ದಿನದ ಸುದ್ದಿ
ವಿಜಯ್ ಮಲ್ಯ ಗಡೀಪಾರಿಗೆ ಆದೇಶಿದ ಲಂಡನ್ ಕೋರ್ಟ್
ಸುದ್ದಿದಿನ,ಲಂಡನ್ : ಭಾರತೀಯ ಬ್ಯಾಂಕುಗಳಿಗೆ 9,000 ಕೋಟಿ ರೂ. ಸಾಲ ಬಾಕಿ ಇರಿಸಿ ವಿದೇಶಕ್ಕೆ ಪಲಾಯನ ಮಾಡಿದ್ದ ಮದ್ಯ ದೊರೆ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡುವುದಕ್ಕೆ ಇಲ್ಲಿನ ವೆಸ್ಟ್ ಮಿನ್‌ಸ್ಟರ್ ಕೋರ್ಟ್ ಇಂದು ಸೋಮವಾರ ಆದೇಶಿಸಿದೆ. ಮುಂದಿನ ಒಂದು ತಿಂಗಳ ಒಳಗಾಗಿ ಮಲ್ಯ ಅವರು ಭಾರತಕ್ಕೆ ಗಡೀಪಾರಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಇದರಿಂದಾಗಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡಿಸಿಕೊಳ್ಳುವ ಕೇಂದ್ರ ಸರಕಾರ, ಸಿಬಿಐ, ಜಾರಿ ನಿರ್ದೇಶನಾಲಯಕ್ಕೆ ಭಾರೀ ಯಶಸ್ಸು, ಗೆಲುವು ಸಿಕ್ಕಿದಂತಾಗಿದೆ.
ವಿಜಯ್ ಮಲ್ಯ ಅವರು ಕೆಲ ದಿನಗಳ ಹಿಂದಷ್ಟೇ ತಾನು ತನ್ನ ಬ್ಯಾಂಕ್ ಸಾಲದ ಶೇ.100 ಅಸಲು ಮೊತ್ತವನ್ನು ಮರುಪಾವತಿಸಲು ಸಿದ್ಧ ಎಂದು ಹೇಳಿಕೊಂಡಿದ್ದರು. ಇಂದು ಅವರ ಗಡೀಪಾರಿಗೆ ಲಂಡನ್‌ನ ವೆಸ್ಟ್ ಮಿನ್‌ಸ್ಟರ್ ಕೋರ್ಟ್ ಆದೇಶಿಸಿರುವುದು ಮಹತ್ತರ ಬೆಳವಣಿಗೆಯಾಗಿದೆ.
ವಿಜಯ್ ಮಲ್ಯ ಅವರನ್ನು ಮುಂಬಯಿಯ ಆರ್ಥರ್ ರೋಡ್ ಜೈಲಲ್ಲಿ ಇರಿಸುವ ಸಂಬಂಧ ಅಲ್ಲಿನ ಸ್ಥಿತಿಗತಿ ಹೇಗಿದೆ ಎಂಬುದನ್ನು ಲಂಡನ್ ಕೋರ್ಟ್ ಈ ಮೊದಲೇ ಮಾಹಿತಿ ಪಡೆದುಕೊಂಡಿತ್ತು. ಮಲ್ಯ ಅವರನ್ನು ಇರಿಸಲು ಆರ್ಥರ್ ರೋಡ್ ಜೈಲಲ್ಲಿ ವಿವಿಐಪಿ ಕೋಣೆ ಸಿದ್ಧಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.