ಕ್ರೀಡೆ

ನಾಳೆಯಿಂದ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿ

Published

on

ಸುದ್ದಿದಿನ,ಬೆಂಗಳೂರು: ಪ್ರತಿಷ್ಠಿತ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿ ನಾಳೆ (ಮಂಗಳವಾರ) ಆರಂಭವಾಗಲಿದ್ದು, ಮೂರು ಬಾರಿಯ ಚಾಂಪಿಯನ್ ಕರ್ನಾಟಕ ತಂಡ ತನ್ನ ಮೊದಲ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ತಂಡವನ್ನು ಮನೀಶ್ ಪಾಂಡೆ ಮುನ್ನಡೆಸಲಿದ್ದು, ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರ ಬಿದ್ದಿರುವ ಆರಂಭಿಕ ಬ್ಯಾಟ್ಸ್ ಮನ್ ಕೆ.ಎಲ್ ರಾಹುಲ್ ಉಪನಾಯಕನಾಗಿ ನೇಮಕಗೊಂಡಿದ್ದಾರೆ. ಕರುಣ್ ನಾಯರ್ ಮತ್ತು ಮಯಾಂಕ್ ಅಗರ್ವಾಲ್ ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯಕ್ಕಾಗಿ ಭಾರತ ‘ಎ’ತಂಡದಲ್ಲಿ ಸ್ಥಾನ ಪಡೆದಿರುವ ಕಾರಣ ಆರಂಭದ ಕೆಲ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಕರ್ನಾಟಕ ತಂಡ ಎಲೈಟ್ ‘ಎ’ಗುಂಪಿನಲ್ಲಿ ಸ್ಥಾನ ಪಡೆದಿದೆ.

ಕರ್ನಾಟಕ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕ, ದಾವಣಗೆರೆ ಎಕ್ಸ್’ಪ್ರೆಸ್ ಆರ್.ವಿನಯ್ ಕುಮಾರ್ ಅವರ ಸೇವೆ ಪ್ರಸಕ್ತ ಸಾಲಿನಿಂದ ಕರ್ನಾಟಕ ತಂಡಕ್ಕೆ ಲಭ್ಯವಿಲ್ಲ. ಯುವ ಆಟಗಾರರಿಗೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ಕರ್ನಾಟಕ ತೊರೆದಿರುವ ವಿನಯ್ ಪಾಂಡಿಚೇರಿ ಪರ ಆಡಲಿದ್ದಾರೆ.

ಕರ್ನಾಟಕ ತಂಡ: ಮನೀಶ್ ಪಾಂಡೆ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ದೇವದತ್ ಪಡಿಕ್ಕಲ್, ಸಿದ್ಧಾರ್ಥ್ ಕೆ.ವಿ., ಪ್ರವೀಣ್ ದುಬೆ, ಪವನ್ ದೇಶಪಾಂಡೆ, ಅಭಿಷೇಕ್ ರೆಡ್ಡಿ, ಕೆ.ಗೌತಮ್, ಜೆ.ಸುಚಿತ್, ಶ್ರೇಯಸ್ ಗೋಪಾಲ್, ಅಭಿಮನ್ಯು ಮಿಥುನ್, ಎಂ.ಪ್ರಸಿದ್ಧ್ ಕೃಷ್ಣ, ರೋನಿತ್ ಮೋರೆ, ಶರತ್ ಶ್ರೀನಿವಾಸ್(ವಿಕೆಟ್ ಕೀಪರ್), ವಿ.ಕೌಶಿಕ್. ಕೋಚ್: ಯರೇ ಗೌಡ, ಬೌಲಿಂಗ್ ಕೋಚ್: ಎಸ್.ಅರವಿಂದ್, ಫೀಲ್ಡಿಂಗ್ ಕೋಚ್: ಶಬರೀಶ್ ಪಿ.ಮೋಹನ್, ಮ್ಯಾನೇಜರ್: ಅನುತೋಷ್ ಪಾಲ್, ಲಾಜಿಸ್ಟಿಕ್ ಮ್ಯಾನೇಜರ್: ಎ.ರಮೇಶ್ ರಾವ್, ಫಿಸಿಯೊ: ಜಾಬ ಪ್ರಭು.

ಕರ್ನಾಟಕದ ಲೀಗ್ ಪಂದ್ಯಗಳ ವೇಳಾಪಟ್ಟಿ

  1. ಸಪ್ಟೆಂಬರ್ 24: ಕರ್ನಾಟಕ Vs ಹೈದರಾಬಾದ್ (KSCA ಆಲೂರು ಕ್ರೀಡಾಂಗಣ, ಬೆಂಗಳೂರು)
  2. ಸಪ್ಟೆಂಬರ್ 26: ಕರ್ನಾಟಕ Vs ಜಾರ್ಖಂಡ್ (ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು)
  3. ಸಪ್ಟೆಂಬರ್ 28: ಕರ್ನಾಟಕ Vs ಛತ್ತೀಸ್’ಗಢ (ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು)
  4. ಸಪ್ಟೆಂಬರ್ 29: ಕರ್ನಾಟಕ Vs ಮುಂಬೈ (ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು)
  5. ಅಕ್ಟೋಬರ್ 03: ಕರ್ನಾಟಕ Vs ಸೌರಾಷ್ಟ್ರ (ಜಸ್ಟ್ ಕ್ರಿಕೆಟ್ ಕ್ರೀಡಾಂಗಣ, ಬೆಂಗಳೂರು)
  6. ಅಕ್ಟೋಬರ್ 07: ಕರ್ನಾಟಕ Vs ಗೋವಾ (ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು)
  7. ಅಕ್ಟೋಬರ್ 09: ಕರ್ನಾಟಕ Vs ಆಂಧ್ರ (KSCA ಆಲೂರು ಕ್ರೀಡಾಂಗಣ, ಬೆಂಗಳೂರು)
  8. ಅಕ್ಟೋಬರ್ 13: ಕರ್ನಾಟಕ Vs ಕೇರಳ (KSCA ಆಲೂರು ಕ್ರೀಡಾಂಗಣ, ಬೆಂಗಳೂರು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version