ಲೈಫ್ ಸ್ಟೈಲ್
ವಿಟಮಿನ್ ಎ ನಲ್ಲಿ ಇಷ್ಟೆಲ್ಲಾ ಇದೆ!
ವಿಟಮಿನ್ ಎ ಕೊರತೆಯಿಂದ ಕಣ್ಣು ದೃಷ್ಟಿಗೆ ಆಪತ್ತು ಉಂಟಾಗುತ್ತದೆ ಎಂದು ಕಿ. ಪೂ. 1500 ಕಾಲದಲ್ಲೇ ಅರಿವುಂಟಾಗಿತ್ತು. 1930ರಲ್ಲಿ ವಿಜ್ಞಾನಿಗಳು ಇಲಿಗಳ ಮೇಲೆ ಪ್ರಯೋಗ ಮಾಡಿ ಸಸ್ಯಾಹಾರದಲ್ಲಿ ವಿಟಮಿನ್ ಎ ಲಭಿಸುತ್ತದೆ ಎಂದು ಕಂಡುಹಿಡಿದರು. ವಿಟಮಿನ್ ಎ ಅಥವಾ ರೆಟಿನಾಲ್ ಪ್ರಾಣಿಜನ್ಯ ಆಹಾರಗಳಲ್ಲೂ ಇರುತ್ತದೆ. ಇದೇ ಕೆರೊಟಿನ್ ಶರೀರದಲ್ಲಿ ವಿಟಮಿನ್ ಎ ಆಗಿ ಬದಲಾಗುತ್ತದೆ. ಮಾನವ ಶರೀರ 80% ವಿಟಮಿನ್ ಎ ಯನ್ನು ಹೀರಿಕೊಳ್ಳುತ್ತದೆ. ಸುಮಾರು 1500 ಮಿ. ಗ್ರಾಂ ತೂಕದ ಲಿವರ್‍ನಲ್ಲಿ 1,50,000 ಮೈಕ್ರೋ ಗ್ರಾಂ ವಿಟಮಿನ್ ಎ ಇರುತ್ತದೆ.
20% ವಿಟಮಿನ್ ಎ ಮಲದ ಮೂಲಕ ಹೊರಬೀಳುತ್ತದೆ. ಉಳಿದಿದ್ದರಲ್ಲಿ 20-50%ಇತರ ವಸ್ತುಗಳು ಸೇರಿ ಬದಲಾವಣೆ ಹೊಂದುತ್ತದೆ. 30-60% ಮಾತ್ರ ಶರೀರದಲ್ಲಿ ಸಂಗ್ರಹಿತವಾಗುತ್ತದೆ.
ವಿಟಮಿನ್ ಎ ನ ಮಹತ್ವ
ಅವಯವಗಳಲ್ಲೆಲ್ಲಾ ಅತ್ಯಂತ ಪ್ರಧಾನವಾದಕಣ್ಣುಗಳಿಗೆ ವಿಟಮಿನ್ ಎ ಶ್ರೀರಕ್ಷೆಯಾಗಿದೆ. ರೆಟಿನಾದೊಳಗಿನ ದೃಷ್ಟಿಯನ್ನು ನಿಶಿತವಾಗಿರುವುದರಲ್ಲಿ ಎ ಪಾತ್ರ ಮಹತ್ವದ್ದು. ಕಣ್ಣುಬೇನೆಗಳನ್ನು ತಡೆಗಟ್ಟುವಲ್ಲಿ ವಿಟಮಿನ್ ಎ ಉತ್ತಮ ಹೋರಾಟಗಾರನಾಗಿ ನಿಲ್ಲುತ್ತದೆ. ಇತರೇ ಅವಯವಗಳ ಬೆಳವಣಿಗೆ, ರಕ್ಷಣೆಗಳಿಗೂ ವಿಟಮಿನ್ ಎ ಬೇಕೇ ಬೇಕು.
ಶ್ವಾಸಕೋಶಗಳಿಗೆ ತಗಲುವ ಸೋಂಕುಗಳನ್ನು ಹೋಗಲಾಡಿಸುವುದು, ಜಠರ ರಸಗಳ ಉತ್ಪಾದನೆಯನ್ನು ಹೆಚ್ಚಿಸುವುದು. ಕರುಳುಗಳ ಕಾರ್ಯಕ್ಷಮತೆಯನ್ನು ವೃದ್ಧಿಸುವುದು ಅಷ್ಟೇ ಅಲ್ಲ. ಕೂದಲುಗಳು ಸಮೃದ್ಧವಾಗಿ ಬೆಳೆಯಲು ವಿಟಮಿನ್ ಎ ಬೇಕು. ಹಲ್ಲುಗಳು, ವಸಡುಗಳು ಗಟ್ಟಿಯಾಗಿರುವುದಕ್ಕೂ ವಿಟಮಿನ್ ಎ ಬೇಕು. ಇದು ರಕ್ತ ಪ್ರಸರಣ ಸರಾಗವಾಗಿ ಆಗುವಂತೆ ಮಾಡುತ್ತದೆ.
ಇನ್ನಷ್ಟು ವಿವರವಾಗಿ ಹೇಳುವುದಾದರೆ ಇರುಳುಗುರುಡು ಹಾಗೂ ಹೊರ ಪೊರೆಯ ಸೋಂಕುಗಳಿದ್ದಲ್ಲಿ ದಿನಕ್ಕೆ 9000 ಮೈಕ್ರೋ ಗ್ರಾಂನಷ್ಟು ವಿಟಮಿನ್ ಎ ಶರೀರವನ್ನು ಸೇರ ಬೇಕಾಗುತ್ತದೆ. ಕಾರ್ನಿಯಾದಲ್ಲಿ ತೊಂದರೆಗಳಿದ್ದಲ್ಲಿ ತೂಕವನ್ನಾಧರಿಸಿ ಪ್ರತಿ ಕೆ.ಜಿ. ದೇಹ ತೂಕಕ್ಕೆ 6000 ಮೈಕ್ರೋಗ್ರಾಂಗಳಷ್ಟು ವಿಟಮಿನ್ ಎ ತೆಗೆದುಕೊಳ್ಳಬೇಕು. ಮಕ್ಕಳ ಎಳೆಕಣ್ಣುಗಳು ಸಮೀಪದೃಷ್ಟಿ ದೋಷಕ್ಕೆ ಗುರಿಯಾಗದೇ ಇರಬೇಕಾದಲ್ಲಿ ವಿಟಮಿನ್ ಎ ಅಗತ್ಯವಿದ್ದಷ್ಟು ಪೂರೈಕೆಯಾಗಬೇಕು.
ಕಣ್ಣುಗಳ ರೆಪ್ಪೆ ಮಿಟುಕಿಸದೇ ತದೇಕಚಿತ್ರವಾಗಿ ಕಂಪ್ಯೂಟರ್, ಟಿ.ವಿ. ಸ್ಕ್ರೀನ್‍ಗಳನ್ನು ದಿಟ್ಟಿಸುತ್ತಿದ್ದರೆ ಒಣಗಣ್ಣು ಉಂಟಾಗುತ್ತದೆ. ವಿಟಮಿನ್ ಎ ಹೇರಳವಾಗಿರುವ ಆಹಾರಗಳನ್ನು ಸೇವಿಸುತ್ತಾ, ಓದು, ಬ್ರೌಸಿಂಗ್ ಇತ್ಯಾದಿ ಮಾಡುವಾಗ ನಡುನಡುವೆ ಕಣ್ಣುಗಳನ್ನು ಮುಚ್ಚಿಕೊಂಡು ವಿಶ್ರಾಂತಿ ನೀಡುತ್ತದ್ದಲ್ಲಿ ಕಣ್ಣು ಬೇನೆಗಳು ನಿವಾರಣೆಯಾಗುವುವು.
ಮೊಡವೆಗಳಿಂದ ಹಿಡಿದು ಕುರು, ಕಜ್ಜಿಗಳವರೆಗೆ ಚರ್ಮಕ್ಕೆ ಅಂಟಿಕೊಳ್ಳುವ ಹಲವಾರು ಹುಣ್ಣುಗಳು, ಗಾಯಗಳು ಮಾಯಲು ವಿಟಮಿನ್ ಎ ಸೇವನೆ ಸೂಕ್ತ ಪ್ರಮಾಣದಲ್ಲಿದ್ದರೆ ಮಾತ್ರ ಸಾಧ್ಯ. ಚರ್ಮದ ಸ್ಥಿತಿಯನ್ನು ಆಧರಿಸಿ 7,500 ರಿಂದ ಮಾತ್ರ 15,000 ಮೈಕ್ರೋ ಗ್ರಾಂವರೆಗೆ ನಿಯಮಿತವಾಗಿ ವಿಟಮಿನ್ ಎ ತೆಗೆದುಕೊಳ್ಳಬೇಕು.
ವಿಟಮಿನ್ ಎ ಯಾರಿಗೆ ಎಷ್ಟು ಬೇಕು?
ವಿಟಮಿನ್ ಅಗತ್ಯಕ್ಕಿಂತ ಅತಿಯಾಗಿ ಸೇವಿಸಲ್ಪಟ್ಟಲ್ಲಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳಾಗುತ್ತವೆ. ಮಕ್ಕಳಲ್ಲಿ ದಿನವೊಂದಕ್ಕೆ 5,500 ಮೈಕ್ರೋಗ್ರಾಂಗಳಷ್ಟು ವಿಟಮಿನ್ ಎ, ದೊಡ್ಡವರಲ್ಲಿ ದಿನಕ್ಕೆ 12,000 ಮೈಕ್ರೋ ಗ್ರಾಂಗಳಷ್ಟು ವಿಟಮಿನ್ ಎ ಬಳಸಲ್ಪಟ್ಟಲ್ಲಿ ಹೊಟ್ಟೆನುಲಿತ, ವಾಂತಿ, ಭೇದಿಯಂಥವು ತತ್‍ಕ್ಷಣಕ್ಕೆ ಕಂಡು ಬರುತ್ತವೆ. ಕ್ರಮೇಣವಾಗಿ ದೃಷ್ಟಿ ಮಂಜಾಗುವುದು, ಕೀಲುನೋವು, ಅಧಿಕ ಋತುಸ್ರಾವ, ತಲೆನೋವು, ಲಿವರ್ ದೊಡ್ಡದಾಗುವುದು ಮೊದಲಾದ ಪ್ರಮಾದಕರ ಬೆಳವಣಿಗೆಗಳು ಸಂಭವಿಸುತ್ತವೆ. ವಿಟಮಿನ್ ಎ ಯಾರಿಗೆ ಎಷ್ಟು ಬೇಕು ಎಂಬುದರ ಅರಿವಿನೊಂದಿಗೆ ಅದನ್ನು ಸೇವಿಸಬೇಕು. ದಿನದ ಲೆಕ್ಕದಲ್ಲಿ ತಜ್ಞರ ಪ್ರಕಾರ ಹೇಳುವುದಾದರೆ..
- ಐದು ವರ್ಷದೊಳಗಿನ ಹಸುಳೆಗಳು-350 ಮೈಕ್ರೋಗ್ರಾಂ
- ಮಕ್ಕಳು- 600 ಮೈಕ್ರೋಗ್ರಾಂ
- ಪುರುಷರು- 600 ಮೈಕ್ರೋಗ್ರಾಂ
- ಮಹಿಎಯರು – 600 ಮೈಕ್ರೋಗ್ರಾಂ
- ಬಾಣಂತಿಯರು – 900 ಮೈಕ್ರೋ ಗ್ರಾಂ
ವಿಟಮಿನ್ ಎ ಭರಿತ ಆಹಾರಗಳು – ಗ್ರಾಂಗಳಲ್ಲಿ ( ಕೆರೋಟಿನ್ ರೂಪದಲ್ಲಿ)
- ಪಾಲಕ್ ಸೊಪ್ಪು – 5,580 ಮೈಕ್ರೋಗ್ರಾಂ
- ಕ್ಯಾರೆಟ್ – 1,890 ಮೈಕ್ರೋಗ್ರಾಂ
- ಮೊಟ್ಟೆ – 420 ಮೈಕ್ರೋಗ್ರಾಂ
- ಮಾವಿನ ಹಣ್ಣು – 2,743 ಮೈಕ್ರೋಗ್ರಾಂ
- ಟೊಮೋಟೊ – 351 ಮೈಕ್ರೋಗ್ರಾಂ
- ಬೀಟ್‍ರೂಟ್ ಸೊಪ್ಪು – 5,862 ಮೈಕ್ರೋಗ್ರಾಂ
- ನುಗ್ಗೇ ಸೊಪ್ಪು – 6,780 ಮೈಕ್ರೋಗ್ರಾಂ
- ಬೆಣ್ಣೆ – 960 ಮೈಕ್ರೋಗ್ರಾಂ
- ತುಪ್ಪ – 600 ಮೈಕ್ರೋಗ್ರಾಂ
- ಸೋಯಾಬೀನ್ – 426 ಮೈಕ್ರೋಗ್ರಾಂ