ದಿನದ ಸುದ್ದಿ
ವಾರಾಣಾಸಿಯ ಜ್ಞಾನವ್ಯಾಪಿ ಮಸೀದಿಯಲ್ಲಿ ನ್ಯಾಯಾಲಯ ಸೂಚನೆ ಅನುಸಾರ ವಿಡಿಯೋ ಸರ್ವೇಕ್ಷಣೆ ಪುನರ್ ಆರಂಭ
ಸುದ್ದಿದಿನ ಡೆಸ್ಕ್ : ಉತ್ತರ ಪ್ರದೇಶದ ಐತಿಹಾಸಿಕ ವಾರಾಣಾಸಿಯಲ್ಲಿನ ಜ್ಞಾನವ್ಯಾಪಿ ಮಸೀದಿಯಲ್ಲಿ ತೀವ್ರ ಭದ್ರತೆಯೊಂದಿಗೆ ವಿಡಿಯೋ ಸರ್ವೇಕ್ಷಣೆ ಕಾರ್ಯ ಇಂದು ಪುನಾರಂಭಗೊಂಡಿತು.
ನ್ಯಾಯಾಲಯ ನೇಮಿಸಿರುವ ಆಯುಕ್ತರ ನೇತೃತ್ವದಲ್ಲಿ 35 ಅಧಿಕಾರಗಳನ್ನೊಳಗೊಂಡ ತಂಡ ಮಸೀದಿ ಸಂಕೀರ್ಣದಲ್ಲಿ ಇಂದು ಕಾರ್‍ಯಾಚರಣೆ ನಡೆಸಿತು. ನ್ಯಾಯಾಲಯದ ಸೂಚನೆಯಂತೆ ನಾಳೆಯೂ ಸರ್ವೇಕ್ಷಣೆ ಕಾರ್ಯ ಮುಂದುವರೆಯಲಿದೆ ಎಂದು ವಾರಾಣಾಸಿ ಪೊಲೀಸ್ ಆಯುಕ್ತ ಎ. ಸತೀಶ್ ಗಣೇಶ್ ತಿಳಿಸಿದ್ದಾರೆ.
ಮಸೀದಿ ಸುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಮಸೀದಿ ಸಂಕೀರ್ಣಕ್ಕೆ ಬಿಗಿಭದ್ರತೆ ಕಲ್ಪಿಸಲಾಗಿತ್ತು. ಮಸೀದಿಯಲ್ಲಿ ವಿಡಿಯೋ ಸರ್ವೇಕ್ಷಣೆ ನಡೆಸುವಂತೆ ವಾರಾಣಾಸಿ ನ್ಯಾಯಾಲಯ ನೀಡಿದ ಆದೇಶ ಅನುಸಾರ ಕಾರ್ಯಾಚರಣೆ ನಡೆಸಲಾಗುತ್ತದೆ.
ಇದೇ 17ರೊಳಗೆ ಸರ್ವೇಕ್ಷಣೆ ಪೂರ್ಣಗೊಳಿಸುವಂತೆ ನ್ಯಾಯಾಲಯ ಸೂಚಿಸಿದೆ. ಇದಕ್ಕೂ ಮುನ್ನ ಜ್ಞಾನವ್ಯಾಪಿ ಮಸೀದಿಯಲ್ಲಿ ವಿಡಿಯೋ ಸರ್ವೇಕ್ಷಣೆ ಕಾರ್ಯಕ್ಕೆ ತಡೆ ಒಡ್ಡುವಂತೆ ಕೋರಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243