ಸಿನಿ ಸುದ್ದಿ

ವಿಶ್ವ ಹುಲಿದಿನ | ಮಕ್ಕಳಿಗೆ ಪ್ರಾಣಿ ಸಂರಕ್ಷಣೆ ಪಾಠ ಮಾಡಿದ ‘ಡಿ ಬಾಸ್’

Published

on

ಸುದ್ದಿದಿನ, ಮೈಸೂರು | ವಿಶ್ವ ಹುಲಿ ದಿನವಾದ ಭಾನುವಾರ (ಇಂದು, ಜುಲೈ 29) ಚಾಲೆಂಜಿಂಗ್ ಸ್ಟಾರ ದರ್ಶನ್ ಅವರು ಮಕ್ಕಳಿಗೆ ಪ್ರಾಣಿ ಸಂರಕ್ಷಣೆ ಕುರಿತು ಪಾಠ ಮಾಡಿದರು.

ಹುಲಿ ದಿನಾಚರಣೆ ಕಾರ‌್ಯಕ್ರಮದ ಅಂಗವಾಗಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಮಕ್ಕಳಿಗೆ ಸಂರಕ್ಷಣೆ ಶಿಕ್ಷಣ ನೀಡುವ ಯೂತ್ ಕ್ಲಬ್ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಣಿಗಳನ್ನು ಸಾಕಿದವರು ಮಾತ್ರ ಅವುಗಳ ಪ್ರಿಯರಲ್ಲ. ತಮ್ಮ ಸುತ್ತಲೂ ಇರುವ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು, ಅದನ್ನು ಉಳಿಸಿಕೊಂಡು ಹೋಗುವವರೂ ಕೂಡ ಪ್ರಾಣಿ ಪ್ರಿಯರು ಎಂದ ಅವರು ಪ್ರಾಣಿ ಪ್ರಜ್ಞೆ, ಪರಿಸರ ಕಾಳಜಿಯ ಪಾಠ ಮಾಡಿದರು.

ಹುಲಿ, ಸಿಂಹಗಳ ಸಂಖ್ಯೆ ಇತ್ತೀಚೆಗೆ ಕ್ಷೀಣಿಸುತ್ತಿದೆ. ನಾವು ಅವುಗಳನ್ನು ರಕ್ಷಿಸದಿದ್ದರೆ ಮುಂದಿನ ಪೀಳಿಗೆಯವರಿಗೆ ಫೋಟೊದಲ್ಲಿ ಮಾತ್ರ ತೋರಿಸಬೇಕಾಗುತ್ತದೆ. ಬೆಂಗಳೂರಿನ್ಲಲಿ ಗುಬ್ಬಚ್ಚಿಗಳು ಮಾಯವಾಗಿವೆ. ಈಗ ಅವುಗಳನ್ನು ನೋಡಲು ಹೊರವಲಯಗಳಿಗೆ ಹೋಗಬೇಕು. ಅದೇ ಪರಿಸ್ಥಿತಿ ಇತರ ಪ್ರಾಣಿಗಳಿಗೆ ಬರುವುದು ಬೇಡ ಎಂದರು.
ಹಿಂದೆ ನಾನೂ ಸಹ ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಯೂತ್ ಕ್ಲಬ್ ಸದಸ್ಯನಾಗಿದ್ದೆ. ನನಗೆ ಪ್ರಾಣಿಗಳ ಸಂರಕ್ಷಣೆ, ಪ್ರಾಣಿ ಪ್ರೀತಿ ಬೆಳೆಯಲು ಈ ಮೃಗಾಲಯದಲ್ಲಿ ದೊರೆತ ಸಂರಕ್ಷಣೆ ಪಾಠವೆ ಕಾರಣ ಎಂದು ಸ್ಮರಿಸಿದರು.

ಹುಲಿ ದಿನಾಚರಣೆ ಅಂಗವಾಗಿ ಮೃಗಾಲಯದಲ್ಲಿ ನಡೆದ ಚಿತ್ರ ಕಲಾ ಪ್ರದರ್ಶನವನ್ನು ನೋಡಿ ಡಿ ಬಾಸ್ ಅಚ್ಚರಿ ವ್ಯಕ್ತಪಡಿಸಿದರು. ಝೂಗೆ ಬಂದಿದ್ದ ಪ್ರಾಣಿ ಪ್ರಿಯರು ದರ್ಶನ್ ಅವರನ್ನು ನೋಡಿ ಅಚ್ಚರಿಗೊಳಗಾದರು. ಸೆಲ್ಫಿಗಾಗಿ ಅವರ ಹಿಂದೆ ಬಿದ್ದರು. ಸ್ವಲ್ಪವೂ ಹಿಂಜರಿಯದೆ ಚಾಲೆಂಜಿಂಗ್ ಸ್ಟಾರ್ ಫೋಟೊಗೆ ಪೋಸ್ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version