ದಿನದ ಸುದ್ದಿ

ವಿಶ್ವ ಪಶುವೈದ್ಯ ದಿನ | ಪಶುವೈದ್ಯ ವೃತ್ತಿಯ ಸುತ್ತ ಒಂದು ಪಕ್ಷಿ ನೋಟ

Published

on

  • ಡಾ. ಕಮಲೇಶ್ ಕುಮಾರ್ ಕೆ ಎಸ್,ಪಶುವೈದ್ಯಾಧಿಕಾರಿಗಳು,ಪಶುಚಿಕಿತ್ಸಾಲಯ, ಮತ್ತೂರು,ಶಿವಮೊಗ್ಗ

ಲ್ಲಾ ವರ್ಷದ ಏಪ್ರಿಲ್ ಕಡೆಯ ಶನಿವಾರ ವಿಶ್ವ ಪಶುವೈದ್ಯ ದಿನಾಚರಣೆ ಆಚರಿಸುವ ವಿಶ್ವದ ಪಶುವೈದ್ಯರು ಇಡೀ ವಿಶ್ವವೇ ಕರೋನದಿಂದ ತತ್ತರಿಸಿ ಹೋಗಿರುವ ಈ ಸಂದರ್ಭದಲ್ಲಿ ಈ ಬಾರಿ ಒಂದು ಉತ್ತಮ ಗುರಿಯಾದ “ಪರಿಸರ ಸಂರಕ್ಷಣೆಯಿಂದ ಪ್ರಾಣಿ ಹಾಗು ಮನುಷ್ಯರ ಆರೋಗ್ಯ ಸುಧಾರಣೆ” (“Environmental protection for improving animal and human health”) ಎಂಬ ವಿಷಯವನ್ನು ಉತ್ತೇಜಿಸುತ್ತಿದ್ದಾರೆ. ಪರಿಸರ ಸಂರಕ್ಷಣೆಯಿಂದ ಆಗುವ ಮಾಲಿನ್ಯ ತಡೆ, ಕಡಿಮೆ ರೋಗ ಹರಡುವಿಕೆ ಹಾಗೂ ಹೆಚ್ಚುವ ರೋಗ ನಿರೋಧಕ ಶಕ್ತಿಯಿಂದ ಖಂಡಿತವಾಗಿಯೂ ಎಲ್ಲಾ ಜೀವಿಗಳ ಆರೋಗ್ಯ ಸುಧಾರಣೆ ಸಾಧ್ಯವಾಗುತ್ತದೆ.

ರೈತರ ಏಳಿಗೆಗಾಗಿ ಕರೋನಾದಲ್ಲೂ ಪಶುವೈದ್ಯರ ಹೋರಾಟ

ಕರೋನದಿಂದ ಆಗಿರುವ ಇಂಥಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಎಲ್ಲ ಉದ್ಯಮಗಳು ಸ್ಥಗಿತವಾಗಿ ದೇಶದ ಆರ್ಥಿಕತೆ ಕುಸಿಯುತ್ತಿದ್ದರು ಸಹ ಹೈನುಗಾರಿಕೆ ಬಡ ರೈತರ ಕೈ ಹಿಡಿದಿದೆ, ನೆಮ್ಮದಿಯಾಗಿ ಜೀವನ ನಡೆಸಿ ನಿಟ್ಟುಸಿರು ಬಿಡಲು ಸಹಾಯ ಹಸ್ತ ನೀಡಿದೆ, ಇದಕ್ಕೆ ಪಶುವೈದ್ಯರು ಎಗ್ಗಿಲ್ಲದೆ ನೀಡುತ್ತಿರುವ ಅಗತ್ಯ ಸೇವೆಯು ಬೆನ್ನೆಲುಬಾಗಿದೆ.

ಪಶುವೈದ್ಯ ವೃತ್ತಿಯ ಇತಿಹಾಸ

ಇತಿಹಾಸದ ಪ್ರಕಾರ ಮೊಟ್ಟಮೊದಲು ಪಶು ವೈದ್ಯಕೀಯ ವಿಜ್ಞಾನದಲ್ಲಿ ಪಾಂಡಿತ್ಯವನ್ನು ಪಡೆದ ವ್ಯಕ್ತಿಯು ಭಾರತೀಯ, ಅವನು ಹಯಘೋಷ ಎಂಬ ಋಷಿಯ ಮಗನಾದ ಶಾಲಿಹೋತ್ರ (2350 BCE) ಎಂಬ ಉಲ್ಲೇಖವಿದೆ.

ಫ್ರಾನ್ಸನ ಜಾನುವಾರುಗಳಲ್ಲಿ ಏಕಾಏಕಿ ಪಿಡುಗು ರೋಗ ಕಾಣಿಸಿಕೊಂಡಾಗ, ಅದಕ್ಕೆ ಪರಿಹಾರ ಕಂಡುಹಿಡಿಯಲೆಂದೇ ಕ್ಲಡ್ ಬೊರ್ಗಲಟ್ (Claude Bourgelat) ಎಂಬಾತನು ಮೊಟ್ಟಮೊದಲ ಪಶು ವೈದ್ಯಕೀಯ ಮಹಾವಿದ್ಯಾಲಯವನ್ನು ಪ್ರಾರಂಭಿಸಿದರು ತದ ನಂತರ ಇನ್ನುಳಿದ ದೇಶಗಳಲ್ಲಿ ಪ್ರಾರಂಭವಾದವು. ಹೀಗೆ ಪಶುವೈದ್ಯ ವಿಜ್ಞಾನವು ಬೆಳೆಯತೊಡಗಿತು.

ಪಶುವೈದ್ಯರು ಹೀಗೆ ಉತ್ತಮರು

ಜಾನುವಾರುಗಳೇ ದೇವರು ಎಂದು ಕಲ್ಪಿಸಿಕೊಂಡಿರುವ ನಮ್ಮ ದೇಶದಲ್ಲಿ, ಕೇವಲ ಪೂಜೆಯ ವಸ್ತುವೆಂದು ನೋಡದೆ ಜಾನುವಾರುಗಳಿಂದ ಆರ್ಥಿಕವಾಗಿ ಸದೃಢತೆ ಹೊಂದಿದ ಸಾಕಷ್ಟು ರೈತರು ನಮ್ಮ ಸುತ್ತಲೂ ಇರುವುದನ್ನು ನಾವೆಲ್ಲರೂ ಗಮನಿಸಿಯೇ ಇರುತೇವೆ. ಅದೆಷ್ಟೋ ಸಣ್ಣ ಹಾಗೂ ಅತೀ ಸಣ್ಣ ರೈತರು ತಮ್ಮಲ್ಲಿರುವ ಬೆರಳೆಣಿಕೆಯಷ್ಟು ಕೋಳಿ, ಕುರಿ, ಮೇಕೆ, ಹಸುಗಳನ್ನು ಕಟ್ಟಿಕೊಂಡು ಉತ್ತಮ ರೀತಿಯಲ್ಲಿ ಜೀವನ ಸಾಗಿಸುತಿರುವುದಕ್ಕೆ ಲೆಕ್ಕವಿಲ್ಲದಷ್ಟು ಉದಾಹರಣೆ ನಮ್ಮ ಬಳಿ ಇವೆ. ಪಶುವೈದ್ಯರು ಜಾನುವಾರು ಸಾಗಾಣಿಕೆ ಹಾಗೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರ ಏಳಿಗೆಗೆ ನೀಡುತ್ತಿರುವ ಸಹಕಾರ ಬಹಳಷ್ಟು.

ಪಶುವೈದ್ಯರಾಗಲು ಇರಲೇಬೇಕಾದ ಗುಣಗಳು

ನಟ ವಿಲ್ ರೋಜರ್ಸ್ಸ ಎಂಬಾತನ “Best doctor in the world is a veterinarian. He can’t ask his patients what’s the matter. He’s just got to know.” ಹೇಳಿಕೆಯಂತೆ ನಮಗೆಲ್ಲ ತಿಳಿದಿರುವ ಹಾಗೆ ಸಾಮಾನ್ಯವಾಗಿ ಪ್ರಾಣಿಗಳು ರೋಗದ ಲಕ್ಷಣಗಳನ್ನು ತೋರಿಸುವುದಿಲ್ಲ, ಪ್ರಾಣಿಯ ವಾರಸುದಾರರ ಹೇಳಿಕೆಯ ಮೇಲೆ ಅವಲಂಬಿತವಾಗಿಯೋ ಇಲ್ಲವಾದಲ್ಲಿ ತಾವಾಗಿಯೇ ಪರೀಕ್ಷಿಸಿ ಅದನ್ನು ಕಂಡು ಹಿಡಿಯ ಬೇಕಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹಳೆಯ ಚಿಕಿತ್ಸೆಯ ಅನುಭವ, ಜಾಣ್ಮೆ, ತಾಳ್ಮೆ, ಉತ್ತಮ ದೃಷ್ಟಿ, ಸ್ಪರ್ಶ ಸಂವೇದನೆ ಹಾಗು ಪ್ರಾಣಿಗಳ ಮೇಲಿನ ಪ್ರೀತಿ ಸಾಕಷ್ಟು ಇರಬೇಕಾಗುತ್ತದೆ.

ಪಶುವೈದ್ಯರು ಕೇವಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದಲ್ಲದೆ ಸಾಕಷ್ಟು ಬಾರಿ ಜಾನುವಾರು ಮಾಲೀಕರ ಮನೆಯ ಬಾಗಿಲಿಗೆ ಹೋಗಿ ಚಿಕಿತ್ಸೆಯನ್ನು ನೀಡಬೇಕಾಗಿರುತ್ತದೆ ಆದ್ದರಿಂದ
ಕೇವಲ ಮಾನಸಿಕರೀತಿಯಿಂದ ಅಲ್ಲದೆ ದೈಹಿಕವಾಗಿಯೂ ಸದೃಢವಾಗಿರಬೇಕಾಗಿರುತ್ತದೆ.

ಪಶುವೈದ್ಯರ ಶ್ರೇಷ್ಠತೆ ಹಾಗು ವೈವಿಧ್ಯತೆ

ವೈದ್ಯರೆಂದರೆ ಅವರ ಜೀವನಾದ್ಯಂತ ಕಲಿಕೆಯು ಅವರ ಜೊತೆಗೂಡಿರುತ್ತದೆ, ಅದೇ ರೀತಿ ಮನುಷ್ಯನನ್ನು ಬಿಟ್ಟು ಬೇರೆಲ್ಲಾ ಜೀವಿಗಳ ಎಲ್ಲ ರೀತಿಯ ರೋಗಗಳಿಗೂ ಚಿಕಿತ್ಸೆ ನೀಡಬಲ್ಲ ಪಶುವೈದ್ಯರು ದಿನನಿತ್ಯವೂ ಸಾಕಷ್ಟು ಕಲಿಯುತ್ತಿರಬೇಕಾಗಿರುತ್ತದೆ. ಹೇಳಬೇಕೆಂದರೆ ಸಾಕಷ್ಟು ಪಶುವೈದ್ಯರು ಸಾಮಾನ್ಯ ಜ್ವರದ ಚಿಕಿತ್ಸೆಯಿಂದ ಹಿಡಿದು ಎಂತಹ ಅರವಳಿಕೆಯಿಂದ ಕೂಡಿದ ಶಾಸ್ತ್ರಚಿಕಿತ್ಸೆಯನ್ನು ಕೂಡ ಮಾಡಬಲ್ಲರು ಹಾಗೂ ತಮ್ಮ ಕಾರ್ಯ ವ್ಯಾಪ್ತಿಯ ಸ್ಥಳದಲ್ಲಿ ಕಂಡು ಬರುವ ರೋಗಗಳನ್ನು ಚಾಣಾಕ್ಷ ರೀತಿಯಿಂದ ಕಂಡು ಹಿಡಿದು ಅದಕ್ಕೆ ಸೂಕ್ತ ರೀತಿಯ ಚಿಕಿತ್ಸೆಯನ್ನು ನೀಡಬಲ್ಲರು.

ವಿಶ್ವದಲ್ಲಿ ಪಶು ವೈದ್ಯಕೀಯ ವಿಜ್ಞಾನವು ಸಾಕಷ್ಟು ಮುಂದುವರೆದಿದೆ ಆದರೂ ಭಾರತವು ಅದರಲ್ಲೇನು ಮಿಗಿಲಿಲ್ಲ. ಆದರೆ ವಾಸ್ತವ ಸ್ಥಿತಿ ಗಮನಿಸಿದರೆ ಇಂದಿಗೂ ಭಾರತದಲ್ಲಿ ಸುಸಜ್ಜಿತವಾದ ಸಲಕರಣೆಗಳನ್ನು ಹೊಂದಿರುವ ಪಶು ಆಸ್ಪತ್ರೆ ಬೆರಳೆಣಿಕೆಯಷ್ಟು ಮಾತ್ರ. ಪ್ರಾಥಮಿಕ ಚಿಕಿತ್ಸೆಯಿಂದ ಹಿಡಿದು ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಯನ್ನು ಕೂಡ ಒಬ್ಬ ಪಶುವೈದ್ಯನೇ ನೀಡಬೇಕಾಗಿರುತ್ತದೆ. ಇಂತಹ ಸಂದರ್ಭದಲ್ಲೂ ಕೂಡ ನಮ್ಮ ಪಶುವೈದ್ಯರು ದೃತಿಗೆಡದೆ ಸಾಕಷ್ಟು ಮೇಲುಗೈ ಸಾಧಿಸಿದ್ದಾರೆ.

ಜನರಿಗೆ ಸೇವೆಯನ್ನು ಒದಗಿಸುವ ಅಧಿಕಾರಿಗಳಲ್ಲಿ ಸಾಕಷ್ಟು ಹತ್ತಿರವಾಗಿರುವ ಪಶುವೈದ್ಯರು ರೈತರ ಏಳಿಗೆಗೆ ಸಾಕಷ್ಟು ಮಾಹಿತಿಯನ್ನು ನೀಡಬಲ್ಲರು ಹಾಗೂ ಅವರ ದಿನನಿತ್ಯ ಜೀವನದಲ್ಲಿ ವೈಜ್ಞಾನಿಕ ಜೀವನವನ್ನು ಅಳವಡಿಸಿಕೊಳ್ಳಲು ಉಪಕಾರಿಯಾಗಿದ್ದಾರೆ. ಪಶುವೈದ್ಯರು ಕೇವಲ ವೈದ್ಯಕೀಯ ಸೇವೆ ಅಲ್ಲದೆ ಇನ್ನಿತರ ಸೇವೆಯನ್ನು ಒಡಗಿಸುತ್ತಿದ್ದಾರೆ.

  • ಪ್ರಾಣಿಗಳಿಂದ ಮಾನವನಿಗೆ ಬರುವ ರೋಗ ತಡೆಗಟ್ಟುವಿಕೆ ಹಾಗೂ ಅದರ ಕುರಿತು ಸಂಶೋಧನೆ (ಉದಾ: ರೇಬಿಸ್, ಹಕ್ಕಿ ಜ್ವರ, ಬ್ರುಸೆಲೋಸಿಸ್)
  • ಎಲ್ಲಾ ತರಹದ ಪ್ರಾಣಿ, ಕಾಡು ಪ್ರಾಣಿಗಳ ರಕ್ಷಣೆ, ಚಿಕಿತ್ಸೆ ಹಾಗೂ ರೋಗ ತಡೆಗಟ್ಟುವಿಕೆ.
  • ಸಸಾರ ಜನಕ ಆಹಾರ ಪದಾರ್ಥಗಳಾದ ಹಾಲು, ಮಾಂಸ ಹಾಗೂ ಮೊಟ್ಟೆಗಳ (ಪ್ರೊಟೀನ್) ಉತ್ಪಾದನೆಯಿಂದ ಪೌಷ್ಟಿಕ ಆಹಾರ ಉತ್ಪಾದನೆ.
  • ಮನುಷ್ಯರ ಔಷಧ ಉತ್ಪಾದನೆ.
  • ಜಾನುವಾರುಗಳ ಔಷಧ ಉತ್ಪಾದನೆ.
  • ಯಾವುದೇ ರೀತಿಯ ಹೊಸ ಸಂಶೋಧನೆಯು ಮೊದಲು ಪ್ರಾಣಿಗಳೇ ಮೇಲೆ ಪ್ರಯೋಗಿಸಿ ಉತ್ತಮ ಫಲಿತಾಂಶ ಇದ್ದಲ್ಲಿ ನಂತರ ಮಾನವರ ಉಪಯೋಗಕ್ಕೆ ಬಳಕೆ. (ಉದಾ: ಬಾಡಿಗೆ ತಾಯಿಯಿಂದ ಮಗುವಿನ ಜನನ)
  • ಸತ್ತ ಜಾನುವಾರುಗಳಿಂದ ವ್ಯವಸಾಯಕ್ಕಾಗಿ ಉತ್ತಮವಾದ ರಾಸಾಯನಿಕ ಉತ್ಪಾದನೆ.
  • ಗೊಬ್ಬರ ಉತ್ಪಾದನೆ.
  • ಗೋಮೂತ್ರದ ಔಷಧೀಯ ಉಪಯೋಗದ ಕುರಿತು ಸಂಶೋಧನೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version