ಬಹಿರಂಗ
ನಿಬ್ಬಾಣ ಎಂದರೇನು?
- ರಘೋತ್ತಮ ಹೊಬ
ಬುದ್ಧ ಧಮ್ಮದಲ್ಲಿ ನಿಬ್ಬಾಣ ಎಂಬ ಪದ ಬರುತ್ತದೆ. ಬಾಬಾಸಾಹೇಬ್ ಅಂಬೇಡ್ಕರ್ ರವರು ಕೂಡ ಪರಿನಿಬ್ಬಾಣ ಹೊಂದಿದರು ಎಂದು ಹೇಳಲಾಗುತ್ತದೆ. ಪರಿನಿಬ್ಬಾಣ ಅದು ಮತ್ತೊಂದು ಅಧ್ಯಾಯದಲ್ಲಿ ತಿಳಿಯೋಣ. ಈಗ ನಿಬ್ಬಾಣ ಎಂದರೇನು ಎಂದು ಅರಿಯುವ. ನಿಬ್ಬಾಣ ಈ ಪದ ಕನ್ನಡದ ನಿರ್ವಾಣ ಈ ಪದಕ್ಕೆ ಸಂವಾದವೇ? ಅದು ಕೂಡ ಇಲ್ಲಿ ಚರ್ಚೆಯ ವಿಷಯವಲ್ಲ. ನಿಬ್ಬಾಣ ಎಂದರೇನು ಎಂದು ತಿಳಿಯುವುದೇ ಇಲ್ಲಿ ಮುಖ್ಯ. ಯಾಕೆಂದರೆ ಅದು ತಿಳಿದಾಗಲೇ ಬೌದ್ಧ ಧರ್ಮದ ಪ್ರಮುಖ ಅಂಶವೊಂದರ ಅರಿವು ನಮಗಾಗುವುದು.
ಈ ಬಗ್ಗೆ ತಿಳಿಯುವುದಾದರೆ, ಒಮ್ಮೆ ತಥಾಗತ ಬುದ್ಧರು ಅನಾಥಪಿಂಡಿಕನ ಆಶ್ರಮದಲ್ಲಿ ಉಳಿದುಕೊಂಡಿರುತ್ತಾರೆ. ಅವರ ಜೊತೆ ಅವರ ಶಿಷ್ಯ ಸಾರಿಪುತ್ತರು ಕೂಡ ಉಳಿದುಕೊಂಡಿರುತ್ತಾರೆ. ಆಗ ಗೌತಮ ಬುದ್ಧರು ಅಲ್ಲಿದ್ದ ಎಲ್ಲರನ್ನು ಉದ್ದೇಶಿಸಿ “ಭಿಕ್ಕುಗಳೇ, ನೀವು ಈ ಪ್ರಪಂಚದ ಭೌತಿಕ ವಸ್ತುಗಳ ಭಾಗವಾಗದಿರಿ ಬದಲಿಗೆ ನಾನು ಬೋಧಿಸಿದ ಬೋಧನೆಯ ಭಾಗವಾಗಿರಿ. ಆದ್ದರಿಂದ ನಿಮ್ಮೆಲ್ಲರೆಡೆಗಿನ ಮಮತೆಯ ಭಾಗವಾಗಿ ನಾನು ಇದು(ನಿಬ್ಬಾಣ) ಏನು ಎಂದು ಈ ದಿನ ಶ್ರುತಪಡಿಸಲು ಇಚ್ಛಿಸುವೆ” ಎನ್ನುತ್ತಾರೆ. ಹೀಗೆ ಹೇಳಿ ಬುದ್ಧರು ತಾವು ಉಳಿದುಕೊಂಡಿದ್ದ ವಾಸದ ಗೂಡಿಗೆ ತೆರಳುತ್ತಾರೆ. ಆಗ ಅಲ್ಲಿದ್ದ ಇತರ ಭಿಕ್ಕುಗಳು ಧಮ್ಮದ ಬಗ್ಗೆ ಮತ್ತಷ್ಟು ತಿಳಿಯಲು ಆಸಕ್ತರಾಗಿ ಬುದ್ಧರ ಜೊತೆ ಇದ್ದ ಸಾರಿಪುತ್ತರನ್ನು ಬುದ್ಧರ ಬೋಧನೆಯ ಮತ್ತೊಂದು ಆ ಪ್ರಮುಖ ಅಂಶವಾದ ನಿಬ್ಬಾಣ ಎಂದರೇನು ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸುವ ಬುದ್ಧರ ಶಿಷ್ಯ ಸಾರಿಪುತ್ತರು “ಸೋದರರೆ, ದುರಾಸೆ ಕೆಡುಕಿನದ್ದು. ಆ ಕೆಡುಕಿನ ಭಾವನೆ ನಮ್ಮಲ್ಲಿ ಅಸಮಧಾನಕ್ಕೆ, ಅತೃಪ್ತಿಗೆ ಕಾರಣವಾಗುತ್ತದೆ. ಆದ್ದರಿಂದ ಈ ದುರಾಸೆಯಿಂದ, ಅತೃಪ್ತಿಯ ಭಾವದಿಂದ ಹೊರಬರಲು ಮಧ್ಯಮ ಮಾರ್ಗವಿದೆ. ಆ ಮಧ್ಯಮ ಮಾರ್ಗ ನಮಗೆ ನೋಡಲು ಕಣ್ಣುಗಳನ್ನು ಕೊಡುತ್ತದೆ. ಆ ಮೂಲಕ ಅದು ನಮಗೆ ಅರಿವನ್ನುಂಟುಮಾಡುತ್ತದೆ. ಪರಿಣಾಮ ಮನಃಶಾಂತಿಯೆಡೆಗೆ, ಒಳನೋಟದೆಡೆಗೆ, ಜ್ಞಾನೋದಯದೆಡೆಗೆ ಆ ಮೂಲಕ ನಿಬ್ಬಾಣದೆಡೆಗೆ ಅದು ನಮ್ಮನ್ನು ಕೊಂಡೊಯ್ಯುತ್ತದೆ”.
ಮುಂದುವರರಿದು ಸಾರಿಪುತ್ತರು ಹಾಗಿದ್ದರೆ ಮಧ್ಯಮ ಮಾರ್ಗ ಎಂದರೇನು ಎಂದು ಹೇಳುವುದಾದರೆ “ಮಧ್ಯಮ ಮಾರ್ಗ ಎಂದರೆ ಅದು ಅಷ್ಟಾಂಗ ಮಾರ್ಗ ಮತ್ತು ಅದರ ಅನುಸರಣೆಯಲ್ಲದೆ ಬೇರೇನು ಅಲ್ಲ.
- ಸರಿಯಾದ ದೃಷ್ಟಿಕೋನ
- ಸರಿಯಾದ ಗುರಿ
- ಸರಿಯಾದ ಮಾತು
- ಸರಿಯಾದ ಕ್ರಿಯೆ
- ಸರಿಯಾದ ಸಂಪಾದನೆಯ ಮಾರ್ಗ
- ಸರಿಯಾದ ಪ್ರಯತ್ನ
- ಸರಿಯಾದ ಮನಪೂರ್ಣತೆ
- ಸರಿಯಾದ ಏಕಾಗ್ರತೆ
ಇದೇ ಅಷ್ಟಾಂಗ ಮಾರ್ಗವಾಗಿದೆ ಮತ್ತು ಇದೇ ಮಧ್ಯಮ ಮಾರ್ಗವಾಗಿದೆ”.
“ಆದ್ದರಿಂದ ಸೋದರರೆ, ಕೋಪ ಕೆಟ್ಟದ್ದು. ಇನ್ನೊಬ್ಬರಿಗೆ ಕೇಡು ಬಗೆಯುವುದು ಕೆಟ್ಟದ್ದು. ದ್ವೇಷ –ಅಸೂಯೆ ಕೆಟ್ಟದ್ದು. ಅತಿ ಜಿಪುಣತನ, ಹಣದದಾಹ ಕೆಟ್ಟದ್ದು. ಬೂಟಾಟಿಕೆ, ಮೋಸಗಾರಿಕೆ, ನಮಗೆ ನಾವೇ ಕೊಚ್ಚಿಕೊಳ್ಳುವುದು, ಮುಂದುವರೆದು ಮೈಗಳ್ಳತನ ಅದು ಕೂಡ ಕೆಟ್ಟದ್ದು. ಆದ್ದರಿಂದ ಇಂತಹ ಕೊಚ್ಚಿಕೊಳ್ಳುವ ಜಂಭದ ಮನಸ್ಥಿತಿಯಿಂದ ಹೊರಬರಬೇಕಾದರೆ ಮೈಗಳ್ಳತನದಿಂದ ಹೊರಬರಬೇಕಾದರೆ ನಮಗೆ ನಾವೇ ನೋಡಿಕೊಳ್ಳಲು ನಾವು ಕಣ್ಣುಗಳನ್ನು ಹೊಂದಬೇಕಾಗುತ್ತದೆ, ನಮ್ಮನ್ನು ನಾವು ಅರಿತುಕೊಳ್ಳಬೇಕಾಗುತ್ತದೆ. ಪರಿಣಾಮ ಅದು ನಮ್ಮನ್ನು ಶಾಂತಿಯೆಡೆಗೆ ಒಳನೋಟದೆಡೆಗೆ ಜ್ಞಾನದೆಡೆಗೆ ಕೊಂಡೊಯ್ಯುತ್ತದೆ. ಆದ್ದರಿಂದ ನಿಬ್ಬಾಣವೆಂದರೆ ಅದು ಅಷ್ಟಾಂಗಮಾರ್ಗವಲ್ಲದೆ ಬೇರೇನು ಅಲ್ಲ”.
ಸಾರಿಪುತ್ತರ ಈ ನುಡಿಗಳನ್ನು ಕೇಳುತ್ತಲೇ ಅಲ್ಲಿದ್ದ ಭಿಕ್ಕುಗಳು ಸಂತಸಗೊಳ್ಳುತ್ತಾರೆ. ಅವರ ಹೃದಯಗಳು ಹರ್ಷದ ಹೊನಲಲ್ಲಿ ತೇಲಿ ಅವರು ಅಲ್ಲಿಂದ ಹೊರಡುತ್ತಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243