ನೆಲದನಿ

ನುಡಿಯ ಒಡಲು 12 | ನುಡಿಯರಿಮೆ (ಲಿಂಗ್ವಿಸ್ಟಿಕ್ಸ್) ಹಾಗೆಂದರೇನು..?

Published

on

  • ಡಾ,ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಭಾಗ -02

ನುಡಿಯೆಂದರೆ ಅದೊಂದು ವರ್ತನೆಯೇ?ನುಡಿಯನ್ನು ಕೂಡ ಒಂದು ವರ್ತನೆಯ ನೆಲೆಯನ್ನಾಗಿ ಗುರುತಿಸಿದವರಲ್ಲಿ ವರ್ತನಾವಾದಿಳೇ ಮುಖ್ಯರು. ನುಡಿ ಬಗೆಗಿನ ಇವರ ನಿಲುವುಗಳಿಗೆ ಸಾಕ್ಷಿಗಳೇನು? ಅವುಗಳ ಸ್ವರೂಪವೆಂತಹದು ಎಂಬುದನ್ನು ಕುರಿತು ಈಗ ಚರ್ಚಿಸೋಣ. ನುಡಿಯನ್ನು ವರ್ತನಾವಾದದ ಚೌಕಟ್ಟಿನಲ್ಲಿಟ್ಟು ಚರ್ಚಿಸಿದವರಲ್ಲಿ ಸಾಮಾಜಿಕ ಮನಶ್ಯಾಸ್ತ್ರಜ್ಞರೆ ಮೊದಲಿಗರು. ಇವರನ್ನು ವರ್ತನಾವಾದಿಗಳೆಂದೂ ಕರೆಯುತ್ತಾರೆ.

ಇವರಲ್ಲಿ ಲೋಕ ಹೆಸರುವಾಸಿ ಆದವರೆಂದರೆ, ಬಿ.ಎಫ್.ಸ್ಕಿನ್ನರ್, ಇವನು ಲೋಕದಾದ್ಯಂತ ಮನೆಮಾತಾಗಿದ್ದು ತನ್ನ ವರ್ಬಲ್ ಬಿಹೇವಿಯರ್ (1956) ಎಂಬ ಅರಿಮೆಯ ಹೊತ್ತಿಗೆಯಿಂದ ಎಂಬುದು ಗಮನಾರ್ಹ. ಮತ್ತೊಬ್ಬ ರಶಿಯಾ ನಾಡಿನ ತಿಳಿವಿಗ ಐವನ್ ಪವ್ಲಫ್ (1849 – 1936) ಎಂಬುವನಾಗಿದ್ದಾನೆ. ಇವನು ತನ್ನ ಕಲಿಕೆ ಹಾಗೂ ಶೈಕ್ಷಣಿಕ ತತ್ವಗಳ ಬಗೆಗಿನ ಚಿಂತನೆಗಳಿಂದ ಲೋಕದಾದ್ಯಂತ ಅತ್ಯಂತ ಪ್ರಭಾವಿ ಚಿಂತಕನಾಗಿ ಪ್ರಸಿದ್ಧ. ಈ ವರ್ತನಾವಾದಿಗಳ ಪ್ರಕಾರ ಮಾನವನ ಮನಸ್ಸು (ಮೈಂಡ್) ಎಂಬುದು ಒಂದು ಖಾಲಿ ಬಳಪ (ಟ್ಯಾಬೂಲ ರಸ – ಬ್ಲ್ಯಾಂಕ್ ಸ್ಲೇಟ್) ಆಗಿರುತ್ತದೆ ಎಂದು ನಂಬಿದ್ದರು.

ಅಂದರೆ ಮಾನವರಿಗೆ ಜೈವಿಕವಾಗಿ ಯಾವುದೆ ಬಗೆಯ ಗ್ರಹಿಕಾ ಸಾಮರ್ಥಗಳು ದತ್ತವಾಗಿರುವುದಿಲ್ಲವೆಂದೇ ಇವರು ತೀರ್ಮಾನಿಸಿದ್ದರು. ನುಡಿಯನ್ನು ಒಳಗೊಂಡಂತೆ ತಿಳಿವಿನ ಎಲ್ಲ ಬಗೆಯ ಕಲಿಕೆಗಳು ಅನುಕರಣೆಯಿಂದ ಮಾತ್ರ ದತ್ತವಾಗುತ್ತವೆ ಎಂದು ಇವರು ಬಲವಾಗಿ ನಂಬಿದ್ದರು. ಈ ಅನುಕರಣೆಗಳು ಆಯಾ ಕಲಿಕೆಯು ನಡೆಯುವ ಪರಿಸರದಿಂದ ಇನ್ನಷ್ಟು ಬಲಗೊಳ್ಳುತ್ತವೆ ಹಾಗೆ ಬಲಗೊಳ್ಳಲು ಬೇಕಾದ ವಾತಾವರಣ ಆ ಕಲಿಕಾ ಸನ್ನಿವೇಶದಲ್ಲಿ ಕಲಿಯುವರಿಗೆ ಸಿಗುತ್ತದೆ.

ನುಡಿ ಕಲಿಕೆ ಇಲ್ಲವೇ ಮತ್ತ್ಯಾವುದೋ ಕಲಿಕೆ ಎಂಬುದು ವರ್ತನೆಯ ಫಲಿತವೆಂದೇ ಈ ವರ್ತನವಾದಿಗಳು ನಂಬಿದ್ದರು. ಹಾಗಾಗಿ ನುಡಿ ಕಲಿಕೆ ಎನ್ನುವುದು ಪ್ರಯತ್ನ ಮತ್ತು ಪ್ರಮಾದ ವಿಧಾನ (ಟ್ರೈಯಲ್ ಅಂಡ್ ಎರರ್ ಮೆಥೆಡ್) ದಿಂದ ಈಡೇರುತ್ತದೆ ಅನ್ನುವುದು ಇವರ ಮಹತ್ವದ ಚಿಂತನೆಯಾಗಿದೆ. ಎತ್ತುಗೆಗಾಗಿ ಸೈಕಲ್ ಓಡಿಸುವ, ಈಜು ಕಲಿಯುವ, ನಡೆಯುವ, ಕೂತುಕೊಳ್ಳುವ ಮುಂತಾದ ದೈಹಿಕ ವರ್ತನೆಗಳು ರೂಢಿಗೊಳ್ಳುವುದು ಈ ಬಗೆಯ ಸತತ ಅಭ್ಯಾಸದಿಂದ. ಇಂತಹ ಅಭ್ಯಾಸ ಪ್ರಕ್ರಿಯೆಗಳು (ಹ್ಯಾಬಿಟ್ ಕಲ್ಟಿವೇಶನ್) ರೂಪುಗೊಳ್ಳುವ ಬಗೆಗಳೇ ಕಲಿಕೆಯ ವರ್ತನೆಗಳು. ಈ ವರ್ತನೆಗಳನ್ನು ಮಾನಸಿಕ ಹಾಗೂ ದೈಹಿಕವೆಂದು ವಿಂಗಡಿಸಬಹುದು. ಈ ವರ್ತನೆಗಳಿಗೆ ವರ್ತನಾವಾದಿಗಳು ಎರಡು ಲಕ್ಷಣಗಳನ್ನು ಗುರುತಿಸುತ್ತಾರೆ. ಅವುಗಳನ್ನು ಒಂದು ಪ್ರಚೋದನೆ (ಸ್ಟಿಮೂಲಸ್) ಮತ್ತೊಂದನ್ನು ಪ್ರತಿಕ್ರಿಯೆ (ರೆಸ್ಪಾನ್ಸ್) ಎಂದು ಕರೆಯಬಹುದು.

ಇಂತಹ ವರ್ತನೆಯ ಸರಣಿಯಲ್ಲಿಯೆ ನುಡಿಯನ್ನು ಕಲಿಯಲು ಬೇಕಾದ ಪ್ರಚೋದಕ ಹಾಗೂ ಅದಕ್ಕೆ ಸಮಾನ ಪ್ರತಿಕ್ರಿಯೆಗಳು ಉಂಟಾಗುತ್ತವೆ. ಈ ವರ್ತನೆಗಳು ಚಳಕವಾಗುವ ಇಲ್ಲವೇ ಯಾವುದೇ ಅಭ್ಯಾಸವಾಗುವ ಬಗೆಗಳು ನಿಗದಿತ ಕ್ರಮದಲ್ಲಿ (ಸೆಟ್ ಪ್ಯಾಟನ್ರ್ಸ್) ರೂಢಿಗೊಳ್ಳುತ್ತವೆ. ಎತ್ತುಗೆಗಾಗಿ ಬಹುತೇಕ ಮಂದಿ ಹಾವು ಇಲ್ಲವೇ ಯಾವುದಾದರೂ ಕಾಡು ಪ್ರಾಣಿಯನ್ನು ನೋಡಿದಾಗ ವರ್ತಿಸುವ ಇಲ್ಲವೇ ಪ್ರತಿಕ್ರಿಯಿಸುವ ಬಗೆ ಒಂದೇ ರೀತಿಯಲ್ಲಿರುತ್ತದೆ.

ನುಡಿ ಬಳಕೆ ಹಾಗೂ ರಚನೆಯ ಮಾದರಿಗಳು ಕೂಡ ಹೀಗೆ ಕೆಲವು ನಿಗದಿತ ಕ್ರಮದಲ್ಲಿ ರೂಪುಗೊಳ್ಳುತ್ತವೆ. ಪ್ರಶ್ನಿಸುವ, ಆದೇಶಿಸುವ, ನಿರ್ದೇಶಿಸುವ, ವಿನಂತಿಸುವ, ಉಪದೇಶಿಸುವ, ಯೋಗ ಕ್ಷೇಮವನ್ನು ವಿಚಾರಿಸುವ ಎಂಬಿತ್ಯಾದಿ ನುಡಿ ಬಳಕೆ ಹಾಗೂ ರಚನೆಯ ಮಾದರಿಗಳು ಅಂದರೆ ಮಾತಿನ ಬಗೆಗಳ ಎತ್ತುಗೆಗಳನ್ನು ಇನ್ನೂ ಸಾಕಷ್ಟು ಬಗೆಯಲ್ಲಿ ತೋರಿಸಬಹುದು. ಇಲ್ಲಿ ವಿಕ್ಷಣೆ, ಅನುಕರಣೆ, ಪರಿಸರ, ಬಲಪಡಿಸುವಿಕೆಗಳೇ ಕಲಿಕೆಯ ಮುಖ್ಯ ತತ್ವಗಳಾಗಿವೆ. ಪ್ರಾಣಿ ಮತ್ತು ಮನುಷ್ಯರ ವರ್ತನೆಗಳು ಕಲಿಕೆ ಹಾಗೂ ಅವುಗಳನ್ನು ಬಲಪಡಿಸುವಿಕೆಯಂತಹ ತತ್ವಗಳು ಕೆಲವು ಸಾಮಾನ್ಯ ನಿಯಮಗಳ ವಿಧಾನದ ನೆಲೆಯಿಂದ ನಿರ್ಧರಿಸ್ಪಟ್ಟಿರುತ್ತವೆ.

ಒಟ್ಟಾರೆಯಾಗಿ ನುಡಿ ಕಲಿಯುವ ಬಗೆ ಹಾಗೂ ನುಡಿಯ ಸ್ವರೂಪ ವರ್ತನವಾದಿಗಳ ಪ್ರಕಾರ ಬೇರೆ ಬೇರೆ ವರ್ತನೆಗಳನ್ನು ರೂಢಿಸಿಕೊಳ್ಳುವ ಮಾದರಿಯಲ್ಲಿರುತ್ತದೆ ಎಂಬುದೇ ಇವರ ಅಚಲ ನಿಲುವಾಗಿತ್ತು. ಈ ಎಲ್ಲ ಚರ್ಚೆಗಳಿಗೆ ಪೂರಕವಾಗಿ ಐವನ್ ಪವ್ಲಫ್ ಹಾಗೂ ಬಿ.ಎಫ್. ಸ್ಕಿನ್ನರ್ ಎಂಬೀ ವರ್ತನಾವಾದಿಗಳು ಪ್ರಾಣಿ ಇಲ್ಲವೇ ಪಕ್ಷಿಗಳ ಮೇಲೆ ನಡೆಸಿರುವ ಪ್ರಯೋಗಗಳನ್ನು ಗಮನಿಸಬಹುದು.

ಪ್ರಯೋಗ 1 – ಕ್ಲಾಸಿಕಲ್ ಕಂಡಿಶಯನ್ನಿಂಗ್

ಐವನ್ ಪವ್ಲಫ್‍ನ ಪ್ರಯೋಗದ ಹೆಸರು ಕ್ಲಾಸಿಕಲ್ ಕಂಡಿಶಯನ್ನಿಂಗ್. ಇದು ಕಲಿಕೆಯ ನೆಲೆಗಳನ್ನು ಕಂಡು ಹಿಡಿಯುವ ತಂತ್ರವಾಗಿದೆ. ಪವ್ಲಫ್‍ನ ಪ್ರಕಾರ ಪ್ರಚೋದನೆ ಮತ್ತು ಪ್ರತಿಕ್ರಿಯೆಗಳ ನಡುವಣ ಉದ್ದೇಶಿತ ಒಡನಾಟವೇ ಕಲಿಕೆಯಾಗಿದೆ. ಇಂತಹ ತೀರ್ಮಾನಕ್ಕೆ ಬರಲು, ಪವ್ಲಫ್ ನಾಯಿಯ ಮೇಲೊಂದು ಪ್ರಯೋಗವನ್ನು ನಡೆಸಿದ್ದಾನೆ. ಒಂದು ಪಂಜರದಲ್ಲಿ (ಕೇಸ್) ನಾಯಿಯನ್ನು ಕೂಡಿಟ್ಟು, ಅದರ ವರ್ತನೆಗಳನ್ನು ಪತ್ತೆಹಚ್ಚುತ್ತಾನೆ. ಆ ಪ್ರಯೋಗದ ವಿವರಗಳು ಹೀಗಿವೆ;

ವರ್ತನಾವಾದಿ ಕಲಿಕೆ – 1

1. ತಟಸ್ಥ ಪ್ರಚೋದನೆ: ಗಂಟೆ ಬಾರಿಸುತ್ತದೆ.

2. ಗೊತ್ತುಪಾಡಿಲ್ಲದ ಪ್ರಚೋದನೆ: ಅನ್ನದ ತಟ್ಟೆ ಬರುತ್ತದೆ.

3. ಗೊತ್ತುಪಾಡಿಲ್ಲದ ಪ್ರತಿಕ್ರಿಯೆ: ಅನ್ನದ ತಟ್ಟೆ ನೋಡಿ ನಾಯಿ ಜೊಲ್ಲು ಸುರಿಸುತ್ತದೆ.

  • ಗೊತ್ತುಪಾಡಿನ ಪ್ರಚೋದನೆ: ಗಂಟೆಯನ್ನು ಮತ್ತೆ ಮತ್ತೆ ಬಾರಿಸಲಾಗುತ್ತದೆ, ಈ ಗಂಟೆ ಬಾರಿಸಿದಾಗೆಲ್ಲ ಅನ್ನದ ತಟ್ಟೆ ಬರುತ್ತದೆ.
  • ಈ ಗೊತ್ತುಪಾಡಿನ ಪ್ರಚೋದನೆಯ ನಂತರ, ನಾಯಿ ಗಂಟೆ ನಾದವನ್ನು ಕೇಳಿದಾಗಲ್ಲ ಜೊಲ್ಲು ಸುರಿಸುತ್ತದೆ.

ಈ ಪ್ರಯೋಗದ ವಿವರಗಳು ಹೇಳುವುದೇನೆಂದರೆ, ಗಂಟೆ ನಾದವನ್ನು ಕೇಳಿದಾಗೆಲ್ಲ ಅನ್ನದ ತಟ್ಟೆ ಬರುತ್ತದೆ ಎಂಬು ಸಾಮನ್ಯ ತೀರ್ಮಾನಕ್ಕೆ ನಾಯಿ ಬರುತ್ತದೆ. ಅದಕ್ಕಾಗಿ ಗಂಟೆ ನಾದ ಕೇಳಿದೊಡನೆ, ಅನ್ನದ ತಟ್ಟೆ ಬರದಿದ್ದರೂ ನಾಯಿ ಸಹಜವಾಗಿ ಜೊಲ್ಲು ಸುರಿಸುತ್ತದೆ. ಪ್ರಚೋದನೆ ಮತ್ತು ಪ್ರತಿಕ್ರಿಯೆಗಳ ನಡುವಣ ನಿರಂತರ ಒಡನಾಟವೇ ಕಲಿಕೆ ಎಂಬ ನಂಬಿಕೆಯನ್ನು ಈ ಪ್ರಯೋಗ ಬಲಪಡಿಸುತ್ತದೆ.

ಐವನ್ ಪವ್ಲಫ್ – ಚಿತ್ರ – 2

ವರ್ತನಾವಾದಿ ನುಡಿ ಕಲಿಕೆ?

ಯಾರಾದರೂ ದೊಡ್ಡವರು ಮಗುವಿಗೆ ನೀರನ್ನು ತೋರಿಸಿ, ಇದು ನೀರು ಎಂದು ಹೇಳುತ್ತಾರೆ. ಹೀಗೆ ಯಾವುದೇ ಗೊತ್ತುಪಾಡಿಲ್ಲದ ಪ್ರಚೋದನೆಗೆ, ಮಗು ಆ ನೀರನ್ನು ಕುಡಿಯುವ, ಉಗುಳುವ ಇಲ್ಲವೇ ಎರುಚುವ ಮೂಲಕ ಪ್ರತಿಕ್ರಿಯೆಯನ್ನು ತೋರಿಸುತ್ತದೆ. ಆದರೆ ಒಂದು ಗೊತ್ತುಪಾಡಿನ ಪ್ರಚೋದನೆಯ ಮೂಲಕ ಯಾರಾದರೂ ನೀರು ಎಂದು ಹೇಳಿದರೇ, ಆವಾಗ ಮಗು ನೀರು ಕುಡಿಯುತ್ತದೆ ಮತ್ತು ಹಾಗೇನೆ ಆ ಗೊತ್ತುಪಾಡಿನ ಪ್ರಚೋದನೆಗೆ ಪ್ರತಿಕ್ರಿಯೆಯನ್ನೂ ನೀಡುತ್ತದೆ.

ಯಾವಾಗೆಲ್ಲ ಮಗು ನೀರನ್ನು ನೋಡುತ್ತದೆಯೋ, ಆವಾಗೆಲ್ಲ ಯಾರದರೂ ನೀರು ಎಂದು ಹೇಳುತ್ತಾರೆ ಇಲ್ಲವೇ ಹೇಳಬೇಕಾಗುತ್ತದೆ. ಗಂಟೆ ನಾದದ ಪ್ರಚೋದನೆಗೆ, ಅನ್ನದ ತಟ್ಟೆ ಬರುತ್ತದೆ ಎಂದು ನಾಯಿ ಹೀಗೆ ಎದುರು ನೋಡುವ ಬಗೆಯೇ ಪ್ರತಿಕ್ರಿಯೆ. ಅದರಂತೆಯೇ ಮಗುವಿಗೆ ಯಾರದರೂ ನೀರು ತೋರಿಸಿ, ಅದು ನೀರು ಎಂದು ಹೇಳುವ ಪ್ರಚೋದನೆಗೆ, ಮಗು ನೀರನ್ನು ಕುಡಿಯುತ್ತದೆ.

ಹೀಗೆ ಯಾವುದೋ ಒಂದು ಗೊತ್ತುಪಾಡಿನ ಸನ್ನಿವೇಶದಲ್ಲಿ ಪ್ರಚೋದನೆ ಮತ್ತು ಪ್ರತಿಕ್ರಿಯೆಗಳ ನಿರಂತರ ಒಡನಾಟದಿಂದ ಅಭ್ಯಾಸಗಳು ರೂಪುಗೊಳ್ಳುತ್ತವೆ. ಹೀಗೆ ಹೊರಗಿನ ವರ್ತನೆಗಳಿಂದ ರೂಪುಗೊಳ್ಳುವ ಅನುಕರಣೀಯ ಅಭ್ಯಾಸಗಳನ್ನೇ ಕಲಿಕೆಯೆಂದು ಪವ್ಲಫ್ ಹಾಗೂ ಇತರ ವರ್ತನಾವಾದಿಗಳು ವಾದಿಸುತ್ತಾರೆ.

ಪ್ರಯೋಗ 2 – ಆಪರೆನ್ಟ್ ಕಂಡಿಶಯನ್ನಿಂಗ್

ವರ್ತನಾವಾದಿ ಕಲಿಕೆ -2

ಪವ್ಲಫ್‍ನ ಕ್ಲಾಸಿಕಲ್ ಕಂಡಿಶಯನ್ನಿಂಗ್ ಪ್ರಯೋಗಗಕ್ಕೆ ವ್ಯತರಿಕ್ತವಾಗಿ ಬಿ.ಎಫ್.ಸ್ಕಿನ್ನರ್ ತನ್ನ ಈ ಆಪರೆನ್ಟ್ ಕಂಡಿಶಯನ್ನಿಂಗ್ ಪ್ರಯೋಗವನ್ನು ನಡೆಸಿರುವನು. ಇವನ ಪ್ರಕಾರ ಕಲಿಕೆಯೆಂಬುದು ತನ್ನಿಚ್ಛೆಯ ಪ್ರತಿಕ್ರಿಯೆ. ಕಲಿಕೆಯ ಪ್ರಕ್ರಿಯೆಯು ಬಲಗೊಳ್ಳುವ ಇಲ್ಲವೇ ಬಲಹೀನಗೊಳ್ಳುವ ನೆಲೆಗಳು ಸಕಾರಾತ್ಮಕ ಇಲ್ಲವೇ ನಕಾರಾತ್ಮಕ ಪರಿಣಾಮಗಳನ್ನು ಅವಲಂಬಿಸಿರುತ್ತದೆ. ಸ್ಕಿನ್ನರ್ ತನ್ನ ಈ ವಾದವನ್ನು ಬಲಪಡಿಸಲು ಪಾರಿವಾಳದ ಮೇಲೆ ಪ್ರಯೋಗವನ್ನು ನಡೆಸುತ್ತಾನೆ. ಆ ಪ್ರಯೋಗದ ವಿವರಗಳು ಹೀಗಿವೆ:

1. ಹಸಿದ ಪಾರಿವಾಳವನ್ನು ಒಂದು ಕೇಸಿನಲ್ಲಿ ಕೂಡಿಡುತ್ತಾನೆ

2. ಆಕಸ್ಮಾತ್, ಪಾರಿವಾಳ ತನ್ನ ಕೊಕ್ಕಿನಿಂದ ಆ ಕೇಸಿನ ಕೀಯನ್ನು ಕುಟುಕಿದರೆ, ಆವಾಗ ಆ ಪಾರವಾಳಕ್ಕೆ ಅನ್ನ ಸಿಗುತ್ತದೆ.

ಮೊದಲಸಲ ಈ ಘಟನೆ ನಡೆದಾಗ ಪಾರಿವಾಳ ಏನನ್ನು ಕಲಿಯಲಾರದು. ಏಕೆಂದರೆ ಪಾರಿವಾಳಕ್ಕೆ ತನ್ನ ಕೊಕ್ಕಿನಿಂದ ಕೀಯನ್ನು ಕುಟುಕಿದರೆ ತಾನು ಅನ್ನವನ್ನು ಪಡೆಯುವೇ ಎನ್ನುವ ಸಂಗತಿ ಅದಕ್ಕೆ ತಿಳದಿರುವುದಿಲ್ಲ.

3. ಅನುಷಂಗಿಕವಾಗಿ ಪಾರಿವಾಳ ಸತತವಾಗಿ ಕೀಯನ್ನು ತನ್ನ ಕೊಕ್ಕಿನಿಂದ ಕುಟುಕುತ್ತದೆ, ತನ್ನ ಹಸಿವು ನೀಗುವರೆಗೂ ಕುಟುಕುತ್ತದೆ.

ಇಂತಹ ಪ್ರಚೋದನೆ ಮತ್ತು ಪ್ರತಿಕ್ರಿಯೆಗಳ ನಂಟಿನಿಂದ, ಪಾರಿವಾಳ ತಾನು ಹೇಗೆ (ಅನ್ನವನ್ನು ಪಡೆಯುವುದನ್ನು) ಕಲಿತ್ತಿದ್ದೇನೆ ಎಂಬುದನ್ನು ತೋರ್ಪಡಿಸುತ್ತದೆ.

ಬಿ.ಎಫ್.ಸ್ಕಿನ್ನರ್ – ಚಿತ್ರ – 3

ಅಪೇಕ್ಷಿತ ವರ್ತನೆಗಳಿಗೆ ಮೆಚ್ಚುಗೆಯನ್ನು ತೋರಿಸುತ್ತಲೇ ಅತ್ಯಂತ ತೊಡಕಿನ ವರ್ತನೆಗಳನ್ನು ಕಲಿಸುವ ಬಗೆಗಳನ್ನು ರೂಪಿಸಬೇಕಾಗುತ್ತದೆ. ಅಂದರೆ;

1. ಯಾವುದೇ ವರ್ತನೆ ನಿಮಗೆ ಬೇಕಾದ ವರ್ತನೆಯನ್ನು ಹೋಲುತ್ತಿದ್ದರೆ ಅಂತಹ ವರ್ತನೆಯನ್ನು ಬಲಪಡಿಸಬೇಕು.

2. ಯಾವೆಲ್ಲ ವರ್ತನೆಗಳು ನಿಮ್ಮ ಅಪೇಕ್ಷಿತ ವರ್ತನೆಗೆ ಹತ್ತಿರವಾಗಿರುತ್ತವೋ, ಆ ಎಲ್ಲ ವರ್ತನೆಗಳನ್ನೂ ಬಲಪಡಿಸಬೇಕು.

3. ಕೇವಲ ಅಪೇಕ್ಷಿತ ವರ್ತನೆಗಳನ್ನು ಮಾತ್ರ ಬಲಪಡಿಸಬೇಕು.

ಸ್ಕಿನ್ನರ್‍ಗೆ ನುಡಿಯೂ ವರ್ತನೆಯ ಮತ್ತೊಂದು ರೂಪವಷ್ಟೇ. ಕಲಿಕೆಯೆಂದರೆ ಆಯಾ ಪರಿಸರ ಇಲ್ಲವೇ ಸನ್ನಿವೇಶಕ್ಕೆ ಎದುರಾಗುವ ಪ್ರಚೋದನೆಗೆ ಪ್ರತಿಕ್ರಿಯಿಸುವ ಕ್ರಮವಷ್ಟೇ. ಅದಕ್ಕಾಗಿ ಇವನು ಹೇಳುವುದೇನೆಂದರೆ, ತಾಯ್ನುಡಿ ಇಲ್ಲವೇ ಮೊದಲ ನುಡಿಯ ಕಲಿಕೆಯಲ್ಲಿಯೂ, ಆಯಾ ನುಡಿಯನ್ನು ಕಲಿಯುವ ಮಕ್ಕಳು ತಪ್ಪು ಮಾಡುತ್ತಾರೆ. ಈ ತಪ್ಪುಗಳಲ್ಲಿ ಯಾವುದೇ ಬಗೆಯ ನಿಯತತೆ ಇರುವುದಿಲ್ಲ. ಇದು ಮಕ್ಕಳಿಂದ ಮಕ್ಕಳಿಗೆ ಬೇರೆಯಾಗುತ್ತದೆ.

ನುಡಿಯನ್ನು ಗಳಸಿಕೊಳ್ಳುವ ಪ್ರಮಾಣದಲ್ಲಿಯೂ ವ್ಯತ್ಯಾಸಗಳು ಉಂಟಾಗುತ್ತವೆ. ಮಾನವರಿಗೆ ಒದಗಿರುವ ಅಂತಸ್ಥ ಸಾಮಥ್ರ್ಯಗಳಲ್ಲಿ ನುಡಿಯೂ ಒಂದು. ಈ ನಿಲುವವನ್ನು ನಿರಾಕರಿಸುವ ನಿಟ್ಟಿನಲ್ಲಿ ಸ್ಕಿನ್ನರ್‍ನ ಮಾತುಗಳು ಇಲ್ಲಿ ಎದ್ದು ಕಾಣುತ್ತವೆ. ಎತ್ತುಗೆಗಾಗಿ; ಮಗುವಿಗೆ ನೀರು ತೋರಿಸಿ ಯಾರಾದರೂ ದೊಡ್ಡವರು ‘ನೀರು’ ಎಂದು ಹೇಳಿದರೆ, ಆ ಮಗು ಅದನ್ನು ಅನುಕರಿಸುತ್ತದೆ. ಒಂದೇ ಪಟ್ಟಿಗೆ ಇದು ನೆರವೇರುವುದಿಲ್ಲ. ಮತ್ತೆ ಮತ್ತೆ ನೀರು ಪದವನ್ನೇ, ‘ನಿ…, ನೀ.., ನೀಲು.., ನೀರು’ ಎಂದು ಹೇಳುತ್ತದೆ. ಹೀಗೆ ಒಂದೊಂದು ವರ್ತನೆಯೂ ಬಲಗೊಳ್ಳುತ್ತವೆ.

ಒಟ್ಟಾರೆ ವರ್ತನಾವಾದಿಗಳ ಪ್ರಕಾರ ನುಡಿ ಗಳಿಕೆಯೆಂಬುದೇ ರೂಢಿತಗತ ವರ್ತನೆಗಳ ಮೊತ್ತವಾಗಿದೆ. ಬಹುಮಂದಿ ನುಡಿಯರಿಗರ ಮೇಲೆ ಈ ವರ್ತನಾವಾದಿ ತಿಳುವಳಿಕೆಳು ಪ್ರಭಾವ ಬೀರಿದವು. ಪರಿಣಾಮವಾಗಿ ನುಡಿ ಓದಿನ ಮಾದರಿಗಳು ಈ ವರ್ತನಾವಾದಿ ತತ್ವಗಳಿಂದಲೇ ರೂಪುಗೊಂಡವು. ಹಾಗಾಗಿ, ನುಡಿಯರಿಗರು ನುಡಿಯ ಹೊರಸ್ತರದ (ಸ್ಪೀಚ್ಸ್, ಪರ್ಫಾರಮೆನ್ಸ್ ಹಾಗೂ ಪರೊಲ್) ರಚನೆಗಳನ್ನು ಮಾತ್ರ ವೀಕ್ಷಣೆಮಾಡುವ ಹಾಗೂ ವರ್ಣಿಸುವ ಕೆಲಸಕ್ಕೆ ಮುಂದಾದರು.

ಈ ರಚನೆಗಳು ಎಲ್ಲರೂ ಗಮನಿಸರಬಹುದಾದ ಪ್ರತಿಕ್ರಿಯೆಗಳೆ ಹೊರತು ಅವ್ಯಾವವು ನುಡಿಯ ಅಂತಸ್ಥ ಸಾಮಥ್ರ್ಯವನ್ನು ಅರಿಯುವ ಬಗೆಗಳಾಗಿರಲಿಲ್ಲ. ಲಿಯೋನಾರ್ಡ್ ಬ್ಲೂಮ್‍ಫಿಲ್ಡ್, ಎಡ್ವರ್ಡ್ ಸಪೀರ್, ಚಾಲ್ರ್ಸ್ ಹಾಕೇಟ್ ಮುಂತಾದವರು ಇದೇ ತಿಳಿವಿನ ಬಳಗಕ್ಕೆ ಸೇರಿದ್ದಾರೆ ಎನ್ನುವುದು ವಿಶೇಷ. ಸುಮಾರು ಅರ್ಧ ಶತಮಾನದವರೆಗೆ ಭಾರತ ಹಾಗೂ ಜಗತ್ತಿನಾದ್ಯಂತ ನುಡಿ ಕುರಿತ ಅಧ್ಯಯನಗಳು ಈ ವರ್ತನಾವಾದಿ ವಿಚಾರವನ್ನೇ ನೆಲೆಯಾಗಿಸಿಕೊಂಡು ನಡೆದಿರುತ್ತವೆ. ಪರಿಣಾಮವಾಗಿ ನಮ್ಮ ಗ್ರಹಿಕೆ ಮತ್ತು ಚಿಂತನೆಯ ಮೂಲ ಸ್ವರೂಪವನ್ನು ಅರಿಯುವಲ್ಲಿ ಸಾಕಷ್ಟು ತೊಡಕುಗಳನ್ನು ಎದುರಿಸಬೇಕಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version