ದಿನದ ಸುದ್ದಿ
ದಾವಣಗೆರೆ | ದೇಶ ಬಲಿಷ್ಟವಾಗಿರಬೇಕು ಎಂದರೆ ಅಲ್ಲಿ ಮಹಿಳೆಗೆ ಸಮಾನತೆ ಇರಬೇಕು : ಜಿ.ಪಂ ಸಿಇಓ ಡಾ.ವಿಜಯ ಮಹಾಂತೇಶ ಬಿ.ದಾನಮ್ಮನವರ್
ಸುದ್ದಿದಿನ, ದಾವಣಗೆರೆ : ಪುರಾತನ ಕಾಲದಿಂದಲೂ ಹೆಣ್ಣಿಗೆ ಪೂಜನೀಯ ಸ್ಥಾನ ನೀಡಲಾಗಿರುವ ಶ್ರೀಮಂತ ದೇಶ ನಮ್ಮದು. 12 ನೇ ಶತಮಾನದಲ್ಲಿ ಮಹಿಳೆಯರ ಸಮಾನತೆಗಾಗಿ ಬಸವಾದಿ ಶರಣದು ಹೋರಾಟ ಮಾಡಿದರು. 20 ನೇ ಶತಮಾನದಲ್ಲೂ ಈ ಹೋರಾಟ ಮುಂದುವರೆದಿದೆ. ನಮ್ಮ ನೆಲದ ಸಂವಿಧಾನದ ಆತ್ಮವಾಗಿರುವ ಮೂಲಭೂತ ಹಕ್ಕುಗಳ ಮೂಲಕ ಎಲ್ಲರಿಗೂ ಸಮಾನತೆ ಒದಗಿಸಲಾಗಿದೆ ಎಂದು ಜಿ.ಪಂ ಸಿಇಓ ಡಾ.ವಿಜಯಮಹಾಂತೇಶ ಬಿ.ದಾನಮ್ಮನವರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ದಾವಣಗೆರೆ ತಾಲ್ಲೂಕು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ, ಒನ್ ಸ್ಟಾಪ್ ಸೆಂಟರ್(ಸಖಿ), ಮಹಿಳಾ ಶಕ್ತಿ ಕೇಂದ್ರ, ಸ್ತ್ರೀಶಕ್ತಿ ಒಕ್ಕೂಟ, ಮಹಿಳಾ ಸಹಾಯವಾಣಿ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2021 ಯಲ್ಲಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಣ್ಣು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಹಲವಾರು ಕಾಯ್ದೆ, ಕಾನೂನುಗಳನ್ನು ಜಾರಿಗೆ ತಂದಿದೆ. ಹೆಣ್ಣು ಸಾಮಾಜಿಕವಾಗಿ, ಆರ್ಥಿಕವಾಗಿ ರಾಜಕೀಯವಾಗಿ ಸಬಲೀಕರಣ ಹೊಂದಲು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ.
ಇದನ್ನೂ ಓದಿ | ದಾವಣಗೆರೆ | ಮಾ.10ರಂದು ಅಂಗವಿಕಲರಿಗೆ ಕಿಟ್ ವಿತರಣೆ
21ನೇ ಶತಮಾನದ ಆಧುನಿಕ ಯುಗದಲ್ಲಿ ಸಹ ಲಿಂಗ ತಾರತಮ್ಯವಿದ್ದು, ಹೆಣ್ಣು ಸ್ವತಂತ್ರವಾಗಿ ತಾನು ಇಚ್ಚೆ ಪಡುವ ಶಿಕ್ಷಣ, ಮದುವೆ, ಜೀವನಶೈಲಿ ಪಡೆಯುವುದು ಇನ್ನೂ ಕಷ್ಟ ಇದೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಆತ್ಮಹತ್ಯೆಯಂತಹ ಪ್ರಕರಣಗಳು ಪ್ರತಿ ಸೆಕೆಂಡಿಗೆ ವರದಿಯಾಗುತ್ತಿರುವುದು ವಾಸ್ತವಿಕ ಸತ್ಯ. ದೆಹಲಿ ಮತ್ತು ಹೈದರಾಬಾದ್ ಅತ್ಯಾಚಾರ ಪ್ರಕರಣಗಳು ಇಡೀ ಮಾನವ ಸಂಕುಲ ದಿಗ್ಭ್ರಮೆಗೊಳಿಸುವಂತೆ ಮಾಡಿದ್ದು, ಇದಕ್ಕೆಲ್ಲಾ ಕಾರಣ ಹುಡುಕಬೇಕಿದೆ ಕಳವಳ ವ್ಯಕ್ತಪಡಿಸಿದರು.
ಮನೆಯಲ್ಲಿ ನಾವು ಹೆಣ್ಣು ಗಂಡನ್ನು ಬೆಳೆಸುವಲ್ಲಿ ತಾರತಮ್ಯ ಧೋರಣೆಯೋ, ಸಾಮಾಜಿಕ ಧೋರಣೆಯೋ ಅಥವಾ ಮಹಿಳೆಯನ್ನು ಕಮರ್ಷಿಯಲ್ ವಸ್ತುವಿನಂತೆ ಬಳಕೆ ಮಾಡುತ್ತಿರುವುದೋ, ಶಾಲೆಗಳಲ್ಲಿ ಮಾನವೀಯ ಮೌಲ್ಯಗಳನ್ನು ಹೇಳುವ ಕಾರ್ಯಕ್ರಮಗಳ ಕೊರತೆಯೋ, ಕಾನೂನಿನ ಕಠಿಣ ನಿಲುವಿಲ್ಲದಿರುವುದೋ ಹೀಗೆ ಕಾರಣ ಹುಡುಕುವ ಕೆಲಸ ಆಗಬೇಕು. ಈ ಬಗ್ಗೆ ಚರ್ಚೆ ಆಗಬೇಕು ಎಂದರು.
ಒಂದು ದೇಶ ಬಲಿಷ್ಟವಾಗಿರಬೇಕು ಎಂದರೆ ಅಲ್ಲಿ ಮಹಿಳೆಗೆ ಸಮಾನತೆ ಇರಬೇಕು. ಕುಟುಂಬದ ಮತ್ತು ಒಟ್ಟಾರೆ ಸಮಾಜದ ಏಳಿಗೆಗೆ ಮಹಿಳಾ ಸಮಾನತೆ ತಳಹದಿ ಎನ್ನುವುದನ್ನು ಪುರುಷರು ಅರ್ಥ ಮಾಡಿಕೊಳ್ಳಬೇಕು.
ನರೇಗಾ ಕಾರ್ಯಕ್ರಮದಡಿ ವಿಶೇಷವಾಗಿ ಈ ಬಾರಿ ಮಹಿಳಾ ಕಾಯಕೋತ್ಸವವನ್ನು ಆಯ್ದ ಗ್ರಾ.ಪಂ ಗಳಲ್ಲಿ ಮಾಡುತ್ತಿದ್ದು, ಮಹಿಳಾ ಪ್ರಧಾನ ಕುಟುಂಬಗಳ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಬೇಕು. ಆಡಳಿತದಲ್ಲಿ ಮಹಿಳೆಯರ ಸಂಖ್ಯೆ ಮತ್ತು ಪಾತ್ರವನ್ನು ಹೆಚ್ಚಿಸಲು ಮಹಿಳಾಸ್ನೇಹಿ ಗ್ರಾ.ಪಂ ಅಭಿಯಾನ ಮತ್ತು ವಿಶೇಷ ಸಭೆಗಳನ್ನು ಕೈಗೊಂಡು ಮಹಿಳೆಯರ ಸಮಸ್ಯೆ ಮತ್ತು ಬೇಡಿಕೆಗಳ ಚರ್ಚೆ ಮತ್ತು ಪರಿಹಾರದ ಉದ್ದೇಶ ಹೊಂದಲಾಗಿದೆ ಎಂದರು.
ಮಹಿಳಾ ದಿನಾಚರಣೆಯನ್ನು ಕೇವಲ ಶುಭಾಶಯ, ಭಾಷಣಕ್ಕೆ ಸೀಮಿತವಾಗಿಸದೇ ಮಹಿಳಾ ಸಮಾನತೆ ಕುರಿತು ಚರ್ಚೆ, ವಿಮರ್ಶೆಗಳಾಗಬೇಕು. ಹೆಣ್ಣಿನ ಸುರಕ್ಷತೆ ಮತ್ತು ಭದ್ರತೆ ಬಗೆಗಿನ ಧ್ಯೇಯ ಮರು ನವೀಕರಣ ಆಗಬೇಕು. ಕೇವಲ ಕಾನೂನು ಕಾಯ್ದೆ ಮೂಲಕ ಹೆಣ್ಣನ್ನು ಮುಕ್ತಗೊಳಿಸಲು ಸಾಧ್ಯವಿಲ್ಲ. ನಾವೆಲ್ಲರೂ ಮಾನಸಿಕವಾಗಿ, ನೈತಿಕವಾಗಿ ಬದಲಾವಣೆಯಾಗಬೇಕು.
| ಡಾ.ವಿಜಯಮಹಾಂತೇಶ ಬಿ.ದಾನಮ್ಮನವರ, ಜಿ.ಪಂ ಸಿಇಓ
ಸುದ್ದಿದಿನ.ಕಾಂ|ವಾಟ್ಸಾಪ್|9980346243