ದಿನದ ಸುದ್ದಿ
ಇಡೀ ಪ್ರಪಂಚ ನಿಂತಿರುವುದು ಹೆಣ್ಣೆಂಬ ಅಸ್ತಿತ್ವದ ಮೇಲೆ : ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಸುದ್ದಿದಿನ, ದಾವಣಗೆರೆ : ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ ಇಡೀ ಪ್ರಪಂಚ ನಿಂತಿರುವುದು ಹೆಣ್ಣೆಂಬ ಅಸ್ತಿತ್ವದ ಮೇಲೆ. ಸಮಾಜದಲ್ಲಿ ಸಮತೋಲನ ಇದೆ ಎಂದರೆ ಅದು ಹೆಣ್ಣಿನಿಂದ. ಇಂದು ಮಹಿಳೆ ಯಾವ ಕ್ಷೇತ್ರದಲ್ಲೂ ಹಿಂದಿಲ್ಲ ಎಂದು ಸಾಬೀತು ಪಡಿಸಿದ್ದಾಳೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಸೋಮವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಬೆಳಗಿನಿಂದ ರಾತ್ರಿವರೆಗೆ ಅವಿರತ ಶ್ರಮಿಸುವ ಈ ಹೆಣ್ಣು ಜೀವಗಳ ಕೆಲಸಕ್ಕೆ ಎಷ್ಟು ಸಂಬಳ ಕೊಟ್ಟರೂ ಸಾಲದು. ಇಂತಹ ಹೆಣ್ಣು ಮಕ್ಕಳನ್ನು ಇಂದು ಇಡೀ ಜಗತ್ತು ಸಾಂಕೇತಿಕವಾಗಿ ಗೌರವ ನೀಡಲು ಮಹಿಳಾ ದಿನಾಚರಣೆ ಆಚರಿಸುತ್ತಿದೆ ಎಂದ ಅವರು ಕೊರೊನಾ ವಾರಿಯರ್ ಆಗಿ ದುಡಿದ ಹೊನ್ನಾಳಿ ತಾಲ್ಲೂಕಿನ ಬಿದರಹಳ್ಳಿ ತಾಂಡಾದ ಅಂಗನವಾಡಿ ಕಾರ್ಯಕರ್ತೆ ಶಶಿಕಲಾರನ್ನು ಗುರುತಿಸಿ ದೆಹಲಿಯಲ್ಲಿ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಿರುವು ಅಭಿನಂದನಾರ್ಹ ಎಂದರು.
ಸಂವಿಧಾನಕ್ಕೆ ತರಲಾದ 73 ಮತ್ತು 74 ನೇ ತಿದ್ದುಪಡಿ ಹೆಣ್ಣುಮಕ್ಕಳಿಗೆ ಅನೇಕ ಅವಕಾಶ ನೀಡಿದೆ. ಈ ಅವಕಾಶಗಳನ್ನು ಬಳಸಿಕೊಂಡು ಮಹಿಳೆಯರು ಒಳ್ಳೊಳ್ಳೆ ಕೆಲಸಗಳನ್ನು ಮಾಡುತ್ತಿದ್ದಾರೆ. ಎಲ್ಲ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಹೆಣ್ಣನ್ನು ಪೂಜಿಸುವ ದೇಶ ನಮ್ಮದಾಗಿದ್ದು, ಹೆಣ್ಣು ನೀಡುವ ಪ್ರೀತಿ, ಮಮಕಾರ, ಅಪ್ಯಾಯತೆ ಮತ್ತೊಬ್ಬರಿಂದ ಸಾಧ್ಯವಿಲ್ಲ. ಇಂತಹ ಮಹಿಳೆಯರೇ ಆಸ್ತಿಯಾಗಿದ್ದು, ಇವರು ಇ ನ್ನೂ ಅತ್ಯುತ್ತಮ ಆಸ್ತಿಯನ್ನು ತಯಾರಿಸುತ್ತಾರೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243