ಲೈಫ್ ಸ್ಟೈಲ್
ಪಕ್ಷಿ ಪರಿಚಯ | ಕುಟ್ರುಹಕ್ಕಿ
- ಭಗವತಿ ಎಂ.ಆರ್, ಛಾಯಾಗ್ರಾಹಕಿ, ಕವಯಿತ್ರಿ
“ಕುಟ್ರೋ ಕುಟ್ರೋ” ಎಂದು ಒಂದೇ ಸಮನೆ ಕೂಗುವ ಈ ಹಕ್ಕಿಯನ್ನು ಗುರುತಿಸುವುದು ಅಭ್ಯಾಸವಿದ್ದರೆ, ಅದರ ಕೂಗನ್ನು ಅನುಸರಿಸಿ ಅದು ಇರುವ ಜಾಗವನ್ನು ಸುಲಭವಾಗಿ ಕಂಡು ಹಿಡಿಯಬಹುದು. ಇಲ್ಲದಿದ್ದರೆ ಎಲೆ ಹಸಿರು ಬಣ್ಣವಿರುವ ಈ ಹಕ್ಕಿಯನ್ನು ಗುರುತಿಸುವುದು ಸ್ವಲ್ಪ ಕಷ್ಟ. ದಟ್ಟ ಮರಗಳು ಇರುವ ಕಡೆ ಹಕ್ಕಿಯನ್ನು ಹೊಸದಾಗಿ ಗುರುತಿಸುವವರಿಗೆ ಇದರ ಕೂಗು ಮಾತ್ರ ಕೇಳಿಸಿ, ಅರಣ್ಯ ರೋದನವೇ ಗತಿಯಾಗುತ್ತದೆ.
ಇವುಗಳ ಕೂಗು, ಬಣ್ಣ ಆಧರಿಸಿ ಅವುಗಳಿಗೆ ’ಸೊಪ್ಪು ಕುಟುರ’, ’ಕುಟುರನ ಹಕ್ಕಿ’, ’ಗುಟರ್ ಗುಮ್ಮ’ ಹಾಗೂ ಇಂಗ್ಲಿಷ್ ನಲ್ಲಿ White-cheeked Barbet ಎಂದು ಕರೆಯುತ್ತಾರೆ.
ಇವಕ್ಕೆ ಬಲವಾದ ಕೊಕ್ಕು ಇರುತ್ತದೆ. ಕಪ್ಪುಕಣ್ಣು, ಕಣ್ಣಿಗೆ ಕಾಡಿಗೆ ತೀಡಿದಂತೆ ಕಾಣುತ್ತದೆ. ಕಣ್ಣ ಸುತ್ತ ಕೊಂಚ ಉಬ್ಬಿದಂತಿರುತ್ತದೆ. ತಲೆ, ಕತ್ತು, ಎದೆಯ ಭಾಗ ಬಿಳಿಯ ಬಣ್ಣ. ಉಳಿದಂತೆ ಮೈಪೂರಾ ಹಸಿರು.
ಇದೇ ಬಳಗದ ಇನ್ನೊಂದು ಹಕ್ಕಿ “ಚಿಟ್ಟು ಗುಟುರ” ಅಥವಾ “ಕಂಚು ಕುಟಿಗ”. ಇವುಗಳನ್ನು ಇಂಗ್ಲೀಷಿನಲ್ಲಿ ಕಾಪರ್ ಸ್ಮಿತ್ ಬಾರ್ಬೆಟ್ ಎಂದು ಕರೆಯುತ್ತಾರೆ. ಇವು ಬಿಳಿಗಲ್ಲದ ಕುಟುರದಂತೆ ಕುಟ್ರೋ ಎನ್ನುವುದಿಲ್ಲವಾದರೂ ಥೇಟ್ ಕಮ್ಮಾರ ಕಬ್ಬಿಣದ ಬಡಿದಾಗ ಬರುವ ’ಟೊಯ್..ಟೊಯ್’ ಸದ್ದಿನಂತಿರುತ್ತದೆ. ಸದ್ದು ಸಣ್ಣದಾದರೂ ಹರಿತವಾಗಿರುತ್ತದೆ. ಇವಕ್ಕೆ ಮೈ ಹಸಿರು ಬಣ್ಣ. ತಲೆ, ಮತ್ತು ಕಣ್ಣಿನ ಸುತ್ತ ಕೆಂಪು ಉಂಗುರವಿದೆ.
ಈ ಬಿಳಿಗಲ್ಲದ ಕುಟ್ರುಹಕ್ಕಿ, ಕಂಚು ಕುಟಿಗದಂತೆ ಕಂದು, ನೀಲಿ ತಲೆಯ ಕುಟ್ರು ಹಕ್ಕಿಗಳಿವೆ. ನಮ್ಮಲ್ಲಿ ಸಾಧಾರಣವಾಗಿ ಕಾಣುವುದು ನಾಲ್ಕು ಜಾತಿಯ ಕುಟುರಗಳು ಮಾತ್ರ. ಇದು ಕೂಗುತ್ತಿದ್ದರೆ ತಮಿಳಿನಲ್ಲಿ ’ವಕ್ಕಾರೊ, ವಕ್ಕಾರೋ’ ಎಂದಂತೆ ಕೇಳಿಸುತ್ತದಂತೆ. ನಗರಗಳಲ್ಲಿ ಟ್ರಾಫಿಕ್ ಕಿರಿಕಿರಿಯ ನಡುವೆಯೂ ಈ ಪುಟ್ಟ ಹಕ್ಕಿಯ ಕೂಗು ಮತ್ತೆ, ಮತ್ತೆ ಕೇಳಿದಾಗ ನಿಂತು ಆಲಿಸುವುದನ್ನು ಮರೆಯಬೇಡಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243