸ್ಕ್ರಿಟ್ ಟೆಕ್ಸ್ಟ್ಸ್ ಸಂ.3 ಪು.6 ]
ಕಲ್ಪಕ್ಕೂ ಮಹಾಯುಗಕ್ಕೂ ಇರುವ ಸಂಬಂಧದ ಬಗೆಗೆ ನಮಗೆ ಯಾವುದೇ ಸಂದೇಹವಿಲ್ಲ. 71 ಮಹಾಯುಗಗಳು ಒಂದು ಕಲ್ಪಕ್ಕೆ ಸಮ. ಆದರೆ ಮಹಾಯುಗ ಮತ್ತು ಮನ್ವಂತರಗಳ ನಡುವಿನ ಕಾಲಿಕ ಸಂಬಂಧದ ಬಗ್ಗೆ ಸ್ವಲ್ಪ ಅಸ್ಪಷ್ಟತೆ ಇದೆ. ಮನ್ವಂತರವೆಂದರೆ 71 ಮಹಾಯುಗಗಳಿಗಿಂತ “ಸ್ವಲ್ಪ ಹೆಚ್ಚು”. “ಸ್ವಲ್ಪ ಹೆಚ್ಚು” ಎಷ್ಟು ಕಾಲವನ್ನು ಒಳಗೊಳ್ಳುತ್ತದೆ ಎಂಬುದಕ್ಕೆ ಖಂಡಿತವಾದ ಉತ್ತರವನ್ನು ಕೊಡಲು ಬ್ರಾಹ್ಮಣರು ಶಕ್ತರಾಗಿಲ್ಲ. ಇದರಿಂದಾಗಿ ಮನ್ವಂತರಕ್ಕೂ ಕಲ್ಪಕ್ಕೂ ಇರುವ ಕಾಲಿಕ ಸಂಬಂಧವು ಅಸ್ಪಷ್ಟವಾಗಿಯೇ ಉಳಿದಿದೆ.
ಆದರೆ ನಮ್ಮ ಪ್ರಸ್ತುತ ಉದ್ದೇಶಕ್ಕೆ ಇದರಿಂದೇನೂ ಆಗುವುದಿಲ್ಲ. ಸದ್ಯಕ್ಕೆ ನಾವು ಕಲ್ಪದ ಅರ್ಥದ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸೋಣ.ಕಲ್ಪದ ವಿಚಾರವು ವಿಶ್ವಸೃಷ್ಟಿ ಮತ್ತು ಸಂಹಾರಗಳಿಗೆ ನಿಕಟವಾಗಿ ಸಂಬಂಧಿಸಿದೆ. ಜಗತ್ತನ್ನು ರಚಿಸುವ ಕಾರ್ಯಕ್ಕೆ ಸೃಷ್ಟಿ ಎಂದು ಹೆಸರು. ಜಗತ್ತಿನ ನಾಶಕ್ಕೆ ಪ್ರಳಯ ಎಂದು ಹೆಸರು. ಸೃಷ್ಟಿ ಮತ್ತು ಪ್ರಳಯಗಳ ಮಧ್ಯದ ಕಾಲವೇ ಕಲ್ಪ. ಹೀಗೆ, ವೇದಗಳ ಮೂಲವು ಕಲ್ಪದ ವಿಚಾರದ ಕೂಡ ನಿಕಟ ಸಂಬಂಧ ಹೊಂದಿದೆ.
ಪೂರ್ವನಿರ್ಧಾರದ ಮೇರೆಗೆ, ಕಲ್ಪ ಪ್ರಾರಂಭವಾದಾಗ, ಸೃಷ್ಟಿ ಪ್ರಾರಂಭವಾಗಬೇಕು. ಸೃಷ್ಟಿಯ ಪ್ರಾರಂಭದಲ್ಲಿ ಹೊಸ ವೇದಗಳ ಸರಣಿಯು ಅಸ್ತಿತ್ವಕ್ಕೆ ಬರುತ್ತದೆ. ಕಲ್ಲೂಕ ಭಟ್ಟ, ನಮಗೆ ತಿಳಿಸಲು ಇಚ್ಛಿಸುವುದೇನೆಂದರೆ ಒಂದರ್ಥದಲ್ಲಿ ಪ್ರತಿಯೊಂದು ಹೊಸ ಕಲ್ಪದಲ್ಲಿ ಹೊಸ ವೇದಗಳು ಇದ್ದರೂ, ಬ್ರಹ್ಮನು ತನ್ನ ಸ್ಮೃತಿಯಿಂದ ಅದೇ ಹಳೆಯ ವೇದಗಳನ್ನೇ ವ್ಯಕ್ತಪಡಿಸುತ್ತಾನೆ. ಈ ಕಾರಣಕ್ಕಾಗಿಯೇ ಅವನು ವೇದಗಳನ್ನು ಸನಾತನ, ಅಂದರೆ ಮೊದಲಿನಿಂದಲೂ ನಿತ್ಯವಾದುವು ಎಂದು ಕರೆಯುತ್ತಾನೆ.
ಕಲ್ಲೂಕ ಭಟ್ಟ ಹೇಳುವುದೇನೆಂದರೆ, ವೇದಗಳನ್ನು ಸ್ಮತಿಯಿಂದ ಪುನಾರಚಿಸಲಾಗುತ್ತದೆ. ಇಲ್ಲಿ ನಿಜವಾದ ಪ್ರಶ್ನೆ ಎಂದು ಅವುಗಳನ್ನು ಪುನಾರಚಿಸಿದರು ಎಂಬುದಲ್ಲ, ಯಾರು ರಚಿಸಿದರು ಎಂಬುದು ? ಪ್ರತಿ ಕಲ್ಪದ ಆದಿಯಲ್ಲೂ ವೇದಗಳನ್ನು ಪುನರುತ್ಪಾದಿಸಲಾಗುತ್ತದೆ ಎಂಬ ಸಿದ್ದಾಂತವನ್ನು ಒಪ್ಪಿಕೊಂಡರೂ, ಮೊದಲನೆ ಕಲ್ಪ ಪ್ರಾರಂಭವಾದಾಗ ವೇದಗಳನ್ನು ರಚಿಸಿದವರು ಯಾರು? ಎಂಬ ಪ್ರಶ್ನೆ ಹಾಗೇ ಉಳಿಯುತ್ತದೆ. ಏನೂ ಇಲ್ಲದೇ (ಶೂನ್ಯದಿಂದ) ವೇದಗಳು ಅಸ್ತಿತ್ವಕ್ಕೆ ಬಂದಿರಲಾರವು. ಅವುಗಳಿಗೆ ಅಂತ್ಯವಿಲ್ಲದಿದ್ದರೂ, ಆದಿಯಂತೂ ಇರಲೇಬೇಕು. ಹಾಗೆಂದು ಬ್ರಾಹ್ಮಣರು ಬಹಿರಂಗವಾಗಿ ಏಕೆ ಹೇಳಬಾರದು? ಈ ಸುತ್ತುಬಳಸಿನ ಮಾತೇಕೆ?
ಆಧಾರ : [ಡಾ. ಬಾಬಾ ಸಾಹೇಬ್ ಅಂಬೇಡ್ಕರ್: ಹಿಂದೂ ಧರ್ಮದ ಒಗಟುಗಳು]
ಸುದ್ದಿದಿನ.ಕಾಂ|ವಾಟ್ಸಾಪ್|9980346243